ಕುಮಟಾ : ಶಾಸಕ, ಮಂತ್ರಿ, ಸಂಸದರು, ಮಾಡುವುದಕ್ಕಿಂತ ಅಧಿಕ ಕಾರ್ಯವನ್ನು ಸ್ಥಳೀಯವಾಗಿ ಒಬ್ಬ ಪತ್ರಕರ್ತ ಮಾಡುತ್ತಾನೆ. ಆದರೆ ಈ ಎಲ್ಲ ವ್ಯಕ್ತಿಗಳಿಗೆ ಸಿಗುವ ಸೌಲತ್ತುಗಳನ್ನು ನೋಡಿದರೆ ಪತ್ರಕರ್ತರಿಗೆ ಯಾವುದೇ ಸೌಲತ್ತು ಇಲ್ಲ ಎಂಬುದು ಸ್ಪಷ್ಟವಾಗಿ ಗೋಚರವಾಗುತ್ತದೆ.

ಪತ್ರಿಕೆಯನ್ನು ಪ್ರಜಾಪ್ರಭುತ್ವದ ನಾಲ್ಕನೇ ಅಂಗವೆಂದು ನಾಮ ಪರಿಭಾವಿಸುತ್ತೇವೆ. ಆದರೆ ಪತ್ರಕರ್ತರಿಗಾಗಿ ನಾವು ಏನು ಮಾಡಿದ್ದೇವೆ ಎಂಬುದರ ಕುರಿತು ಚಿಂತನೆ ಮಾಡಬೇಕಾಗಿದೆ. ಸರಕಾರಗಳು ಪತ್ರಕರ್ತರಿಗೆ ಜೀವವಿಮೆಯನ್ನಾದರೂ ನೀಡುತ್ತದೆಯೇ? ಓಡಾಟಕ್ಕೆ ಉಚಿತ ವ್ಯವಸ್ಥೆ ಮಾಡಿದೆಯೇ? ಅಥವಾ ಪಿಂಚಣಿ ವ್ಯವಸ್ಥೆಯನ್ನಾದರೂ ಸರಕಾರ ಮಾಡಿದೆಯೇ ಎಂದು ಚಿದಾನಂದ ಭಂಡಾರಿ ಕಾಗಾಲ ಪ್ರಶ್ನಿಸಿದರು. ಅವರು ಕಾರ್ಯನಿರತ ಪತ್ರಕರ್ತರ ಸಂಘ (ರಿ.) ಇದರ ಕುಮಟಾ ಘಟಕದಿಂದ, ಜಿಲ್ಲಾ ಪತ್ರಿಕಾ ಮಂಡಳಿ, ಶಿರಸಿ ಇದರ ಸುವರ್ಣ ಮಹೋತ್ಸವದ ನಿಮಿತ್ತ ಮಂಗಳವಾರ ಪಟ್ಟಣದ ಸರಕಾರಿ ಪದವಿ ಕಾಲೇಜಿನಲ್ಲಿ ಹಮ್ಮಿಕೊಂಡಿದ್ದ ಸಮಾಜವನ್ನು ಒಳಗೊಂಡಂತೆ ಮಾಧ್ಯಮ ಉಪನ್ಯಾಸ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿದರು.

ಯಾವುದೋ ಒಂದು ಗುಡ್ಡ ಕುಸಿತವಾದ ಬಗ್ಗೆ ಪತ್ರಕರ್ತ ಸ್ಥಳಕ್ಕೆ ಹೋಗಿ ಫೋಟೋ ತೆಗೆದು ಅದನ್ನು ಪ್ರಕಟಿಸಿದ ನಂತರ ವ್ಯವಸ್ಥೆ ಜಾಗೃತವಾಗುತ್ತದೆ. ಆದರೆ ಅಂತಹ ಕಾರ್ಯವನ್ನು ಮಾಡುವ ಪತ್ರಕರ್ತ ಆ ಕಾರ್ಯಕ್ಕೆ ತೆರಳುವಾಗ ಸಾವನ್ನಪ್ಪಿದರೆ ಅವರ ಜೊತೆಗೆ ಯಾರಿದ್ದಾರೆ ಎಂದು ಅವರು ಪ್ರಶ್ನಿಸಿದರು. ಸರಕಾರ ಪತ್ರಕರ್ತರಿಗೆ ಒಂದು ಜೀವವಿಮೆಯನ್ನು ನೀಡುತ್ತಿಲ್ಲ. ಪ್ರಯಾಣ ಬತ್ತ್ಯೆಯನ್ನು ನೀಡುತ್ತಿಲ್ಲ. ಆದರೆ ಪತ್ರಿಕಾ ರಂಗವನ್ನು ಪ್ರಜಾಪ್ರಭುತ್ವದ ನಾಲ್ಕನೇ ಅಂಗ ಎಂಬುದಾಗಿ ಅದನ್ನು ಗುರುತಿಸಿದ್ದೇವೆ. ಇದರ ಬಗ್ಗೆ ಚಿಂತನೆಗಳು ನಡೆಯಬೇಕು ಎಂದರು.

