ಕುಮಟಾ : ಕಲಾ ಗಂಗೋತ್ರಿ ಕುಮಟಾ  ಆಶ್ರಯದಲ್ಲಿ ದಿವಂಗತ ದುರ್ಗಾದಾಸ ಗಂಗೊಳ್ಳಿ ‌ಪ್ರಶಸ್ತಿಯನ್ನು ಈ ‌ವರ್ಷ ಪ್ರಖ್ಯಾತ  ಹಿರಿಯ ಯಕ್ಷಗಾನ ಕಲಾವಿದರಾದ    ಗೋಪಾಲ ಆಚಾರ್ಯ ತೀರ್ಥಹಳ್ಳಿ ಇವರಿಗೆ ಪ್ರದಾನ ಮಾಡಲಾಯಿತು. ಕಲಾ ಗಂಗೋತ್ರಿಯ ಸಂಸ್ಥಾಪಕ, ರಾಜ್ಯ ಯುವ ಪ್ರಶಸ್ತಿ ಪುರಸ್ಕೃತ ದಿವಂಗತ ದುರ್ಗಾದಾಸ  ಗಂಗೊಳ್ಳಿಯವರ ಸ್ಮರಣಾರ್ಥ ಪ್ರತಿವರ್ಷ ನೀಡಲಾಗುತ್ತಿರುವ ಈ ಪ್ರಶಸ್ತಿಯನ್ನು 

ಕುಮಟಾ ಜಾತ್ರಾ ಪ್ರಯುಕ್ತ,‌ ಮಣಕಿ ಮೈದಾನದಲ್ಲಿ  ಏರ್ಪಡಿಸಿದ ಪೆರ್ಡೂರು ಮೇಳದ ಯಕ್ಷಗಾನ ವೇದಿಕೆಯಲ್ಲಿ ಗಣ್ಯರ ಸಮ್ಮುಖದಲ್ಲಿ ‌ಪ್ರಶಸ್ತಿ ಪ್ರದಾನ ಮಾಡಲಾಯಿತು. 

ಇದೇ ಸಂದರ್ಭದಲ್ಲಿ ನಿವೃತ್ತ ಸೈನಿಕರಾದ ಶ್ರೀನಿವಾಸ ಗಂಗಾಧರ ಗುನಗಾ ಹಳಕಾರ,  ಮಹೇಶ್ ಮಾಸ್ತಿ ಹರಿಕಾಂತ ಅಘನಾಶಿನಿ, ಹವ್ಯಾಸಿ ಯಕ್ಷಗಾನ ಕಲಾವಿದರಾದ ವಸಂತ ಹೆಗಡೆ ತಲಗೋಡ ಹಾಗೂ ನಿವೃತ್ತ ಅಭಿಯಂತರರಾದ ದಾಮೋದರ ಶೆಟ್ಟಿ ಇವರನ್ನು ವಿಶೇಷ ಸಾಧನೆಗಾಗಿ ಸನ್ಮಾನಿಸಲಾಯಿತು.

ದುರ್ಗಾದಾಸ ಗಂಗೊಳ್ಳಿ ಪ್ರಶಸ್ತಿ ಸ್ವೀಕರಿಸಿದ ಗೋಪಾಲ ಆಚಾರ್ಯ ತೀರ್ಥಹಳ್ಳಿಯವರು

ಯಕ್ಷಗಾನ ನನಗೆ ಪ್ರಖ್ಯಾತಿಯನ್ನು ತಂದುಕೊಟ್ಟ ಕನ್ನಡ ನಾಡಿನ ಹೆಮ್ಮೆಯ ಕಲೆಯಾಗಿದೆ. ದುರ್ಗಾದಾಸ ಗಂಗೊಳ್ಳಿಯವರು ಯಕ್ಷಗಾನ ಕಲೆ ಹಾಗೂ ಕಲಾವಿದರ ಪೋಷಕರಾಗಿದ್ದರು. ಅವರ ತತ್ವ ಆದರ್ಶಗಳನ್ನು ಅವರ ಅಕಾಲಿಕ ಅಗಲುವಿಕೆಯ ನಂತರವೂ ಮುಂದುವರಿಸಿಕೊಂಡು ಬಂದಿರುವುದು ಕಲಾಗಂಗೋತ್ರಿ ‌ಬಳಗದ  ಅಮೂಲ್ಯ ಸಾಧನೆಯಾಗಿದೆ. ಈ ಪರಂಪರೆ ಹೀಗೆಯೇ ಮುಂದುವರಿಯಲಿ ಎಂದು ಹಾರೈಸಿದರು.

RELATED ARTICLES  ಎರಡು ಬಸ್ ಗಳ ನಡುವೆ ಮುಖಾಮುಖಿ ಡಿಕ್ಕಿ : ಬೆಳ್ಳಂಬೆಳಗ್ಗೆ ನಡೆದ ಘೋರ ದುರಂತ.

ಈ ಪ್ರಶಸ್ತಿ ಪ್ರದಾನ ಸಮಾರಂಭದ ಉದ್ಘಾಟಕರು, ಕೆ.ಡಿ.ಸಿ.ಸಿ. ಬ್ಯಾಂಕ್ ನಿರ್ದೇಶಕರಾದ ಗಜಾನನ ಪೈ ಮಾತನಾಡಿ ಯಕ್ಷಗಾನ ಕಲೆ ಉಳಿಸಿ, ಬೆಳೆಸಿ, ಮುಂದಿನ ಪೀಳಿಗೆಗೆ ಪರಿಚಯಿಸಲು ಕಲಾಗಂಗೋತ್ರಿಯಂತೆ ನಾವೆಲ್ಲರೂ  ಪ್ರೋತ್ಸಾಹ ಹಾಗೂ ಸಹಕಾರ ನೀಡಬೇಕಾದ  ಅಗತ್ಯವಿದೆ ಎಂದರು.

ಅಧ್ಯಕ್ಷತೆ ವಹಿಸಿದ್ದ ಕಲಾಗಂಗೋತ್ರಿಯ ಗೌರವಾಧ್ಯಕ್ಷರಾದ ಶ್ರೀಧರ ನಾಯ್ಕ ಮಾತನಾಡಿ  ತಮ್ಮ ಮೂರು ದಶಕಗಳ  ಯಕ್ಷಗಾನ ಸಂಘಟನೆ ಅನುಭವದಲ್ಲಿ  ‌ಹಲವಾರು ಖ್ಯಾತ ಕಲಾವಿದರ ಪರಿಚಯವಾಗಿದ್ದು, ಇವರಲ್ಲಿ ‌ಈಗ  ದುರ್ಗಾದಾಸ ಗಂಗೊಳ್ಳಿ ‌ಪ್ರಶಸ್ತಿ ಪುರಸ್ಕೃತರಾದ ಗೋಪಾಲ ಆಚಾರ್ಯರ  ನೃತ್ಯ, ಅಭಿನಯ, ವಾಕ್ಚಾತುರ್ಯ  ಹಾಗೂ ಶ್ರೇಷ್ಠ ವ್ಯಕ್ತಿತ್ವದ ಬಗ್ಗೆ ಕೊಂಡಾಡಿದರು.

ಅತಿಥಿಗಳಾಗಿ ಆಗಮಿಸಿದ ಮುಖಂಡರಾದ ಸೂರಜ್ ನಾಯ್ಕ ಸೋನಿಯವರು ಮಾತನಾಡಿ ತನ್ನ ಸಾಮಾಜಿಕ ಸೇವೆಗೆ ಹಾಗೂ ತನ್ನ ಈ ಮಟ್ಟದ ಬೆಳವಣಿಗೆಗೆ ದುರ್ಗಾದಾಸ ಗಂಗೊಳ್ಳಿಯವರೇ‌  ಸ್ಪೂರ್ತಿಯಾಗಿದ್ದಾರೆ . ಯಕ್ಷಗಾನದಲ್ಲಿ ವಿಶಿಷ್ಟ ಪ್ರಯೋಗಗಳೊಂದಿಗೆ ಪ್ರದರ್ಶನ ಏರ್ಪಡಿಸಿ, ಕಲಾರಸಿಕರಿಗೆ‌ ರಸದೌತಣ ನೀಡುತ್ತಾ ಬಂದಿದೆ. ತಾನೂ ಕೂಡ ಕಲಾಗಂಗೋತ್ರಿಯ  ಸದಸ್ಯ ಎಂಬುದಕ್ಕೆ ಹೆಮ್ಮೆ ಪಡುತ್ತೇನೆ ಎಂದರು. ‌

RELATED ARTICLES  ಚೀನಾ ಬೋಟ್ ಪತ್ತೆ ವಿಚಾರವಾಗಿ ಹರಿದಾಡಿದ ಮಾಹಿತಿ ಸುಳ್ಳು : ರಕ್ಷಣಾ ವ್ಯವಸ್ಥೆಗೂ ಯಾವುದೇ ಸಮಸ್ಯೆ ಇಲ್ಲ.

