ಕಾರವಾರ: ಶಾಸಕ ಸತೀಶ ಸೈಲ್ ಅವರು ಇಂದು ಚಿತ್ತಾಕುಲ ಪಂಚಾಯಿತಿ ವ್ಯಾಪ್ತಿಯಲ್ಲಿ ಶಾಸಕರ ಮಾದರಿ ಗ್ರಾಮದ ಕುರಿತು ಪರಿಶೀಲನೆ ನಡೆಸಿದರು.
ಶಾಸಕರ ಮಾದರಿ ಗ್ರಾಮ ಯೋಜನೆಯಲ್ಲಿ ಕಾರವಾರದ ೧೦ ಗ್ರಾಮಗಳು ಆಯ್ಕೆಯಾಗಿದ್ದು, ಸದಾಶಿವಗಡ ವ್ಯಾಪ್ತಿಯಲ್ಲಿನ ಚಿತ್ತಾಕುಲ, ಮಾಜಾಳಿ, ಗಾಡಸಾಯಿ ಗ್ರಾಮದಲ್ಲಿ ವಿದ್ಯುತ್ ಲೈನ್ ಬದಲಾವಣೆ ಕಾರ್ಯ ಈಗಾಗಲೇ ಕೈಗೆತ್ತಿಕೊಳ್ಳಲಾಗಿದೆ.
ಇಂದು ಚಿತ್ತಾಕುಲ ಗ್ರಾಮ ಪಂಚಾಯತಿಗೆ ಆಗಮಿಸಿದ ಶಾಸಕ ಸೈಲ್, ವಿದ್ಯುತ್ ಲೈನ್ ಬದಾಲವಣೆಯ ಕುರಿತು ವೀಕ್ಷಿಸಿದರು. ಈಗಾಗಲೇ ಅರ್ಧ ಭಾಗ ಮುಗಿದಿದ್ದು, ಇನ್ನರ್ಧ ಭಾಗದಲ್ಲಿ ವಿದ್ಯುತ್ ತಂತಿ ಬದಲಾವಣೆ ಕಾರ್ಯ ನಡೆಯುತ್ತಿದೆ ಎಂದು ಸದಾಶಿವಗಡ ವ್ಯಾಪ್ತಿಯ ಹೆಸ್ಕಾಂ ಅಧಿಕಾರಿ ತಿಳಿಸಿದರು. ಶೀಘ್ರವೇ ತಂತಿ ಬದಲಾವಣೆ ಕಾರ್ಯ ಪೂರ್ಣಗೊಳಿಸಿ, ಸಾರ್ವಜನಿಕರಿಗೆ ವಿದ್ಯುತ್ ಸರಬರಾಜಿನಲ್ಲಿ ಅಡೆತಡೆ ಉಂಟಾಗಬಾರದು ಎಂದು ಸೈಲ್ ಸೂಚಿಸಿದರು.
ಜತೆಗೆ, ಚಿತ್ತಾಕುಲ ವ್ಯಾಪ್ತಿಯಲ್ಲಿ ಎಷ್ಟು ವಿದ್ಯುತ್ ದೀಪ, ಕಾಂಕ್ರೀಟ್ ರಸ್ತೆ, ಚರಂಡಿಯ ಕುರಿತು ಅರ್ಜಿ ನೀಡುವಂತೆ ಸಾರ್ವಜನಿಕರಿಗೆ ತಿಳಿಸಿದರು. ದೀಪಾವಳಿಯ ನಂತರದಲ್ಲಿ ಇದರ ಕಾಮಗಾರಿ ಪ್ರಾರಂಭಿಸುವುದಾಗಿ ಆಶ್ವಾಸನೆ ನೀಡಿದರು.
ಕೆಡಿಎ ಮಾಜಿ ಅಧ್ಯಕ್ಷ ಶಂಭು ಶೆಟ್ಟಿ, ಜಿಲ್ಲಾ ಪಂಚಾಯತ ಸದಸ್ಯ ಕೃಷ್ಣಾ ಮೆಹ್ತಾ, ಗ್ರಾಮ ಪಂಚಾಯತಿ ಸದಸ್ಯ ಸೂರಜ್ ದೇಸಾಯಿ ಹಾಗೂ ಸ್ಥಳೀಯರು ಸೇರಿದಂತೆ ಪ್ರಮುಖರು ಹಾಜರಿದ್ದರು.