ಕುಮಟಾ : ವಿಧಾತ್ರಿ ಅಕಾಡೆಮಿ ಹಾಗೂ ಕೊಂಕಣ ಎಜ್ಯುಕೇಶನ್ ಟ್ರಸ್ಟ್ ನ ಸಹಯೋಗದಲ್ಲಿ ನಡೆಯುತ್ತಿರುವ ಸರಸ್ವತಿ ಪಿ.ಯು ಕಾಲೇಜಿನ ವಿದ್ಯಾರ್ಥಿಗಳು ದ್ವಿತೀಯ ಪಿ.ಯು.ಸಿ ಪರೀಕ್ಷೆಯಲ್ಲಿ ಅತ್ಯಮೋಘ ಸಾಧನೆ ಮಾಡಿದ್ದು, ಈ ಸಾಧನೆಯನ್ನು ಗುರುತಿಸುವ ಹಾಗೂ ವಿದ್ಯಾರ್ಥಿಗಳಿಗೆ ಸ್ಪೂರ್ತಿ ತುಂಬುವ ನಿಟ್ಟಿನಲ್ಲಿ ರಾಜ್ಯಮಟ್ಟದಲ್ಲಿ ಏಳು, ಒಂಬತ್ತು, ಹತ್ತನೇ ಸ್ಥಾನ ಪಡೆದ ವಿದ್ಯಾರ್ಥಿಗಳು ಸೇರಿದಂತೆ, ಅತ್ಯುನ್ನತ ಶ್ರೇಣಿಯಲ್ಲಿ ಸಾಧನೆಮಾಡಿದ 156 ವಿದ್ಯಾರ್ಥಿಗಳಿಗೆ ವಿಧಾತ್ರಿ ಅವಾರ್ಡ್ ನೀಡಿ ಗೌರವಿಸಲಾಯಿತು.

ಈ ಸಭೆಯಲ್ಲಿ ಖ್ಯಾತ ವೈದ್ಯ ಡಾ. ಪ್ರಮೋದ ಪಾಯ್ದೆ ಪಾಲಕ ಪ್ರತಿನಿಧಿಗಳಾಗಿ ಉಪಸ್ಥಿತರಿದ್ದು, ಮಾತನಾಡಿ ಕಳೆದ ಮೂರು ವರ್ಷದಿಂದ ಕೊಂಕಣ ಎಜ್ಯುಕೇಶನ್ ಜೊತೆಗೂಡಿ ಸರಸ್ವತಿ ಪಿ.ಯು ಕಾಲೇಜನ್ನು ನಡೆಸುತ್ತಿರುವ ವಿಧಾತ್ರಿ ಅಕಾಡೆಮಿಯನ್ನು ನಂಬಿ ನಮ್ಮ ಮಕ್ಕಳನ್ನು ಇಲ್ಲಿಗೆ ಸೇರಿಸಿದೆವು. ಮಕ್ಕಳ ಫಲಿತಾಂಶ ಹೊರ ಬಿದ್ದು, ಮಕ್ಕಳ ಸಾಧನೆಯನ್ನು ಗಮನಿಸಿದಾಗ ವಿಧಾತ್ರಿ ಅಕಾಡೆಮಿಯ ಬಗ್ಗೆ ಹೆಮ್ಮೆ ಎನಿಸುವ ಜೊತೆಗೆ, ಈ ಕಾಲೇಜನ್ನು ಆಯ್ಕೆ ಮಾಡಿಕೊಂಡ ಬಗ್ಗೆ ನಮ್ಮಲ್ಲಿ ಸಾರ್ಥಕತೆ ಮೂಡುತ್ತಿದೆ ಎಂದರು.

