ಕಾರವಾರ: ಕರ್ನಾಟಕ ವಿಶ್ವವಿದ್ಯಾಲಯದ ಬಿಎಸ್‍ಸಿ ವಿದ್ಯಾರ್ಥಿಗಳ ಪರೀಕ್ಷೆಗಳನ್ನು ಹಿಂದೂಡಿದ ವಿರುದ್ದ ತನ್ನ ನೇತೃತ್ವದಲ್ಲಿ ಧಾರವಾಡದಲ್ಲಿ ಉಪಕುಲಪತಿಗಳ ಕಚೇರಿ ಮುಂದೆ ಕಾರವಾರ-ಅಂಕೋಲಾ ಬಿಎಸ್‍ಸಿ ವಿದ್ಯಾರ್ಥಿಗಳು ನಡೆಸಿದ ಪ್ರತಿಭಟನೆ ಫಲಪ್ರದವಾಯಿತೆಂದು ಕಾರವಾರ-ಅಂಕೋಲಾ ಶಾಸಕ ಸತೀಶ ಕೆ. ಸೈಲ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿರುವರು.

ಇತ್ತೀಚಿಗೆ ಸರಕಾರವು ಸುತ್ತೋಲೆಯೊಂದನ್ನು ಹೊರಡಿಸಿ ವಿಶ್ವವಿದ್ಯಾಲಯಗಳಿಗೆ ಸಂಬಂಧಿಸಿದ ಎಲ್ಲಾ ಪರೀಕ್ಷೆಗಳನ್ನು ಅಕ್ಟೋಬರ್ ಮಧ್ಯಭಾಗದಿಂದ ನವೆಂಬರ್ ತಿಂಗಳಿನ ಅಂತ್ಯದೊಳಗೆ ಏಕಕಾಲದಲ್ಲಿ ಪೂರ್ಣಗೊಳಿಸಬೇಕೆಂದು ಆದೇಶಿಸಿತ್ತು. ಆದರೆ ವಾಸ್ತವಿಕವಾಗಿ ಕರ್ನಾಟಕ ವಿಶ್ವವಿದ್ಯಾಲಯದ ಎಲ್ಲಾ ಕಾಲೇಜುಗಳಲ್ಲಿ ಶೇ.75% ರಷ್ಟು ಬೋಧನಾ ಕೆಲಸವು ಅತಿಥಿ ಉಪನ್ಯಾಸಕರಿಂದ ನಡೆಸಲ್ಪಡುತ್ತದೆ. ಆದರೆ ಈ ವರ್ಷ ಅತಿಥಿ ಉಪನ್ಯಾಸಕರನ್ನು ನೇಮಕಾತಿ ಮಾಡುವಾಗಲೇ ಸುಮಾರು 2 ತಿಂಗಳಿನಷ್ಟು ತಡವಾಗಿತ್ತು. ಇದರಿಂದಾಗಿ ಪ್ರತಿಯೊಂದು ಕಾಲೇಜುಗಳಲ್ಲಿ ಪ್ರತಿ ವಿಷಯಗಳಲ್ಲಿಯೂ ನಿಗದಿತ ಸಿಲೇಬಸ್‍ಗಳಲ್ಲಿ ಬೋಧನೆ ಸಂಪೂರ್ಣ ಮಾಡಲು ಅಸಾಧ್ಯವಾಗಿತ್ತು. ಆದರೆ ವಿದ್ಯಾರ್ಥಿಗಳಿಗೆ ಬೋಧನೆ ಮಾಡದ ಪಠ್ಯ ವಿಷಯಗಳಲ್ಲಿಯೂ ಪರೀಕ್ಷೆ ಬರೆಯುವ ಅನಿವಾರ್ಯತೆ ಇತ್ತು. ಆದರೆ ಅಕ್ಟೊಬರ್ 23ಕ್ಕೆ ಪರೀಕ್ಷಾ ದಿನ ಪ್ರಾರಂಭವೆಂದು ವೇಳಾಪಟ್ಟಿ ಕೂಡಾ ಪ್ರಕಟಿಸಲಾಗಿತ್ತು. ಇದರ ವಿರುದ್ಧ ಕರ್ನಾಟಕ ವಿಶ್ವ ವಿದ್ಯಾಲಯದ ಪ್ರತಿಯೊಂದು ಜಿಲ್ಲೆಯ ಸಂಬಂಧಿತ ವಿದ್ಯಾರ್ಥಿಗಳು ಮುಷ್ಕರ, ಜಾಥಾ ಮುಂತಾದ ಪ್ರತಿಭಟನೆಗಳ ಮುಖಾಂತರ ಸರಕಾರದ ಗಮನ ಸೆಳೆದಿದ್ದರು. ಕಾರವಾರದಲ್ಲಿಯೂ ಬೃಹತ್ ಪ್ರತಿಭಟನೆ ಮಾಡಿ ಜಿಲ್ಲಾಧಿಕಾರಿಗಳ ಮುಖಾಂತರ ವಿಶ್ವವಿದ್ಯಾಲಯ ಮತ್ತು ಸರಕಾರದ ಗಮನ ಸೆಳೆಯಲಾಗಿತ್ತು. ಈ ಕುರಿತು ಕಾರವಾರ ಅಂಕೋಲಾ ವಿದ್ಯಾರ್ಥಿಗಳು, ವಿದ್ಯಾರ್ಥಿ ಮುಖಂಡರಾದ ಆಶೀಷ್ ಗಾಂವಕರ್ ಮತ್ತು ಮಹಮ್ಮದ್‍ರವರ ನೇತೃತ್ವದಲ್ಲಿ ಶಾಸಕನಾಗಿರುವ ನನಗೂ ಮನವಿಯೊಂದನ್ನು ನೀಡಿ ಪರೀಕ್ಷೆ ಮುಂದೂಡಬೇಕೆಂದು ನನ್ನಲ್ಲಿ ಒತ್ತಾಯಿಸಿದ್ದರು. ವಿಷಯದ ಗಂಭೀರತೆಯನ್ನು ಅರಿತುಕೊಂಡ ನಾನು ಕೂಡಲೇ ಉಪಕುಲಪತಿ ಪ್ರಮೋದ ಘಾಯಿ ಇವರನ್ನು ದೂರವಾಣಿ ಮೂಲಕ ಸಂಪರ್ಕಿಸಿ ಪರೀಕ್ಷೆ ಮುಂದೂಡುವಂತೆ ಒತ್ತಾಯಿಸಿದ್ದೆ. ಇದರ ಫಲಶ್ರುತಿಯಾಗಿ ಅಕ್ಟೊಬರ್ 23ಕ್ಕೆ ಪ್ರಾರಂಭವಾಗಬೇಕಿದ್ದ ವಿಶ್ವವಿದ್ಯಾಲಯದ ಪರೀಕ್ಷೆಗಳು ಮುಂದೂಡಲ್ಪಟ್ಟಿತ್ತು.
ಬಿಎ, ಬಿಬಿಎ, ಬಿಕಾಂ ವಿದ್ಯಾರ್ಥಿಗಳ ಪರೀಕ್ಷೆಗಳು ಮುಂದೂಡಲ್ಪಟ್ಟರೆ, ವಿಪರ್ಯಾಸವಾಗಿ ಬಿಎಸ್ ಸಿ ವಿದ್ಯಾರ್ಥಿಗಳ ನಿಗದಿನ ಥೀಯರಿ ಪರೀಕ್ಷೆಗಳು ಹಿಂದೂಡಲ್ಪಟ್ಟವು. ಇದರಿಂದ ಕಂಗಾಲಾದ ಕಾರವಾರ,ಅಂಕೋಲಾ ಬಿಎಸ್ ಸಿ ವಿದ್ಯಾರ್ಥಿಗಳು ಮನವಿಗಳ ಮುಖಾಂತರ ನನ್ನನ್ನು ನಿಯೋಗಗಳ ಮುಖಾಂತರ ಬೇಟಿ ಮಾಡಿ ಕರ್ನಾಟಕ ವಿಶ್ವವಿದ್ಯಾಲಯದ ಉಪಕುಲಪತಿಗಳಿಗೆ ನಿಜಸ್ಥಿತಿಗಳನ್ನು ಮುಖತಃ ಬೇಟಿ ಮೂಲಕ ತಿಳಿಸಿ ತಮಗಾಗುತ್ತಿರುವ ಅನ್ಯಾಯಗಳನ್ನು ಸರಿಪಡಿಸಬೇಕೆಂದು ವಿನಂತಿಸಿದ್ದರು. ಈ ಕುರಿತು ತಾನು ಕಾರವಾರ ಅಂಕೋಲಾ ತಾಲೂಕಿನ ಕಾಲೇಜುಗಳ ಆಡಳಿತಾಧಿಕಾರಿಗಳನ್ನು ಸಂಪರ್ಕಿಸಿ ಸಂಬಂಧಿತ ಕಾಲೇಜುಗಳಲ್ಲಿ ಬಿಎಸ್ ಸಿ ವಿದ್ಯಾರ್ಥಿಗಳಿಗೆ ಪರೀಕ್ಷೆಗಳಿಗೆ ನಿಗದಿತವಾದ ಪಠ್ಯಗಳ ಸಿಲೇಬಸ್ ಗಳ ಬೋಧನೆ ಸಂಪೂರ್ಣಗೊಳ್ಳಲಿಲ್ಲವೆಂಬ ಅಂಶವನ್ನು ಬರಹದ ಮೂಲಕ ಕಾಲೇಜಗಳಿಂದ ಪಡೆದು ಖಚಿತಪಡಿಸಿಕೊಂಡೆನು.

