ಶಿರಸಿ : ಮೋದಿ ಮೋಜಿಗಾಗಿ ಹುಟ್ಟಿಲ್ಲ. ನಿಮ್ಮ ಸೇವೆಗಾಗಿ ಜನ್ಮತಾಳಿದ್ದಾನೆ. ನಿಮ್ಮ ಕನಸು ನನಸು ಮಾಡಲು ನಿಮ್ಮ ಮಕ್ಕಳ ಉಜ್ವಲ ಭವಿಷ್ಯಕ್ಕಾಗಿ 24×7 ಶ್ರಮಿಸುತ್ತೆನೆ. ನಿಮ್ಮ ತಪಸ್ಸಿನ ಫಲವಾಗಿ ಭಾರತವನ್ನು ವಿಕಾಸ ಮಾಡುತ್ತೇನೆ. ನನ್ನ ಹಳೆಯ ಒಡನಾಡಿ ವಿಶ್ವೇಶ್ವರ ಹೆಗಡೆ ಕಾಗೇರಿ ಅವರನ್ನು ದಾಖಲೆ ಮತಗಳಿಂದ ಗೆಲ್ಲಿಸಿ. ಫಿರ್ ಏಕ್ ಬಾರ್ ಮೋದಿ ಸರ್ಕಾರ್..! ವಿಕಸಿತ ಭಾರತ, ವಿಕಸಿತ ಕರ್ನಾಟಕಕ್ಕೆ ಬಿಜೆಪಿಗೆ ಆಶೀರ್ವಾದ ಮಾಡಿ. ಉತ್ತರ ಕನ್ನಡ ಜಿಲ್ಲೆಯಲ್ಲಿ ವಿಶ್ವೇಶ್ವರ ಹೆಗಡೆ ಕಾಗೇರಿಯವರನ್ನು ದಾಖಲೆ ಮತಗಳಿಂದ ಗೆಲ್ಲಿಸಿ ಎಂದು ಪ್ರಧಾನಿ ನರೇಂದ್ರ ಮೋದಿ ಕರೆ ನೀಡಿದರು. ನಗರದ ಮಾರಿಕಾಂಬಾ ಜಿಲ್ಲಾ ಕ್ರೀಡಾಂಗಣದಲ್ಲಿ ಭಾನುವಾರ ನಡೆದ ಬಿಜೆಪಿ ಚುನಾವಣಾ ಪ್ರಚಾರ ಸಭೆಯಲ್ಲಿ ಭಾಗವಹಿಸಿ ಮಾತನಾಡಿದರು.
ಇಲ್ಲಿನ ಜನಸಾಗರ ನೋಡಿದರೆ ಇದು ಭಾರತೀಯ ಜನತಾ ಪಕ್ಷದ ವಿಜಯಯಾತ್ರೆಯಾಗಿದೆ. ಗುಜರಾತ್ ಮುಖ್ಯಮಂತ್ರಿಯಾಗಿದ್ದಾಗ ನಿಮ್ಮ ಆಶೀರ್ವಾದ ಪಡೆಯಲು ಬಂದಿದ್ದೆ. ಅಲ್ಲಿಂದ ಇಲ್ಲಿಯವರೆಗೆ ಮನತುಂಬಿ ಆಶೀರ್ವಾದ ಮಾಡಿದ್ದಿರಾ ನಿಮಗೆ ಕೃತಜ್ಞತೆ ಸಲ್ಲಿಸುತ್ತೆನೆ. ನಿಮ್ಮ ತಪಸ್ಸಿಗೆ ಪ್ರತಿಫಲ ನೀಡುತ್ತೆನೆ ಎಂದರು.
