ಕುಮಟಾ : ಸಚಿವ ಮಂಕಾಳ ವೈದ್ಯರು, ನಮ್ಮ ಅಭ್ಯರ್ಥಿ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಕಟ್ಟಲೇಬೇಕೆಂಬ ಸಂಕಲ್ಪ ಮಾಡಿದ್ದಾರೆ. ಪ್ರಣಾಳಿಕೆಯಲ್ಲೂ ಹೇಳಿದ್ದೇವೆ, ಕುಮಟಾದಲ್ಲಿ ಆಸ್ಪತ್ರೆ ಮಾಡೇ ಮಾಡುತ್ತೇವೆ ಎಂದು ಉಪಮುಖ್ಯಮಂತ್ರಿ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಘೋಷಿಸಿದರು.
ಇಲ್ಲಿನ ಪ್ರಜಾಧ್ವನಿ- 2 ಸಮಾವೇಶದಲ್ಲಿ ಮಾತನಾಡಿದ ಅವರು, ನಿಮ್ಮ ಸಮಸ್ಯೆಗಳನ್ನ ಅರಿತಿದ್ದೇವೆ. ಬಿಜೆಪಿಗೆ ಮತ ಹಾಕಿದವರಿಗೆ ತಿಳಿಸಲೇಬೇಕು, ಗ್ಯಾರಂಟಿ ಕೊಟ್ಟು ಬದುಕನ್ನು ಕಾಂಗ್ರೆಸ್ ಹಸನಾಗಿಸಿದೆ ಎಂದು. ಮಾರ್ಗರೇಟ್ ಆಳ್ವಾ ನಂತರ ಮತ್ತೊಬ್ಬ ಮಹಿಳೆಯನ್ನ ಆರಿಸಿ ಕಳಿಸುತ್ತೀರಿ ಎನ್ನುವ ನಂಬಿಕೆ ಇದೆ. ಕಾಂಗ್ರೆಸ್ ನ ಆಚಾರ ವಿಚಾರ ಪ್ರಚಾರ ಮಾಡೋಕೆ ಬಂದಿದ್ದೇವೆ. ನೀವು ಈ ಬಾರಿ ಇತಿಹಾಸ ನಿರ್ಮಿಸುತ್ತೀರಿ ಎಂಬ ನಂಬಿಕೆ ಇದೆ ಎಂದರು.
ಕೊಟ್ಟ ಮಾತನ್ನ ಬಿಜೆಪಿ ಉಳಿಸಿಕೊಂಡಿಲ್ಲ. ಜಾತಿ, ಧರ್ಮ ಒಡೆಯೋ ಕೆಲಸ ಮಾಡಿದೆ. ರಾಹುಲ್ ಗಾಂಧಿ ಭಾರತ್ ಜೋಡೋ ಯಾತ್ರೆ ಮಾಡಿದರು. ನಾವು ಪ್ರಜಾಧ್ವನಿ ಯಾತ್ರೆ ಪ್ರಾರಂಭ ಮಾಡಿದ್ದೇವೆ. ನಾವು ಯಾರೂ ಮೋಸ ಮಾಡಿಲ್ಲ. ನಾವು ಯಾವುದೇ ಗ್ಯಾರಂಟಿ ಯೋಜನೆಗಳನ್ನ ಜಾತಿ ಧರ್ಮದ ಮೇಲೆ ನೀಡಿಲ್ಲ. ಕೇಂದ್ರದಲ್ಲಿ ಅಧಿಕಾರಕ್ಕೆ ಬಂದರೆ ಮಹಾಲಕ್ಷ್ಮಿ ಯೋಜನೆ ನೀಡುತ್ತಿದ್ದೇವೆ. ವರ್ಷಕ್ಕೆ 1 ಲಕ್ಷ ಮಹಿಳೆಯರಿಗೆ ನೀಡುತ್ತೇವೆ ಎಂದು ಭರವಸೆ ನೀಡಿದರು.
ಎಲ್ಲಾ ಆಸ್ಪತ್ರೆಯಲ್ಲಿಯೂ ಜೀರೋ ಬಿಲ್ ಬರುವ ವ್ಯವಸ್ಥೆಯನ್ನು ಕಾಂಗ್ರೆಸ್ ಸರಕಾರ ಮಾಡಲಿದೆ, ಬಿಜೆಪಿ ಸರಕಾರ ಇದ್ದಾಗ ಯಾವುದಾದರೂ ಶಾಲೆ ಮಾಡಿದ್ದಾರೆಯೇ? ಯಾವುದಾದರೂ ಫ್ಯಾಕ್ಟರಿ ಮಾಡಿದ್ದಾರೆಯೇ? ಒಂದು ಕೆರೆ ಕಟ್ಟಿದ್ದಾರಾ? ವಿದ್ಯಾ ಸಂಸ್ಥೆ ಇದೆಯೇ? ಬಿಜೆಪಿ ಯಾವುದು ಮಾಡಿಲ್ಲ. ಯಾವುದು ಮಾಡಿದ್ದರು ಕಾಂಗ್ರೆಸ್ ಸರ್ಕಾರ. ಜೀರೋ ಕರೆಂಟ್ ಬಿಲ್, ಟಿಕೆಟ್ ಇಲ್ಲದೆ ಬಸ್ ಪ್ರಯಾಣ ಇನ್ನಿತರ ಎಲ್ಲ ಸವಲತ್ತುಗಳನ್ನು ನೀಡಿದೆ. ಜನ ಕಾಂಗ್ರೆಸ್ ಸರಕಾರವನ್ನು ಬೆಂಬಲಿಸಬೇಕು. ನಿಮ್ಮ ಕುರಿತಾಗಿ ಹೋರಾಟ ಮಾಡಬಲ್ಲ ಮಹಿಳೆಯನ್ನು ಉತ್ತರ ಕನ್ನಡದಿಂದ ಆಯ್ಕೆ ಮಾಡುವಲ್ಲಿ ನಿಮ್ಮೆಲ್ಲರ ಸಹಕಾರ ಅಗತ್ಯ ಎಂದರು. ಹೆಣ್ಣು ಕುಟುಂಬದ ಕಣ್ಣು ಎಂಬ ಅರ್ಥದಲ್ಲಿ ನಾವು ಕಾರ್ಯ ಮಾಡುತ್ತಿದ್ದೇವೆ ಎನ್ನುತ್ತಾ ಜಲಿ ನಿಂಬಾಳ್ಕರ್ ಅವರನ್ನು ಬೆಂಬಲಿಸುವಂತೆ ಕರೆ ನೀಡಿದರು.