ಕುಮಟಾ : ಹೆಣ್ಣುಮಕ್ಕಳಿಗೆ ರಕ್ಷಣೆ ಕೊಡುತ್ತೇವೆ ಎನ್ನುವ ಮೋದಿ ಸರಕಾರ ಪ್ರಜ್ವಲ್ ರೇವಣ್ಣ ವಿಡಿಯೋ ಪ್ರಕರಣದ ಬಗ್ಗೆ ಗೊತ್ತಿದ್ದೂ ಜೆಡಿಸ್ ಜೊತೆ ಹೊಂದಾಣಿಕೆ ಮಾಡಿಕೊಂಡಿದೆ. ಇದೇನಾ ಹೆಣ್ಣುಮಕ್ಕಳಿಗೆ ರಕ್ಷಣೆ ಕೊಡುವ ಪ್ರಧಾನಿಯವರ ರೀತಿ? ಇದ್ಯಾವ ನೀತಿ ಎಂದು ಮೋದಿಯವರ ವಿರುದ್ಧ ಗುಡಿಗಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಮೋದಿ ಒಬ್ಬ ಒಳ್ಳೆ ನಾಟಕಕಾರ, ಇವೆಂಟ್ ಮ್ಯಾನೇಜರ್ ಎಂದು ವಾಗ್ದಾಳಿ ನಡೆಸಿದರು.

ಕುಮಟಾದ ಮಣಕಿ ಮೈದಾನದಲ್ಲಿ ನಡೆದ ಕಾಂಗ್ರೆಸ್ ಪ್ರಜಾಧ್ವನಿ- 2 ಸಮಾವೇಶದಲ್ಲಿ ಮಾತನಾಡಿದ ಅವರು ಮೋದಿ ವಿರುದ್ಧ ಹಾಗೂ ಬಿಜೆಪಿ ವಿರುದ್ಧ ಮಾತಿನ ಛಾಟಿ ಬೀಸಿದರು. ಮಹಿಳೆಯರಿಗೆ ರಕ್ಷಣೆ ಕೊಡತ್ತೇವೆಂದು ಪ್ರಧಾನಿಯವರು ಹಾಗೂ ಬಿಜೆಪಿಯವರು ಹೇಳುತ್ತಾರೆ. ಬಿಜೆಪಿ ಮೈತ್ರಿ ಮಾಡಿಕೊಂಡಿರುವ ಜೆಡಿಎಸ್‌ನ ಹಾಲಿ ಲೋಕಸಭಾ ಸದಸ್ಯ, ಮೈತ್ರಿ ಅಭ್ಯರ್ಥಿ ಪ್ರಜ್ವಲ್ ರೇವಣ್ಣ ಮಾಡಿರುವ ಅನ್ಯಾಯ ಜಗಜ್ಜಾಹೀರಾಗಿದೆ. ಈ ಬಗ್ಗೆ ಗೊತ್ತಿದ್ದೂ ಜೆಡಿಎಸ್ ಜೊತೆ ಬಿಜೆಪಿ ಹೊಂದಾಣಿಕೆ ಮಾಡಿಕೊಂಡು ಟಿಕೆಟ್ ನೀಡಿದ್ದಾರೆ. ಹೆಣ್ಣುಮಕ್ಕಳನ್ನ ರೇಪ್ ಮಾಡಿರುವವನಿಗೆ ಟಿಕೆಟ್ ಕೊಟ್ಟಿದ್ದಾರೆ. ಇದೇನಾ ಹೆಣ್ಣುಮಕ್ಕಳಿಗೆ ರಕ್ಷಣೆ ಕೊಡುವ ನೀತಿ? ಎಂದು ಪ್ರಶ್ನಿಸಿದರು.