ನಿಮ್ಮ ಆಶೀರ್ವಾದಿಂದ ಪೂರ್ಣ ಪ್ರಮಾಣದಿಂದ ಹತ್ತು ವರ್ಷಗಳ ಕಾಲ ಅಧಿಕಾರ ನಡೆಸಿದೆ. ಅನೇಕ ಅಭಿವೃದ್ಧಿ ಯೋಜನೆಗಳನ್ನು ನೀಡಿದ್ದೇವೆ. ಬಹುಮತ ಸರ್ಕಾರ ಅಧಿಕಾರದಲ್ಲಿ ಇದ್ದರೆ ವಿಶ್ವವೇ ಗೌರವಿಸುತ್ತದೆ. ನಿಮ್ಮ ಒಂದು ಮತ ಭಾರತದ ಗೌರವವನ್ನು ವಿಶ್ವಕ್ಕೆ ಪರಿಚಯಿಸಿದೆ. 140ಕೋಟಿ ಜನರ ಬೆಂಬಲ ಮೋದಿಯ ಜೊತೆಗಿರುವ ಕಾರಣ ವಿಶ್ವವೇ ಭಾರತವನ್ನು ಗುರುತಿಸಿದೆ ಎಂದ ಮೋದಿ, ರಾಮ ಮಂದಿರ ನಿರ್ಮಾಣ ಕಾರ್ಯದಲ್ಲಿ ನಮ್ಮ ಪೂರ್ವಜರ ತ್ಯಾಗ ಬಲಿದಾನವಾಗಿದೆ. 500 ವರ್ಷಗಳ ಬಳಿಕ ನಿಮ್ಮ ಮತದ ತಾಕತ್ತಿ ನಿಂದ ಪ್ರಭು ಶ್ರೀರಾಮನ ಮಂದಿರ ನಿರ್ಮಾಣವಾಗಿದೆ. ದೇಶದ ಜನತೆಯ ಹತ್ತು ರೂಪಾಯಿಂದ ಕೋಟಿ ರೂ.ಗಳ ದಾನದಿಂದ ಮಂದಿರ ನಿರ್ಮಾಣವಾಗಿದೆ. ರಾಮಲಲ್ಲಾನನ್ನು ತಿರಸ್ಕರಿಸಿದ ಪಕ್ಷವನ್ನು ರಾಜ್ಯದ ಜನತೆ ತಿರಸ್ಕರಿಸುವ ಕಾಲ ಬಂದಿದೆ ಎಂದರು.
ಬಿಜೆಪಿ ಸರ್ಕಾರ ಅಡಕೆ ಬೆಳೆಗೆ ಮಾನ್ಯತೆಯನ್ನು ನೀಡಿದೆ. ಉತ್ತರ ಕನ್ನಡದ ಅಡಿಕೆಗೆ ಬಿಜೆಪಿ ಸರ್ಕಾರ ಜಿಐ ಟ್ಯಾಗ್ ನೀಡಿದೆ. ಕರ್ನಾಟಕದ ಸಿರಿ ಧಾನ್ಯ ವಿಶ್ವದೆಲ್ಲೆಡೆ ಪ್ರಸಿದ್ಧಿ ಪಡೆದಿದೆ. ಇಲ್ಲಿಂದ ಅಮೇರಿಕಾದವರೆಗೂ ಹರಡಿಕೊಂಡಿದೆ ಎಂದ ಅವರು, ರಾಜ್ಯದಲ್ಲಿ ಕಾನೂನು ವ್ಯವಸ್ಥೆ ಹದಗೆಟ್ಟಿದೆ. ಕಾಂಗ್ರೆಸ್ ಪಕ್ಷದ ಪಾಪದಿಂದ ಮಹಿಳೆಯರಿಗೆ ಸಹೋದರಿಗೆ ರಕ್ಷಣೆಯಿಲ್ಲದಂತಾಗಿದೆ. ಬಾಂಬ್ ಸ್ಫೋಟವಾದರೆ ಸಿಲಿಂಡರ್ ಸ್ಫೋಟವಾಗಿದೆ ಎಂದು ಹೇಳುತ್ತಾರೆ. ಆದರೆ ಬಿಜೆಪಿ ಸರ್ಕಾರ ಬಂದ ಮೇಲೆ ಭಯೋತ್ಪಾದನೆ ಕಡಿಮೆ ಆಗಿದೆ ಎಂದರು.
ಕಾಂಗ್ರೆಸ್ ಪಕ್ಷದ ಲೂಟಿ ನಿರಂತರವಾಗಿ ನಡೆಯಲಿದೆ. ಮೋದಿಯ ಬಳಿ ಏನೂ ಇಲ್ಲ. ನೀವೇ ನನ್ನ ಪರಿವಾರವಾಗಿದೆ. ಕಮಲದ ಬಟನ್ ಒತ್ತಿದಾಗ ನಿಮಗೆ ಮೋದಿ ಕಾಣುತ್ತಾರೆ. ಪ್ರತಿ ಮನೆ ಮನೆಗೆ ತೆರಳಿ ನನ್ನ ನಮಸ್ಕಾರವನ್ನು ತಿಳಿಸಿ. ಅವರಿಂದ ಕಮಲದ ಹೂವಿಗೆ ಆಶೀರ್ವಾದ ಸಿಗುವಂತೆ ಮಾಡಿ. ನಿಮ್ಮ ಮತದಿಂದಲೇ ಎಲ್ಲವೂ ಸಾಧ್ಯವಾಗಿದೆ. ಪ್ರತಿಯೊಂದು ಅಭಿವೃದ್ಧಿಗೂ ನೀವು ಆಶೀರ್ವದಿಸಿದ ಒಂದು ಮತವೇ ಕಾರಣವಾಗಿದೆ ಎಂದರು.
