ಭಟ್ಕಳ: ಇತ್ತೀಚೆಗೆ ಅಗಲಿದ ನಾಡಿನ ಹಿರಿಯ ಸಾಹಿತಿ, ಕವಿ ವಿಷ್ಣು ನಾಯ್ಕ ಅವರಿಗೆ ಭಟ್ಕಳ ತಾಲೂಕಾ ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಇಲ್ಲಿನ ಪ್ರವಾಸಿ ಮಂದಿರದ ಸಭಾಂಗಣದಲ್ಲಿ ನುಡಿನಮನ ಸಲ್ಲಿಸಲಾಯಿತು. ಕಾರ್ಯಕ್ರಮದಲ್ಲಿ ಹಾಜರಿದ್ದ ಸಾಹಿತಿ ಡಾ.ಸಯ್ಯದ ಜಮೀರುಲ್ಲಾ ಷರೀಫ್ ವಿಷ್ಣು ನಾಯ್ಕ ಅವರ ಕುರಿತು ಮಾತನಾಡುತ್ತಾ ವಿಷ್ಣು ನಾಯ್ಕ ಅವರು ಸಾಹಿತ್ಯ ಕ್ಷೇತ್ರದಲ್ಲಿ ತಾವು ಬೆಳೆಯುತ್ತ ಇತರರನ್ನೂ ಬೆಳೆಸುವಂತಹ ಎತ್ತರದ ವ್ಯಕ್ತಿತ್ವ ಹೊಂದಿದ ಮಹಾನುಭಾವ. ಭಟ್ಕಳದ ನೆಲದಲ್ಲಿ ನನ್ನನ್ನು ಗುರುತಿಸಿ ಸಾಹಿತ್ಯ ಕೃಷಿಗೆ ಪ್ರೋತ್ಸಾಹಿಸಿದರಲ್ಲದೇ. ಅಂಕೋಲೆಯ ಕರ್ನಾಟಕ ಸಂಘದ ಅಧ್ಯಕ್ಷರಾಗಿದ್ದಾಗ ಆ ವೇದಿಕೆಯಲ್ಲಿ ಅವಕಾಶ ಕಲ್ಪಿಸಿ ಪ್ರೋತ್ಸಾಹ‌ ನೀಡಿದವರು. ನನ್ನನ್ನು ಶಾಮಿಯಾನದ ಕವಿ ಎಂದು ಹೆಸರಿಸಿದರವರೇ ವಿಷ್ಣು ನಾಯ್ಕ ಅವರು. ಜಿಲ್ಲೆಯಲ್ಲಿ ದಿನಕರ ದೇಸಾಯಿಯವರ ನಂತರ ಅವರ ಛಾಯೆಯಾಗಿ ಬೆಳೆದ ವಿಷ್ಣು ನಾಯ್ಕ ಅವರ ಪ್ರೋತ್ಸಾಹದಲ್ಲಿ ಜಿಲ್ಲೆಯ ಈಗಿನ ಎಲ್ಲ ಹೆಸರಾಂತ ಸಾಹಿತಿಗಳು ಬೆಳೆದವರು. ನಾನೂ ಕೂಡ ವಿಷ್ಣು ನಾಯ್ಕ ಅವರ ಗರಡಿಯಲ್ಲಿಯೇ ಬೆಳದ ಸಾಹಿತಿ ಎಂಬ ಹೆಮ್ಮೆ ನನಗಿದೆ ಎಂದು ನುಡಿದರು.

RELATED ARTICLES  ಮನೆಯಲ್ಲಿ ಯಾರೂ ಇಲ್ಲದಿದ್ದಾಗ ಆತ್ಮಹತ್ಯೆ ಮಾಡಿಕೊಂಡ ಮಹಿಳೆ.

