ಕುಮಟಾ : ಕೊರೋನಾ ಹಿನ್ನೆಲೆಯಲ್ಲಿ ಸರಕಾರದ ನಿಯಮಾವಳಿಗಳಿದ್ದ ಕಾರಣ 2020-21 ನೇ ಸಾಲಿನಲ್ಲಿ ನಡೆಯದಿದ್ದ ಬಾಡದ ಜಾತ್ರೆಯನ್ನು ಶನಿವಾರ ವಿಧಿವತ್ತಾಗಿ ಮಾಡಲಾಯಿತು.
ಐತಿಹಾಸಿಕ ಹಿನ್ನೆಲೆ ಹೊಂದಿರುವ ಬಾಡದ ಕಾಂಚಿಕಾಂಬಾ ದೇವಾಲಯದಲ್ಲಿ ಜಾತ್ರಾ ಸಂಭ್ರಮ ಮನೆಮಾಡಿತ್ತು. ಸಹಸ್ರಾರು ಭಕ್ತರು ದೇವರನ್ನು ರಥದಲ್ಲಿ ಕುಳ್ಳಿರಿಸಿಕೊಂಡು ರಥ ಎಳೆಯುವ ಮೂಲಕ ಜಾತ್ರೆ ಸಂಪನ್ನವಾಯಿತು. ರಾಜ್ಯ ಹಾಗೂ ಪರರಾಜ್ಯದ ಭಕ್ತರು ಈ ಸಂದರ್ಭದಲ್ಲಿ ದೇವಾಲಯಕ್ಕೆ ಆಗಮಿಸಿ, ದೇವರ ದರ್ಶನ ಪಡೆದು ಹರಕೆ ತೀರಿಸಿ ಕೃತಾರ್ಥರಾದರು. ಸಕಲಾಭರಣ ಭೂಷಿತಳಾಗಿ ತಾಯಿ ಕಾಂಚಿಕಾಂಬೆ ಭಕ್ತರಿಗೆ ದರ್ಶನ ನೀಡುತ್ತಿದ್ದರೆ. ಭಕ್ತಿ ಪರವಶರಾದ ಭಕ್ತಸಮೂಹ ತಾಯಿಗೆ ಉಡಿ ತುಂಬುವುದು, ತುಲಾಭಾರ, ಎತ್ತು ಹರಿಸುವ ಸೇವೆ ಸಲ್ಲಿಸುತ್ತಿರುವ ದೃಶ್ಯ ಸಾಮಾನ್ಯವಾಗಿತ್ತು.
ತನ್ನದೇ ಆದ ವಿಶೇಷತೆ ಹೊಂದಿರುವ ಈ ಜಾತ್ರೆಯಲ್ಲಿ ಜನ ಜಂಗುಳಿಯೇ ಸೇರಿರುತ್ತದೆ. ಡಂಗುರ ಸಾರುವ ಮೂಲಕ ಜಾತ್ರೆ ಸನಿಹ ಬಂದಿತೆಂದು ಸಂದೇಶವನ್ನು ನೀಡುವ ಸಂಪ್ರದಾಯವೂ ಸೇರಿದಂತೆ, ಕುಲುಲಿ ಕುದುರೆ, ಪರಿವಾರ ದೇವರುಗಳ ಕಳಸಗಳು ಎಲ್ಲವೂ ವಿಧಿವತ್ತಾಗಿ ನಡೆದು ಸಂಜೆಯ ರಥೋತ್ಸವ ಬಹು ವಿಜ್ರಂಭಣೆಯಿಂದ ನಡೆಯಿತು.
ಉತ್ಸವ ಮೂರ್ತಿಯ ಪಲ್ಲಕ್ಕಿಯನ್ನು ಉತ್ಸವ ರಥದ ಸಮೀಪ ತಂದು. ದೇವಿಗೆ ಸಲ್ಲಿಸಬೇಕಾದ ಪೂಜೆಗಳು ಮುಗಿದ ನಂತರ ಉತ್ಸವ ಮೂರ್ತಿಯನ್ನು ರಥದೊಳಗೆ ಕುಳ್ಳಿರಿಸಲಾಗುತ್ತದೆ. ರಥಕಾಣಿಕೆ ಹರಕೆ ಹೊತ್ತವರು ರಥದ ಗಡ್ಡೆಗೆ ಕಾಯಿ ಒಡೆದು ಹರಕೆ ತೀರಿಸುತ್ತಾರೆ.
ಇಡಗಾಯಿ ಒಡೆದಾದ ನಂತರ ರಥವನ್ನು ಎಳೆಯಲಾಗುತ್ತದೆ. ಚಲಿಸುವ ರಥಕ್ಕೆ ಬಾಳೆ ಹಣ್ಣು ಹೊಡೆಯುವ ಮೂಲಕ ಆಸ್ಥಿಕರು ಸಂಭೃಮಿಸುತ್ತಾರೆ. ರಾತ್ರಿ ಮೃಗಭೇಟೆ ನಡೆದು, ಭೂತ ಬಲಿಯೊಂದಿಗೆ ಜಾತ್ರೆಯ ಚಟುವಟಿಕೆಗಳು ಮುಕ್ತಾಯವಾಗುತ್ತದೆ.
ಈ ಎಲ್ಲಾ ಸಂಪ್ರದಾಯಗಳನ್ನು ಅನೂಚಾನವಾಗಿ ಪಾಲಿಸುತ್ತಾ ಬಂದಿರುವ ದೇವಾಲಯದವರು ಈ ವರ್ಷ ತಾಯಿಗೆ ಹಿಂದೆ ಆಚರಣೆಯಾಗದ ಜಾತ್ರೆಯನ್ನೂ ಮಾಡಿ, ತಾಯಿಯ ಪೂರ್ಣಾನುಗ್ರಹ ಬೇಡಿದ್ದಾರೆ. ಹಿಂದೆ ಜಾತ್ರೆಯನ್ನು ನಡೆಸಲಾಗದ ಬಗ್ಗೆ ತಾಯಿಯಲ್ಲಿ ಪ್ರಾಯಶ್ಚಿತ್ತ ಕಾರ್ಯಗಳನ್ನು ದೇವಾಲಯದ ವ್ಯವಸ್ಥಾಪನಾ ಸಮಿತಿ, ವೈದಿಕರ ಮಾರ್ಗದರ್ಶನ ಪಡೆದು ಮಾಡುವ ಮೂಲಕ ಜಾತ್ರೆಯನ್ನು ಸಂಪನ್ನಗೊಳಿಸಿದರು.
ಈ ಸಂದರ್ಭದಲ್ಲಿ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಎಸ್.ಎಸ್ ಹೆಗಡೆ ಹಾಗೂ ಸಮಿತಿಯ ಸದಸ್ಯರುಗಳು, ವೈದಿಕ ವೃಂದದವರು ಹಾಗೂ ಗ್ರಾಮಸ್ಥರು ಹಾಜರಿದ್ದರು. ಜಾತ್ರೆಯ ಪೇಟೆಯಲ್ಲಿ ಖರೀದಿಯ ಭರಾಟೆ ಜೋರಾಗಿತ್ತು.