ಪಾಲಕ ಪ್ರತಿನಿಧಿ ಹಾಗೂ ಕುಮಟಾ ಡಯಟ್ ನ ಉಪನ್ಯಾಸಕ ಉಮೇಶ ನಾಯ್ಕ ಮಾತನಾಡಿ, ವಿದ್ಯಾರ್ಥಿಗಳ ಜೊತೆಗೆ ಇದ್ದು ಅವರ ಸಾಧನೆಗೆ ಬೆನ್ನೆಲುಬಾಗಿ ನಿಲ್ಲುವ ಅತ್ಯುನ್ನತ ಉಪನ್ಯಾಸಕ ವೃಂದದವರನ್ನು ಹೊಂದಿರುವ ವಿಧಾತ್ರಿ ಅಕಾಡೆಮಿ ಯಶಸ್ವಿಯಾದ ಸಂಸ್ಥೆಯಾಗಿದೆ. ಪ್ರತೀ ಹಂತದಲ್ಲಿ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ಮಾಡುತ್ತಾ ಬರುವ ಈ ಸಂಸ್ಥೆಯ ಉಪನ್ಯಾಸಕರ ಸತತ ಪ್ರಯತ್ನ ಈ ಸಾಧನೆಗೆ ಕಾರಣ ಎಂದು ಉಪನ್ಯಾಸಕರ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದರು.

RELATED ARTICLES  ಹಂದಿ ಅಡ್ಡ ಬಂದ ಪರಿಣಾಮ : ಸಹಕಾರಿ ಧುರೀಣ ಟಿ.ಪಿ ಹೆಗಡೆ ಹುಣಸೆಮಕ್ಕಿ ಸಾವು.

ಜಿಲ್ಲಾ ಉತ್ತಮ ಶಿಕ್ಷಕ ಪ್ರಶಸ್ತಿ ವಿಜೇತ ಶಿಕ್ಷಕ ಮಂಜುನಾಥ ಎಂ. ನಾಯ್ಕ ಮಾತನಾಡಿ, ವಿಧಾತ್ರಿ ಅಕಾಡೆಮಿಯನ್ನು ಕುಮಟಾದಲ್ಲಿ ಸ್ಥಾಪಿಸಿದ ಗುರುರಾಜ ಶೆಟ್ಟಿ ಸರಳತೆಯಿಂದಲೇ ಎಲ್ಲರ ಮನ ಗೆದ್ದವರು. ಕೊಂಕಣ ಎಜುಕೇಶನ್ ಟ್ರಸ್ಟ್ ನ ಕಾರ್ಯದರ್ಶಿ ಮುರುಳಿಧರ ಪ್ರಭು ರವರ ದೂರದರ್ಶಿತ್ವದ ಚಿಂತನೆಯಿಂದ ಸರಸ್ವತಿ ಪಿ.ಯು ಕಾಲೇಜಿನಂತಹ ಸಂಸ್ಥೆ ನಮ್ಮೂರಿನಲ್ಲಿ ಸ್ಥಾಪನೆಗೊಂಡು ನಮ್ಮ ಮಕ್ಕಳಿಗೆ ವಿದ್ಯಾ ದಾನ ಮಾಡುತ್ತಿರುವುದು ಸಂತಸದ ವಿಚಾರ. ಪ್ರಾಥಮಿಕ ಶಾಲೆಯಿಂದ ಪ್ರಾರಂಭವಾದ ಮಕ್ಕಳಿಗೆ ಪಿಯುವರೆಗಿನ ಶಿಕ್ಷಣವನ್ನು ಒಂದು ಸೂರಿನಡಿ, ಅತ್ಯಂತ ಉತ್ತಮ ಗುಣಮಟ್ಟದಲ್ಲಿ ನೀಡುತ್ತಿರುವ ಸಂಸ್ಥೆಯಲ್ಲಿ ನಮ್ಮ ಮಕ್ಕಳು ಕಲಿಯುತ್ತಿರುವುದು ನಮಗೂ ಹೆಮ್ಮೆ ಎಂದರು.