ನಮ್ಮ ಜೀವ ರಕ್ಷಣೆಗೆ ಸಮಾಜ ಬೇಕು. ನಮ್ಮ ಸಂಪತ್ತು ರಕ್ಷಣೆಗೆ ಸಮಾಜ ಬೇಕು. ಆದರೆ ಅಂತಹ ಸಮಾಜ ಸದೃಢವಾಗಿರಬೇಕು. ಅಂತಹ ಸದೃಢ ಸಮಾಜ ನಿರ್ಮಾಣಕ್ಕೆ ಕಾರ್ಯಾಂಗ, ಶಾಸಕಾಂಗ, ನ್ಯಾಯಾಂಗದ ಜೊತೆಗೆ ಅದೆಲ್ಲವನ್ನು ಸರಿದಾರಿಯಲ್ಲಿ ನಡೆಸುವ ನಿಟ್ಟಿನಲ್ಲಿ ಪತ್ರಿಕಾ ರಂಗ ಹುಟ್ಟಿಕೊಂಡಿತು. ಮೊದಲು ಪತ್ರಿಕಾ ಧರ್ಮ ಎನ್ನುವುದು ಇತ್ತು. ನಂತರದಲ್ಲಿ ಪತ್ರಿಕಾ ರಂಗವಾಯಿತು, ಈಗ ಪತ್ರಿಕಾ ಉದ್ಯಮವಾಗಿದೆ ಆದರೂ ಪತ್ರಕರ್ತರು ಮಾತ್ರ ಬಡವಾಗಿಯೇ ಇದ್ದಾರೆ ಎಂದು ಅವರು ವಿಶಾದಿಸಿದರು.

RELATED ARTICLES  ಕೆ.ಸಿ.ಇ.ಟಿ. ಯಲ್ಲಿ ಸರಸ್ವತಿ ಪಿ.ಯು ವಿದ್ಯಾರ್ಥಿಗಳ ಅಮೋಘ ಸಾಧನೆ.

ಈ ಕಾರ್ಯಕ್ರಮವನ್ನು ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಉತ್ತರಕನ್ನಡ ಜಿಲ್ಲಾಧ್ಯಕ್ಷ ಜಿ. ಸುಬ್ರಾಯ ಭಟ್ಟ ಬಕ್ಕಳ ಉದ್ಘಾಟಿಸಿ ಮಾತನಾಡಿ, ಪತ್ರಿಕೆಗಳು ಪತ್ರಿಕೋಧ್ಯಮವಾದ ನಂತರ ಪತ್ರಿಕೆಗಳ ವಿಶ್ವಾಸಾರ್ಹತೆ ನಿಧಾನವಾಗಿ ಕಡಿಮೆಯಾಗುತ್ತಿದೆ. ಇಂದು ಪತ್ರಿಕೆಗಳನ್ನು ಒದುತ್ತಿರುವವರು ವಯಸ್ಸಾದವರೆ ಹೊರತು, ಯುವಸಮುದಾಯ ಪತ್ರಿಕೆ ಓದುವುದರಿಂದ ದೂರು ಸರಿದಿರುವುದು ಬೇಸರದ ಸಂಗತಿ. ಇದು ಪತ್ರಿಕೆಗಳು ಹಳಿತಪ್ಪುರುವುದನ್ನು ಸೂಚಿಸುತ್ತದೆ ಎಂದು ಅಭಿಪ್ರಾಯಪಟ್ಟರು.

