ಭಟ್ಕಳ: ಹಾವೇರಿ ಮೂಲದ ಬೈಕ್ ಕಳ್ಳನೋರ್ವನನ್ನು ಭಟ್ಕಳ ತಾಲೂಕಿನ ಮುರ್ಡೇಶ್ವರ ಠಾಣಾ ಪೋಲೀಸರು ವಾಹನ ಸಮೇತ ಸೆರೆ ಹಿಡಿದ ಘಟನೆ ಬೆಳಕಿಗೆ ಬಂದಿದೆ.
19 ವರ್ಷದ ಖಾಜಾ ಹಜರತ್ ಸಾಬ್ ಎನ್ನುವವನಾಗಿದ್ದು, ಕೂಲಿ ಕೆಲಸ ಮಾಡಿಕೊಂಡಿದ್ದ ಈತ ಕಳ್ಳತನಕ್ಕಿಳಿದಿದ್ದಾನೆ. ಹಾನಗಲ್, ಅಲ್ಲಿ ಕಳೆದ ಎರಡು ತಿಂಗಳ ಹಿಂದೆ ಸ್ಪ್ಲೆಂಡರ್ ಬೈಕ್ ಕಳ್ಳತನ ಮಾಡಿದ್ದಾನೆ. ಬಳಿಕ ಮುರ್ಡೇಶ್ವರಕ್ಕೆ ಬಂದು ಪ್ರಯಾಣಿಕರ ಒಮಿನಿ ಕಾರನಲ್ಲಿಟ್ಟಿದ್ದ 4000 ಸಾವಿರ ರೂಪಾಯಿ ಕಳ್ಳತನ ಮಾಡಿ ಹಾವೇರಿಗೆ ಪರಾರಿಯಾಗಿದ್ದನು. ಬಳಿಕ ಅಲ್ಲಿಂದ ಪಕ್ಕದ ಹುಬ್ಬಳ್ಳಿಗೆ ಕಾಲಿಟ್ಟ ಈ ಬೈಕ್ ಕಳ್ಳ ಹೊಸ 220 ಸಿ.ಸಿ.2 ಪಸ್ಲರ್ ಬೈಕ್ ಕಳ್ಳತನ ಮಾಡಿದ್ದಾನೆ. ಹಾಗೇ ಅಲ್ಲಿಯೇ ಡೆಲ್ ಕಂಪನಿಗೆ ಸೇರಿದ ಒಂದು ಲ್ಯಾಪ್ ಟಾಪ್ ಕಳ್ಳತನಮಾಡಿಕೊಂಡು ಮತ್ತೆ ಪ್ರವಾಸಿಗರ ಸಂಖ್ಯೆ ಜಾಸ್ತಿ ಇರುವ ಮುರ್ಡೇಶ್ವರಕ್ಕೆ ಬಂದಿಳಿದಿದ್ದಾನೆ.
ಈ ಮಧ್ಯೆ ಕದ್ದ 220 ಸಿ.ಸಿ. ಪಸ್ಲರ್ ಎರಡು ಬೈಕನ್ನು ಮುರ್ಡೇಶ್ವರದ ಉತ್ತರಕೊಪ್ಪದ ರಸ್ತೆಯ ಕಾಡಿನಲ್ಲಿ ಅಡಗಿಸಿಟ್ಟಿದ್ದು, ಬಳಿಕ ಸ್ಪ್ಲೆಂಡರ್ ಬೈಕ್‍ನ್ನೇರಿ ಡೆಲ್ ಲ್ಯಾಪ್ ಟಾಪ್ ಸಮೇತ ಮುರ್ಡೇಶ್ವರಕ್ಕೆ ಕಳ್ಳತನ ಮಾಡಿದ ವಸ್ತುವಿನ ವ್ಯವಹಾರ ಕುದುರಿಸಲು ಬಂದಿದ್ದಾನೆಂದು ಪೋಲೀಸ್ ಮೂಲದಿಂದ ತಿಳಿದು ಬಂದಿದೆ. ಲ್ಯಾಪ್ ಟಾಪ್ ಹಿಡಿದು ಮುರ್ಡೇಶ್ವರ ದೇವಸ್ಥಾನದ ಬಳಿ ಬೆಳಿಗ್ಗೆಯಿಂದ ತುಂಬಾ ಸಮಯ ಕುಳಿತು ಅತ್ತಿಂದಿತ್ತ ಇತ್ತಿಂದತ್ತ ತಿರುಗಾಡುತ್ತಿದ್ದನ್ನು ಗಮನಿಸಿದ ಹಿನ್ನೆಲೆಯಲ್ಲಿ ಸಂಶಯಗೊಂಡ ಮುರ್ಡೇಶ್ವರ ಠಾಣಾ ಪೋಲೀಸರು ವಿಚಾರಣೆ ಮಾಡಿದಾಗ ಕಳ್ಳತನವಾಗಿದ್ದು ಬೆಳಕಿಗೆ ಬಂದಿದೆ.
ಎಲ್ಲೆಲ್ಲಿ ಯಾವ ರೀತಿ ಕಳ್ಳತನ ಮಾಡಿದರ ಬಗ್ಗೆ ಮುರ್ಡೇಶ್ವರದ ಪೋಲೀಸ್‍ರ ವಿಚಾರಣೆಯಲ್ಲಿ ಬಾಯಿಬಿಟ್ಟಿದ್ದಾನೆ. ಬಳಿಕ ಆರೋಪಿ ಖಾಜಾ ಹಜರತ್ ಸಾಬ್ ಉತ್ತರ ಕೊಪ್ಪದ ರಸ್ತೆಯಲ್ಲಿ ಅಡಗಿಸಿಟ್ಟ ಎರಡು ಪಸ್ಲರ್ ಬೈಕನ್ನು ಸ್ಥಳಕ್ಕೆ ತೆರಳಿ ವಶಕ್ಕೆ ಪಡೆದುಕೊಂಡಿದ್ದಾರೆ.
ಸದ್ಯ ಆರೋಪಿ ಖಾಜಾ ಹಜರತ್ ಸಾಬ್ ಸಮೇತ ಆತ ಕದ್ದ ಮೂರು ಬೈಕ್ ಸೇರಿ ಒಂದು ಲ್ಯಾಪ್ ಟ್ಯಾಪ್‍ನ್ನು ಪೋಲೀಸರು ವಶಪಡಿಸಿಕೊಂಡಿದ್ದಾರೆ. ಈ ಕುರಿತು ಮುರ್ಡೇಶ್ವರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಮುರ್ಡೇಶ್ವರ ಪೋಲೀಸ್ ಠಾಣಾ ಅಪರಾಧ ವಿಭಾಗದ ಪಿಎಸ್‍ಐ ಭೀಮ್ ಸಿಂಗ ಲಮಾಣಿ ನೇತೃತ್ವದಲ್ಲಿ ಅಪರಾಧ ವಿಭಾಗದ ಸಿಬ್ಬಂದಿಗಳಾದ ಸಂಕಪ್ಪ ಆರ್.ಎಚ್. ಲಕ್ಷ್ಮಣ ಪೂಜಾರಿ ಸೇರಿದಂತೆ ಇನ್ನುಳಿದ ಸಿಬ್ಬಂದಿಗಳು ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.