ಕುಮಟಾ : 2024 ರ ಸಿಇಟಿ ಪರೀಕ್ಷೆಯಲ್ಲಿ ಸಿಲಬಸ್ನ್ ಹೊರಗಡೆ ಇರುವ ಪಾಠಗಳಿಂದ ಪ್ರಶ್ನೆಗಳನ್ನು ನೀಡಿದ್ದು ವಿದ್ಯಾರ್ಥಿಗಳಿಗೆ ತುಂಬಾ ಅನ್ಯಾಯವಾಗಿದೆ. ಈ ಕೂಡಲೇ ಸಿಇಟಿ ವಿದ್ಯಾರ್ಥಿಗಳಿಗೆ ಆಗುವ ತೊಂದರೆಯನ್ನು ತಪ್ಪಿಸಲು ಗ್ರೇಸ್ ಮಾರ್ಕ್ಸ್ ಗಳನ್ನ ಕೊಡಬೇಕು ಅಥವಾ ಅದಕ್ಕೆ ಪರ್ಯಾಯವಾಗಿ ಸರಿಯಾದ ವ್ಯವಸ್ಥೆಯನ್ನು ಮಾಡಬೇಕು ಎಂದು ಉಪನ್ಯಾಸಕ ಹಾಗೂ ಬಿಜೆಪಿ ಶಿಕ್ಷಣ ಪ್ರಕೋಷ್ಠದ ರಾಜ್ಯ ಸಹ ಸಂಚಾಲಕ ಎಂ. ಜಿ ಭಟ್ಟ ಆಗ್ರಹಿಸಿದ್ದಾರೆ.

ಈ ಬಗ್ಗೆ ಪತ್ರಿಕಾ ಪ್ರಕಟಣೆ ನೀಡಿರುವ ಅವರು, ಕಳೆದ ವಾರ ನಡೆದ ಸಿಇಟಿ ಪರೀಕ್ಷೆಯಲ್ಲಿ ಬಯಾಲಜಿಯಲ್ಲಿ ಹತ್ತು ಪ್ರಶ್ನೆಗಳು, ಗಣಿತದಲ್ಲಿ ಒಂಬತ್ತು ಪ್ರಶ್ನೆಗಳು ಹಾಗೆಯೇ ಭೌತಶಾಸ್ತ್ರದಲ್ಲಿ 10 ಪ್ರಶ್ನೆಗಳು ಸಿಲೆಬಸ್ ನ ಹೊರತಾಗಿರುವ ಪಾಠಗಳಿಂದ ಬಂದಿದೆ, ಇದರಿಂದಾಗಿ ವಿಚಲಿತರಾದ ವಿದ್ಯಾರ್ಥಿಗಳು ಪ್ರಶ್ನೆಗಳನ್ನು ಉತ್ತರಿಸಲು ಆಗದೆ ಪರೀಕ್ಷಾ ಸಂದರ್ಭದಲ್ಲಿ ಮಾನಸಿಕವಾಗಿ ತೊಂದರೆಗೊಳಗಾಗಿ ತುಂಬಾ ಕಷ್ಟವನ್ನು ಎದುರಿಸುವಂತಿತ್ತು. ಇದರಿಂದಾಗಿ ವಿದ್ಯಾರ್ಥಿಗಳು ಮುಂದಿನ ಭವಿಷ್ಯಕ್ಕೆ ತೊಂದರೆ ಆಗಬಹುದಾದ ಸಂದರ್ಭವಿದೆ ಎಂದು ಅಲವತ್ತು ಕೊಳ್ಳುತ್ತಿದ್ದಾರೆ. ಸಿಇಟಿ ಪರೀಕ್ಷೆಯು ಅತ್ಯಂತ ಪ್ರಮುಖವಾದ ಹಾಗೂ ನಿರ್ಣಾಯಕವಾದ ಪರೀಕ್ಷೆಯಾಗಿದ್ದು ವಿದ್ಯಾರ್ಥಿಗಳು ಎಂಜಿನಿಯರಿಂಗ್, ಎಂಬಿಬಿಎಸ್ ಮುಂತಾದ ಕೋರ್ಸುಗಳಿಗೆ ಹೋಗಬೇಕಾದಲ್ಲಿ ಸರ್ಕಾರಿ ಸೀಟುಗಳು ಒಂದು ಅಂಕದಲ್ಲಿ ಕೂಡ ತಪ್ಪುವ ಸಾಧ್ಯತೆ ಇರುತ್ತದೆ. ಇದರಿಂದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ತೊಂದರೆಯಾಗುವುದಲ್ಲದೆ ಮುಂದಿನ ಜೀವನಕ್ಕೆ ಹಾಗೂ ಭವಿಷ್ಯಕ್ಕೆ ಅನ್ಯಾಯವಾದಂತೆಯೇ ಸರಿ. 