ಜಿಲ್ಲೆ ಸಾಕಷ್ಟು ಪ್ರತಿಭಾವಂತ ಪತ್ರಕರ್ತರನ್ನು ಕಂಡಿದೆ. ಐವತ್ತು ವರ್ಷದ ಹಿಂದೆಯೇ ಪತ್ರಕರ್ತರ ಸಂಘಟನೆಯು ಅಗತ್ಯವೆಂದು ಅದನ್ನು ಹುಟ್ಟುಹಾಕಿದವರನ್ನು ಈ ದಿನ ಸ್ಮರಿಸಿಕೊಳ್ಳುವ ಅಗತ್ಯತೆ ಇದೆ. ಹಿಂದೆ ಪತ್ರಕರ್ತರ ಮೇಲೆ ಹಲ್ಲೆಗಳಾಗುತ್ತಿದ್ದು ಆದರೆ ಪತ್ರಕರ್ತರ ಸಂಘಟನೆಯ ನಂತರದಲ್ಲಿ ಅವೆಲ್ಲವೂ ದೂರವಾಗಿ ಪತ್ರಕರ್ತರಿಗೂ ಒಂದು ಶಕ್ತಿ ಬಂದಿದೆ ಎಂದು ಅವರು ಅಭಿಪ್ರಾಯಪಟ್ಟರು.

ಮುಖ್ಯ ಅತಿಥಿಯಾಗಿದ್ದ ಕಾಲೇಜಿನ ಪ್ರಾಚಾರ್ಯೆ ಶ್ರೀಮತಿ ವಿಜಯಾ ನಾಯ್ಕ ಮಾತನಾಡುತ್ತ, ಮೊಬೈಲ್ ಪೋನ್‌ಗಳು ಅವಿಷ್ಕಾರವಾದ ನಂತರ ಈ ಪೋನ್‌ಗಳು ನಮ್ಮನ್ನು ಆಳುತ್ತಿವೆ. ಇದರಿಂದಾಗಿ ವಿದ್ಯಾರ್ಥಿಗಳಲ್ಲಿ ಕೇಳುವ ಮನಸ್ಥಿತಿ ಮಾಯವಾದೆ. ಇಂತಹ ಸ್ಥಿತಿಯಲ್ಲಿರುವ ಇಂದಿನ ವಿದ್ಯಾರ್ಥಿಗಳಿಗೆ ಶಿಕ್ಷಣ ಎಂಬುದನ್ನು ನಾವು ತುರುಕಬೇಕಾಗಿದೆ. ಒಬ್ಬ ಭ್ರಷ್ಟ ಪತ್ರಕರ್ತ ನೂರು ಭಯೋತ್ಪಾದಕನಿಗೆ ಸಮ ಎಂದು ಡಾ. ಅಂಬೇಡ್ಕರ ಹೇಳಿರುವುದನ್ನು ಉಲ್ಲೇಖಿಸಿದ ಪ್ರಾಚಾರ್ಯೆ ವಿಜಯಾ ನಾಯ್ಕ, ಆದರೆ ಇಂದು ಪ್ರಾಮಾಣಿಕತೆ ಎಲ್ಲಿದೆ ಎಂಬುದನ್ನು ಹುಡುಕಬೇಕಾದ ಸ್ಥಿತಿಯಲ್ಲಿ ನಾವಿದ್ದೇವೆ. ಪತ್ರಿಕಾರಂಗಕ್ಕಿಂತ ಶಿಕ್ಷಣ ರಂಗ ಶ್ರೇಷ್ಠ ಎಂಬುದು ನನ್ನ ಅಭಿಪ್ರಾಯ. ಹಾಗಾಗೀ ಪತ್ರಿಕೋದ್ಯಮ ಎಂಬುದು ಪತ್ರಿಕಾಧರ್ಮವಾಗಿ ಪರಿವರ್ತನೆಗೊಳ್ಳಲಿ ಎಂಬುದನ್ನು ನಾನು ಅಶಿಸುವುದಾಗಿ ಹೇಳಿದರು.

RELATED ARTICLES  ಹಂದಿ ಅಡ್ಡ ಬಂದ ಪರಿಣಾಮ : ಸಹಕಾರಿ ಧುರೀಣ ಟಿ.ಪಿ ಹೆಗಡೆ ಹುಣಸೆಮಕ್ಕಿ ಸಾವು.

ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯ ಸಮಿತಿ ಸದಸ್ಯ ಬಸವರಾಜ ಪಾಟೀಲ, ಮುಂಡಗೋಡ ಇನ್ನೋರ್ವ ಮುಖ್ಯ ಅತಿಥಿಯಾಗಿ ಮಾತನಾಡುತ್ತಾ ನ್ಯಾಯಾಂಗವನ್ನು ಹೊರತುಪಡಿಸಿ ನಮ್ಮ ಸಾರ್ವಜನಿಕ ವ್ಯವಸ್ಥೆಯಲ್ಲಿರುವ ಎಲ್ಲಾ ವ್ಯವಸ್ಥೆಯನ್ನು ರಾಜಕೀಯಸ್ಥರು ಭ್ರಷ್ಟವಾಗಿಸಿದ್ದಾರೆ. ಹಾಗಾಗಿ ನ್ಯಾಯಾಂಗ ಭ್ರಷ್ಟವಾಗದಂತೆ ನೋಡಿಕೊಳ್ಳಲು ಪತ್ರಕರ್ತರು, ವಿದ್ಯಾರ್ಥಿಗಳು ಸದಾ ಜಾಗ್ರತರಾಗಿರಬೇಕು ಎಂದರು.

ಅಧ್ಯಕ್ಷತೆ ವಹಿಸಿದ್ದ ಕಾರ್ಯನಿರತ ಪತ್ರಕರ್ತರ ಸಂಘ, ಕುಮಟಾ ಇದರ ಅಧ್ಯಕ್ಷ ಎಂ.ಜಿ.ನಾಯ್ಕ ಮಾತನಾಡುತ್ತ, ವಿದ್ಯಾರ್ಥಿಗಳು ತಮ್ಮ ಬೇಡಿಕೆಗಷ್ಟೆ ಪ್ರತಿಭಟಿಸದೇ, ಸಮಾಜದಲ್ಲಿನ ಎಲ್ಲಾ ಸಮಸ್ಯೆಯ ನಿವಾರಣೆಗೂ ಪ್ರತಭಟನೆ ನಡೆಸಬೇಕು. ವಿದ್ಯಾರ್ಥಿಗಳು ಸೇರಿದಂದತೆ ಎಲ್ಲರೂ ಸಮಾಜದ ಹಿತಕ್ಕಾಗಿ ಜಾಗ್ರತರಾಗಿದ್ದರೆ ಪತ್ರಿಕಾರಂಗ ಸೇರಿದಂತೆ ಎಲ್ಲವು ಬಲಿಷ್ಟವಾಗಿರುವುದು ಎಂದರು.

ವಿದ್ಯಾರ್ಥಿನಿ ಕು.ಭಾವನಾ ಅವರ ಪ್ರಾರ್ಥನೆಯೊಂದಿಗೆ ಆರಂಭವಾದ ಈ ಕಾರ್ಯಕ್ರಮದಲ್ಲಿ ಸಂಘದ ಉಪಾಧ್ಯಕ್ಷ ಜಯದೇವ ಬಳಗಂಡಿ ಸ್ವಾಗತಿಸಿದ್ದರು. ಕಾರ್ಯಕ್ರಮವನ್ನು ಕಾರ್ಯದರ್ಶಿ ಗಣೇಶ ಜೋಶಿ ಸಂಕೊಳ್ಳಿ ನಿರೂಪಿಸಿದ್ದರು. ಕಾರ್ಯಕ್ರಮದಲ್ಲಿ ಸಂಘದ ಸದಸ್ಯರು, ಕಾಲೇಜಿನ ವಿದ್ಯಾರ್ಥಿಗಳು, ಅಧ್ಯಾಪಕರು ಹಾಗು ಸರಸ್ವತಿ ಪಿ.ಯು ಕಾಲೇಜಿನ ಪ್ರಾಂಶುಪಾಲ ಕಿರಣ ಭಟ್ಟ ಉಪಸ್ಥಿತರಿದ್ದರು. ಸಂಘದ ಸದಸ್ಯ ಚರಣ ನಾಯ್ಕ ವಂದಿಸಿದರು. ಸಂಘದ ಸದಸ್ಯರುಗಳಾದ ಅನ್ಸಾರ್ ಶೇಖ್, ಎಸ್.ಎಸ್ ಹೆಗಡೆ, ಸುಬ್ರಾಯ ಭಟ್ಟ, ಗಣೇಶ ರಾವ್, ರಾಘವೇಂದ್ರ ದಿವಾಕರ, ರವಿ ಗಾವಡಿ, ವಿನೋದ ಹರಿಕಂತ್ರ ಸಹಕರಿಸಿದರು.