ಕುಮಟಾ : ಹವ್ಯಕ ಸೇವಾ ಪ್ರತಿಷ್ಠಾನದ ಪ್ರಧಾನ ಕಾರ್ಯದರ್ಶಿಗಳಾಗಿ ಸೇವೆಸಲ್ಲಿಸುತ್ತಿದ್ದ ಸಮಾಜಮುಖಿ ಚಿಂತನೆಯ, ಕ್ರಿಯಾಶೀಲ ವ್ಯಕ್ತಿತ್ವದ ದಿ. ಆರ್.ಎನ್. ಹೆಗಡೆ ಕೊಂತಲಮನೆಯವರ ‘ಸಾರ್ಥಕ ಸೇವೆಗೆ ಅಭಿಮಾನದ ನುಡಿ ನಮನ’ ಸಲ್ಲಿಸುವ ಕಾರ್ಯಕ್ರಮ ತಾಲೂಕಿನ ಗೋಗ್ರೀನ್ ಸಭಾಭವನದಲ್ಲಿ ನಡೆಯಿತು.

ಹವ್ಯಕ ಸೇವಾ ಪ್ರತಿಷ್ಠಾನದ ಅಧ್ಯಕ್ಷ ಎಂ.ಜಿ ಭಟ್ಟ ಮಾತನಾಡಿ, ಆರ್.ಎನ್ ಹೆಗಡೆಯವರು ನಮ್ಮ ಜೊತೆಗೆ ಇಲ್ಲ ಎಂಬುದು, ನನಗೆ ಬೆನ್ನು ಮೂಳೆಯೇ ಮುರಿದ ಅನುಭವವಾಗಿದೆ. ನನ್ನ ಪ್ರತಿಯೊಂದೂ ಕಾರ್ಯದಲ್ಲಿ ಅವರು ಜೊತೆಗೆ ಇರುತ್ತಿದ್ದವರು. ಹವ್ಯಕ ಸೇವಾ ಪ್ರತಿಷ್ಠಾನದ ಬಗ್ಗೆ ತುಡಿತವಿದ್ದ ಅವರು, ಹವ್ಯಕರಿಗಾಗಿ ನಾವು ಸೇವೆ ಮಾಡಬೇಕು ಎಂದು ಸದಾ ಕಾಲ‌ ಚಿಂತನೆ ಮಾಡುತ್ತಿದ್ದರು. ಹೀಗೆ ಮಾಡೋಣ, ಹೀಗೆ ಮಾಡೋಣ ಎಂದು ಹೊಸ ಹೊಸ ಯೋಚನೆಗಳನ್ನು ಹೇಳಿ ಸಂಪರ್ಕ ಮಾಡುತ್ತಿದ್ದರು. ಇಡೀ ರಾಜ್ಯದಾದ್ಯಂತ ನನ್ನ ಜೊತೆಗೆ ಸುತ್ತಾಡಿ, ನನ್ನ ಜೀವನಕ್ಕೂ ಮಾರ್ಗದರ್ಶನ ಮಾಡುತ್ತಿದ್ದರು ಎಂದು ಭಾವುಕರಾಗಿ ನುಡಿನಮನ ಸಲ್ಲಿಸಿದರು.

RELATED ARTICLES  ಒಂದು ದಿನದ KAS Exclusive ತರಬೇತಿ ಕಾರ್ಯಾಗಾರ ನಾಳೆ.

ಹವ್ಯಕ ಸೇವಾ ಪ್ರತಿಷ್ಠಾನದ ಗೌರವಾಧ್ಯಕ್ಷ ರವೀಂದ್ರ ಭಟ್ಟ ಸೂರಿ ಮಾತನಾಡಿ ಕೊನೆಯ ಕ್ಷಣದವರೆಗೂ ಕ್ರಿಯಾಶೀಲವಾಗಿ ನಮ್ಮೊಂದಿಗೆ ಇದ್ದ ದಿ. ಆರ್.ಎನ್ ಹೆಗಡೆಯವರು ಈ‌ ಹೊತ್ತು ನಮ್ಮೊಂದಿಗಿಲ್ಲ. ಹವ್ಯಕ ಸಂಘಟನೆಗಾಗಿ ಏನಾದರೂ ಮಾಡಬೇಕೆಂಬ ಅವರ ತುಡಿತ ಅನನ್ಯವಾದುದು. ತಾವು ಆಸ್ಪತ್ರೆಗೆ ಸೇರುವ ಮೊದಲು ನನಗೆ ವಾಟ್ಸಪ್ ಮೆಸೇಜ್ ಮಾಡಿ ಅನಾರೋಗ್ಯದ ವಿಷಯ ತಿಳಿಸಿದ್ದರು. ಕೊನೆ ಕ್ಷಣದಲ್ಲಿ ಅವರನ್ನು ಭೇಟಿಮಾಡಲು ಸಾಧ್ಯವಾಗಿಲ್ಲ ಎಂಬ ಕೊರಗು ಈಗಲೂ ಇದೆ ಎಂದು ಅಭಿಪ್ರಾಯಪಟ್ಟರು.

