ಕಾರವಾರ : ರಾಜ್ಯದ ಉಪಮುಖ್ಯಮಂತ್ರಿ ಹಾಗೂ ಕೆಪಿಸಿಸಿ ಅಧ್ಯಕ್ಷರಾಗಿರುವ ಡಿ.ಕೆ ಶಿವಕುಮಾರ್ ರವರು ಕಳೆದ ಎರಡು ದಿನದಿಂದ ಧಾರ್ಮಿಕ ಕ್ಷೇತ್ರ ಪರ್ಯಟನೆ ಮಾಡುತಿದ್ದು ಇಂದು ಗೋಕರ್ಣದ ಮಹಾಬಲೇಶ್ವರ ದೇವಸ್ಥಾನ ಹಾಗೂ ಕಾಲಭೈರವೇಶ್ವರ ದೇವರಲ್ಲಿ ವಿಶೇಷ ಪೂಜೆ ಸಲ್ಲಿಸಿ ರಾಜ್ಯದ ಮುಖ್ಯಮಂತ್ರಿಯಾಗುವಂತೆ ಸಂಕಲ್ಪ ಮಾಡಿಕೊಂಡರು.
ಗೋಕರ್ಣದ ಮಹಾಬಲೇಶ್ವರ ದೇವಸ್ಥಾನಕ್ಕೆ ಮುಂಜಾನೆ ಆಗಮಿಸಿದ್ದ ಅವರು ಮೊದಲು ಪೂಜಾ ಸಂಕಲ್ಪ ನೆರವೇರಿಸಿ ನಂತರ ಮಹಾಬಲೇಶ್ವರನ ಆತ್ಮಲಿಂಗ ಸನ್ನಿದಿಯಲ್ಲಿ ಪೂಜಾ ಕಾರ್ಯ ನೆರವೇರಿಸಿದರು.
ಇದೇ ವೇಳೆ ಅರ್ಚಕರು ಮುಂದೆ ಮುಖ್ಯಮಂತ್ರಿಯಾಗುವಂತೆ ಸಂಕಲ್ಪ ಮಾಡಿಸಿದರು. ಇನ್ನು ಇದಾದ ನಂತರ ಅಧಿಕಾರ ಹಾಗೂ ನಾಯಕತ್ವ ಕೇಂದ್ರೀಕರಣಕ್ಕಾಗಿ ಕಾಲಭೈರವನ ಮೊರೆಹೋದ ಡಿಕೆಶಿ ಮುಂದೆ ಮುಖ್ಯಮಂತ್ರಿ ಹುದ್ದೆಗಾಗಿ ವಿಶೇಷ ಪೂಜೆ ನೆರವೇರಿಸಿದರು.
ಉತ್ತರಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ ವೈದ್ಯ, ಕಾರವಾರ ಶಾಸಕ ಸತೀಶ್ ಸೈಲ್, ಮಾಜಿ ಶಾಸಕ ಗೋಪಾಲ ಪೂಜಾರಿ, ನಿವೇದಿತ್ ಆಳ್ವಾ, ಭುವನ್ ಭಾಗ್ವತ್ ಗೋಕರ್ಣದ ಮಹಾಗಣಪತಿ ದೇಗುಲಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದರು. ಬಳಿಕ ಗೋಕರ್ಣ ಮಹಾಬಲ ದೇವಸ್ಥಾನಕ್ಕೆ ಭೇಟಿ ನೀಡಿ ಪುರಾಣ ಮಂಟಪದಲ್ಲಿ ರುದ್ರಾಭಿಷೇಕ, ನವಗ್ರಹ ಪೂಜೆ ಮಾಡಿದರು. ಪರಮೇಶ್ವರ ಮಾರ್ಕಂಡೆ ಹಾಗೂ ಮಹಾಬಲ ಉಪಾಧ್ಯಾಯ ಅರ್ಚಕತ್ವದಲ್ಲಿ ಪೂಜೆ ನಡೆಯಿತು.