ಕುಮಟಾ : `ಯುನೈಟೆಡ್ ಫ್ರೆಂಡ್ಸ್ ದೇವರಹಕ್ಕಲ್’ ಇವರ ಆಶ್ರಯದಲ್ಲಿ ಮೂರನೇ ವರ್ಷದ ಜಿಲ್ಲಾ ಮಟ್ಟದ ಹಾರ್ಡ್ ಟೆನಿಸ್ ಬಾಲ್ ಓವರ್ ಆರ್ಮ್ ಕ್ರಿಕೆಟ್ ಪಂದ್ಯಾವಳಿ “ಶ್ರೀ ಶಾಂತಿಕಾ ಟ್ರೋಫಿ-2024”ಗೆ ಶುಕ್ರವಾರ, ಮಾರ್ಚ್ 8ರಂದು ಕುಮಟಾದ ಮಹಾತ್ಮಾ ಗಾಂಧಿ (ಮಣಕಿ) ಕ್ರೀಡಾಂಗಣದಲ್ಲಿ ಅದ್ಧೂರಿ ಚಾಲನೆ ನೀಡಲಾಯಿತು.

ಪಂದ್ಯಾವಳಿಯನ್ನು ದೇವರಹಕ್ಕಲದ ಶ್ರೀ ಶಾಂತಿಕಾ ಪರಮೇಶ್ವರಿ ದೇವಸ್ಥಾನದ ಅರ್ಚಕರಾದ ಪ್ರಕಾಶ ಗುನಗಾ ದೀಪ ಬೆಳಗಿಸುವುದರ ಮೂಲಕ ಉದ್ಘಾಟಿಸಿದರು. ನಂತರ ಮಾತಾಡಿದ ಅವರು, “ದೇವರಹಕ್ಕಲದ ಯುನೈಟೆಡ್ ಫ್ರೆಂಡ್ಸ್ ತಂಡದವರು ಸಂಘಟಿಸಿದ ಈ ಪಂದ್ಯಾವಳಿ ಅದ್ಧೂರಿ ಯಶಸ್ಸು ಕಾಣಲಿ” ಎಂದು ಶುಭ ಹಾರೈಸಿದರು.

ಶ್ರೀ ಶಾಂತಿಕಾ ಪರಮೇಶ್ವರಿ ದೇವಸ್ಥಾನದ ಪ್ರಧಾನ ಅರ್ಚಕರಾದ ರಾಜು ಗುನಗಾ ಮಾತನಾಡುತ್ತ, “ನಮ್ಮ ದೇವರಹಕ್ಕಲದ ಯುವಕರು ಒಂದಿಲ್ಲೊಂದು ಕಾರ್ಯಕ್ರಮದಲ್ಲಿ ತೊಡಗಿಸಿಕೊಳ್ಳುವುದರ ಜೊತೆಗೆ ಸದಾ ಕ್ರಿಯಾಶೀಲರಾಗಿರುತ್ತಾರೆ. ಅವರಿಗೆ ಗ್ರಾಮ ದೇವಿ ಸನ್ಮಂಗಳವನ್ನುಂಟು ಮಾಡಲಿ” ಎಂದು ಹಾರೈಸಿದರು.

ಇದು ಮಾತಾಡುವ ಸಮಯವಲ್ಲ, ಆದರೂ ಒಂದೆರಡು ಮಾತಾಡುತ್ತೇನೆ'' ಎನ್ನುತ್ತಾ ಮಾತು ಆರಂಭಿಸಿದ ಶಿಕ್ಷಕ ಪಾಂಡುರಂಗ ದಿವಗಿ,ಕ್ರೀಡೆಯು ದೇಹ ಮತ್ತು ಮನಸ್ಸನ್ನು ಸಮನ್ವಯಗೊಳಿಸುವ ಸಾಧನ. ಕ್ರೀಡೆ ಮನೋರಂಜನೆ ಹೊರತಾಗಿ ಯುವಜನರನ್ನು ಸಂಘಟಿಸುವ ಶಕ್ತಿ ಹೊಂದಿದೆ. `ಯುನೈಟೆಡ್ ಫ್ರೆಂಡ್ಸ್ ದೇವರಹಕ್ಕಲ್’ ಇವರು ಯುವಶಕ್ತಿಯನ್ನು ಕ್ರೀಡಾಕೂಟದ ಮೂಲಕ ಒಟ್ಟಿಗೆ ಜೋಡಿಸುವ ಕೆಲಸ ಮಾಡಿದ್ದಾರೆ. ಕ್ರೀಡಾಕೂಟ ಸಂಘಟಿಸುವುದು ಸುಲಭದ ಮಾತಲ್ಲ. ಆದರೂ ಈ ತಂಡದವರು ಕಷ್ಟಪಟ್ಟು ಈ ಕಾರ್ಯ ಮಾಡಿದ್ದಾರೆ” ಇವರಿಗೆ ಯಶಸ್ಸು ಸಿಗಲಿ ಎಂದರು.

