ಕುಮಟಾ : ಮುಖ್ಯಮಂತ್ರಿ ಸಿದ್ಧರಾಮಯ್ಯ ಹಾಗೂ ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಇವರು ಶುಕ್ರವಾರ ಮಧ್ಯಾಹ್ನ ೩-೩೦ ಗಂಟೆಗೆ ಪಟ್ಟಣದ ಮಣಕಿ ಮೈದಾನದಲ್ಲಿ ಲೋಕಸಭೆ ಚುನಾವಣೆಯ ಉತ್ತರಕನ್ನಡ ಅಭ್ಯರ್ಥಿ ಡಾ. ಅಂಜಲಿ ನಿಂಬಾಳ್ಕರ್ ಅವರ ಪ್ರಚಾರ ಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ಈ ಬಗ್ಗೆ ಇಂದು ಸಚಿವ ಮಂಕಾಳ ವೈದ್ಯ ಹಾಗೂ ಬ್ಲಾಕ್ ಕಾಂಗ್ರೆಸ್ ಮುಖಂಡರು ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದರು.
ಈ ಚುನಾವಣೆಯಲ್ಲಿ ಕಾಂಗ್ರೆಸ್‌ನ್ನು ಗೆಲ್ಲಿಸಬೇಕು ಎಂಬ ತೀರ್ಮಾನವನ್ನು ಜನ ಮಾಡಿದ್ದಾರೆ. ನಮ್ಮಲ್ಲಿ ಇರುವುದು ಒಂದೆ ಗುಂಪು, ಹಾಗಾಗೀ ಯಾವುದೇ ಭಿನ್ನಾಬಿಪ್ರಾಯ ನಮ್ಮಲಿಲ್ಲ ಎಂದ ಅವರು, ನಮ್ಮ ಪಕ್ಷದ ಅಭ್ಯರ್ಥಿ ಪರ ಮತಯಾಚಿಸಲು ಆಗಮಿಸುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರಿಗೆ ನಾವು ಕೋರಿಕೊಂಡಿದ್ದೆವು. ಅದರನ್ವಯ ಇನ್ನರು ನಾಯಕರು ಮೇ.೩ ರಂದು ಜಿಲ್ಲೆಗೆ ಆಗಮಿಸಲಾಲಿದ್ದಾರೆ ಎಂದರು.
ಜನರು ಗ್ಯಾರಂಟಿ ಸೌಲಭ್ಯಗಳನ್ನು ಒಪ್ಪಿಕೊಂಡಿದ್ದಾರೆ. ಹೀಗಾಗಿ ಕಾಂಗ್ರೆಸ್ ಪರವಾಗಿ ಉತ್ತಮ ವಾತಾವರಣ ನಿರ್ಮಾಣವಾಗಿದೆ. ರಾಜ್ಯ ಸರ್ಕಾರದ ಜನಪರ ಕಾರ್ಯಕ್ರಮಗಳ ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯ ಇನ್ನಷ್ಟು ವಿಸ್ತ್ರತವಾಗಿ ಜನರಿಗೆ ಮನದಟ್ಟಾಗಿ ತಿಳಿಸಲಿದ್ದಾರೆ. ಸರ್ಕಾರ ನೀಡಿರುವ ಜನಪರ ಕಾರ್ಯಕ್ರಮಗಳ ತಳಹದಿಯಲ್ಲಿ ಮತಯಾಚಣೆ ಮಾಡುತ್ತಿದೆ. ಎಲ್ಲಡೆ ಜನರು ಸಕಾರಾತ್ಮಕವಾಗಿ ಸ್ಪಂಧಿಸುತ್ತಿದ್ದಾರೆ. ಕಳೆದ ೨೫ ವರ್ಷಗಳ ಹಿಂದೆ ಕಳೆದುಹೋದ ಈ ಕ್ಷೇತ್ರ ಮರು ಪಡೆಯಲು ಕಾಂಗ್ರಸ್ ಅಭ್ಯರ್ಥಿಯ ಗೆಲುವು ಅತೀ ಮುಖ್ಯವಾಗಿದೆ. ಹೀಗಾಗಿ ಕಾರ್ಯಕರ್ತರು ಕ್ರೀಯಾಶೀಲರಾಗಿ ಮತದಾರರಿಗೆ ಸರ್ಕಾರದ ಯೋಜನೆಗಳ ಬಗ್ಗೆ ತಿಳಿ ಹೇಳಬೇಕು. ಹಾಗೂ ಮುಖ್ಯಮಂತ್ರಿಗಳ ಸಭೆಗೆ ಹೆಚ್ಚಿನ ಸಂಖ್ಯೆಯಲ್ಲಿ ಜನರು ಪಾಲ್ಗೊಳ್ಳಬೇಕೆಂದು ಮನವಿ ಮಾಡಿಕೊಂಡರು.
ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಸಚಿವ ಮಂಕಾಳ ವೈದ್ಯ, ತಮ್ಮ ಮುಂದಿನ ಭವಿಷ್ಯ ರೂಪಿಸಿಕೊಳ್ಳಲೆಂದು ವಿವೇಕ ಹೆಬ್ಬಾರ ಕಾಂಗ್ರೆಸ್ ಪಕ್ಷ ಸೇರಿಕೊಂಡಿದ್ದಾರೆ. ಪಕ್ಷ ಸೇರಿಕೊಂಡ ಅವರನ್ನು ನಾವು ಸ್ವಾಗತಿಸಿದ್ದೇವೆ. ಇನ್ನು ಅವರ ತಂದೆಯವರ ಅವರ ಬಗ್ಗೆ ನಾನೇನು ಮಾತನಾಡುವುದಿಲ್ಲ ಎಂದರು. ತಾಲೂಕು ಕಾಂಗ್ರೆಸ್ ಮುಖಂಡರಲ್ಲಿ ಯಾವುದೇ ಭಿನ್ನಾಭಿಪ್ರಾಯಗಳಿಲ್ಲ. ಎಲ್ಲರೂ ಒಗ್ಗಟ್ಟಾಗಿ ಪಕ್ಷದ ಅಭ್ಯರ್ಥಿಯ ಗೆಲುವಿಗೆ ಶ್ರಮಿಸುತ್ತಿದ್ದಾರೆ. ಹೀಗಾಗಿ ನಮ್ಮ ಅಭ್ಯರ್ಥಿ ಒಂದು ಲಕ್ಷಕ್ಕೂ ಅಧಿಕ ಮತಗಳಿಗೆ ಗೆಲುವು ಸಾಧಿಸಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಕುಮಟಾ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಭುವನ ಭಾಗ್ವತ ಮಾಹಿತಿ ಹಂಚಿಕೊಂಡು, ಮಧ್ಯಾಹ್ನ ೩ ಗಂಟೆಗೆ ಕುಮಟಾಕ್ಕೆ ಆಗಮಿಸಲಿರುವ ಮುಖ್ಯಮಂತ್ರಿ, ಉಪಮುಖ್ಯಮಂತ್ರಿಗಳ ಹ್ಯಾಲಿಕಾಪ್ಟರ್ ಕೊಂಕಣ ಶಿಕ್ಷಣ ಸಂಸ್ಥೆಗಳ ಮೈದಾನದಲ್ಲಿ ನಿರ್ಮಿಸಿರುವ ಹ್ಯಾಲಿಪ್ಯಾಡ್‌ನಲ್ಲಿ ಬಂದಿಳಿಯಲಿದೆ. ಅಲ್ಲಿಂದ ಸಿ.ಎಂ ಹಾಗೂ ಡಿಸಿಎಂ ಅವರು ೩-೩೦ಕ್ಕೆ ಮಣಕಿ ಮೈದಾನಕ್ಕೆ ಆಗಮಿಸಿ ಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ಹೀಗಾಗಿ ಪಕ್ಷದ ಕಾರ್ಯಕರ್ತರು, ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಬೇಕೆಂದು ಅವರು ವಿನಂತಿಸಿದರು.
ಘಟ್ಟದ ಮೇಲ್ಭಾಗದ ತಾಲೂಕಿನ ಮತದಾರರಿಗಾಗಿ ಮುಂಡಗೋಡ ಸಭೆಯಾಗಿದ್ದರೆ, ಘಟ್ಟದ ಕೆಳಗಿನ ತಾಲೂಕುಗಳ ಮತದಾರರಿಗಾಗಿ ಕುಮಟಾದಲ್ಲಿ ಸಭೆ ಏರ್ಪಡಿಸಲಾಗಿದೆ ಎಂದ ಅವರು, ಕುಮಟಾದ ಸಭೆಯಲ್ಲಿ ೨೫ಸಾವಿರಕ್ಕೂ ಅಧಿಕ ಜನ ಸೇರುವರೆಂಬ ವಿಶ್ವಾಸವನ್ನು ಅವರು ವ್ಯಕ್ತಪಡಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾಳೂರು ಶಾಸಕ ನಂಜೇಗೌಡ, ಮಾಜಿ ಶಾಸಕಿ ಶಾರದಾ ಮೋಹನ ಶೆಟ್ಟಿ, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಸಾಯಿ ಗಾಂವ್ಕರ್, ಕೆಪಿಸಿಸಿ ಕಾರ್ಯದರ್ಶಿ ನಿವೇದತ್ ಆಳ್ವಾ, ಕಾಂಗ್ರೆಸ್ ಮುಖಂಡರಾದ ಹೊನ್ನಪ್ಪ ನಾಯಕ, ಗ್ಯಾರಂಟಿ ಅನುಷ್ಠಾನ ಪ್ರಾಧಿಕಾರದ ಸತೀಶ ನಾಯ್ಕ, ಕೆ.ಪಿ.ಸಿ.ಸಿ ಸಂಯೋಜಕ ಭಾಸ್ಕರ ಪಟಗಾರ, ಪ್ರಮುಖರುಗಳಾದ ರವಿಕುಮಾರ ಎಂ. ಶೆಟ್ಟಿ, ನಾಗೇಶ ನಾಯ್ಕ ಕಲಭಾಗ, ನಾಗರಾಜ ನಾಯ್ಕ, ರತ್ನಾಕರ ನಾಯ್ಕ, ಆರ್. ಎಚ್ ನಾಯ್ಕ, ಸಚಿನ ನಾಯ್ಕ, ಅಶೋಕ ಗೌಡ, ವೈಭವ ನಾಯ್ಕ ಇತರರಿದ್ದರು.
