ಬೆಂಗಳೂರು: ಏಕಸದಸ್ಯ ಪೀಠದ ಆದೇಶವನ್ನು ಹೈಕೋರ್ಟ್‌ನ ದ್ವಿಸದ್ಯ ಪೀಠ ರದ್ದುಗೊಳಿಸಿದ್ದು 5,8,9, ನೇ ತರಗತಿಗಳ ಬೋರ್ಡ್ ಪರೀಕ್ಷೆಗೆ ಅನುಮತಿ ನೀಡಿದೆ. ರಾಜ್ಯದ 5, 8, 9 ಮತ್ತು 11ನೇ ತರಗತಿಗಳಿಗೆ ಬೋರ್ಡ್ ಮಟ್ಟದ ಮೌಲ್ಯಾಂಕನ ಪರೀಕ್ಷೆ ನಡೆಸಲು ಮುಂದಾಗಿದ್ದ ರಾಜ್ಯ ಸರ್ಕಾರದ ಸುತ್ತೋಲೆ ರದ್ದುಪಡಿಸಿದ್ದ ಏಕಸದಸ್ಯ ಪೀಠದ ಆದೇಶವನ್ನು ಬದಿಗೆ ಸರಿಸಿರುವ ಕರ್ನಾಟಕ ಹೈಕೋರ್ಟ್ ಪರೀಕ್ಷೆ ನಡೆಸುವ ಸರ್ಕಾರದ ನಿರ್ಧಾರವನ್ನು ಸಿಂಧುಗೊಳಿಸಿದೆ. ಆ ಮೂಲಕ ರಾಜ್ಯ ಸರ್ಕಾರ ಸಲ್ಲಿಸಿದ್ದ ಮೇಲ್ಮನವಿಯನ್ನು ಪುರಸ್ಕರಿಸಿದೆ.
ಏಕಸದಸ್ಯ ಪೀಠದ ಆದೇಶ ಪ್ರಶ್ನಿಸಿ ರಾಜ್ಯ ಸರ್ಕಾರ ಮೇಲ್ಮನವಿ ಸಲ್ಲಿಸಿತ್ತು. ಸುದೀರ್ಘ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಕೆ ಸೋಮಶೇಖರ ಮತ್ತು ರಾಜೇಶ ರೈ ಕೆ ಅವರ ನೇತೃತ್ವದ ಪೀಠವು ಸುದೀರ್ಘ ಕಾಲ ನಡೆಸಿ ಸೋಮವಾರ ಆದೇಶ ಕಾಯ್ದಿರಿಸಿತ್ತು.
ಈಗ 5, 8, 9 ಮತ್ತು 11ನೇ ತರಗತಿಗಳಿಗೆ ಮೌಲ್ಯಾಂಕನ ಪರೀಕ್ಷೆ ನಡೆಸಲು ಸಮ್ಮತಿ ಸೂಚಿಸಿದ್ದು, ಪರೀಕ್ಷೆ ನಡೆಸಲು ತುರ್ತು ಹಾಗೂ ಸೂಕ್ತ ಕ್ರಮ ತೆಗೆದುಕೊಳ್ಳಲು ಸರ್ಕಾರಕ್ಕೆ ನ್ಯಾ.ಸೋಮಶೇಖರ ಹಾಗೂ ನ್ಯಾ.ರಾಜೇಶ ರೈ ಅವರಿದ್ದ ಪೀಠ ಸೂಚನೆ ನೀಡಿದೆ.
ಈ ತರಗತಿಗಳಿಗೆ ಮಾರ್ಚ್ 11ರಿಂದ ಮಾರ್ಚ್ 18ರವರೆಗೆ ಪರೀಕ್ಷೆ ನಿಗದಿಯಾಗಿತ್ತು. ಮಾರ್ಚ್ 11 ಮತ್ತು 12 ಎರಡು ದಿನ ಎರಡು ವಿಷಯಗಳ ಪರೀಕ್ಷೆ ನಡೆದ ಬಳಿಕ ಪರೀಕ್ಷೆಗೆ ತಡೆ ನೀಡಲಾಗಿದೆ. 5ನೇ ತರಗತಿಗೆ ಎರಡು ವಿಷಯಗಳ ಪರೀಕ್ಷೆ ಮಾತ್ರ ಬಾಕಿ ಉಳಿದಿದೆ. 8 ಮತ್ತು 9ನೇ ತರಗತಿಗಳಿಗೆ ಇನ್ನೂ 4 ವಿಷಯಗಳ ಪರೀಕ್ಷೆ ಬಾಕಿ ಇದೆ.