ಬಿಜೆಪಿ ಅಭ್ಯರ್ಥಿ ವಿಶ್ವೇಶ್ವರ ಹೆಗಡೆ ಕಾಗೇರಿ ಮಾತನಾಡಿ, ಮಾರಿಕಾಂಬೆಯ ಆಶೀರ್ವಾದದಿಂದ ಗಂಗಾಪ್ರವಾಹದೋಪಾದಿ ಜನರ ಆಗಮನವಾಗಿದ್ದು, ಕಾಶಿಯಿಂದ ಪ್ರತಿನಿಧಿಸುವ ನರೇಂದ್ರ ಮೋದಿ ನೋಡಲು ಲಕ್ಷಾಂತರ ಜನರು ಆಗಮಿಸಿದ್ದಾರೆ. ಇದು ದೇಶದ ಭವಿಷ್ಯ ಬರೆಯುವ ಚುನಾವಣೆಯಾಗಿದ್ದು, ಕಾಂಗ್ರೆಸ್ ಈ ಚುನಾವಣೆಯನ್ನು ಗ್ರಾಪಂ. ಚುನಾವಣೆಗೂ ಕಡೆಯೆಂಬಂತೆ ಎದುರಿಸುತ್ತಿರುವದು ವಿಷಾದನೀಯ. ವಿಕಸಿತ ಭಾರತ ಮೋದಿ ಗುರಿಯಾದರೆ ಕಾಂಗ್ರೆಸ್ ಚೊಂಬಿನ ಬಗ್ಗೆ ಮಾತನಾಡುತ್ತಿದೆ. ೧೧ ಕೋಟಿ ಶೌಚಾಲಯ ಕಟ್ಟಿದ ಮೇಲೂ ಕಾಂಗ್ರೆಸ್ ಯಾಕೆ ಚೊಂಬು ಹಿಡಿದುಕೊಂಡಿದೆ ಎಂದು ಪ್ರಶ್ನಿಸಬೇಕಿದೆ. ೨೩೦ ಸೀಟ್ ನಿಲ್ಲಿಸಿ ೨೭೩ ಸೀಟ್ ಬೇಕಿದ್ದರೂ ಪ್ರಣಳಿಕೆಯಲ್ಲಿ ಆಮಿಷ. ಮೋದಿ ದೇಶಕ್ಕೆ ಕಟ್ಟಿಕೊಟ್ಟ ಘನತೆ ಉಳಿಯಲು ಬಿಜೆಪಿ ಗೆಲ್ಲಿಸುವ ಗುರಿ ಜನತೆಯದ್ದೆಂಬ ವಿಶ್ವಾಸವಿದೆ. ದೇಶದ ರಕ್ಷಣೆಗೆ ಮೋದಿ ಬೇಕಿದೆ. ಕಾಂಗ್ರೆಸ್ ಅವಧಿಯಲ್ಲಿ ರಾಮಮಂದಿರ ಆಗಿರಲಿಲ್ಲ, ಮೋದಿ, ಯೋಗಿ ಪ್ರಯತ್ನದಿಂದ ಅಯೋಧ್ಯಾದಲ್ಲಿ ಭವ್ಯ ರಾಮಂದಿರ ನಿರ್ಮಾಣವಾಗಿದ್ದು, ಇಲ್ಲಿನ ಸಂಸ್ಕೃತಿ, ಜ್ಞಾನದ ಸಂಪತ್ತು ವಿಶ್ವಕ್ಕೆ ಗುರುವಾಗಿ ಭಾರತ ನಿಲ್ಲುವಂತೆ ಮಾಡಿದೆ. ಅಯೋಧ್ಯೆಗೆ ಆಹ್ವಾನಿಸಿದರೆ ಕಾಂಗ್ರೆಸ್ ಬಹಿಷ್ಕರಿಸಿತು. ಇಲ್ಲಿ ಕೇಸರಿ ಪೇಟ ತೊಟ್ಟು ಹಿಂದುತ್ವವಾದಿಯೆನ್ನುವ ಕಾಂಗ್ರೆಸ್ ಮುಸ್ಲಿಂ ಲೀಗ್‌ನಂತೆ ವರ್ತಿಸುತ್ತಿದೆ. ದೇಶದ ಘಟನೆ, ಗೌರವಕ್ಕೆ ನರೇಂದ್ರ ಮೋದಿ ೩ ನೆಯ ಬಾರಿಗೆ ಪ್ರಧಾನಿಯಾಗಬೇಕೆಂದು ಜನರು ತೀರ್ಮಾನಿಸಿದ್ದಾರಲ್ಲದೇ, ಕಾಂಗ್ರೆಸ್‌ನ್ನು ಮನೆಗೆ ಕಳುಹಿಸಬೇಕೆಂಬ ನಿರ್ಧಾರ ಮಾಡಿದ್ದಾರೆ. ಮೇ.೭ ರಂದು ನಡೆಯಲಿರುವ ಚುನಾವಣೆಯಲ್ಲಿ ಕಮಲದ ಬಟನ್‌ಗೆ ಮತ ನೀಡುವುದರ ಮೂಲಕ ನನ್ನನ್ನು ಸಂಸದನನ್ನಾಗಿ ಆಯ್ಕೆ ಮಾಡಬೇಕು ಎಂದರು.
ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಮಾತನಾಡಿ, ಯಾವ್ಯಾವಾಗ ಬಿಜೆಪಿ ಪ್ರವರ್ಧಮಾನಕ್ಕೆ ಬರುತ್ತದೋ ಆ ಸಂದರ್ಭದಲ್ಲಿ ಸಂವಿಧಾನ ಬದಲಿಸುತ್ತದೆಂಬ ಅಪ್ರಚಾರ ಮಾಡಲಾಗುತ್ತದೆ. ಸಂವಿಧಾನಕ್ಕೆ, ಅಂಬೇಡ್ಕರರಿಗೆ ಗೌರವ ನೀಡಿ ಪಂಚತೀರ್ಥ ಎಂದು ಗೌರವಿಸಿದ್ದರೆ ಅದು ಬಿಜೆಪಿ. ರಾಮನಾಥ ಕೋವಿಂದ ಅವರನ್ನು ರಾಷ್ಟ್ರಪತಿ ಮಾಡಿರುವುದು ಬಿಜೆಪಿ. ಬುಡಕಟ್ಟು ಆದಿವಾಸಿ ಮಹಿಳೆ ದ್ರೌಪತಿ ಮುರ್ಮು ಅವರನ್ನು ರಾಷ್ಟ್ರಪತಿ ಮಾಡಿದ ಪಕ್ಷ ಬಿಜೆಪಿ. ಜೀವನದ ಭದ್ರತೆಯ ಗ್ಯಾರೆಂಟಿ ಮೋದಿ ಗ್ಯಾರೆಂಟಿ. ಭಯೋತ್ಪಾದನೆ ಇಲ್ಲವಾದ ಸಂದರ್ಭದಲ್ಲಿ ಕರ್ನಾಟಕ ಕಾಂಗ್ರೆಸ್ ಸರ್ಕಾರ ಬಂದ ಮೇಲೆ ವಿಧಾನಸೌಧದಲ್ಲೇ ಪಾಕಿಸ್ತಾನ ಪರ ಘೋಷಣೆ ಕೇಳುವಂತಾಯ್ತು. ರಾಮೇಶ್ವರ ಕೆಫೆ ಬ್ಲಾಸ್ಟ್ ಆದಾಗ ಸಿಲಿಂಡರ್ ಸ್ಫೋಟ ಎಂದು ಗೃಹಸಚಿವ ಹೇಳಿದರು. ಹುಬ್ಬಳ್ಳಿಯ ಪೊಲೀಸ್ ಠಾಣೆ ಸುಟ್ಟ ಪಿಎಫ್‌ಐ ಸಂಪರ್ಕವಿದ್ದ ೧೫೦ ಆರೋಪಿಗಳಿಗೆ ಬೇಲ್ ನೀಡಲು ತಯಾರಾಗಿದ್ದು ಕಾಂಗ್ರೆಸ್. ಕೆಜಿಹಳ್ಳಿ, ಡಿಜಿ ಹಳ್ಳಿ ಗಲಭೆ ವೇಳೆ ಕಾಂಗ್ರೆಸ್‌ನ ದಲಿತ ಶಾಸಕರಿಗೇ ರಕ್ಷಣೆ ನೀಡಿಲ್ಲ. ನೇಹಾ ಮತಾಂತರವಾಗಲು ಒಪ್ಪದಿದ್ದಾಗ ಕೊಲೆ ಮಾಡಲಾಯಿತು ಎಂದು ಆಕೆಯ ತಂದೆಯೇ ಹೇಳಿದ್ದರೂ ವೈಯಕ್ತಿಕ ಕಾರಣಕ್ಕಾಗಿ ಕೊಲೆ ಎಂದು ಕಾಂಗ್ರೆಸ್‌ನವರು ಹೇಳುತ್ತಿದ್ದಾರೆ. ಗ್ಯಾರೆಂಟಿ ಹಣ ಹೊಂದಾಣಿಕೆಗಾಗಿ ಬಾಂಡ್ ಪೇಪರ್ ಬೆಲೆ, ಪಹಣಿ ಉತಾರ್ ದರ, ಹಾಲಿನ ದರ, ಹಾಲಿನ ಸಬ್ಸಿಡಿ ನಿಲ್ಲಿಸಿ, ರೆಜಿಸ್ಟ್ರೇಶನ್ ದರ ಹೆಚ್ಚಳ, ಮದ್ಯದ ದರ ಹೆಚ್ಚಳ ಮಾಡಿದ್ದಾರೆ. ಮೋದಿಯ ಗ್ಯಾರಂಟಿ ಜೀವದ ಗ್ಯಾರಂಟಿ. ನಾಚಿಗೆಗೇಡಿನ ಸರ್ಕಾರ ರಾಜ್ಯದಲ್ಲಿದೆ ಎಂದರು.