ನಮ್ಮ ಪಕ್ಷದ ಅಭ್ಯರ್ಥಿಗೆ ಈ ಬಾರಿ ಆಶೀರ್ವಾದ ಮಾಡಬೇಕು. ಹಿಂದೆ ಉತ್ತರಕನ್ನಡ ಜಿಲ್ಲೆಯಲ್ಲಿ ಬಿಜೆಪಿಯನ್ನ‌ ಗೆಲ್ಲಿಸಿದ್ದೀರಿ. ಮಾರ್ಗರೇಟ್ ಆಳ್ವಾ ಒಮ್ಮೆ ಸಂಸದರಾಗಿದ್ದರು. ಈ ಬಾರಿ ಬದಲಾವಣೆಗೆ ಅವಕಾಶ ಇದೆ. ಹತ್ತು ವರ್ಷಗಳ ಕಾಲ ಮೋದಿಯವರು ಅಧಿಕಾರದಲ್ಲಿದ್ದರೂ ಕರ್ನಾಟಕದಲ್ಲಾಗಲಿ, ದೇಶದಲ್ಲಾಗಲಿ ಬಡವರಿಗೆ ಶಕ್ತಿ ತುಂಬುವ ಕೆಲಸ ಮಾಡಿಲ್ಲ. ಮೋದಿ ಮತ್ತು ಬಿಜೆಪಿಯವರು ಹೇಳುತ್ತಿದ್ದರು, ಎರಡೂ ಕಡೆ ಒಂದೇ ಸರ್ಕಾರವಿದ್ದರೆ ಡಬಲ್ ಎಂಜಿನ್ ಸರ್ಕಾರವಾಗುತ್ತದೆ ಎನ್ನುತ್ತಿದ್ದರು. ಮೂರು ವರ್ಷ ಹತ್ತು ತಿಂಗಳು ಎರಡೂ ಒಂದೇ ಸರ್ಕಾರವಿದ್ದರೂ ಲೂಟಿ ಹೊಡೆದರೇ ವಿನಾ ಏನೂ ಕೆಲಸ ಮಾಡಿಲ್ಲ. ಮೋದಿಯವರು ಹೇಳುತ್ತಾರೆ, ಕರ್ನಾಟಕದಲ್ಲಿ ಲೂಟಿ ಹೊಡೆಯುವ ಗ್ಯಾಂಗ್ ಇದೆ, ಕಾಂಗ್ರೆಸ್‌ನವರು ಲೂಟಿ ಮಾಡುತ್ತಾರೆ ಎನ್ನುತ್ತಾರೆ. ಗುತ್ತಿಗೆದಾರರ ಸಂಘದವರು ರಾಜ್ಯ ಬಿಜೆಪಿ ಸರ್ಕಾರ ೪೦% ಕಮಿಷನ್ ಸರ್ಕಾರವೆಂದಾಗ ಮೋದಿಯವರು ಏನೂ ಪ್ರತಿಕ್ರಿಯೆ ಕೊಟ್ಟಿಲ್ಲ. ಆರೋಪ ಸಹಿಸಿಕೊಂಡಿದ್ದರೆಂದರೆ ಭ್ರಷ್ಟಾಚಾರ ಸಹಿಸಿಕೊಳ್ಳುವ ಕೆಲಸ ಮಾಡಿದ್ದಾರೆಂದು ಎಂದರು.

RELATED ARTICLES  ಡಿವೈಡರ್ ಗೆ ಸ್ಕೂಟಿ ಡಿಕ್ಕಿ : ಇಬ್ಬರು ಮಕ್ಕಳೂ ಸೇರಿ ಮೂವರಿಗೆ ಪೆಟ್ಟು.

ಪ್ರಧಾನಿಯಾಗುವ ಮುನ್ನ ನೀಡಿದ್ದ ಯಾವ ಭರವಸೆಯನ್ನೂ ಮೋದಿಯವರು ಈಡೇರಿಸಿಲ್ಲ. ಎರಡು ಕೋಟಿ ವಾರ್ಷಿಕ ಉದ್ಯೋಗ ಸೃಷ್ಟಿ ಮಾಡುತ್ತೇವೆಂದರು. ವಿದ್ಯಾವಂತರು ಹತ್ತು ವರ್ಷಗಳಲ್ಲಿ ಉದ್ಯೋಗ ಸೃಷ್ಟಿಯಾಗದೆ‌ ನಿರುದ್ಯೋಗಿಗಳಾಗಿದ್ದಾರೆ. ಕೆಲಸ ಕೇಳಿದರೆ ಪಕೋಡಾ ಮಾರೋಕೆ ಹೋಗಿ ಎಂದು ಮೋದಿಯವರು ಹೇಳಿದರು. ಒಬ್ಬ ಪ್ರಧಾನಿ ಹೇಳುವ ಮಾತು ಇದಲ್ಲ. ಬೇಜವಾಬ್ದಾರಿಯಿಂದ ಮಾತನಾಡಿದ್ದಾರೆ. ಸಮಸ್ಯೆ ಬಗೆಹರಿಸಲು ಆಗದಿದ್ದ ಮೇಲೆ ಆ ಕುರ್ಚಿಯಲ್ಲಿರಲು ನಿಮಗೆ ಯೋಗ್ಯತೆ ಇಲ್ಲ ಎಂದು ಅವರು ಹೇಳಿದರು.

ನಮ್ಮ ಪಕ್ಷದ ಅಭ್ಯರ್ಥಿಗೆ ಈ ಬಾರಿ ನೀವು ಆಶೀರ್ವಾದ ಮಾಡಬೇಕೆಂದು ಜನತೆಯಲ್ಲಿ ವಿನಂತಿಸಿದ ಮುಖ್ಯಮಂತ್ರಿಗಳು, ಕೇಂದ್ರದಲ್ಲಿ ರಾಜ್ಯದಲ್ಲಿ ಎರಡು ಕಡೆಗೂ ಬಿಜೆಪಿ ಸರ್ಕಾರ ಇದ್ದಾಗ ಕೇವಲ ಲೂಟಿ ಹೊಡೆದರೇ ಹೊರತು ಬಡವರು, ದಲಿತರು, ಹಿಂದುಳಿದವರು, ಅಲ್ಪಸಂಖ್ಯಾತರು, ಮಹಿಳೆಯರು, ರೈತರ ಇವರ ಪರವಾಗಿ ಏನು ಕೆಲಸ ಮಾಡಿಲ್ಲ. ವಿದೇಶದಲ್ಲಿ ಕಪ್ಪು ಹಣ ಇದೆ. ಕಾಂಗ್ರೆಸ್ ನವರು, ವ್ಯಾಪಾರಿಗಳು, ಬಂಡವಾಳ ಶಾಹಿಗಳು ಅಲ್ಲಿ ದುಡ್ಡು ಇಟ್ಟಿದ್ದಾರೆ ಅದನ್ನು ತಂದು ಎಲ್ಲರಿಗೂ ಕೂಡ 15 ಲಕ್ಷ ನೀಡುವುದಾಗಿ ಭರವಸೆ ನೀಡಿದ್ದರು, ಆದರೆ ಅದು ಯಾರಿಗೂ ಬಂದಿಲ್ಲ ಎಂದು ಟಾಂಗ್ ನೀಡಿದರು.