RELATED ARTICLES  ನೀಟ್ - 2024 ರಲ್ಲಿ ಸರಸ್ವತಿ ಪಿಯು ವಿದ್ಯಾರ್ಥಿಗಳ ಅತ್ಯದ್ಭುತ ಸಾಧನೆ

ಕುಮಟಾದ ಯುವ ವೈದ್ಯ ಡಾ|| ನಾಜೀಮ್ ಜಾವೇದ್ ಖಾನ್ ಮಾತನಾಡುತ್ತಾ, “ದೇವರಹಕ್ಕಲ್ ಅಂದರೆ ನಾನು ಹುಟ್ಟಿ ಬೆಳೆದ ಕೇರಿ. ನಮ್ಮ ಕೇರಿಯ ಹುಡುಗರು ಜಿಲ್ಲಾ ಮಟ್ಟದ ಕ್ರೀಡಾಕೂಟ ಸಂಘಟಿಸಿರುವುದು ನನಗೆ ವೈಯಕ್ತಿಕವಾಗಿ ಹೆಮ್ಮೆಯೆನಿಸುತ್ತಿದೆ. ನಮ್ಮ ಹುಡುಗರು ಮುಂದೆ ರಾಜ್ಯ, ರಾಷ್ಟ್ರ ಮಟ್ಟದ ಕ್ರೀಡಾಕೂಟಗಳನ್ನು ಸಂಘಟಿಸುವುದರ ಜೊತೆಗೆ ಶಿಕ್ಷಣ ಕ್ಷೇತ್ರದಲ್ಲಿ ಸಾಧನೆ ಮಾಡಿದವರನ್ನು ಗುರುತಿಸುವಂತಾಗಲಿ. ಆ ಮೂಲಕ ನಮ್ಮ ಕೇರಿ ಇನ್ನಷ್ಟು ಅಭಿವೃದ್ಧಿ ಹೊಂದಲಿ” ಎಂದರು.

RELATED ARTICLES  ಮಳೆಯ ಅಬ್ಬರ ರಸ್ತೆ ಸಂಚಾರ ಬಂದ್

ಕಾರ್ಯಕ್ರಮದ ಅಧ್ಯಕ್ಷರಾಗಿದ್ದ ಪುರಸಭಾ ಸದಸ್ಯ ಮಂಜುನಾಥ ನಾಯ್ಕ ಮಾತನಾಡಿ, “ನಮ್ಮ ದೇವರಹಕ್ಕಲದ ಹುಡುಗರಿಗೆ ಯಾವುದೇ ಕಾರ್ಯಕ್ರಮವಾದರು ಮುಂದೆ ನಿಂತು ನಡೆಸಿ ಕೊಡುವ ಶಕ್ತಿಯಿದೆ. ಇತ್ತೀಚೆಗೆ ನಮ್ಮ ಗುಡಿಗಾರಗಲ್ಲಿ ಶಾಲೆಯ ಶತಮಾನೋತ್ತರ ಸಂಭ್ರಮದ ಕಾರ್ಯಕ್ರಮದಲ್ಲೂ ಇದೇ ಹುಡುಗರು ಮುಂದೆ ನಿಂತು ಊಟೋಪಚಾರದ ಉಸ್ತುವಾರಿ ನೋಡಿಕೊಂಡರು. ಮುಂದೆ ದೇವರಹಕ್ಕಲದಲ್ಲಿ ನಡೆಯುವ ಎಲ್ಲಾ ಕಾರ್ಯಕ್ರಮಗಳಲ್ಲೂ ಇವರ ಸಾಥ್ ಇದ್ದೇ ಇರುತ್ತದೆ. ಈ ಕ್ರೀಡಾಕೂಟ ಸಂಘಟಿಸುವಾಗ ಹುಡುಗರು ಪಟ್ಟ ಶ್ರಮ ಏನೆನ್ನುವುದು ನಮಗೊತ್ತಿದೆ. ಇವರ ಜೊತೆ ನಾನು ಸದಾ ನಿಲ್ಲುತ್ತೇನೆ” ಎಂದರು.

ನಂತರ ದೇವಸ್ಥಾನದ ಪ್ರಧಾನ ಅರ್ಚಕ ರಾಜು ಗುನಗಾ ಟ್ರೋಫಿ ಅನಾವರಣಗೊಳಿಸಿದರು. ಉದ್ದಿಮೆದಾರ ವಿನಾಯಕ ನಾಯ್ಕ ಕ್ರೀಡಾ ಧ್ವಜಾರೋಹಣ ನೆರವೇರಿಸಿದರು. ರಮೇಶ್ ಭಂಡಾರಿ ಕ್ರೀಡಾಂಗಣ ಉದ್ಘಾಟಿಸಿ ಕ್ರೀಡೆಗೆ ಶುಭ ಹಾರೈಸಿದರು. `ಯುನೈಟೆಡ್ ಫ್ರೆಂಡ್ಸ್ ದೇವರಹಕ್ಕಲ್’ ತಂಡದ ಎಲ್ಲಾ ಸದಸ್ಯರು ಹಾಜರಿದ್ದರು. ಡಿ. ಎಲ್. ಸಜನ್ ಕಾರ್ಯಕ್ರಮ ನಿರೂಪಿಸಿದರು.