ವಿಧಾನಪರಿಷತ್ ಸದಸ್ಯ ಶಾಂತಾರಾಮ ಸಿದ್ದಿ ಮಾತನಾಡಿ, ಕೇರಳ ಕಾಂಗ್ರೆಸ್ ಮುಖಂಡನು ಬುಡಕಟ್ಟು ಜನಾಂಗದವರು ದನದ ಮಾಂಸ ತಿನ್ನುತ್ತಾರೆ ಎಂದು ಹೇಳಿಕೆ ನೀಡಿದ್ದು, ಬುಡಕಟ್ಟು ಸಮುದಾವರು ಎಂದಿಗೂ ದನದ ಮಾಂಸ ತಿಂದವರಲ್ಲ. ಗೋವು, ನದಿ, ಭೂಮಿಯನ್ನು ದೇವರು ಎಂದು ಪೂಜಿಸುವವರು. ಅವರ ಹೇಳಿಕೆ ಖಂಡನೀಯ. ನಾವ್ಯಾರು ಕಾಂಗ್ರೆಸ್ ಜತೆ ಸೇರುವುದಿಲ್ಲ. ಬುಡಕಟ್ಟು ಜನಾಂಗವಿದ್ದ ಎಲ್ಲೂ ಕಾಂಗ್ರೆಸ್ ಆಡಳಿತಕ್ಕೆ ಬಂದಿಲ್ಲ. ಮಾಜಿ ಪ್ರಧಾನಿ ದಿ.ಅಟಲ್ ಬಿಹಾರಿ ವಾಜಪೇಯಿ ಅರಣ್ಯ ಹಕ್ಕು ಕಾಯ್ದೆ ತಂದರು. ಕಾಂಗ್ರೆಸ್ ಸರ್ಕಾರ ಅದನ್ನು ಸ್ಥಗಿತಗೊಳಿಸಿತು. ೨೦೧೨ ರಲ್ಲಿ ಬಿಜೆಪಿ ಸರ್ಕಾರವಿದ್ದಾಗ ಹೆಚ್ಚು ಹಕ್ಕು ಪತ್ರ ನೀಡಲಾಯಿತು. ದಲಿತರಿಗೆ ಮತ್ತು ಪರಿಶಿಷ್ಟ ಜಾತಿಯವರಿಗೆ ಮೀಸಲಾತಿ ಹೆಚ್ಚಳ ಬಿಜೆಪಿ ಸರ್ಕಾರ. ಕಾಂಗ್ರೆಸ್ ಬಂದಾಗ ಗ್ಯಾರೆಂಟಿ ತಂತು. ದಲಿತ ಸಮುದಾಯ ಅಭಿವೃದ್ಧಿಗೆ ಮೀಸಲಿಟ್ಟ ೧೧೫೦೦ ಕೋಟಿ ರೂ. ಹಣ ತೆಗೆದು ಗ್ಯಾರೆಂಟಿಗೆ ನೀಡಿತು. ಎಲ್ಲ ಕೆಲಸಗಳು ಈಡೇರಲು, ಸಂಸ್ಕಾರ, ಸಂಸ್ಕೃತಿ ಉಳಿಯಲು ಬಿಜೆಪಿ ಬೆಂಬಲಿಸಿ ಎಂದರು.