RELATED ARTICLES  ಬಾಡದ ಶ್ರೀ ಕಾಂಚಿಕಾಂಬಾ ದೇವಾಲಯಕ್ಕೆ ಆರ್.ವಿ ದೇಶಪಾಂಡೆ ಭೇಟಿ.

ಸಿಇಟಿ ಪರೀಕ್ಷೆಗೆ ವಿದ್ಯಾರ್ಥಿಗಳು ಹಗಲು ರಾತ್ರಿ ನಿದ್ದೆ ಬಿಟ್ಟು ಕಷ್ಟಪಟ್ಟು ತುಂಬಾ ನಿರೀಕ್ಷೆಯಿಂದ ಪರೀಕ್ಷೆಯನ್ನ ಬರೆದಿರುತ್ತಾರೆ. ಇಂತಹ ಪರೀಕ್ಷಾ ಪ್ರಶ್ನೆ ಪತ್ರಿಕೆಗಳನ್ನು ತೆಗೆಯಬೇಕಾದರೆ ತುಂಬಾ ಸೂಕ್ಷ್ಮತೆ ಹಾಗೂ ಗಂಭೀರತೆಯನ್ನು ಹೊಂದಿರಬೇಕು. ಆದರೆ ಇದ್ಯಾವುದೂ ಇರದ ಮಕ್ಕಳ ಭವಿಷ್ಯದ ಬಗ್ಗೆ ಹಾಗೂ ಮಕ್ಕಳ ಮಾನಸಿಕತೆಯ ಬಗ್ಗೆ ಯೋಚನೆ ಇರದ ಸರ್ಕಾರ ಇಂಥ ಕೆಲಸ ಮಾಡಿದ್ದು ಲಕ್ಷಾಂತರ ಜನರ ಜೀವನದಲ್ಲಿ ಆಟವಾಡುತ್ತಿದೆ. ತಕ್ಷಣವೇ ಈ ಎಲ್ಲಾ ಗೊಂದಲಗಳಿಗೆ ಸೂಕ್ತ ರೀತಿಯಲ್ಲಿ ನ್ಯಾಯ ಒದಗಿಸುವ ರೀತಿಯಲ್ಲಿ ಸರ್ಕಾರ ಕ್ರಮ ಕೈಗೊಳ್ಳಬೇಕಾಗಿದೆ. ಇಂತಹ ಒಂದು ದೊಡ್ಡ ತಪ್ಪು ಮಾಡುವುದರ ಮೂಲಕ ದಿವಾಳಿತನವನ್ನು ಪ್ರದರ್ಶನ ಮಾಡುತ್ತಿದೆ ಎಂದು ಶಿಕ್ಷಣ ಪ್ರಕೋಷ್ಟದ ರಾಜ್ಯ ಸಹ ಸಂಚಾಲಕ ಎಂ.ಜಿ ಭಟ್ಟರವರು ಕಿಡಿ ಕಾರಿದ್ದಾರೆ.

RELATED ARTICLES  'ಶಕ್ತಿ ಸಂಚಯ' ಮಹಿಳಾ ಸಮಾವೇಶದ ಸಿದ್ಧತೆಯಲ್ಲಿ ಉತ್ಸಾಹದಿಂದ ಪಾಲ್ಗೊಳ್ಳುತ್ತಿರುವ ಮಹಿಳೆಯರು.