ಕುಮಟಾ : ಫೇ.೨೫ ರಂದು ಯುವಾ ಬ್ರಿಗೇಡ್ ಕುಮಟಾ ವತಿಯಿಂದ ಕಾಶಿಯ ಗಂಗಾ ಆರತಿ ಮಾದರಿಯಲ್ಲಿಯೇ ತಾಲೂಕಿನ ಅಘನಾಶಿನಿ ಬಸ್ ನಿಲ್ದಾಣದ ಸಮೀಪ ‘ಅಘನಾಶಿನಿ ಆರತಿ’ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಯುವಾ ಬ್ರಿಗೇಡ್ ಸದಸ್ಯ ಗೌರೀಶ ನಾಯ್ಕ ತಿಳಿಸಿದರು. ಅವರು ಪಟ್ಟಣದ ಪ್ರವಾಸಿ ಮಂದಿರದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.
ಅಘನಾಶಿನಿ ಆರತಿ ಎರಡನೇ ಬಾರಿಗೆ ನಡೆಯುತ್ತಿದ್ದು ಹಿಂದಿನ ವರ್ಷ ಮಿರ್ಜಾನ್ ತಾರಿಬಾಗಿಲಿನಲ್ಲಿ ನಡೆದಿತ್ತು. ಈ ವರ್ಷ ಫೇ.೨೫ ರಂದು ರವಿವಾರ ಸಂಜೆ 6 ಗಂಟೆಗೆ ಅಘನಾಶಿನಿ ಬಸ್ ನಿಲ್ದಾಣದ ಸಮೀಪ ನಡೆಯಲಿದೆ ಎಂದರು. ಈ ಕಾರ್ಯಕ್ರಮಕ್ಕೆ ಪರ್ತಗಾಳಿ ಜೀವೋತ್ತಮ ಮಠದ ಶ್ರೀಶ್ರೀಶ್ರೀ ವಿದ್ಯಾಧೀಶ ತೀರ್ಥಶ್ರೀಪಾದ ವಡೇರ್ ಸ್ವಾಮೀಜಿಯವರ ದಿವ್ಯ ಉಪಸ್ಥಿತಿ ಇರಲಿದ್ದು, ಅಘನಾಶಿನಿ ಊರಿನ ಮಾಜಿ ಸೈನಿಕ ಹವಾಲ್ದಾರ ಮಹೇಶ ಮಾಸ್ತಿ ಹರಿಕಾಂತ ಉಪಸ್ಥಿತರಿರಲಿದ್ದಾರೆ. ಯುವಾ ಬ್ರಿಗೇಡ್ ಸಂಸ್ಥಾಪಕರಾದ ಶ್ರೀ ಚಕ್ರವರ್ತಿ ಸೂಲಿಬೆಲೆಯವರು ಹಾಜರಿರಲಿದ್ದು ಕಾರ್ಯಕ್ರಮದ ದಿಕ್ಸೂಚಿ ಭಾಷಣವನ್ನು ಅವರು ಮಾಡಲಿದ್ದಾರೆ ಎಂದು ತಿಳಿಸಿದರು.
ಇದೇ ಸಂದರ್ಭದಲ್ಲಿ ಅಘನಾಶಿನಿ ಊರಿನ ವಿಷ್ಣು ನಾಯ್ಕ ಯುವಾ ಬ್ರಿಗೇಡ್ ಕುಮಟಾ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸುತ್ತಾ, ಮಾತನಾಡಿ ಅಘನಾಶಿನಿ ಊರಿನಲ್ಲಿ ನಡೆಯುವ ಕಾರ್ಯಕ್ರಮಕ್ಕೆ ಸಂಪೂರ್ಣವಾದ ಬೆಂಬಲ ಊರಿನ ಪರವಾಗಿ ಇರುವುದಾಗಿ ಹೇಳಿದರು ಮತ್ತು ಕಾರ್ಯಕ್ರಮದ ಪ್ರಾರಂಭದಲ್ಲಿ ನಮ್ಮ ಸಂಸ್ಕೃತಿಯನ್ನು ಬಿಂಬಿಸುವ ಸುಗ್ಗಿ ಹಾಗೂ ಕೋಲಾಟಗಳ ಮೂಲಕ ಕಾರ್ಯಕ್ರಮ ಪ್ರಾರಂಭಿಸಲಾಗುವುದು ಎಂದು ತಿಳಿಸಿದರು.
ಯುವಾ ಬ್ರಿಗೇಡ್ ಸದಸ್ಯ ರವೀಶ ನಾಯ್ಕ ಮಾತನಾಡಿ ಅಘನಾಶಿನಿಯಲ್ಲಿ ಗ್ರಾಮೀಣ ಕಲೆಯ ಆರಾಧಕರನ್ನು ಹಾಗೂ ಕುಮಟಾದ ಶಿಲ್ಪಿಗಳನ್ನು ಸನ್ಮಾನಿಸಲಾಗುವುದು ಎನ್ನುತ್ತಾ, ಸಾಋವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಕಾರ್ಯಕ್ರಮಕ್ಕೆ ಬರಬೇಕೆಂದು ತಿಳಿಸಿದರು.
ಪತ್ರಿಕಾಗೋಷ್ಠಿಗೆ ಆಗಮಿಸಿದ ಪತ್ರಕರ್ತರನ್ನು ಯುವಾ ಬ್ರಿಗೇಡ್ ವಿಭಾಗ ಸಹ ಸಂಚಾಲಕರಾದ ಸತೀಶ ಪಟಗಾರ ಸ್ವಾಗತಿಸಿದರು. ಈ ಸಂದರ್ಭದಲ್ಲಿ ವಿನಯ ನಾಯ್ಕ, ಈಶ್ವರ ಅಂಬಿಗ, ದಿವಾಕರ ಅಘನಾಶಿನಿ, ಗೋವಿಂದಗೌಡ, ಚಿದಾನಂದ ಹರಿಕಂತ್ರ, ಲಕ್ಷ್ಮೀಕಾಂತ ಮುಕ್ರಿ, ಸಂದೀಪ ಮಡಿವಾಳ, ಅಣ್ಣಪ್ಪ ನಾಯ್ಕ ಹಾಗೂ ಇತರರು ಇದ್ದರು.