ಶ್ರೀನಿವಾಸ‌ ಕುಲಕರ್ಣಿ ಚಾರಿಟೇಬಲ್ ಟ್ರಸ್ಟ್ ಕಾರ್ಯದರ್ಶಿ ಸತೀಶ್ ನಾಯ್ಕ್  ತಮ್ಮ ಸಂಸ್ಥೆಯ ಮೂಲಕ ವಿದ್ಯಾರ್ಥಿಗಳಿಗೆ, ಕಲಾವಿದರಿಗೆ ಆರ್ಥಿಕ ನೆರವು‌ ನೀಡುತ್ತಿರುವ ಬಗ್ಗೆ ತಿಳಿಸಿದರು. ಸನ್ಮಾನಿತರಾದ ವಸಂತ ಹೆಗಡೆ, ದಾಮೋದರ ಶೆಟ್ಟಿ ಅನಿಸಿಕೆ ವ್ಯಕ್ತಪಡಿಸಿದರು. ಕಲಾಗಂಗೋತ್ರಿಯ ಪ್ರಧಾನ ಕಾರ್ಯದರ್ಶಿಗಳು, ವಿಶ್ರಾಂತ ಪ್ರಾಧ್ಯಾಪಕರು, ಹವ್ಯಾಸಿ ಯಕ್ಷಗಾನ ಕಲಾವಿದರಾದ ‌ಡಾ. ಎಂ.ಆರ್. ನಾಯಕ ಇವರು ಸರ್ವರನ್ನೂ ಸ್ವಾಗತಿಸಿ, ಕಲಾಗಂಗೋತ್ರಿ ನಡೆದು ಬಂದ ಸಾಧನೆ ವಿವರಿಸಿ, ಕಲಾಭಿಮಾನಿಗಳ ತುಂಬು ಹೃದಯದ ಸಹಕಾರವನ್ನು , ದುರ್ಗಾದಾಸ ಗಂಗೊಳ್ಳಿ ‌ಕುಟುಂಬದ ಸಹಕಾರವನ್ನು , ಮಣಿಪಾಲ್ ಸರ್ಕಲ್ ಕೆನರಾ ಬ್ಯಾಂಕ್ ‌ಜನರಲ್ ಮೇನೇಜರ್  ಎಮ್ .ಜಿ. ಪಂಡಿತ್  ಇವರ ಪ್ರಾಯೋಜಕತ್ವ ಸಹಕಾರವನ್ನು ‌ಸ್ಮರಿಸಿದರು.

ಪುರಸಭೆಯ ಸದಸ್ಯರಾದ ಎಂ.ಟಿ. ನಾಯ್ಕ ಹಾಗೂ ವಸಂತ ಪಂಡಿತ್ ಸನ್ಮಾನ ಪತ್ರವನ್ನು ವಾಚಿಸಿದರು. ಕಲಾಗಂಗೋತ್ರಿಯ ಖಜಾಂಚಿ ವಿಶ್ರಾಂತ ಪ್ರಾಚಾರ್ಯ ಡಾ. ಜಿ. ಎಸ್. ಭಟ್  ನಿರೂಪಿಸಿದರು. ಸದಸ್ಯರಾದ ರಾಮು ಅಡಿ ವಂದನಾರ್ಪಣೆ ಮಾಡಿದರು.  ರವಿ ನಾಯ್ಕ, ನಾಗರಾಜ್ ಆಚಾರ್ಯ, ಅಶೋಕ್ ಗೌಡ, ವೆಂಕಟೇಶ್ ಹೆಗಡೆ, ಗಣಪತಿ ಹೆಗಡೆ, ಇನ್ನಿತರ ಸದಸ್ಯರು ಸಹಕರಿಸಿದರು.