ಕುಮಟಾ : ಜೀವನ ಮಧುರ ಹಾಗೂ ಮಂಗಲಗಳ ಸಮಾಗಮವಾಗಿದೆ. ಯಾರ ಜೀವನ ಮಧುರವಾಗಿಲ್ಲವೋ, ಯಾರ ಜೀವನ ಅಮಂಗಲಕರದ ಸುಳಿಯಲ್ಲಿ ಸುತ್ತುತ್ತಿದೆಯೋ ಅಂತವರು ಗೋಶಾಲೆಯ ಕಡೆಗೆ ಮುಖಮಾಡಬೇಕು ಎಂದು ರಾಮಚಂದ್ರಾಪುರಮಠದ ರಾಘವೇಶ್ವರ ಶ್ರೀಗಳು ಹೇಳಿದರು. ಅವರು ಹೊಸಾಡದ ಅಮೃತಧಾರಾ ಗೋ ಶಾಲೆಯಲ್ಲಿ ನಡೆದ ‘ಆಲೆಮನೆ ಹಬ್ಬ’ ಹಾಗೂ ‘ಗೋ ಸಂಧ್ಯಾ’ ಉದ್ಘಾಟನಾ ಕಾರ್ಯಕ್ರಮದಲ್ಲಿ ದಿವ್ಯ ಸಾನಿಧ್ಯವಹಿಸಿ ಮಾತನಾಡಿದರು.
ಎಲ್ಲಿ ಗೋವುಗಳು ಸುಖವಾಗಿರುತ್ತವೆಯೋ ಅಲ್ಲೇ ಸಂಪತ್ತು ಹರಿದು ಬರುತ್ತದೆ. ಗೋವು ಜೀವನಕ್ಕೆ ಬರಬೇಕು. ಆದರೆ ಇಂದಿನ ಕಾಲದಲ್ಲಿ ಗೋವು ಸಾವಿನೊಟ್ಟಿಗೆ ಸೇರಿಕೊಂಡಿದೆ. ಇದೇ ಇಂದಿನ ಕಾಲ ಹಾಗೂ ಹಿಂದಿನ ಕಾಲಕ್ಕೆ ಇರುವ ವ್ಯತ್ಯಾಸ. ಮಾನವ ಹಾಗೂ ಗೋವಿನ ನಡುವೆ ಇರುವ ಚಿಕ್ಕ ಪರದೆಯನ್ನು ಸರಿಸುವ ಕಾರ್ಯವಾಗಬೇಕು ಎಂಬುದನ್ನು ಸಂದರ್ಭೋಚಿತವಾಗಿ ಶ್ರೀಗಳು ವಿವರಿಸಿದರು. ಗೋವಿಗಾಗಿ ಕಾರ್ಯ ಮಾಡುವವನಿಗೆ ಎಂದಿಗೂ ಸೋಲಿಲ್ಲ. ಅಮೃತಧಾರಾ ಗೋ ಬ್ಯಾಂಕ್ ಗೋವು ಮತ್ತು ಮಾನವನ ನಡುವಿನ ಪರದೆ ಸರಿಸಲಿ, ಸರಿದ ಪರದೆಯ ಬದುಕು ನಿಮ್ಮದಾಗಲಿ ಎಂದು ಹಾರೈಸಿದರು.
ಗೋಶಾಲೆ ಕಷ್ಟದಲ್ಲಿದೆ ಎಂದು ಯಾರೂ ಗೋಶಾಲೆಗೆ ಧನ ಸಹಾಯ ಮಾಡುವ ಅವಶ್ಯಕತೆ ಇಲ್ಲ. ಗೋಶಾಲೆಗೆ ಮಾಡುವ ಸಹಾಯ ನಿಮ್ಮ ಉದ್ದಾರಕ್ಕೆ ಕಾರಣ ಎಂದು ತಿಳಿದು ಗೋಶಾಲೆಗೆ ಕೊಡುಗೆ ನೀಡಿ ಎನ್ನುತ್ತಾ ಎಲ್ಲರಿಗೂ ಒಳಿತಾಗಲಿ, ಒಳಿತಾಗಬೇಕು ಎಂದರೆ ಗೋ ಸೇವೆ ಮಾಡಿ ಎಂದು ಕರೆ ನೀಡಿದರು.
ಇದೇ ಸಂದರ್ಭದಲ್ಲಿ ಗವ್ಯಚಿಕಿತ್ಸಕ ಡಾ. ರವಿ ಎನ್. ಅವರು ಬರೆದ, ಭಾರತೀ ಪ್ರಕಾಶನದವರು ಪ್ರಕಾಶಿಸಿದ ‘ಗವ್ಯಾಮೃತ’ ಪುಸ್ತಕವನ್ನು ಶ್ರೀಗಳು ಲೋಕಾರ್ಪಣೆ ಮಾಡಿದರು.
