ಕುಮಟಾ : ಕುಮಟಾ ಹೊನ್ನಾವರ ವಿಧಾನಸಭಾ ಕ್ಷೇತ್ರದ ಶಾಸಕ ದಿನಕರ ಶೆಟ್ಟಿ ತಮ್ಮ ಕ್ಷೇತ್ರದಲ್ಲಿ ವಾಹನಗಳ ಸಂಚಾರ ಅಧಿಕವಿರುವ ರಸ್ತೆಗಳನ್ನು ಚತುಷ್ಪತವಾಗಿ ಅಭಿವೃದ್ಧಿಪಡಿಸಲು ಅನುದಾನ ಒದಗಿಸಲು ಸೂಕ್ತ ಕ್ರಮ ಕೈಗೊಳ್ಳಲು ಲೋಕೋಪಯೋಗಿ ಇಲಾಖೆಯ ಸಚಿವರಾದ ಸತೀಶ್ ಜಾರಕಿಹೊಳಿ ಅವರಿಗೆ ಬೇಡಿಕೆ ಸಲ್ಲಿಸಿದ್ದಾರೆ.
ಸೋಮವಾರ ವಿಧಾನಸಭೆಯ ಅಧಿವೇಶನದಲ್ಲಿ ಈ ಕುರಿತು ಚುಕ್ಕೆ ಪ್ರಶ್ನೆ ಕೇಳಿದ ಶಾಸಕರು ಗೋಕರ್ಣ- ಮರಡಿ -ದೇವನಹಳ್ಳಿ ರಾಜ್ಯಹೆದ್ದಾರಿ -143, ಕುಮಟಾ-ಕೊಡಮಡಗು ರಾಜ್ಯಹೆದ್ದಾರಿ -48, ಕುಮಟಾ-ಹೆಗಡೆ-ಮಿರ್ಜಾನ ರಸ್ತೆ ಹಾಗೂ ಅಘನಾಶಿನಿ-ಕುಮಟಾ ರಸ್ತೆ ಈ ನಾಲ್ಕು ರಸ್ತೆಗಳ ಅಗಲೀಕರಣಗೊಳಿಸಿ ಮೇಲ್ದರ್ಜೆಗೆ ಏರಿಸಲು ಅನುದಾನ ಒದಗಿಸುವಂತೆ ಸದನದಲ್ಲಿ ಬೇಡಿಕೆ ಇಟ್ಟಿದ್ದಾರೆ.
ಕಾಶಿಗಿಂತ ಗೋಕರ್ಣದಲ್ಲಿ ಸಮುದ್ರ ಇರುವುದರಿಂದ ಒಂದು ಗುಂಜಿ ಪ್ರಸಿದ್ದ ಎಂದು ಇತಿಹಾಸದಲ್ಲಿ ಹೇಳಲಾಗಿದೆ. ಹೀಗಾಗಿ ಈ ಕ್ಷೇತ್ರದ ದರ್ಶನಕ್ಕೆ ಮತ್ತು ಸಮುದ್ರ ವೀಕ್ಷಣೆಗೆ ಪ್ರತಿನಿತ್ಯ ಸಾವಿರಾರು ಜನರು ಸ್ವಂತ ವಾಹನಗಲ್ಲಿ ಬರುತ್ತಿರುತ್ತಾರೆ. ಈ ರೀತಿ ಬಂದ ವಾಹನ ನಿಲುಗಡೆಗೆ ಪಾರ್ಕಿಂಗ್ ಮಾಡಲು ಜಾಗವಿಲ್ಲ. ಇದರಿಂದ ಪ್ರತಿನಿತ್ಯ ಅಪಘಾತಗಳು ಸಂಭವಿಸುತ್ತಿವೆ. ಹಾಗಾಗಿ ಈ ಮೇಲೆ ಹೇಳಿರುವ ಗೋಕರ್ಣ ಹೆದ್ದಾರಿಯನ್ನು ಚತುಷ್ಫಥವನ್ನಾಗಿಸಬೇಕು. ಅದಾಗದಿದ್ದರೆ ಅಗಲೀಕರಣಕ್ಕೆ ಕ್ರಮಕೈಗೊಳ್ಳಬೇಕು ಎಂದು ಅವರು ಆಗ್ರಹಿಸಿದರು.
