ಕುಮಟಾ : ತಾಲೂಕಿನ ಮೂರೂರಿನ ಹೊಸಾಡಿನಲ್ಲಿರುವ ಅಮೃತಧಾರಾ ಗೋ ಶಾಲೆಯ ಆವಾರದಲ್ಲಿ ಫೇ. ೨೧ ರಿಂದ ೨೫ ರವರೆಗೆ “ಆಲೆಮನೆ ಹಬ್ಬ” ಹಾಗೂ “ಗೋ ಸಂಧ್ಯಾ” ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಅಮೃತಧಾರಾ ಗೋಶಾಲೆ ಹೊಸಾಡದ ಆಡಳಿತ ಸಮಿತಿ ಪ್ರಕಟಣೆಯ ಮೂಲಕ ತಿಳಿಸಿದೆ.
ಫೇ. ೨೧ ಬುಧವಾರ ಮಧ್ಯಾಹ್ನ ೨ ಗಂಟೆಗೆ ಶ್ರೀರಾಮಚಂದ್ರಾಪುರ ಮಠದ ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳು ಆಲೆಮನೆ ಹಬ್ಬ ಹಾಗೂ ಗೋ ಸಂಧ್ಯಾ ಕಾರ್ಯಕ್ರಮ ಉದ್ಘಾಟಿಸುವರು. ಇದೇ ಸಂದರ್ಭದಲ್ಲಿ ಭಾರತಿ ಪ್ರಕಾಶನ ಬೆಂಗಳೂರಿಂದ ಪ್ರಕಟಿತವಾದ ಡಾ. ರವಿ ಅವರ ‘ಗವ್ಯಾಮೃತ’ ಕೃತಿ ಲೋಕಾರ್ಪಣೆ ಹಾಗೂ ಗವ್ಯಚಿಕಿತ್ಸಾ ಕೇಂದ್ರಕ್ಕೆ ಚಾಲನೆ ದೊರೆಯಲಿದೆ.
ಗೋವಿನ ಉಳಿವಿನ ಹೊಸ ಪರಿಕಲ್ಪನೆಯೊಂದಿಗೆ ಈ ಕಾರ್ಯಕ್ರಮ ಸಂಯೋಜನೆಗೊಂಡಿದ್ದು ಐದು ದಿನಗಳ ಕಾಲ ಈ ಆಲೆಮನೆ ಹಬ್ಬ ನಡೆಯಲಿದೆ. ಪ್ರತಿದಿನ ಮಧ್ಯಾಹ್ನ 3 ಗಂಟೆಯಿಂದ ಆಲೆಮನೆ ಹಬ್ಬ ಪ್ರಾರಂಭವಾಗುತ್ತಿದ್ದು ಸಂಜೆ 5:30 ಗಂಟೆಯಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿದೆ.
ಗೋಶಾಲೆಯ ವಾರ್ಷಿಕ ಸಮ್ಮೇಳನ, ಗೋಪಾಲ ಗೌರವ ಕಾರ್ಯಗಳನ್ನು ಹಮ್ಮಿಕೊಳ್ಳಲಾಗಿದ್ದು, ಬಹು ವಿನೂತನವಾಗಿ ಕಾರ್ಯಕ್ರಮ ಸಂಯೋಜನೆಗೊಂಡಿದೆ. ಒಂದೇ ವೇದಿಕೆಯಲ್ಲಿ ಎರಡು ಕಬ್ಬಿನಗಾಣದ ಮಧ್ಯೆ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿದ್ದು, ಇದರೊಂದಿಗೆ ಕೃಷಿ ಸಹಾಯಕ ಉಪಕರಣಗಳು ಮಾರಾಟ, ಗವ್ಯೋತ್ಪನ್ನಗಳ ಮಾರಾಟ, ಕರಕುಶಲ ಉತ್ಪನ್ನಗಳ ಮಾರಾಟ, ಕಬ್ಬಿನ ಹಾಲಿನ ಮಾರಾಟ, ಬಹು ಜನರ ಬೇಡಿಕೆಯ ತೊಡಾದೇವು, ಬೆಲ್ಲದ ಬಾಳೆದಿಂಡು, ಪಪ್ಪಾಯಿ ಬಾಳೆದಿಂಡು, ಬೆಲ್ಲ , ಕಬ್ಬಿನ ಹಾಲಿನ ಉತ್ಪನ್ನಗಳ ಮಾರಾಟ ನಡೆಯಲಿದೆ.
ಯಾವುದೇ ನಿರ್ದಿಷ್ಟ ಆದಾಯವಿಲ್ಲದೇ ಅಂದಾಜು 300 ಗೋವುಗಳನ್ನು ಸಂರಕ್ಷಿಸುತ್ತಿರುವ ಅಮೃತಧಾರ ಗೋಶಾಲೆ ಹೊಸಾಡು ಅನಾಥ, ಅಪಘಾತಕ್ಕೀಡಾದ, ಕಸಾಯಿಖಾನೆಯಿಂದ ರಕ್ಷಿಸಲ್ಪಟ್ಟ, ವಯಸ್ಸಾದ ಗೋವುಗಳ ಪಾಲನೆ ಜೊತೆಯಲ್ಲಿ ಭಾರತೀಯ ಗೋ ತಳಿ ಸಂರಕ್ಷಣೆಯನ್ನು ಮಾಡುತ್ತಿದ್ದು ಆಲೆಮನೆ ಹಬ್ಬದ ಸಂಪೂರ್ಣ ಆದಾಯವನ್ನು ಗೋವಿನ ನಿರ್ವಹಣೆಗೆ ವಿನಿಯೋಗಿಸುವ ವಿನೂತನ ಯೋಜನೆ ಇದಾಗಿದೆ. ಇದರ ಜೊತೆಯಲ್ಲಿ ಆಧುನಿಕ ಭರಾಟೆಗೆ ಪಾರಂಪರಿಕ ಸಂಸ್ಕೃತಿ ನಶಿಸುತ್ತಿದ್ದು ಎಲ್ಲಾ ಗೋಪ್ರೇಮಿಗಳನ್ನು ಒಂದೆಡೆ ಸೇರಿಸಿ ಮುಂದಿನ ಪೀಳಿಗೆಗೆ ಗೋ ಸಂರಕ್ಷಣೆಯ ಜಾಗೃತಿ ಪಡಿಸುವ, ಪ್ರಾಚೀನ ಪರಂಪರೆಯನ್ನು ನೆನಪಿಸುವ, ಗೋವಿಗೆ ಸಂತರ್ಪಣೆಗೈಯುವ ಸದಾವಕಾಶ ಕಲ್ಪಿಸುವುದು ಇದರ ಉದ್ದೇಶವಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.