ಕುಮಟಾ : ಶಾಸಕ ದಿನಕರ ಕೆ. ಶೆಟ್ಟಿ ಅವರು ಹೊನ್ನಾವರ-ಮಲ್ಲಾಪುರ ರಸ್ತೆಯ ಹಾಳಾದ ಆಯ್ದ ಭಾಗಗಳಲ್ಲಿ ಡಾಂಬರೀಕರಣ ಕಾಮಗಾರಿಗೆ ಅರೆಅಂಗಡಿಯಲ್ಲಿ ಗುದ್ದಲಿಪೂಜೆ ನೆರವೇರಿಸಿದರು. 2022-23ನೇ ಸಾಲಿನ 5054 ಯೋಜನೆಯಡಿಯಲ್ಲಿ, ಹೊನ್ನಾವರ-ಮಲ್ಲಾಪುರ ರಸ್ತೆಯ ಕಿ.ಮೀ. 8.50ರಿಂದ ಕಿ.ಮೀ. 10.80ರ ವರೆಗೆ ಹಾಗೂ ಕಿ.ಮೀ. 15.00 ದಿಂದ ಕಿ.ಮೀ. 18.70 ವರೆಗೆ ಹಾಳಾದ ಆಯ್ದ ಭಾಗಗಳಲ್ಲಿ ಡಾಂಬರೀಕಾರಣ ಮಾಡುವ 200.00 ಅಂದಾಜು ಮೊತ್ತದ ಕಾಮಗಾರಿ ಇದಾಗಿದೆ.
ಭೂಮಿಪೂಜೆ ನೆರವೇರಿಸಿ ಮಾತನಾಡಿದ ಶಾಸಕರು ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ ಮೂಲಭೂತ ಸೌಕಾರ್ಯಗಳ ಅಭಿವೃದ್ಧಿಗಾಗಿ ದಾಖಲೆಯ ಪ್ರಮಾಣದಲ್ಲಿ ಅನುದಾನವನ್ನು ಒದಗಿಸಲಾಗಿತ್ತು. ಹೊನ್ನಾವರ ತಾಲೂಕಿನ ಹಳ್ಳಿಗಳ ರಸ್ತೆಯ ಸುಧಾರಣೆಗಾಗಿ ವಿಶೇಷ ಕಾಳಜಿವಹಿಸಿದ್ದರಿಂದ ಇಂದು ಬಹುತೇಕ ಹಳ್ಳಿಗಳು ಅತ್ಯುತ್ತಮ ರಸ್ತೆಯನ್ನು ಹೊಂದಿವೆ. ಜಿಲ್ಲಾ ಮುಖ್ಯ ರಸ್ತೆ ಹಾಗೂ ರಾಜ್ಯ ಹೆದ್ದಾರಿಗಳನ್ನು ಮೇಲ್ದರ್ಜೆಗೆ ಏರಿಸಲು ಮಾಜಿ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರು ಸಾಕಷ್ಟು ಅನುದಾನವನ್ನು ಒದಗಿಸಿದ್ದರು. ಇದರಿಂದ ಕುಮಟಾ-ಚಂದಾವರ, ಚಂದಾವರ-ಸಂತೆಗುಳಿ, ಚಂದಾವರ-ಅರೆಅಂಗಡಿ ರಸ್ತೆಯ ಬಹುತೇಕ ಭಾಗ ಪೂರ್ಣಗೊಂಡಿದೆ. ಉಳಿದ ಆಯ್ದ ಭಾಗಗಳ ಡಾಂಬರೀಕರಣಕ್ಕೆ ಹಿಂದಿನ ವರ್ಷ ಅನುದಾನ ಒದಗಿಸಿದ್ದೆ. ಟೆಂಡರ್ ಪ್ರಕ್ರಿಯೆ ಮುಗಿದಿತ್ತು ಆದರೆ ಚುನಾವಣೆ ಘೋಷಣೆ ಆಗಿದ್ದರಿಂದ ಕಾಮಗಾರಿ ಪ್ರಾರಂಭಿಸಲು ವಿಳಂಬವಾಯಿತು. ಗುತ್ತಿಗೆದಾರರು ಕಾಮಗಾರಿಯಲ್ಲಿ ಗುಣಮಟ್ಟವನ್ನು ಕಾಯ್ದುಕೊಳ್ಳಬೇಕು. ಒಂದುವೇಳೆ ಕಾಮಗಾರಿ ಕಳಪೆಯಾಗಿ ಕಂಡುಬಂದರೆ ಸಾರ್ವಜನಿಕರು ಅಧಿಕಾರಿಗಳ ಗಮನಕ್ಕೆ ತರಬೇಕು ಎಂದು ಹೇಳಿದರು.
ಕಡ್ಲೆ ಗ್ರಾಮಪಂಚಾಯತ್ ಅಧ್ಯಕ್ಷ ಸುಬ್ರಹ್ಮಣ್ಯ ಭಟ್, ಉಪಾಧ್ಯಕ್ಷ ನಾಗರಾಜ ಭಾಗವತ, ಲೋಕೋಪಯೋಗಿ ಇಲಾಖೆಯ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ ಎಮ್. ಎಸ್. ನಾಯ್ಕ, ಗ್ರಾಮಪಂಚಾಯತ್ ಸದಸ್ಯರುಗಳಾದ ಗೋವಿಂದ ಗೌಡ, ಗಜಾನನ ಮಡಿವಾಳ, ರಜನಿ ನಾಯ್ಕ, ಭಾರತೀಯ ಜನತಾ ಪಾರ್ಟಿಯ ಸ್ಥಳೀಯ ಪ್ರಮುಖರಾದ ಜಿ. ಜಿ. ಭಟ್, ಆರ್. ಎಮ್. ಹೆಗಡೆ, ಎನ್. ಎಸ್. ಹೆಗಡೆ, ಎಮ್. ಎಸ್. ಹೆಗಡೆ ಹಾಗೂ ಇತರರು ಇದ್ದರು.