ರೈತರಿಗೆ ಕೊಟ್ಟ ಭರವಸೆಯಂತೆ ನಡೆದುಕೊಳ್ಳಲಿಲ್ಲ. ಅಲ್ಲಿಯೂ ಸುಳ್ಳು ಹೇಳಿದರು. ಅಗತ್ಯ ವಸ್ತುಗಳ ಬೆಲೆಯನ್ನು ಕಡಿಮೆ ಮಾಡುತ್ತೇನೆ ಎಂದು ಭರವಸೆ ನೀಡಿದವರು, ಅಡುಗೆ ಎಣ್ಣೆಯ ಪೆಟ್ರೋಲ್ ಡೀಸೆಲ್, ಗ್ಯಾಸ್ ಎಲ್ಲ ಬೆಲೆಗಳು ಗಗನಕೇರಿದೆ ಆಗ ಏನು ಮಾಡಿದರು. ನಿಮಗೆಲ್ಲ ಒಳ್ಳೆ ದಿನ ಬರುತ್ತದೆ ಎಂದು ಭ್ರಮಾಲೋಕದಲ್ಲಿ ತೇಲಾಡಿಸಿದ ಮೋದಿಯವರು, ಭ್ರಮೆಯನ್ನು ಹುಟ್ಟಿಸಿ ಈ ದೇಶದಲ್ಲಿ ಯಾವ ಭರವಸೆಯನ್ನು ಈಡೇರಿಸಿಲ್ಲ. ಭಾವನಾತ್ಮಕ ವಿಚಾರಗಳನ್ನು ಪ್ರಸ್ತಾಪ ಮಾಡಿ ಜನರ ಭಾವನೆಗಳನ್ನು ಕೆರಳಿಸಿ ಅಧಿಕಾರಕ್ಕೆ ಬಂದು ಇವತ್ತು ಬಡವರ ಸಮಸ್ಯೆಗೆ ಪರಿಹಾರ ಕೊಡುವ ಕೆಲಸವನ್ನು ಮಾಡಿಲ್ಲ. ಹೀಗಾಗಿ ಬಡವರು, ದಲಿತರು, ಅಲ್ಪಸಂಖ್ಯಾತರು, ರೈತರು, ಮಹಿಳೆಯರು ಇವರೆಲ್ಲರ ಬದುಕು ದುಸ್ತರವಾಗಿದೆ. ಜೀವನ ನಡೆಸುವುದು ಕಷ್ಟವಾಗಿದೆ. ಇವರೆಲ್ಲರ ಕಷ್ಟವನ್ನು ಪರಿಹಾರ ಮಾಡುವುದಕ್ಕಾಗಿ ನಾವು ಪ್ರಮಾಣವಚನ ಸ್ವೀಕಾರ ಮಾಡಿದ ತಕ್ಷಣದಲ್ಲಿ ಐದು ಗ್ಯಾರಂಟಿಗಳನ್ನು ಜಾರಿ ಮಾಡುವ ಆದೇಶ ಹೊರಡಿಸಿದ್ದೇವೆ ಎಂದು ಅವರು ಗ್ಯಾರಂಟಿ ಯೋಜನೆಗಳ ಬಗ್ಗೆ ವಿವರಿಸಿದರು.

RELATED ARTICLES  ವಿಶೇಷ ರೀತಿಯಲ್ಲಿ ರಾಮವಂದನೆ ಸಲ್ಲಿಸಿದ ವಿದ್ಯಾರ್ಥಿಗಳು.

ಪ್ರತಿದಿನ 50 ರಿಂದ 60 ಲಕ್ಷ ಮಹಿಳೆಯರು ಉಚಿತ ಬಸ್ಸು ಓಡಾಟ ನಡೆಸುತ್ತಿದ್ದಾರೆ. ಜನರಿಂದ ಎಲ್ಲೆಡೆ ನೀವು ಉತ್ತಮ ಸ್ಪಂದನೆ ವ್ಯಕ್ತವಾಗುತ್ತಿದೆ. ಉಚಿತ ವಿದ್ಯುತ್, ಬಡವರಿಗೆ ಅನ್ನ ನೀಡುವುದು, ಗೃಹಿಣಿಯರಿಗೆ ಸ್ವಾವಲಂಬಿ ಬದುಕು ನೀಡುವ ನಿಟ್ಟಿನಲ್ಲಿ ಗ್ಯಾರಂಟಿಗಳನ್ನು ನೀಡಿ ಬಡವರ ಕಷ್ಟಕ್ಕೆ ನೆರವಾಗಿದ್ದೇವೆ. ಕೇಂದ್ರದವರು ಬಡವರಿಗೆ ಅಕ್ಕಿ ಕೊಟ್ಟಿಲ್ಲ, ಅಕ್ಕಿ ಕೊಟ್ಟರೆ ಬಡವರು ಕಾಂಗ್ರೆಸ್ ಪರವಾಗುತ್ತಾರೆ ಎಂದು ಅಕ್ಕಿ ಕೊಡುವ ಕೆಲಸವನ್ನು ಕೇಂದ್ರ ಸರ್ಕಾರ ಮಾಡಿಲ್ಲ. ಕೇಂದ್ರ ಸರ್ಕಾರ ಮೋಸ ಮಾಡಿದೆ. ಆದರೂ ನಾವು ಅದನ್ನು ಹಣದ ರೂಪದಲ್ಲಿ ಕೊಡುತ್ತಿದ್ದೇವೆ ಎಂದರು.

ಇನ್ನು ಮುಂದೆಯೂ ಸಹ ಜನ ಸೇವೆಯನ್ನು ಮಾಡುವ ಉದ್ದೇಶದಿಂದಲೇ ಕಾಂಗ್ರೆಸ್ ಕಾರ್ಯವನ್ನು ಮಾಡುತ್ತಿದ್ದೇವೆ. ಹೀಗಾಗಿ ನಿಮ್ಮ ಕ್ಷೇತ್ರದಲ್ಲಿ ಡಾ. ಅಂಜಲಿ ನಿಂಬಾಳ್ಕಕರವರನ್ನು ಗೆಲ್ಲಿಸಿ ನಮಗೆ ಶಕ್ತಿ ತುಂಬಬೇಕೆಂದು ಅವರು ವಿನಂತಿಸಿದರು.

ಕಾರ್ಯಕ್ರಮದಲ್ಲಿ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಸಾಯಿ ಗಾಂವ್ಕರ್ ಸ್ವಾಗತಿಸಿದರು, ಪ್ರಶಾಂತ ಹೆಗಡೆ ನಿರೂಪಿಸಿದರು. ವೇದಿಕೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ ವೈದ್ಯ, ಕಾಂಗ್ರೆಸ್ ಹಿರಿಯ ಮುಖಂಡ ಆರ್.ವಿ.ದೇಶಪಾಂಡೆ, ಮಾಜಿ ರಾಜ್ಯಪಾಲೆ ಮಾರ್ಗರೇಟ್ ಆಳ್ವಾ, ಮಾಳೂರು ಶಾಸಕ ನಂಜೇಗೌಡ, ವಿನಯಕುಮಾರ್ ಸೊರಕೆ, ಶಾಸಕರುಗಳಾದ ಸತೀಶ ಸೈಲ್, ಭೀಮಣ್ಣ ನಾಯ್ಕ, ಮಾಜಿ ಶಾಸಕಿ ಶಾರದಾ ಮೋಹನ ಶೆಟ್ಟಿ, ಪಕ್ಷದ ಪ್ರಮುಖರುಗಳಾದ ರಮಾನಾಥ ರೈ, ಜೆ.ಡಿ.ನಾಯ್ಕ. ಎ.ಎಚ್ ಗೌಡ, ಕೆಪಿಸಿಸಿ ಕಾರ್ಯದರ್ಶಿ ನಿವೇದತ್ ಆಳ್ವಾ, ಸುಜಾತಾ ಗಾಂವಕರ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಭುವನ್ ಭಾಗ್ವತ, ಕಾಂಗ್ರೆಸ್ ಮುಖಂಡರಾದ ಹೊನ್ನಪ್ಪ ನಾಯಕ, ಗ್ಯಾರಂಟಿ ಅನುಷ್ಠಾನ ಪ್ರಾಧಿಕಾರದ ಸತೀಶ ನಾಯ್ಕ, ಕೆ.ಪಿ.ಸಿ.ಸಿ ಸಂಯೋಜಕ ಭಾಸ್ಕರ ಪಟಗಾರ, ಪ್ರಮುಖರುಗಳಾದ, ಆರ್. ಎಚ್ ನಾಯ್ಕ, ಸಚಿನ ನಾಯ್ಕ ಹಾಗೂ ಇತರರು ಇದ್ದರು.