ಹೊನ್ನಾವರ : ಸಮುದ್ರದ ಅಂಚಿನಲ್ಲಿ ಸಿಲಿಕಾನ್ ಸ್ಯಾಂಡ್ / ಸಮುದ್ರದ ಅಂಚಿನ ಮರಳು ಸಾಗಾಟ ನಡೆಸುವಾಗ ಸ್ಥಳೀಯರ ವಿರೋಧ ವ್ಯಕ್ತಪಡಿಸಿ, ವಾಹನ ತಡೆದು ಪ್ರತಿಭಟನೆ ನಡೆಸಿದ ಘಟನೆ ಶುಕ್ರವಾರ ರಾತ್ರಿ ತಾಲೂಕಿನ ಹಳದಿಪುರ ಗ್ರಾಮ ಪಂಚಾಯತ ವ್ಯಾಪ್ತಿಯ ಗೋಳಿಬೆಟ್ಟೆಯಲ್ಲಿ ನಡೆದಿದೆ.

ಸಮುದ್ರದ ಅಂಚಿನಲ್ಲಿರುವ ಮರಳನ್ನು ಸಾಗಾಟ ಮಾಡಲು, ಐದು ಟಿಪ್ಪರ ವಾಹನ, ಒಂದು ಹಿಟಾಚಿ ಸಮೇತ ದೊಡ್ಡ ಮಟ್ಟದಲ್ಲಿ ಮರಳು ಸಾಗಾಟ ಮಾಡಲು ಸಂಬಂಧ ಪಟ್ಟವರು ಆಗಮಿಸಿ ಮರಳು ತುಂಬಿ ಸಾಗಾಟ ಮಾಡುವ ಪ್ರಯತ್ನದಲ್ಲಿದ್ದಾಗ ಸ್ಥಳೀಯ ಸಾರ್ವಜನಿಕರು ದಿಢೀರ್‌ ಪ್ರತಿಭಟನೆ ಮಾಡಿ ವಾಹನದ ಟೈಯರ್ ನ ಗಾಳಿ ತೆಗೆದು, ವಾಹನ ತಡೆದು ಮರಳು ಸಾಗಾಟಕ್ಕೆ ತಡೆ ಒಡ್ಡಿದ್ದಾರೆ. ಸಾರ್ವಜನಿಕರ ಬೃಹತ್ ಪ್ರತಿಭಟನೆಗೆ ಮರಳು ಸಾಗಾಟಕ್ಕೆ ಬಂದವರು ಸ್ಥಳದಿಂದ ಪಲಾಯನಗೊಂಡಿದ್ದಾರೆ ಎಂದು ಸ್ಥಳೀಯರು ಮಾಹಿತಿ ನೀಡಿದ್ದಾರೆ.

RELATED ARTICLES  ಬ್ಯಾರಿಕೇಡ್ ಕೊಡುಗೆ ನೀಡಿದ ಹಳದೀಪುರ ಗ್ರಾ.ಪಂ

ಸ್ಥಳಕ್ಕೆ ಪೊಲೀಸ್ ಅಧಿಕಾರಿಗಳು ಆಗಮಿಸಿ ಪರಿಸ್ಥಿತಿ ತಿಳಿಗೊಳಿಸುವ ಪ್ರಯತ್ನ ಮಾಡಿದ್ದರು. ಮರಳಿಗೆ ಸಂಬಂಧ ಪಟ್ಟವರು ಸ್ಥಳಕ್ಕೆ ಬರಬೇಕು ಎಂದು ಸ್ಥಳೀಯ ಜನರು ಪಟ್ಟು ಹಿಡಿದರು ಎನ್ನಲಾಗಿದೆ. ಬೆಳಿಗ್ಗೆ ತನಕವು ವಾಹನ ಸ್ಥಳದಲ್ಲೇ ತಡೆದು ನಿಲ್ಲಿಸಲಾಗಿತ್ತು. ಹಳದಿಪುರ, ಗೋಳಿಬೆಟ್ಟೆ ಸಮುದ್ರದ ಅಂಚಿನಿಂದ ಮರಳು ತುಂಬಿ ಅಲ್ಲಿಂದ ಕೋಣಕಾರ ಹತ್ತಿರ ಸಾಗಾಟ ಮಾಡಿ ಅಲ್ಲಿಂದ ಹೊರ ಜಿಲ್ಲೆಗೆ ಸಾಗಾಟ ಮಾಡಲಾಗುತ್ತಿತ್ತು ಎನ್ನಲಾಗಿದೆ.

RELATED ARTICLES  ಕಾಡುಹಂದಿ ಬೇಟೆಯಾಡಿದ ಆರೋಪಿ ಅರೆಸ್ಟ್

ಮರಳು ಸಾಗಾಟಕ್ಕೆ ಹೊರ ಜಿಲ್ಲೆಯ ಹಲವು ಬಾರಿ ವಾಹನ ಸ್ಥಳಕ್ಕೆ ಬಂದು ಜಮಾವಣೆ ಆಗಿತ್ತು ಎನ್ನಲಾಗಿದೆ. ಅಕ್ರಮ ಮರಳು ದಂದೆ ನಡೆಯುವ ಪ್ರದೇಶಕ್ಕೆ ಜಿಲ್ಲಾಧಿಕಾರಿ, ಭೂ ಮತ್ತು ಗಣಿ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ಮಾಡಿ ಮರಳು ಸಾಗಾಟ ಮಾಡದಂತೆ ತಡೆಯಬೇಕು ಸಂಬಂಧ ಪಟ್ಟವರ ಮೇಲೆ ಸೂಕ್ತ ಕಾನೂನು ಕ್ರಮ ತೆಗೆದುಕೊಳ್ಳಬೇಕು ಎಂದು ಮನವಿ ಮಾಡಿಕೊಂಡಿದ್ದಾರೆ.