ಕುಮಟಾ: ತಾಲೂಕಿನ ವಾಲಗಳ್ಳಿ ಗ್ರಾ. ಪಂ. ವ್ಯಾಪ್ತಿಯ ಊರಕೇರಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನೂತನವಾಗಿ ನಿರ್ಮಾಣವಾಗಿರುವ ವಿವೇಕ ಕೊಠಡಿಯನ್ನು ಹಾಗೂ ಸೆಲ್ಕೋ ಫೌಂಡೇಶನ್ ವತಿಯಿಂದ ಒದಗಿಸಲಾದ ಸ್ಮಾರ್ಟ್ ಕ್ಲಾಸ್ ಅನ್ನು ಶಾಸಕ ದಿನಕರ ಶೆಟ್ಟಿ ಅವರು ಶನಿವಾರ ಉದ್ಘಾಟಿಸಿದರು.

ನಂತರ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಶಾಸಕರು, ಶಿಕ್ಷಣ, ಆರೋಗ್ಯ, ಕುಡಿಯುವನೀರು, ರಸ್ತೆ-ಸೇತುವೆಗಳ ಅಭಿವೃದ್ಧಿಗಾಗಿ ನನ್ನ ಅಧಿಕಾರಾವಧಿಯಲ್ಲಿ ವಿಶೇಷವಾಗಿ ಶ್ರಮಿಸಿಸಿದ್ದೇನೆ. ಇತರೆ ಅಭಿವೃದ್ಧಿ ಕಾರ್ಯಗಳು ಕೊಂಚ ವಿಳಂಬವಾದರು ಪರವಾಗಿಲ್ಲ. ಆದರೆ ಶಿಕ್ಷಣಕ್ಕೆ ಸಂಬಂಧಿಸಿದ ಸೌಲಭ್ಯಗಳನ್ನು ಪೂರೈಸಲು ತಡವಾಗಬಾರದು. ಮಕ್ಕಳ ಭವಿಷ್ಯವನ್ನು ರೂಪಿಸುವ ಮಹತ್ತರ ಜವಾಬ್ದಾರಿಯನ್ನು ಶಾಲೆಗಳು ನಿರ್ವಹಿಸುತ್ತವೆ. ತನ್ಮೂಲಕ ದೇಶದ ಭವಿಷ್ಯವನ್ನು ಸುಭದ್ರಗೊಳಿಸುವ ಕಾರ್ಯ ಶಾಲೆಯಿಂದಲೇ ಪ್ರಾರಂಭವಾಗುತ್ತದೆ. ಆದ್ದರಿಂದ ಶಾಲೆಗಳ ಅಭಿವೃದ್ಧಿ ಅತೀಮುಖ್ಯ. ಪ್ರತಿ ಮಗುವಿಗೂ ಗುಣಮಟ್ಟದ ಶಿಕ್ಷಣ ಸಿಗಬೇಕು. ಮಾನವನ ಬದುಕನ್ನು ಹಸನಾಗಿಸಲು ಶಿಕ್ಷಣ ಅತ್ಯಗತ್ಯ. ಅಗತ್ಯವಿರುವ ಶಾಲೆಗಳಲ್ಲಿ ಹೊಸ ವರ್ಗಕೋಣೆಗಳನ್ನು ಒದಗಿಸುವ ಸಲುವಾಗಿ ಹಿಂದಿನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ವಿವೇಕ ಶಾಲೆಯನ್ನು ಜಾರಿಗೆ ತಂದಿದ್ದಾರೆ. ಈ ಯೋಜನೆಯ ಅಡಿಯಲ್ಲಿ ಊರಕೇರಿ ಶಾಲೆಗೆ ಒಂದು ಹೊಸ ಕೊಠಡಿಯನ್ನು ಒದಗಿಸಿಕೊಟ್ಟಿದ್ದೇನೆ. ಸೆಲ್ಕೋ ಸಂಸ್ಥೆಯವರು ಸರ್ಕಾರಿ ಶಾಲೆಗಳಿಗೆ ಅನುಕೂಲವಾಗುವ ಸದುದ್ದೇಶದಿಂದ ಸ್ಮಾರ್ಟ್ ಟಿವಿ ಹಾಗೂ ಇತರ ಉಪಕರಣಗಳನ್ನು ಒದಗಿಸಿಕೊಡುತ್ತಿರುವುದು ಪ್ರಶಂಸನೀಯ ಕಾರ್ಯ. ಸ್ಮಾರ್ಟ್ ಕ್ಲಾಸ್ ಎನ್ನುವುದು ಅತ್ಯಾಧುನಿಕ ತಂತ್ರಜ್ಞಾನದ ಮೂಲಕ ಬೋಧನೆಗೆ ಹಾಗೂ ಕಲಿಕೆಗೆ ನೆರವಾಗುತ್ತದೆ. ಒಂದೇ ಮಾತಿನಲ್ಲಿ ಹೇಳಬೇಕೆಂದರೆ ಬೋಧನಾ-ಕಲಿಕಾ ಪ್ರಕ್ರಿಯೆಯನ್ನು ಸುಲಭವಾಗಿಸಲು ಹಾಗೂ ಪರಿಣಾಮಕಾರಿಯಾಗಿಸಲು ಇದರಿಂದ ಸಾಧ್ಯವಾಗುತ್ತದೆ. ಇದರ ಸಂಪೂರ್ಣ ಪ್ರಯೋಜನವನ್ನು ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಪಡೆದುಕೊಳ್ಳಲಿ ಎಂದು ಹೇಳಿದರು.

RELATED ARTICLES  ಅಧಿಕಾರಿಗಳು ಸಾರ್ವಜನಿಕರಿಗೆ ಸ್ಪಂದಿಸಲಿ : ಭಾಸ್ಕರ ಪಟಗಾರ

ತಾ. ಪಂ. ಕಾರ್ಯನಿರ್ವಹಣಾಧಿಕಾರಿ ಮತ್ತು ಕ್ಷೇತ್ರ ಶಿಕ್ಷಣಾಧಿಕಾರಿ ಆರ್. ಎಲ್. ಭಟ್, ಅಕ್ಷರ ದಾಸೋಹದ ಸಹಾಯಕ ನಿರ್ದೇಶಕ ವಿನಾಯಕ ವೈದ್ಯ, ವಾಲಗಳ್ಳಿ ಗ್ರಾಮಪಂಚಾಯತ್ ಸದಸ್ಯರುಗಳಾದ ಗಣಪತಿ ಭಟ್, ಗಂಗೆ ಪಟಗಾರ, ಮಂಜುನಾಥ ನಾಯ್ಕ್ ಹಾಗೂ ಪುಷ್ಪಾ ಮುಕ್ರಿ, ಪಟಗಾರ, ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿ ಅಧ್ಯಕ್ಷ ನಾಗರಾಜ್ ಮಡಿವಾಳ, ಸಿ. ಆರ್. ಪಿ. ಉಮೇಶ ನಾಯ್ಕ್, ಮುಖ್ಯಶಿಕ್ಷಕಿ ಶೈಲಜಾ ಆಚಾರಿ, ಪ್ರಮುಖರಾದ ಗಣಪು ಜಟ್ಟು ಗೌಡ ಹಾಗೂ ಇತರರು ಇದ್ದರು.

RELATED ARTICLES  ರಾಜ್ಯ ಮಟ್ಟದಲ್ಲೂ ಪ್ರಶಸ್ತಿ ಮುಡಿಗೇರಿಸಿಕೊಂಡ ಸರಸ್ವತಿ ಪಿಯು ವಿದ್ಯಾರ್ಥಿಗಳು