RELATED ARTICLES  ಗೋಕರ್ಣಕ್ಕೆ ಭೇಟಿನೀಡಿ ಪೂಜೆ ಸಲ್ಲಿಸಿದ ಸಚಿವ ಡಾಕ್ಟರ್. ಕೆ. ಸುಧಾಕರ್

ಆ ಪ್ರಕಾರ ಇಂದು ಕಾರವಾರ-ಅಂಕೋಲಾ ತಾಲೂಕಿನ ಸುಮಾರು 200 ವಿದ್ಯಾರ್ಥಿಗಳು ಬಸ್, ವಾಹನಗಳ ಮುಖಾಂತರ ಕಾರವಾರ-ಅಂಕೋಲಾದಿಂದ ಧಾರವಾಡ ಕರ್ನಾಟಕ ವಿಶ್ವವಿದ್ಯಾಲಯಕ್ಕೆ ತೆರಳಿ, ಅಲ್ಲಿ ವಿಶ್ವವಿದ್ಯಾಲಯದ ಉಪಕುಲಪತಿಗಳ ಕಚೇರಿ ಮುಂದೆ ಮತ ಪ್ರದರ್ಶನ ನಡೆಸಿ ವಿದ್ಯಾರ್ಥಿಗಳಿಗೆ ಆಗುತ್ತಿರುವ ಅನ್ಯಾಯದ ವಿರುದ್ಧ ಪ್ರತಿಭಟಿಸಲಾಯಿತು. ನಮ್ಮ ಕೋರಿಕೆ ಮೇರೆಗೆ ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವರಾದ ವಿನಯ ಕುಲಕರ್ಣಿಯವರು ಕೂಡಾ ನಿಗದಿತ ಕಾರ್ಯಕ್ರಮಗಳನ್ನು ಮುಂದೂಡಿ, ವಿಶ್ವವಿದ್ಯಾಲಯದಲ್ಲಿ ನನ್ನ ನೇತೃತ್ವದಲ್ಲಿ ಕಾರವಾರ-ಅಂಕೋಲಾ ಬಿಎಸ್ ಸಿ ವಿದ್ಯಾರ್ಥಿಗಳು ಉಪಕುಲಪತಿಗಳ ಕಚೇರಿ ಮುಂದೆ ನಡೆಸುತ್ತಿದ್ದ ಪ್ರತಿಭಟನಾ ಸ್ಥಳಕ್ಕೆ ಆಗಮಿಸಿ ಸಮಸ್ಯೆ ಬಗೆಹರಿಸಲು ಸಹಕರಿಸಿದರು. ತದನಂತರ ವಿಶ್ವವಿದ್ಯಾಲಯದ ಉಪಕುಲಪತಿಗಳು ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ವಿನಯ ಕುಲಕರ್ಣಿ ಹಾಗೂ ಶಾಸಕನಾದ ನನ್ನ ಉಪಸ್ಥಿತಿಯಲ್ಲಿ ನಡೆದ ಮಾತುಕತೆಯಲ್ಲಿ ಬಿಎಸ್ ಸಿ ವಿದ್ಯಾರ್ಥಿಗಳ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವ ಕುರಿತು ಸೂಕ್ತ ನಿರ್ಧಾರ ಕೈಗೊಳ್ಳಲಾಯಿತು. ಈ ಸೂತ್ರದ ಪ್ರಕಾರ ನವೆಂಬರ್ 4ನೇ ತಾರೀಕಿಗೆ ಪ್ರಾರಂಭವಾಗಬೇಕಿದ್ದ ಬಿಎಸ್ ಸಿ ಪರೀಕ್ಷೆಗಳನ್ನು ನವೆಂಬರ್ 11ನೇ ತಾರೀಕಿಗೆ ಮುಂದೂಡಿ, ಪ್ರತಿಯೊಂದು ವಿಷಯಗಳ ಪರೀಕ್ಷೆಯ ನಡುವೆ ಒಂದು ದಿನದ ಅಂತರವಿರುವಂತೆ ವೇಳಾಪಟ್ಟಿ ತಯಾರಿಸಲು ನಿರ್ಧರಿಸಲಾಯಿತು. ಈ ಕುರಿತು ಸೂಕ್ತ ಆದೇಶ ಹೊರಡಿಸಲು ಉಪಕುಲಪತಿಯವರು ಸಂಬಂಧಿತ ಅಧಿಕಾರಿಗಳಿಗೆ ಸ್ಥಳದಲ್ಲಿಯೇ ಆದೇಶಿಸಿರುವರು.