RELATED ARTICLES  ಶ್ರೀನಾಗ ಹಾಗೂ ರಜತ ನಾಯಕ ಜಿಲ್ಲಾ ಮಟ್ಟಕ್ಕೆ ಆಯ್ಕೆ.

ಕೊಂಕಣ ಎಜುಕೇಶನ್ ಟ್ರಸ್ಟಿನ ಕಾರ್ಯದರ್ಶಿ ಮುರಳಿಧರ ಪ್ರಭು ಸಭಾ ಅಧ್ಯಕ್ಷತೆ ವಹಿಸಿ ಮಾತನಾಡಿ, ಪ್ರತಿಯೊಬ್ಬರಲ್ಲಿಯೂ ಸಾಮರ್ಥ್ಯವಿರುತ್ತದೆ ಅದನ್ನು ಬಳಸಿಕೊಳ್ಳುವ ಬಗ್ಗೆ ಹಾಗೂ ಅದನ್ನು ಬೆಳೆಸುವುದರ ಬಗ್ಗೆ ಶಿಕ್ಷಕರ ಮಾರ್ಗದರ್ಶನ ಬೇಕಾಗುತ್ತದೆ. ಹೀಗಾಗಿ ನಮಗೆ ಕಲಿಸಿದ ಗುರುವಿಗೆ ನಾವು ನಮನ ಸಲ್ಲಿಸುತ್ತೇವೆ. ನಿರಂತರ ಪರಿಶ್ರಮದಿಂದ ಸಾಧನೆ ಸಾಧ್ಯವಾಗುತ್ತದೆ. ಸಾಧನೆಯನ್ನು ಬಹುದೀರ್ಘಕಾಲ ಉಳಿಸಿಕೊಂಡು ಹೋಗುವುದು ಮಹತ್ವದಾಗುತ್ತದೆ. ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳು ಚಿಂತನೆಯನ್ನು ನಡೆಸಿ,ಮುಂದಿನ ಬದುಕನ್ನು ಕಟ್ಟಿಕೊಳ್ಳಬೇಕು ಎಂದರು.

ವಿಧಾತ್ರಿ ಅಕಾಡೆಮಿಯ ಸಹ ಸಂಸ್ಥಾಪಕ ಗುರುರಾಜ ಶೆಟ್ಟಿ ಪ್ರಸ್ತಾವಿಕವಾಗಿ ಮಾತನಾಡಿ, ವಿಧಾತ್ರಿ ಅಕಾಡೆಮಿಯ ಹುಟ್ಟು, ಬೆಳವಣಿಗೆ ಹಾಗೂ ಈ ಸಾಧನೆಯಲ್ಲಿ ವಹಿಸಿದ ಶ್ರಮದ ಕುರಿತಾಗಿ ಸಭೆಗೆ ವಿವರಿಸಿದ್ದರು. ಪ್ರಾಂಶುಪಾಲ ಕಿರಣ ಭಟ್ಟ ಸ್ವಾಗತಿಸಿದರು. ಉಪನ್ಯಾಸಕಿ ನಿಶಾ ವಂದಿಸಿದರು. ಉಪಪ್ರಾಂಶುಪಾಲೆ ಸುಜಾತಾ ಹೆಗಡೆ ವೇದಿಕೆಯಲ್ಲಿ ಇದ್ದರು.

ಗಣೇಶ ಜೋಶಿ ಸಂಕೊಳ್ಳಿ, ದೀಕ್ಷಿತಾ ಕುಮಟೇಕರ, ಗಾಯತ್ರಿ ಕಾಮತ್ ನಿರೂಪಿಸಿದರು. ಸಾಂಸ್ಕೃತಿಕ ವಿಭಾಗದ ಮುಂದಾಳು ಗುರುರಾಜ ಶೆಟ್ಟಿ ಹಾಗೂ ಇತರ ಉಪನ್ಯಾಸಕರು ಸಹಕರಿಸಿದರು.