ಕುಮಟಾ : ಜನವಸತಿ ಪ್ರದೇಶಕ್ಕೆ ನುಗ್ಗಿದ ಚಿರತೆಯೊಂದು ಮೂವರ ಮೇಲೆ ದಾಳಿ ಮಾಡಿ ಕಚ್ಚಿ ಗಾಯಗೊಳಿಸಿದ ಘಟನೆ ತಾಲೂಕಿನ ಬಾಡದ ಮಾದರಿ ರಸ್ತೆಯಲ್ಲಿ ಶುಕ್ರವಾರ ನಡೆದಿದೆ. ಬಾಡದ ಮಾದರಿ ರಸ್ತೆಯ ಮಾಬ್ಲೇಶ್ವರ ಬೀರಪ್ಪ ನಾಯ್, ಈಶ್ವರ ಹೊನ್ನಪ್ಪ ನಾಯ್ಕ, ಹರಿಶ್ಚಂದ್ರ ರಾಮಾ ನಾಯ್ಕ ಚಿರತೆ ದಾಳಿಗೆ ಒಳಗಾದವರು.
ಮಹಾಬಲೇಶ್ವರ ನಾಯ್ಕ ಮನೆಯಲ್ಲಿ ಟೀ ಕುಡಿಯುತ್ತಿರುವ ಸಂದರ್ಭದಲ್ಲಿ ಏಕಾಏಕಿ ಬಂದ ಚಿರತೆ ಮನೆಯೊಳಗೆ ಪ್ರವೇಶಿಸಿದೆ. ಇದನ್ನು ಗಮನಿಸಿದ ಮಾಬ್ಲೇಶ್ವರ ಅವರು ತಮ್ಮ ಮನೆಯ ಮಹಡಿ ಮೇಲೆ ಹತ್ತಿ ನೋಡುತ್ತಿದ್ದರು. ಈ ವೇಳೆ ಚಿರತೆ ಮನೆಯ ಮಹಡಿ ಮೇಲೆ ಜಿಗಿದು ಮಾಬ್ಲೇಶ್ವರ ಅವರ ಮೇಲೆ ದಾಳಿ ನಡೆಸಿದೆ.
ಇನ್ನು ದಾಳಿ ನಡೆಸಿದ ಚಿರತೆ ಆಸುಪಾಸಿನ ಹಲವು ಮನೆಯೊಳಗೆ ನುಗ್ಗಿ ಜನರಲ್ಲಿ ಭಯ ಹುಟ್ಟಿಸಿದೆ. ನಂತರ ಚಿರತೆಯು ಸೀತು ಲಕ್ಷ್ಮಣ ನಾಯ್ಕ ಅವರ ಮನೆಯಲ್ಲಿ ಅವಿತುಕೊಂಡಿತ್ತು. ಜನ ಹೊರಗಿನಿಂದ ಮನೆಯ ಬಾಗಿಲು ಹಾಕಿದ್ದಾರೆ. ಆದರೆ, ಚಿರತೆ ಇರುವ ಮನೆಯ ಇನ್ನೆರಡು ಕೋಣೆಗಳಲ್ಲೇ ನಾಲ್ವರು ಇದ್ದು. ಎರಡು ತಾಸುಗಳ ಕಾಲ ಬಾಗಿಲು ಹಾಕಿಕೊಂಡು ಜೀವ ಕೈಯ್ಯಲ್ಲಿ ಹಿಡಿದು ಕುಳಿತುಕೊಳ್ಳುವ ಸ್ಥಿತಿ ನಿರ್ಮಾಣವಾಗಿತ್ತು. ಮನೆಯೊಳಗೆ ಅವಿತ ಚಿರತೆ ಹಿಡಿಯಲು ಅರಣ್ಯ ಸಿಬ್ಬಂದಿ ಹಾಗೂ ಪೋಲೀಸರು ಸ್ಥಳಕ್ಕೆ ತಲುಪಿ ಚಿರತೆ ಹಿಡಿಯುವ ಕಾರ್ಯಾಚರಣೆಯನ್ನು ನಡೆಸಿದ್ದಾರೆ.