ಕುಮಟಾ ಶಾಸಕ ದಿನಕರ ಶೆಟ್ಟಿ ಮಾತನಾಡಿ, ವಿಶ್ವಾಸ ಗಳಿಸಿದ ನಾಯಕ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ಪಕ್ಷಾಂತರಿಯೂ ಅಲ್ಲ, ಸ್ವಾರ್ಥಿಯೂ ಅಲ್ಲ. ೨೦೦೬ರಲ್ಲಿ ಮಂತ್ರಿಯಾಗುವ ಅವಕಾಶವಿತ್ತು. ಭಟ್ಕಳದ ಶಿವಾನಂದ ನಾಯ್ಕಗೆ ಮಂತ್ರಿ ಸ್ಥಾನ ಸಿಗುವಂತೆ ಮಾಡಿದವರು. ಸಭಾಧ್ಯಕ್ಷತಾಗಿದ್ದ ಕಾಗೇರಿಯವರು ಪ್ರತಿ ಪತ್ರಕ್ಕೆ, ಪ್ರಶ್ನೆಗೆ ಸಕಾರಾತ್ಮಕವಾಗಿ ಸ್ಪಂದಿಸಿದ್ದರು. ಆಸ್ಪತ್ರೆ ವಿಚಾರದಲ್ಲೂ ತನಗೆ ಬೆಂಬಲ ನೀಡಿದ್ದರು. ಸುದೀರ್ಘ ೫೦ ವರ್ಷ ಆಡಳಿತ ನಡೆಸಿದ್ದ ಕಾಂಗ್ರೆಸ್‌ಗೆ ಯಾಕೆ ಮಲ್ಟಿ ಸ್ಪೇಶಾಲಿಟಿ ಆಸ್ಪತ್ರೆ ನೆನಪಾಗಿಲ್ಲವೇ? ಕಾಂಗ್ರೆಸ್ ಕುಮಟಾದಲ್ಲಿ ಆಸ್ಪತ್ರೆ ನಿರ್ಮಿಸಲು ಅವಕಾಶ ನೀಡಿಲ್ಲ. ಜಿಲ್ಲೆಗೆ ಒಂದೇ ಮೆಡಿಕಲ್ ಕಾಲೇಜ್ ನೀಡುತ್ತೇವೆಂದು ಉತ್ತರಿಸಿದ್ದರು. ಕ್ರೆಡಿಟ್ ಬಿಜೆಪಿಗೆ ಹೋಗುತ್ತದೆಂಬ ಉದ್ದೇಶದಿಂದ ಆಸ್ಪತ್ರೆ ಮಾಡಿಲ್ಲ. ಹೊನ್ನಾವರಕ್ಕೆ ನೀರಿನ ಸಂಪರ್ಕ ಕಾಂಗ್ರೆಸ್ ಶಾಸಕರು ಅಡಿಗಲ್ಲು ಹಾಕಿದ್ದರೂ ಕ್ರೆಡಿಟ್ ನಿರೀಕ್ಷೆಯಿಲ್ಲದೆ ಯೋಜನೆ ಪೂರ್ಣಗೊಳಿಸಿದ್ದು ಬಿಜೆಪಿ. ಆರ್.ವಿ.ದೇಶಪಾಂಡೆ ಸಚಿವರಾಗಿದ್ದರೂ ಎಷ್ಟು ಕೈಗಾರಿಕೆಗಳನ್ನು ಉಳಿಸಿಕೊಂಡರು. ಜಿಲ್ಲೆಯಲ್ಲಿ ಎಷ್ಟು ಕೈಗಾರಿಕೆಯನ್ನು ಉಳಿಸಿಕೊಂಡಿದ್ದಾರೆ ಎಂಬುದನ್ನು ತಿಳಿಸಲಿ ಎಂದು ಸವಾಲು ಹಾಕಿದರು.
ಖಾನಾಪುರ ಮಾಜಿ ಶಾಸಕ ಅರವಿಂದ ಪಾಟೀಲ ಮಾತನಾಡಿ, ಕಾಂಗ್ರೆಸ್ ಅಭ್ಯರ್ಥಿ ಖಾನಾಪುರದ ಆಕಿ, ಶಾಸಕನಾಗಿದ್ದೇನೆ ಎಂದು ಹೇಳಿದ್ದರು. ಮರಾಠಾ ಸಮುದಾಯ ಜನರ ಬೆಂಬಲವಿದೆ ಎನ್ನುತ್ತಾರೆ. ಖಾನಾಪುರದಲ್ಲಿ ೫೫ ಸಾವಿರ ಮತಗಳ ಅಂತರದಿಂದ ಸೋಲಿಸಿ, ಮನೆಗೆ ಕಳುಹಿಸಿದ್ದೇವೆ. ಖಾನಾಪುರದಲ್ಲಿ ಮಲ್ಟಿ ಸ್ಪೇಶಾಲಿಟಿ ಆಸ್ಪತ್ರೆ ನಿರ್ಮಾಣವಾಗಿರುವುದು ಬಿಜೆಪಿ ಸರ್ಕಾರದ ಅವಧಿಯಲ್ಲಿ. ಸುಳ್ಳು ಹೇಳುತ್ತಿರುವ ಅಂಜಲಿ ನಿಂಬಾಳ್ಕರ ಚರ್ಚೆಗೆ ಬರಲಿ. ವೈದ್ಯರಾದವರು ಎಂದು ಹೇಳಿಕೊಳ್ಳುವ ಅಂಜಲಿ ಮಲ್ಟಿ ಸ್ಪೇಶಾಲಿಟಿ ಆಸ್ಪತ್ರೆಯ ಅರ್ಥ ತಿಳಿದುಕೊಳ್ಳಲಿ. ನೇಹಾ ಹತ್ಯೆಯಂಥ ಕೃತ್ಯ ನಿಲ್ಲಿಸಲು ಬಿಜೆಪಿಗೆ ಮತ ನೀಡಬೇಕು. ಕಳೆದ ಚುನಾವಣೆಗಿಂತ ಈ ಬಾರಿಗೆ ಮತ್ತಷ್ಟು ಅತ್ಯಧಿಕ ಮತಗಳ ಅಂತರದಿಂದ ಕಾಗೇರಿ ಅವರನ್ನು ಗೆಲ್ಲಿಸಬೇಕು ಎಂದರು.
