ಹೊನ್ನಾವರ ; ಸಾಲಕೋಡನ ಕಾನಕ್ಕಿಯಲ್ಲಿ ಪ್ರಧಾನ ಮಂತ್ರಿ ಉಜ್ವಲ ಯೋಜನೆಯಡಿ 10 ಫಲಾನುಭವಿಗಳಿಗೆ ಉಚಿತ ಅಡಿಗೆ ಅನಿಲ ವಿತರಣಾ ಕಾರ್ಯಕ್ರಮ ನಡೆಯಿತು.
ಬಿಜೆಪಿ ಮುಖಂಡರು ಹಾಗೂ ಬೆಳಕು ಗ್ರಾಮೀಣಾಬಿವೃದ್ಧಿ ಟ್ರಸ್ಟ್ ನ ಅಧ್ಯಕ್ಷರೂ ಆದ ನಾಗರಾಜ ನಾಯಕ ತೊರ್ಕೆಯವರು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ ಪ್ರಧಾನಿ ನರೇಂದ್ರ ಮೋದಿಯವರ ಮಹತ್ವಾಕಾಂಕ್ಷಿ ಉಜ್ವಲ ಯೋಜನೆಯಿಂದ ಕಡುಬಡವರ ಮನೆಗಳಲ್ಲಿ ಉಚಿತ ಗ್ಯಾಸ್ ಸಂಪರ್ಕ ಪಡೆದುಕೊಳ್ಳುವಂತಾಗಿದೆ ಹಣ, ಸಮಯ ವ್ಯಯಿಸದೇ ಫಲಾನುಭವಿಗಳು ಉಚಿತವಾಗಿ ಈ ಯೋಜನೆಯ ಅನುಕೂಲತೆಯನ್ನು ಪಡೆದುಕೊಳ್ಳುವ ನಿಟ್ಟಿನಲ್ಲಿ ಬಿಜೆಪಿ ಕಾರ್ಯಕರ್ತರು ಹಾಗೂ ಬೆಳಕು ಗ್ರಾಮೀಣಾಬಿವೃದ್ಧಿ ಟ್ರಸ್ಟ್ ಸಿಬ್ಬಂದಿಗಳು ಕಾರ್ಯ ನಿರ್ವಹಿಸುತ್ತಿದ್ದಾರೆ. 2011 ರ ಪೂರ್ವದಲ್ಲಿ ನೋಂದಣಿಯಾದ ಬಿಪಿಎಲ್ ಕಾರ್ಡದಾರರಿಗೆ ಈ ಯೋಜನೆಯ ಸೌಲಭ್ಯ ದೊರೆಯುತ್ತಿದ್ದು ಇನ್ನು ಕೆಲವೇ ದಿನಗಳಲ್ಲಿ ಗ್ಯಾಸ್ ಸಂಪರ್ಕವನ್ನು ಹೊಂದಿರದ ಎಲ್ಲ ಬಿಪಿಎಲ್. ಕಾರ್ಡದಾರರಿಗೂ ಈ ಯೋಜನೆಯ ಸೌಲಭ್ಯ ದೊರೆಯಲಿದೆ. ಮುಂದಿನ ದಿನಗಳಲ್ಲಿ ಕೂಡಾ ಫಲಾನುಭವಿಗಳಿಗೆ ಉಚಿತವಾಗಿ ಈ ಯೋಜನೆಯನ್ನು ತಲುಪಿಸುವ ನಿಟ್ಟಿನಲ್ಲಿ ಪ್ರಾಮಾಣಿಕವಾಗಿ ಪ್ರಯತ್ನಿಸುತ್ತೇವೆ ಎಂದರು.
ಜಿಲ್ಲಾ ಪಂಚಾಯತ ಸದಸ್ಯೆ ಶ್ರೀಮತಿ ಶ್ರೀಕಲಾ ಶಾಸ್ತ್ರಿಯವರು ಮಾತನಾಡಿ ಕೇಂದ್ರ ಸರಕಾರ ಜಾರಿಗೆ ತಂದ ಹಲವು ಜನಪರ ಯೋಜನೆಗಳಲ್ಲಿ ಈ ಉಜ್ವಲ ಯೋಜನೆಯೂ ಒಂದಾಗಿದೆ. ಈ ಯೋಜನೆಯ ಅನುಕೂಲತೆಯನ್ನು ಫಲಾನುಭವಿಗಳು ಸುಲಭವಾಗಿ ಪಡೆದುಕೊಳ್ಳುವಂತಾಗಿದೆ. ಬೆಳಕು ಗ್ರಾಮೀಣಾಬಿವೃದ್ಧಿ ಟ್ರಸ್ಟ್ ನ ನಾಗರಾಜ ನಾಯಕ ತೊರ್ಕೆಯವರು ಉಚಿತವಾಗಿ ಲೈಟರಗಳನ್ನು ಸಹ ವಿತರಿಸಿ ಇನ್ನು ಹೆಚ್ಚಿನ ಅನುಕೂಲತೆಯನ್ನು ಒದಗಿಸಿದ್ದಾರೆ ಎಂದರು.
ವೆಂಕಟ್ರಮಣ ಹೆಗಡೆಯವರು ಮಾತನಾಡಿ ಉಜ್ವಲ ಯೋಜನೆಯನ್ನು ಬಡವರ ಮನೆಬಾಗಿಲಿಗೆ ತಲುಪಿಸುವ ನಿಟ್ಟಿನಲ್ಲಿ ಶ್ರಮಿಸಿದವರನ್ನು ಶ್ಲಾಘಿಸಿದರು.
ಈ ಸಂದರ್ಭದಲ್ಲಿ ಫಲಾನುಭವಿಗಳಾದ ಮಹಾದೇವಿ ಕೆರಿಯಾ ಮರಾಠಿ, ಮಂಗಲಾ ದೇವು ಮರಾಠಿ, ಲಲಿತಾ ಗಣಪತಿ ನಾಯ್ಕ, ನಾಗರತ್ನ ಕೇಶವ ಮರಾಠಿ, ಜಾನಕಿ ಗಣೇಶ ಮರಾಠಿ, ಡಾಕಿ ಮಾಯಾ ಮರಾಠಿ, ಲೀಲಾ ಚಂದು ಮರಾಠಿ, ಕಾವೇರಿ ಬೀರಾ ಮರಾಠಿ, ಮಹಾದೇವಿ ಸುಬ್ಬು ಹೆಗಡೆ, ಮಹಾದೇವಿ ನಾಗು ಮರಾಠಿ ಇವರುಗಳು ಉಚಿತ ಗ್ಯಾಸ್ ಕಿಟ್ ಗಳನ್ನು ಪಡೆದು ಬೀರಿದ ಮಂದಹಾಸ ಧನ್ಯತಾಭಾವವನ್ನು ಮೂಡಿಸಿತು. ಈ ಕಾರ್ಯಕ್ರಮದಲ್ಲಿ ಶಕ್ತಿಕೇಂದ್ರದ ಅಧ್ಯಕ್ಷ ನಾರಾಯಣ ಎಂ. ಹೆಗಡೆ, ಟಿ. ಎಸ್. ನಾಯ್ಕ ಮತ್ತು ಇನ್ನಿತರರು ಉಪಸ್ಥಿರಿದ್ದರು.