ಈ ಸಂದರ್ಭದಲ್ಲಿ ಲೇಖಕ ಡಾ. ರವಿ ಮಾತನಾಡಿ ಆಯುರ್ವೇದ ವೈದ್ಯಶಾಸ್ತ್ರವು ಬೆಳೆದುಬಂದ ರೀತಿಯನ್ನು ವಿವರಿಸುತ್ತಾ, ಆಯುರ್ವೇದ ವೈದ್ಯಶಾಸ್ತ್ರವು ಸುತ್ತಮುತ್ತಲು ಇರುವ ಪ್ರಕೃತಿಮಾತೆ ಕೊಟ್ಟ ಸಸ್ಯಜನ್ಯ ಹಾಗೂ ವಿವಿಧ ಪ್ರಾಣಿಜನ್ಯ ವಸ್ತುಗಳನ್ನು ಒಳಗೊಂಡಿದೆ. ಭಾರತೀಯ ಗೋವಂಶವು ನೀಡುವ ಹಾಲು, ಮೊಸರು, ತುಪ್ಪ, ಗೋಮಯ ಹಾಗೂ ಗೋಮೂತ್ರಗಳು ಪಂಚಗವ್ಯವೆಂದು ಕರೆಯಲ್ಪಟ್ಟು ಆಯುರ್ವೇದಶಾಸ್ತ್ರದ ಅವಿಭಾಜ್ಯ ಅಂಗವಾಗಿವೆ. ಭಾರತೀಯ ಗೋವಂಶದ ಪಂಚಗವ್ಯಗಳು ಅತಿವಿಶೇಷವಾದ ಔಷಧೀಯ ಗುಣಗಳು ಹೊಂದಿರುವುದನ್ನು ವೇದ ಕಾಲವು ಒಪ್ಪಿಕೊಂಡಿದ್ದಲ್ಲದೆ, ಆಧುನಿಕ ಕಾಲದಲ್ಲಿ ನಡೆದ ಹಲವಾರು ವೈಜ್ಞಾನಿಕ ಅನುಸಂಧಾನಗಳೂ ಒಪ್ಪಿಕೊಂಡಿವೆ. ಹೀಗಾಗಿ ಅದನ್ನು ಆಧರಿಸಿದ ಗ್ರಂಥ ಇದು ಎಂದು ಅಭಿಪ್ರಾಯಪಟ್ಟರು.
ಉದ್ಯಮಿ ಸುಬ್ರಾಯ ವಾಳ್ಕೆ ಗೋ ಶಾಲೆಗೆ ನೀಡಿದ ವಾಗ್ದಾನದಂತೆ 1.25 ಲಕ್ಷ ರೂ ದೇಣಿಗೆ ನೀಡಿದರು. ಬಿಜೆಪಿ ನೂತನ ಮಂಡಲಾಧ್ಯಕ್ಷ ಜಿ.ಐ ಹೆಗಡೆ ಶ್ರೀಗಳಿಂದ ಆಶೀರ್ವಾದ ಪಡೆದರು.
ಅಮೃತಧಾರಾ ಗೋ ಶಾಲೆಯ ಗೌರವಾಧ್ಯಕ್ಷೆ ಭಾರತೀ ಪಾಟೀಲ್ ಸರ್ವರನ್ನೂ ಸ್ವಾಗತಿಸಿದರು. ಅಧ್ಯಕ್ಷ ಮುರಳೀಧರ ಪ್ರಭು ಗೋಶಾಲೆ ನಡೆದುಬಂದ ರೀತಿಯನ್ನು ವಿವರಿಸಿ ಪ್ರಾಸ್ತಾವಿಕ ನುಡಿ ಆಡಿದರು. ಗೋ ಶಾಲೆಯ ಪದಾಧಿಕಾರಿಗಳಾದ ಅರುಣ ಹೆಗಡೆ, ಸುಬ್ರಾಯ ಭಟ್ಟ, ಮಂಜುನಾಥ ಭಟ್ಟ, ಆರ್.ಜಿ ಭಟ್ಟ ಇತರರು ಇದ್ದರು. ಗಣೇಶ ಜೋಶಿ ನಿರೂಪಿಸಿದರು.
ಸಂಜೆ ನಡೆದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಹೊಸಾಡಿನ ಕಿರಿಯ ಪ್ರಾಥಮಿಕ ಶಾಲೆಯ ಮಕ್ಕಳಿಂದ ಹಾಗೂ ಹಟ್ಟಿಕೇರಿಯ ಹಿರಿಯ ಪ್ರಾಥಮಿಕ ಶಾಲೆಯ ಮಕ್ಕಳಿಂದ ಸುಂದರವಾದ ವಿವಿಧ ಮನರಂಜನಾ ಕಾರ್ಯಕ್ರಮಗಳು ನಡೆದವು.
ತಾಜಾ ಬೆಲ್ಲದ ಪರಿಮಳ ವಾತಾವರಣದಲ್ಲಿ ಹರಡಿ ಆಹ್ಲಾದಕರ ಅನುಭವ ನೀಡಿತು.
ಹಲವಾರು ಜನ ಕಬ್ಬಿನ ಹಾಲು, ಬೆಲ್ಲ , ತೊಡದೇವು,ಬಾಳೆದಿಂಡು, ಕಬ್ಬಿನ ಹಾಲಿನ ದೋಸೆ ಹಾಗೂ ವಿವಿಧ ಬಗೆಯ ತಿಂಡಿ ತಿನಿಸುಗಳನ್ನು ತಿಂದು ಸಂಭ್ರಮಿಸಿದರು.