ಕಸಾಪ ತಾಲೂಕಾಧ್ಯಕ್ಷ ಗಂಗಾಧರ ನಾಯ್ಕ ಮಾತನಾಡಿ ಒಬ್ಬ ವ್ಯಕ್ತಿ ಸಾಹಿತ್ಯ ಕ್ಷೇತ್ರದಲ್ಲಿ ಯಾವೆಲ್ಲ ರೀತಿಯಲ್ಲಿ ಕೆಲಸ ಮಾಡಬಹುದು ಎಂಬುದಕ್ಕೆ ವಿಷ್ಣು ನಾಯ್ಕ ಅವರ ಸಾಧನೆ ಎಲ್ಲರಿಗೂ ಪ್ರೇರಣೆ. ಪುರಾಣದಲ್ಲಿ ವಿಷ್ಣುವಿನ ಹತ್ತು ಅವತಾರಗಳ ಕುರಿತು ನಾವೆಲ್ಲ ಓದಿರುವಂತೆ ಸಾಹಿತ್ಯ ಕ್ಷೇತ್ರದಲ್ಲಿ ವಿಷ್ಣು ನಾಯ್ಕ ಅವರು ಶಿಕ್ಷಕ, ಉಪನ್ಯಾಸಕ, ಸಂಪನ್ಮೂಲ ವ್ಯಕ್ತಿ, ಲೇಖಕ, ಕವಿ, ಅಂಕಣಕಾರ, ನಾಟಕಕಾರ, ಪ್ರಕಾಶಕ, ಸಂಘಟಕ, ನಾಟಕಕಾರ, ಮಾರ್ಗದರ್ಶಕ, ಅಭಿನಯ, ಹೀಗೆ ಹತ್ತು ಹಲವು ಸ್ವರೂಪದಲ್ಲಿ ಕಾರ್ಯ ನಿರ್ವಹಿಸಿರುವುದು ಇತಿಹಾಸ. ಅವರಿಗೆ ಈ ಹಿಂದೆ ಭಟ್ಕಳದ ನೆಲದಲ್ಲಿಯೇ ಉ.ಕ. ಜಿಲ್ಲಾ‌ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷತೆಯ ಗೌರವ ಸಂದಿರುವುದು ಭಟ್ಕಳ ತಾಲೂಕಿನ ಹೆಮ್ಮೆ ಎಂದರು. ಸಾಹಿತಿ ಮಾನಾಸುತ ಶಂಭು ಹೆಗಡೆ ಸ್ವರಚಿತ ಕವಿತೆ ವಾಚಿಸಿ ವಿಷ್ಣು ನಾಯ್ಕ ಅವರಿಗೆ ಕಾವ್ಯನಮನ ಸಲ್ಲಿಸಿದರೆ ಶಿಕ್ಷಕ ಚಿದಾನಂದ‌ ಪಟಗಾರ ಮಾತನಾಡಿ ತಾನು ಓರ್ವ ಭಾಷಣಕಾರನಾಗಿ, ರಾಜ್ಯ ಮಟ್ಟದ ವರೆಗಿನ ಸ್ಪರ್ಧೆಯಲ್ಲಿ ಭಾಗವಹಿಸಿ ಬಹುಮಾನ ಪಡೆಯಲು ಮತ್ತು ವಿವಿದೆಡೆ ಉಪನ್ಯಾಸ ನೀಡಲು ವಿಷ್ಣು ನಾಯ್ಕ ಅವರ ದಿನಕರ‌ ದೇಸಾಯಿಯವರ ಚುಟುಕುಗಳ ವಿವರಣೆಯನ್ನೊಳಗೊಂಡ ಕೃತಿಯೇ ನೆರವಾದುದನ್ನು ಸ್ಮರಿಸಿದರು.

RELATED ARTICLES  ಪ್ರೋ. ಚಿದಾನಂದ ಗಣಪತಿ‌ ನಾಯ್ಕರಿಗೆ ಪಿ.ಹೆಚ್.ಡಿ.


ಸಾಹಿತಿ, ಭಟ್ಕಳ ತಾಲೂಕಾ ಕಸಾಪ ಕೋಶಾಧ್ಯಕ್ಷ ಶ್ರೀಧರ ಶೇಟ್ ವಿಷ್ಣು ನಾಯ್ಕ ಅವರ ಬದುಕು ಬರೆಹದ ಕುರಿತು ವಿವರಿಸಿ ತಮ್ಮ ನಿವಾಸ ಪರಿಮಳದಂಗಳವನ್ನೇ ಸಾಹಿತ್ಯ ಸಾಂಸ್ಕೃತಿಕ‌ ಕೇಂದ್ರವಾಗಿಸಿ ನನ್ನಂತ ನೂರಾರು‌ ಕವಿಗಳನ್ನು ಪೋಷಿಸಿರುವುದನ್ನೂ ಸ್ಮರಿಸುತ್ತ ಕಾರ್ಯಕ್ರಮ ನಿರ್ವಹಿಸಿದರು.


ಕಸಾಪ ಗೌರವ ಕಾರ್ಯದರ್ಶಿ ನಾರಾಯಣ ನಾಯ್ಕ ವಂದಿಸಿದರು. ಕಾರ್ಯಕ್ರಮವನ್ನು ವಿಷ್ಣು ನಾಯ್ಕ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆಯನ್ನು ಮಾಡುವ ಮೂಲಕ ಆರಂಭಿಸಲಾಯಿತು.ಕಸಾಪ ಸಂಘಟನಾ ಕಾರ್ಯದರ್ಶಿ ಸಂತೋಷ ಆಚಾರ್ಯ, ಸಂಘ ಸಂಸ್ಥೆಯ ಪ್ರತಿನಿದಿ ವೆಂಕಟೇಶ ನಾಯ್ಕ ಆಸರಕೇರಿ, ಶಿಕ್ಷಕ ಸಿ.ಡಿ.ಪಡುವಣಿ, ಮುಂತಾದವರು ಉಪಸ್ಥಿತರಿದ್ದರು.