ಬಿಜೆಪಿ ಅಭ್ಯರ್ಥಿ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ಜೆಡಿಎಸ್ ಮುಖಂಡ ಸೂರಜ್ ನಾಯ್ಕ ಸೋನಿ ಅವರ ನಿವಾಸಕ್ಕೆ ಭೇಟಿ ನೀಡಿದರು. ಈ ಮೂಲಕ ಹಲವು ಗೊಂದಲಗಳಿಗೆ ತೆರೆ ಎಳೆದಿದ್ದಾರೆ. ರಾಜ್ಯದಲ್ಲಿ ಬಿಜೆಪಿ ಹಾಗೂ ಜೆಡಿಎಸ್ ಮೈತ್ರಿ ಮಾಡಿಕೊಂಡಿದ್ದು, ಕುಮಟಾ ಕ್ಷೇತ್ರದಲ್ಲಿ ಇದರ ಪ್ರಕ್ರಿಯೆ ಯಾವ ರೀತಿಯಲ್ಲಿ ನಡೆಯಲಿದೆ ಎಂಬುದು ಅನೇಕರಲ್ಲಿ ಕುತೂಹಲ ಮೂಡಿಸಿತ್ತು. ಇದಕ್ಕೆ ಸ್ಪಷ್ಟ ಉತ್ತರ ಸಿಕ್ಕಂತಾಗಿದೆ.
ಇದೇ ರೀತಿ ಕುಮಟಾದಲ್ಲಿ ನಡೆದ ಬಿಜೆಪಿ ಸಮಾವೇಶದಲ್ಲಿ ಸೂರಜ್ ನಾಯ್ಕ ಸೋನಿ ಪಾಲ್ಗೊಳ್ಳುವುದರ ಮೂಲಕ ಜೆಡಿಎಸ್ ಬಿಜೆಪಿ ಮೈತ್ರಿಯನ್ನು ಸ್ಪಷ್ಟಪಡಿಸಿದರು.
ವೇದಿಕೆಯಲ್ಲಿ ಬಿಜೆಪಿ ಅಭ್ಯರ್ಥಿ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ಶಾಸಕ ದಿನಕರ ಶೆಟ್ಟಿ ಮತ್ತು ಜೆಡಿಎಸ್ ಮುಖಂಡ ಸೂರಜ್ ನಾಯ್ಕ ಸೋನಿ ಅವರ ಕೈ ಹಿಡಿದು ವೇದಿಕೆಯ ಎದುರಿಗೆ ಕರೆತಂದು, ಕೈಗಳನ್ನು ಮೇಲಕ್ಕೆತ್ತುವ ಮೂಲಕ ಕುಮಟಾಕ್ಕೆ ಇದೆರಡು ಶಕ್ತಿ ಸಾಕಲ್ಲ ಎಂದು ಮೈತ್ರಿ ಒಮ್ಮತವನ್ನು ಸಾರಿದರು. ಅಲ್ಲದೇ ಪರಸ್ಪರ ಎರಡು ಪಕ್ಷದ ಮುಖಂಡರು ಪಕ್ಷದ ಶಾಲನ್ನು ವಿನಿಮಯ ಮಾಡಿಕೊಂಡು ಮೈತ್ರಿಯ ಒಗ್ಗಟ್ಟನ್ನು ತೋರಿದರು.