ಇದರ ಜೊತೆಗೆ ಕುಮಟಾ-ಕೊಡಮಡಗು ರಾಜ್ಯಹೆದ್ದಾರಿ, ಕುಮಟಾ-ಹೆಗಡೆ-ಮಿರ್ಜಾನ ರಸ್ತೆ ಹಾಗೂ ಅಘನಾಶಿನಿ-ಕುಮಟಾ ರಸ್ತೆ, ಈ ಮೂರನ್ನು ಸಹ ಚತುಷ್ಪಥ ಇಲ್ಲವೆ ಅಗಲೀಕರಣಕ್ಕೆ ಅವರು ಒತ್ತಾಯಿಸಿದ್ದು, ಗೋಕರ್ಣದಲ್ಲಿ ರಸ್ತೆ ಅಗಲೀಕರಣಕ್ಕೆ ಈಗಿರುವ ರಸ್ತೆ ಅಕ್ಕಪಕ್ಕ ಖಾಲಿ ಜಾಗಗಳಿವೆ. ಈಗ ಈ ಕಾರ್ಯಕ್ಕೆ ಮುಂದಾದರೆ ಸರ್ಕಾರಕ್ಕೆ ಪರಿಹಾರ ಕೊಡುವ ಹಣ ಅಲ್ಪವಾಗಬಹುದು. ಇದನ್ನು ನಿರ್ಲಕ್ಷಿಸಿದರೆ ಖಾಲಿ ಇರುವ ಜಾಗಗಳಲ್ಲಿ ಮುಂದೆ ಕಟ್ಟಡಗಳು ನಿರ್ಮಾಣವಾಗಬಹುದು. ಜೊತೆಗೆ ಮನೆ ಕಂಪೋಡುಗಳು ಮುಂದಕ್ಕೆ ಬಂದು ಅಲ್ಲಿ ಅಂಗಡಿಗಳು ನಿರ್ಮಾಣವಾಗಬಹುದು. ಆಗ ಸರ್ಕಾರಕ್ಕೆ ಪರಿಹಾರ ಕೊಡುವುದು ಹೊರೆಯಾಗಬಹುದು ಎಂದು ಶಾಸಕ ದಿನಕರ ಶೆಟ್ಟಿ ಎಚ್ಚರಿಸಿದ್ದಾರೆ.
ಈ ಸಲದ ಬಜೆಟ್‌ನಲ್ಲಿ ಕುಮಟಾ ಕ್ಷೇತ್ರಕ್ಕೆ ಒಂದೇ ಒಂದು ನಯಾಪೈಸೆಯನ್ನು ನೀಡಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ ಶಾಸಕರು, ಈ ನಾಲ್ಕು ರಸ್ತೆಗಳ ಅಗಲೀಕರಣಕ್ಕೆ ಸರ್ಕಾರ ಮುಂದಾಗಬೇಕು ಎಂದು ಒತ್ತಾಯಿಸಿದರು. ಶಾಸಕರ ಈ ಮಾತನ್ನು ಬೆಂಬಲಿಸಿ ವಿರೋಧಿ ಪಕ್ಷದ ನಾಯಕ ಆರ್. ಅಶೋಕ ಮಾತನಾಡಿ ದಿನಕರ ಶೆಟ್ಟಿ ಅವರು ಹೇಳಿದ್ದರಲ್ಲಿ ಸತ್ಯವಿದೆ. ರಸ್ತೆ ಅಗಲೀಕರಣಕ್ಕೆ ಸ್ಥಳ ಲಭ್ಯವುದೆ ಎಂದಾಗ ಅಗಲೀಕರಣ ಕಾರ್ಯ ಮಾಡಲು ಸರ್ಕಾರ ಕ್ರಮಕೈಗೊಳ್ಳಬೇಕು ಎಂದರು.
ಶಾಸಕರ ಆಗ್ರಹದ ಪ್ರಶ್ನೆಗೆ ಉತ್ತರಿಸಿದ ಲೋಕೋಪಯೋಗಿ ಸಚಿವ ಸತೀಶ ಜಾರಕಿಹೊಳಿ, ಕೇಂದ್ರ ಸರ್ಕಾರದ ಸೂಚನೆಯಂತೆ ಶಾಸಕರು ಹೇಳಿರುವ ರಸ್ತೆಯನ್ನು ಚತುಷ್ಪಥ ಮಾಡಲು ಸಾಧ್ಯವಿಲ್ಲ. ಅದರ ಬದಲು ಅಗಲೀಕರಣ ಮಾಡಬಹುದಾಗಿದೆ. ಹಣಕಾಸಿನ ಲಭ್ಯತೆ ನೋಡಿಕೊಂಡು ಆಧ್ಯತೆಯ ಮೇರೆಗೆ ಈ ರಸ್ತೆಗಳ ಆಗಲೀಕರಣಕ್ಕೆ ಕ್ರಮಕೈಗೊಳ್ಳಲಾಗುವುದು ಎಂದರು.
ಶಾಸಕ ದಿನಕರಶೆಟ್ಟಿಯವರು ಸದನದಲ್ಲಿ ಎತ್ತಿದ ಧ್ವನಿಗೆ ಬಲ ಬರಲಿದೆಯೇ ಎಂಬುದನ್ನು ಮಾತ್ರ ಕಾದು ನೋಡಬೇಕಾಗಿದೆ.