ಕಾರವಾರದ ಮಾಜಿ ಶಾಸಕಿ ರೂಪಾಲಿ ನಾಯ್ಕ ಮಾತನಾಡಿ, ಶಿರಸಿಗೆ ೪೦ ವರ್ಷದ ಬಳಿಕ ಪ್ರಧಾನ ಮಂತ್ರಿ, ದೇವ ಮಾನವ ನರೇಂದ್ರ ಮೋದಿ ಆಗಮಿಸುತ್ತಿರುವುದು ಹೆಮ್ಮೆ ಮತ್ತು ಖುಷಿ ತಂದಿದೆ. ಗ್ಯಾರಂಟಿ ಮತ್ತು ವಾರಂಟಿಗೆ ಮಹಿಳೆಯರು ಬಲಿಯಾಗದೇ, ಕಾಂಗ್ರೆಸ್ ಸರ್ಕಾರಕ್ಕೆ ಧಿಕ್ಕಾರ ಹೇಳಬೇಕು. ಭಯೋತ್ಪಾದನೆ ತಡೆಗಟ್ಟಿ, ದೇಶದ ದಲ್ಲಿ ಶಾಂತಿಯುತ ಜೀವನ ನಡೆಸಲು ಪ್ರಧಾನಿ ನರೇಂದ್ರ ಮೋದಿ ಹಗಲಿರುಳು ಶ್ರಮಿಸಿದ್ದಾರೆ. ಹುಬ್ಬಳ್ಳಿ-ಅಂಕೋಲಾ ರೈಲು, ತಾಳಗುಪ್ಪ-ಶಿರಸಿ ರೈಲು, ಶಿರಸಿ-ಹಾವೇರಿ ರೈಲು ಮಾರ್ಗಗಳ ಅನುಷ್ಠಾನಕ್ಕೆ ವಿಶ್ವೇಶ್ವರ ಹೆಗಡೆ ಸಂಸದರಾದ ಮೇಲೆ ಮಂಜೂರಿಗೆ ಪ್ರಯತ್ನಿಸುತ್ತಾರೆ ಎಂಬ ವಿಶ್ವಾಸವಿದೆ. ಜಿಲ್ಲೆಯ ಯುವಕರಿಗೆ ಜಿಲ್ಲೆಯಲ್ಲಿ ಉದ್ಯೋಗ ಲಭಿಸಲು ಬಿಜೆಪಿ ಸಂಸದರು ಆಯ್ಕೆಯಾಗಬೇಕು. ಜಿಲ್ಲೆಯಲ್ಲಿ ಮಲ್ಟಿ ಸ್ಪೇಶಾಲಿಟಿ ಆಸ್ಪತ್ರೆ ನಿರ್ಮಾಣ ಬಿಜೆಪಿಯಿಂದ ಮಾತ್ರ ಸಾಧ್ಯ ಎಂದರು.
ವಿಧಾನಪರಿಷತ್ ವಿರೋಧ ಪಕ್ಷದ ನಾಯಕ ಕೋಟಾ ಶ್ರೀನಿವಾಸ ಪೂಜಾರಿ ಮಾತನಾಡಿ, ಭಾರತ ದೇಶದ ಭವಿಷ್ಯ ಬರೆಯುವ ಚುನಾವಣೆಯಾಗಿದ್ದು, ಕಾಂಗ್ರೆಸ್ ಅವಧಿಯಲ್ಲಿ ಆರ್ಥಿಕ ದುಸ್ಥಿತಿಗೆ ಹದಗೆಟ್ಟು ಚಿನ್ನ ಅಡವಿಟ್ಟಿದ್ದ ದೇಶವಾಗಿತ್ತು ಭಾರತ. ಅದೇ ಭಾರತವೀಗ ಹತ್ತು ವರ್ಷಗಳಲ್ಲಿ ಹಲವು ದೇಶಗಳಿಗೆ ಸಾಲ ನೀಡಿದ ದೇಶವಾಗಿದೆ. ಸಮರ್ಥ ಭಾರತಕ್ಕಾಗಿ ಮೋದಿ ಗೆಲ್ಲಿಸಬೇಕಿದೆ. ಆಸ್ಪತ್ರೆಗಾಗಿ ೩೦ ಜಾಗ ಕಾಯ್ದಿರಿಸಿದ್ದೆವು. ಕಾಗೇರಿ ಗೆಲ್ಲಿಸಿ ಆಸ್ಪತ್ರೆ ಕನಸು ನನಸಾಗಿಸೋಣ. ೧೫೦ ಕೋಟಿ ಜನರನ್ನು ಪ್ರತಿನಿಧಿಸುವ ನಮ್ಮ ಪ್ರಧಾನಿ ನರೇಂದ್ರ ಮೋದಿ ಅವರನ್ನು ಏಕವಚನದಲ್ಲಿ ಸಂಬೋಧಿಸಿದ ಸಿದ್ಧರಾಮಯ್ಯನವರಿಗೆ ಬುದ್ಧಿಕಲಿಸಬೇಕು. ೧೦ ಕೆಜಿ ಅಕ್ಕಿ ಬೇಕೋ ಬೇಡವೋ ಅಂತ ಕೇಳಿದ ಸಿದ್ದರಾಮಯ್ಯ ಒಂದು ಕಾಳು ಅಕ್ಕಿಯನ್ನೂ ನೀಡಿಲ್ಲ. ಪ್ರತಿ ತಿಂಗಳು ೨೫ ಲಕ್ಷ ಟನ್ ಅಕ್ಕಿಯನ್ನು ಕೇಂದ್ರ ಸರ್ಕಾರ ನೀಡುತ್ತಿದೆ. ಬಿಜೆಪಿ ಸಂವಿಧಾನ ವಿರೋಧಿ ಎಂದು ಕಾಂಗ್ರೆಸ್ ಹೇಳುತ್ತಿದೆ. ಸಂವಿಧಾನ ಶಿಲ್ಪಿ ಅಂಬೇಡ್ಕರ್ ಅವರಿಗೆ ಹತ್ತಡಿ ಜಾಗವನ್ನೂ ನೀಡದೇ ಪಾರ್ಥಿವ ಶರೀರವನ್ನು ಮುಂಬೈಗೆ ಕಳುಹಿದ್ದು, ಅಂಬೇಡ್ಕರ ಅವರನ್ನು ಸೋಲಿಸಿದ್ದು ಕಾಂಗ್ರೆಸ್. ದಲಿತರಿಗೆ ಶೇ.3ರಿಂದ ಶೇ.7 ಕ್ಕೆ ಮೀಸಲಾತಿ ಏರಿಸಿದ್ದು ಬಿಜೆಪಿ. ಎಸ್.ಸಿ ಮೀಸಲಾತಿ ಶೇ.15 ಕ್ಕೆ ಹೆಚ್ಚಳ ಮಾಡಿರುವುದು ಬಿಜೆಪಿ ಎಂದರು.
ಮಾಜಿ ಸಚಿವ ಹರತಾಳು ಹಾಲಪ್ಪ, ಕಾರ್ಕಳ ಶಾಸಕ ವಿ.ಸುನೀಲಕುಮಾರ, ಭಟ್ಕಳ ಮಾಜಿ ಶಾಸಕ ಸುನೀಲ ನಾಯ್ಕ, ಪ್ರಮುಖರಾದ ಗೋವಿಂದ ನಾಯ್ಕ
ಸುನೀಲ ಹೆಗಡೆ, ಸೀಮಾ ಮಸೂತಿ, ವಿವೇಕಾನಂದ ವೈದ್ಯ, ಶಿವಾನಂದ ನಾಯ್ಕ, ಗಿರೀಶ ಪಟೇಲ್, ಎಸ್.ಎಲ್.ಘೊಟ್ನೇಕರ, ಭಾರತಿ ಜಿಂದಗಿ, ವೆಂಟಕೇಶ ನಾಯಕ, ಪ್ರಸನ್ನ ಕೆರೇಕೈ, ಶಿವಾನಿ ಶಾಂತಾರಾಮ್, ಹರಿಪ್ರಕಾಶ ಕೋಣೆಮನೆ, ಜೆಡಿಎಸ್ ಮುಖಂಡರಾದ ಸೂರಜ್ ನಾಯ್ಕ ಸೋನಿ, ಉಪೇಂದ್ರ ಪೈ, ಜೆಡಿ.ಎಸ್ ಉಪಾಧ್ಯಕ್ಷ ಗೋವಿಂದ ಗೌಡ, ಬಿಜೆಪಿಯ ಧನಶ್ರೀ, ಚೈತ್ರಾ ಶಿರೂರ, ಮಹೇಂದ್ರ ಕೌಟ್ ಮತ್ತಿತರರು ಇದ್ದರು. ಬಿಜೆಪಿ ಜಿಲ್ಲಾಧ್ಯಕ್ಷ ಎನ್.ಎಸ್.ಹೆಗಡೆ ಕರ್ಕಿ ಸ್ವಾಗತಿಸಿದರು. ಬಿಜೆಪಿ ಗ್ರಾಮೀಣ ಮಂಡಳ ಅಧ್ಯಕ್ಷೆ ಉಷಾ ಹೆಗಡೆ ನಿರೂಪಿಸಿ, ವಂದಿಸಿದರು.