ಭಟ್ಕಳ : ತಾಲೂಕಿನ ಬೆಳಕೆಯ ಬಳಿ ಅರಬ್ಬಿ ಸಮುದ್ರದಲ್ಲಿ ಕೃತಕ ಬಂಡೆಗಳ ಸ್ಥಾಪನೆಗೆ ಚಾಲನೆ ನೀಡಲು ಸಮುದ್ರಕ್ಕೆ ತೆರಳಿದ ಮೀನುಗಾರಿಕೆ ಹಾಗೂ ಜಿಲ್ಲಾ ಉಸ್ತುವಾರಿ ಮಂಕಾಳ ಎಸ್ ವೈದ್ಯ ಅವರು, ಆಳ ಸಮುದ್ರದಲ್ಲಿ ಯಾವುದೇ ಸುರಕ್ಷಾ ವಿಧಾನ ಇಲ್ಲದೆ ಧುಮಕಿ ತನ್ನ ಸಾಹಸ ಪ್ರದರ್ಶಸಿ, ಅಧಿಕಾರಿಗಳ ಹಾಗೂ ಮೀನುಗಾರರ ಹುಬ್ಬೇರಿಸುವಂತೆ ಮಾಡಿದ್ದಾರೆ.
ಶನಿವಾರ ಕೃತಕ ಬಂಡೆಗಳನ್ನು ಅಳವಡಿಸಲು ತೆರಳಿದ ಸಚಿವರು ಮೊದಲು ಕೃತಕ ಬಂಡೆಗಳನ್ನು ಸುಮಾರು 5 ನಾಟಿಕಲ್ ಸಮುದ್ರದ ಮದ್ಯ ತೆರಳಿ ಸಮುದ್ರದಲ್ಲಿ ಅದನ್ನು ಇಳಿಸಿದ್ದಾರೆ. ಬಳಿಕ ಮೀನುಗಾರರು, ಮಾಧ್ಯಮದವರು, ಸ್ಥಳೀಯರ ಎದುರೇ ನೋಡು ನೋಡುತ್ತಿರುವಂತೆ ಸಮುದ್ರಕ್ಕೆ ಧುಮುಕಿದ್ದಾರೆ. ಅಲೆಗಳ ಹೊಡೆತಲ ನಡುವೆ ಸಮುದ್ರದಲ್ಲಿ ಯೋಗಾಶನ ನಡೆಸಿದರು. ಸುಮಾರು ಅರ್ಧಗಂಟೆಗಳಿಗೂ ಹೆಚ್ಚನ ಕಾಲ ನೀರಿನಲ್ಲಿ ವಿವಿಧ ಭಂಗಿಗಳನ್ನು ಪ್ರದರ್ಶಿಸಿದ್ದಾರೆ.
ಸಚಿವರು ಎರಡು ಕೈಗಳನ್ನು ಮೇಲೆ ನಿಂತಿರುವ ದೃಶ್ಯವಂತೂ ಸಾಮಾಜಿಕ ಜಾಲತಾಣಗಳಲ್ಲಿ ಸದ್ದು ಮಾಡುತ್ತಿದೆ. ಮೀನುಗಾರಿಕೆ ಇಲಾಖೆಗೆ ತಕ್ಕದಾದ ಸಚಿವರು ದೊರಕಿದ್ದು ಇಲಾಖೆಯ ಬಗ್ಗೆ ಮಾತ್ರವಲ್ಲದೆ ನೀರಿನ ಆಳ ಎತ್ತರ ಸಮುದ್ರದ ಬಗ್ಗೆಯೂ ಎಲ್ಲಾ ಮಾಹಿತಿ ಹೊಂದಿದ್ದಾರೆ ಎನ್ನುವ ಅಭಿಪ್ರಾಯ ಮೀನುಗಾರರ ಬಾಯಿಯಿಂದಲೆ ಕೇಳಿ ಬಂದಿದೆ. ಸಚಿವರಾದ ಬಳಿಕ ತನ್ನ ಇಲಾಖೆಯ ಅಭಿವೃದ್ಧಿಗಾಗಿ ನೂತನ ತಂತ್ರಜ್ಞಾನಗಳನ್ನು ಅಳವಡಿಸಿ ಕಡಲ ಮಕ್ಕಳ ಒಡಲಿಗೆ ನಿತ್ಯ ಅನ್ನ ನೀಡುವ ಕಾಯಕ ಮಾಡುತ್ತಿದ್ದಾರೆ ಎಂದು ಮೀನುಗಾರರ ಮುಖಂಡ ಭಾಸ್ಕರ ಮೊಗೇರ ಹೇಳಿದರು. ಅರಬ್ಬಿ ಸಮುದ್ರದ ರಭಸದ ಅಲೆಗಳ ನಡುವೆ ಸಚಿವರ ಸಾಹಸಮಯ ಪ್ರದರ್ಶನಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ಮೆಚ್ಚುಗೆಯ ಮಹಾಪೂರವೆ ಹರಿದು ಬರುತ್ತಿದೆ.