ಕುಮಟಾ : ಇಂದಿನ ಯುವ ಜನರಲ್ಲಿ ಹಾಗೂ ವಿದ್ಯಾರ್ಥಿಗಳಲ್ಲಿ ಇಚ್ಛಾ ಶಕ್ತಿಯ ಕೊರತೆಯೇ ಸಾಧನೆಗೆ ಅಡ್ಡಿಯಾಗಿದೆ. ಇಚ್ಚಾಶಕ್ತಿ, ನಿರಂತರ ಪ್ರಯತ್ನದಿಂದ ಮಾತ್ರವೇ ಸಾಧನೆ ಸಾಧ್ಯವಾಗುತ್ತದೆ ಎಂದು ಉದ್ಯಮಿ ಸುಬ್ರಾಯ ವಾಳ್ಕೆ ಹೇಳಿದರು. ಅವರು ಕುಮಟಾ ಪುರಭವನದಲ್ಲಿ ಸ್ಪೋರ್ಟ್ಸ್ ಹೌಸ್ ಕುಮಟಾ ವತಿಯಿಂದ ನಡೆದ ಕೋಸ್ಟಲ್ ಕಪ್ ಟೇಬಲ್ ಟೆನ್ನಿಸ್ ಪಂದ್ಯಾವಳಿಯನ್ನು ಉದ್ಘಾಟಿಸಿ ಮಾತನಾಡಿದರು.
ವಿದ್ಯಾರ್ಥಿಗಳು ಹಾಗೂ ಯುವ ಸಮುದಾಯ ದೊಡ್ಡ ಗುರಿಯನ್ನು ಹೊಂದಿ ಆ ಗುರಿಯನ್ನು ಸಾಧಿಸುವ ನಿಟ್ಟಿನಲ್ಲಿ ನಿರಂತರ ಪರಿಶ್ರಮ ಪಡಬೇಕು. ಇಚ್ಛಾಶಕ್ತಿ ಬಲವಾಗಿದ್ದಲ್ಲಿ ಮಾತ್ರ ಎಲ್ಲ ಸಾಧನೆಗಳು ಸಾಧ್ಯವಾಗುತ್ತದೆ. ಇಂತಹ ಕ್ರೀಡಾಕೂಟಗಳು ಪರಸ್ಪರರಲ್ಲಿ ಪ್ರೀತಿಯನ್ನು ಬೆಳೆಸುವುದರ ಜೊತೆಗೆ ನಮ್ಮ ಬದುಕಿಗೂ ಪೂರಕವಾಗಿರುತ್ತದೆ ಎಂದು ಅವರು ಅಭಿಪ್ರಾಯಪಟ್ಟರು.
ವೇದಿಕೆಯಲ್ಲಿ ಸ್ಕಿಲ್ ಡೆವಲ್ಪೆಂಟ್ ಅಧಿಕಾರಿ ಡಿ.ಟಿ ನಾಯ್ಕ, ಸಿ.ಆರ್.ಪಿ ಉಮೇಶ ನಾಯ್ಕ, ಉದ್ಯಮಿ ಕಿರಣ ನಾಯಕ ಮತ್ತು ನಿವೃತ್ತ ಎಲ್.ಐ.ಸಿ ಅಧಿಕಾರಿ ಎನ್.ಜಿ ಭಟ್ಟ ಉಪಸ್ಥಿತರಿದ್ದರು. ಕಾರವಾರ, ಅಂಕೋಲಾ, ಕುಮಟಾ, ಹೊನ್ನಾವರ ಮತ್ತು ಭಟ್ಕಳ ತಾಲೂಕಿನ ವಿವಿಧ ಮಯೋಮಿತಿಯ 75 ಕ್ಕೂ ಹೆಚ್ಚು ಕ್ರೀಡಾಪಟುಗಳು ಈ ಸ್ಪರ್ಧೆಯಲ್ಲಿ ಭಾಗವಹಿಸಿದ್ದರು.
ಪಂದ್ಯಾವಳಿಯ ಮಹಿಳಾ ವಿಭಾಗದಲ್ಲಿ ಪೂಜಾ ಧರ್ಮಾ (ಪ್ರಥಮ), ಶ್ವೇತಾ ನಾಯ್ಕ (ದ್ವಿತೀಯ). 20 ವರ್ಷದೊಳಗಿನ ವಯೋಮಿತಿಯ ಸ್ಪರ್ಧೆಯಲ್ಲಿ ಪ್ರೇಮ ಶೇಟ್ (ಪ್ರಥಮ) ಗಗನ ಶೆಟ್ಟಿ (ದ್ವಿತೀಯ) 20-45 ವಯೋಮಿತಿಯಲ್ಲಿ ಅವಿನಾಶ್ (ಪ್ರಥಮ), ಅರವಿಂದ ನಾಯ್ಕ (ದ್ವಿತೀಯ), 45 ವರ್ಷ ಮೇಲ್ಪಟ್ಟವರಲ್ಲಿ ಏ ಆರ್ ಖಾನ್(ಪ್ರಥಮ), ಎನ್.ಜಿ ಭಟ್ (ದ್ವಿತೀಯ) ಡಬಲ್ಸ್ ಓಪನ್ ನಲ್ಲಿ ಅಲವಿಂದ ಮತ್ತು ಡಾ.ಮನೋಹರ ಜಠಾರ (ಪ್ರಥಮ), ಪ್ರಶಾಂತ ನಾಯ್ಕ ಹಾಗೂ ರಾಜೇಶ್ ನಾಯ್ಕ ದ್ವಿತೀಯ ಸ್ಥಾನ ಪಡೆದರು.