ಕುಮಟಾ: ಈ ಹಿಂದೆ ಶಾಸಕರು ಸೂಚನೆಯನ್ನು ಕೊಟ್ಟ ನಂತರವೂ, ಖಾಸಗಿ ಬಸ್ ಸಂಸ್ಥೆಯೊಂದು ಕುಮಟಾ-ಹೊನ್ನಾವರ ಮಾರ್ಗದಲ್ಲಿ ಬಸ್ ಸಂಚಾರ ಮುಂದುವರೆಸಿದ ಹಿನ್ನೆಲೆಯಲ್ಲಿ ಶನಿವಾರ ಶಾಸಕ ದಿನಕರ ಶೆಟ್ಟಿ ಪಟ್ಟಣದ ಗಿಬ್ ಸರ್ಕಲ್ ಸಮೀಪ ಮಿನಿ ಬಸ್ ತಡೆದು ಚಾಲಕನಿಗೆ ಖಡಕ್ ಸೂಚನೆ ನೀಡಿದ ಘಟನೆ ನಡೆದಿದೆ.
ಈ ಸಂದರ್ಭದಲ್ಲಿ ಶಾಸಕ ದಿನಕರ ಶೆಟ್ಟಿ ಮಾತನಾಡಿ, ಗಜಾನನ ಮೋಟಾರ್ಸ್‍ನವರು ಇಷ್ಟು ವರ್ಷಗಳ ಕಾಲ ಶಿವಮೊಗ್ಗಾ-ಕುಮಟಾಕ್ಕೆ ಬಸ್ ವ್ಯವಸ್ಥೆ ಮಾಡಿದ್ದರು. ಈಗ ಕುಮಟಾದಿಂದ ಹೊನ್ನಾವರಕ್ಕೂ ಬಸ್ ಸಂಚಾರ ಆರಂಭಿಸಿದ್ದಾರೆ. ಈ ಬಗ್ಗೆ ನನ್ನ ವ್ಯಾಪ್ತಿಯ ಟೆಂಪೋ ಚಾಲಕ, ಮಾಲಕರು ನನ್ನ ಗಮನಕ್ಕೆ ತಂದಿದ್ದರು. ಅದರಂತೆ ಇತ್ತೀಚೆಗೆ ಗಜಾನನ ಬಸ್ ಚಾಲಕರಿಗೆ ಹಾಗೂ ಸಂಸ್ಥೆಯ ಮುಖ್ಯಸ್ಥರಿಗೆ ಇಲ್ಲಿಯ ಟೆಂಪೋ ಚಾಲಕ, ಮಾಲಕರ ಕಷ್ಟ, ನಷ್ಟಗಳ ಬಗ್ಗೆ ಮನವರಿಕೆ ಮಾಡಿಸಿದ್ದೇನೆ.
ಇದಲ್ಲದೇ ಸದನದಲ್ಲಿಯೂ ಈ ಬಗ್ಗೆ ಸಭಾಧ್ಯಕ್ಷರ ಹಾಗೂ ಸಾರಿಗೆ ಸಚಿವರ ಗಮನಕ್ಕೆ ತಂದು ಕ್ರಮ ಕೈಗೊಳ್ಳುವಂತೆ ಕೇಳಿಕೊಂಡಿದ್ದೇನೆ. ಸಭಾಧ್ಯಕ್ಷರು ಈ ಭಾಗದಲ್ಲಿ ಎನ್‍ಡಬ್ಲ್ಯುಕೆಎಸ್‍ಆರ್‍ಟಿಸಿ ಸಂಚಾರ ಇಲ್ಲ ಎಂಬಂತೆ ತಿಳಿದಿದ್ದರು. ಇದಕ್ಕೆ ನಾನು ಆ ಭಾಗದಲ್ಲಿ ಸಾರಿಗೆ ಸಂಚಾರ ಸುಗಮವಾಗಿದೆ ಎಂದು ಮನವರಿಕೆ ಮಾಡಿದ್ದೇನೆ. ರಾಜ್ಯ ಸರ್ಕಾರ ಶಕ್ತಿ ಯೋಜನೆ ಜಾರಿಗೊಳಿಸಿದ್ದರಿಂದ ಕುಮಟಾ-ಹೊನ್ನಾವರ ತಾಲೂಕಿನೊಳಗೆ ಸಂಚರಿಸುವ ಪ್ರಯಾಣಿಕರ ಟೆಂಪೋಗಳಿಗೆ ಪ್ರಯಾಣಿಕರೇ ಇಲ್ಲದಂತಾಗಿದೆ. ಇದರಿಂದ ಚಾಲಕರು ಕಷ್ಟದ ಜೀವನ ನಡೆಸುವ ಜೊತೆಗೆ ವಾಹನಕ್ಕಾಗಿ ಪಡೆದ ಸಾಲದ ಕಂತುಗಳನ್ನು ಭರಿಸಲಾಗದೇ ಪರದಾಡುವಂತಹ ದುಸ್ಥಿತಿ ಎದುರಾಗಿದೆ. ಈ ಸಂಕಷ್ಟದ ಪರಿಸ್ಥಿತಿಯಲ್ಲಿ ಗಜಾನನ ಸಾರಿಗೆ ಸಂಸ್ಥೆ ವಾಹನ ಸಂಚಾರ ಆರಂಭಿಸಿರುವುದರಿಂದ ಈ ಭಾಗದ ಟೆಂಪೋ ಮಾಲಕರು ಆತ್ಮಹತ್ಯೆ ದಾರಿ ತುಳಿಯುವುದಾಗಿ ನನ್ನ ಬಳಿ ನೋವು ತೋಡಿಕೊಂಡಿದ್ದಾರೆ. ಹೀಗಾಗಿ ಬಸ್ ತಡೆದು ನಿಲ್ಲಿಸಿದ್ದೇನೆ ಎಂದರು.
ನಾನು ಶಾಸಕ. ಜುಬ್ಬಾ ಹಾಕದೆ ಇರುವುದಿರಿಂದ ನಿಮಗೆ ಶಾಸಕನಾಗಿ ಕಾಣುತ್ತಿಲ್ಲಾ ಅಂತಾ ಅನಿಸುತ್ತದೆ. ನಿಮ್ಮ ಬಸ್ ಹೊನ್ನಾವರಕ್ಕೆ ಓಡಾಟ ನಡೆಸುವುದಿಂದ ಇಲ್ಲಿರುವ ಮ್ಯಾಕ್ಸಿಕ್ಯಾಬ್ ನವರು ಇನಷ್ಟು ಆರ್ಥಿಕವಾಗಿ ನಷ್ಟ ಅನುಭವಿಸಬೇಕಾಗಿದೆ. ಸಾರಿಗೆ ಸಚಿವರು ನಿರ್ಧಾರ ಕೈಗೊಳ್ಳವವರೆಗೆ ನಿಮ್ಮ ಬಸ್‌ನ್ನು ಹೊನ್ನಾವರಕ್ಕೆ ತೆಗೆದುಕೊಂಡು ಹೋಗಬೇಡಿ. ಇದನ್ನು ಮೀರಿ ನೀವೇನಾದರೂ ಬಸ್ ತೆಗೆದುಕೊಂಡು ಹೋದರೆ ಅದಕ್ಕೆ ಏನು ಮಾಡಬೇಕು ಎಂಬುದು ನನಗೆ ಗೊತ್ತಿದೆ. ಮತ್ತೆ ಈ ಬಗ್ಗೆ ನಾಡಿದ್ದು, ಬೆಂಗಳೂರು ಹೋಗಿ ಸಚಿವರಿಗೆ ಮನವಿ ಸಲ್ಲಿಸಲಿದ್ದೇನೆ. ಇದು ನಿಲ್ಲದೆ ಹೋದಲ್ಲಿ ಹೋರಾಟ ನಡೆಸಲಾಗುವುದು ಎಂದು ಗಜಾನನ ಬಸ್ ಚಾಲಕರಿಗೆ ಶಾಸಕರು ಎಚ್ಚರಿಸಿದ್ದಾರೆ.
ಈ ಸಂದರ್ಭದಲ್ಲಿ ಬಿಜೆಪಿ ಮಂಡಲಾಧ್ಯಕ್ಷ ಜಿ.ಐ ಹೆಗಡೆ, ಟೆಂಪೋ ಚಾಲಕರ ಸಂಘದ ಅಧ್ಯಕ್ಷ ಸುನೀಲ್ ನಾಯ್ಕ, ಉಪಾಧ್ಯಕ್ಷ ಗಜಾನನ ನಾಯ್ಕ, ಪ್ರಮುಖರಾದ ಮಂಜುನಾಥ ಶೆಟ್ಟಿ, ಕೇಶವ ನಾಯ್ಕ, ಮಂಜುನಾಥ ಗೌಡ ಮತ್ತು ಟೆಂಪೋ ಚಾಲಕರು ಹಾಗೂ ಮಾಲಕರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.