ಆರ್.ಎನ್ ಹೆಗಡೆಯವ ಸ್ನೇಹ ವಲಯದಲ್ಲಿ ಗುರುತಿಸಿಕೊಂಡ ವಿ.ಡಿ ಹೆಗಡೆ, ಗೋವಿಂದ ಭಟ್ಟ, ತಿಗಣೇಶ ಮಾಗೋಡ, ಕೃಷ್ಣಾನಂದ ಭಟ್ಟ, ಎಲ್.ಎ ಭಟ್ಟ, ರಾಮ ಹೆಗಡೆ, ಗಿರೀಶ ಹೆಗಡೆ, ಗಣೇಶ ಜೋಶಿ ಸಂಕೊಳ್ಳಿ ಇತರರು ನುಡಿನಮನ ಸಲ್ಲಿಸುತ್ತಾ, ದಿ. ಆರ್. ಎನ್ ಹೆಗಡೆಯವರು ಹವ್ಯಕ ಸೇವಾ ಪ್ರತಿಷ್ಠಾನಕ್ಕೆ ಬಂದಾಗಿನಿಂದ ಸಂಘಟನೆ ವೇಗ ಪಡೆದುಕೊಂಡಿತು. ಪ್ರತೀ ತಾಲೂಕು, ಗ್ರಾಮ ಗ್ರಾಮಗಳಿಗೆ ತೆರಳಿ ಹವ್ಯಕ ಸಂಘಟನೆಯನ್ನು ಬಲಪಡಿಸುವ ಬಗ್ಗೆ ಸಭೆ ನಡೆಸಿದ್ದರು. ಹೈಗುಂದದಲ್ಲಿ ಹವ್ಯಕ‌ ನೆಲೆಯನ್ನು ಪುನರುಜ್ಜೀವನ ಗೊಳಿಸುವ ಬಗ್ಗೆ ಅವರು ಸಾಕಷ್ಟು ದುಡಿದವರು. ಹವ್ಯಕ ಸಮಾಜದವರ ಬಗ್ಗೆ ಅವರಿಗಿದ್ದ ಕಳಕಳಿಯಿಂದಲೇ ಅವರು ಎಲ್ಲರ ಪ್ರೀತಿಪಾತ್ರರಾಗಿದ್ದವರು. ಹವ್ಯಕ ಸಮಾಜದ ಜೊತೆಗೆ ಇತರೇ ಸಮಾಜದ ನೋವಿಗೂ ಸ್ಪಂದಿಸಿದವರು ಇವರು. ಇವರ ಹೆಸರನ್ನು ಶಾಶ್ವತವಾಗಿಸುವ ನಿಟ್ಟಿನಲ್ಲಿ ಹವ್ಯಕ ಪ್ರತಿಷ್ಠಾನ ಕಾರ್ಯಮಾಡಲಿ ಎಂದರು.

RELATED ARTICLES  ಸಂಸ್ಕೃತ ರಕ್ಷಣೆಯ ಯೋಧರಾಗೋಣ : ಡಾ. ಮಂಜುನಾಥ ಭಟ್ಟ.

ದಿ. ಆರ್. ಎನ್ ಹೆಗಡೆಯವ ಹೆಸರನ್ನು ಶಾಶ್ವತವಾಗಿಡುವ ನಿಟ್ಟಿನಲ್ಲಿ ವಾರ್ಷಿಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಮುನ್ನಡೆಯುವ ಬಗ್ಗೆ ಬಹುತೇಕರು ಅಭಿಪ್ರಾಯ ವ್ಯಕ್ತಪಡಿಸಿದರು.

ಗೋವಿಂದ ಹೆಗಡೆ, ದಿನೇಶ ಹೆಗಡೆ, ಕೃಷ್ಣ ಹೆಗಡೆ, ಸುಬ್ರಾಯ ಶಾಸ್ತ್ರಿ, ಸದಾನಂದ ಭಟ್ಟ, ಈಶ್ವರ ಭಟ್ಟ, ಎಸ್.ಎ ಭಟ್ಟ, ಸತೀಶ ಭಟ್ಟ, ದಿನೇಶ ಹೆಗಡೆ ಇತರರು ಇದ್ದರು.