RELATED ARTICLES  ಕಬ್ಬು ಬೆಳೆಗಾರರ ಸಂಘದ ಹೊರಾಟಕ್ಕೆ ಜಯ

ನಿರ್ಧಾರಿತ ಸಿಲೇಬಸ್ ಗಳ ಬೋಧನೆಯಿಂದ ವಂಚಿತರಾಗಿ ಅದೇ ವಿಷಯಗಳಲ್ಲಿ ಪರೀಕ್ಷೆ ಎದುರಿಸುವ ಕಠಿಣ ಪರಿಸ್ಥಿತಿ ಎದುರಿಸುತ್ತಿದ್ದ ಕರ್ನಾಟಕ ವಿಶ್ವವಿದ್ಯಾಲಯದ ವಿವಿಧ ಜಿಲ್ಲೆಗಳ ಸುಮಾರು 10,000 ವಿದ್ಯಾರ್ಥಿಗಳಿಗೆ ಪರೀಕ್ಷೆ ಮುಂದೂಡಿರುವುದರಿಂದ ತುಂಬಾ ಅನುಕೂಲವಾಗಿದೆ. ಈ ಮಧ್ಯೆದಲ್ಲಿ ಸಿಲೇಬಸ್‍ಗಳ ಬೋಧನಾ ಕಾರ್ಯಕ್ರಗಳ ಸಂಪೂರ್ಣ ಬೋಧನೆಯನ್ನು ಮುಗಿಸಿದ ನಂತರ ಪರೀಕ್ಷೆ ನಡೆಸಲು ಅನುಕೂಲ ಮಾಡಿಕೊಟ್ಟ ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವ ವಿನಯ ಕುಲಕರ್ಣಿ ಹಾಗೂ ಕಾರವಾರ-ಅಂಕೋಲಾ ಶಾಸಕನಾದ ನನಗೆ ನೆರೆದಿದ್ದ ನೂರಾರು ವಿದ್ಯಾರ್ಥಿಗಳು ಅಪಾರ ಜಯಘೋಷಗಳ ಮುಖಾಂತರ ಅಭಿನಂದಿಸಿದ್ದು ಅತ್ಯಂತ ಹೃದಯಸ್ಪರ್ಷ ಕ್ಷಣವಾಗಿತ್ತೆಂದು ಶಾಸಕ ಸತೀಶ ಸೈಲ್ ರವರು ಹರ್ಷ ವ್ಯಕ್ತಪಡಿಸಿರುವರು.

ಈ ನಿಯೋಗದಲ್ಲಿ ಕೆಡಿಎ ಮಾಜಿ ಅಧ್ಯಕ್ಷರಾದ ಅಶೋಕ ನಾಯ್ಕ, ಕಾಂಗ್ರೇಸ್ ಮುಖಂಡರುಗಳಾದ ರಘು ವಿ ನಾಯ್ಕ, ರಾಹುಲ್ ಬೋರಕರ ಮತ್ತು ಆನಂದು ನಾಯ್ಕ, ನಂದಕಿಶೋರ ನಾಯ್ಕ, ಮಂದಾರ ನಾಯ್ಕ ವಿದ್ಯಾರ್ಥಿಗಳ ನಾಯಕರಾದ ಆಶಿಷ್ ಗಾಂವಕರ, ಮಹಮ್ಮದ್ ಮತ್ತು ಕುಮಾರಿ ಸಾವಂತ ಮುಂತಾದವರಿದ್ದರು.