ಹೊನ್ನಾವರ : ತಾಲೂಕಿನ ಶ್ರೀ ಕ್ಷೇತ್ರ ಬಂಗಾರಮಕ್ಕಿ ಹಾಗೂ ಬೆಂಗಳೂರಿನ ಸುದೀಕ್ಷಾ ಹೆಲ್ತ್ ಕೇರ್ ಪ್ರೈವೇಟ್ ಲಿಮಿಟೆಡ್‌ನ ಸಹಯೋಗದ ಮಹಾತ್ವಾಕಾಂಕ್ಷೆಯ ಯೋಜನೆಯಾದ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯ ಭವ್ಯ ಕಟ್ಟಡದ ಶಿಲಾನ್ಯಾಸ ಸಮಾರಂಭವನ್ನು ಮೇ ೧೦ ರಂದು ಶ್ರೀ ಕ್ಷೇತ್ರ ಬಂಗಾರಮಕ್ಕಿಯಲ್ಲಿ ಅಕ್ಷಯ ತೃತೀಯ ಶುಭ ದಿನದಂದು ಹಮ್ಮಿಕೊಳ್ಳಲಾಗಿದೆ.
ಇತ್ತೀಚೆಗಷ್ಟೇ ಶ್ರೀಕ್ಷೇತ್ರ ಬಂಗಾರಮಕ್ಕಿಯ ಧರ್ಮಾಧಿಕಾರಿಗಳಾದ ಶ್ರೀ ಮಾರುತಿ ಗುರೂಜಿ ಮತ್ತು ಸುದೀಕ್ಷಾ ಹೆಲ್ತ್ ಕೇರ್ ಪ್ರೈವೇಟ್ ಲಿಮಿಟೆಡ್‌ನ ಸಿ.ಎಂ.ಡಿ. ಡಾ. ಸುಬ್ರಹ್ಮಣ್ಯಂ ಶರ್ಮ ಗೌರವರಂ ಅವರು ಕ್ಷೇತ್ರದಲ್ಲಿ ನಡೆದ ಮಲೆನಾಡ ಉತ್ಸವದ ಉದ್ಘಾಟನೆಯ ಸಂದರ್ಭದಲ್ಲಿ ಉತ್ತರ ಕನ್ನಡ ಜಿಲ್ಲೆಗೆ ಉನ್ನತ ದರ್ಜೆಯ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯನ್ನು ನಿರ್ಮಿಸಿಕೊಡಲಾಗುವುದು ಎಂದು ಘೋಷಿಸಿದ್ದನ್ನು ಇಲ್ಲಿ ಸ್ಮರಿಸಬಹುದಾಗಿದೆ. ಎರಡು ಸಂಸ್ಥೆಗಳ ಸಹಯೋಗದೊಂದಿಗೆ ಜಂಟಿಯಾಗಿ ನಿರ್ಮಾಣವಾಗುತ್ತಿರುವ ಈ ಆಸ್ಪತ್ರೆ ಉತ್ತರ ಕನ್ನಡ ಜಿಲ್ಲೆಯ ಜನರ ಬಹು ವರ್ಷಗಳ ಕೂಗಿಗೆ ಮನ್ನಣೆ ನೀಡಿದಂತಾಗಿದೆ.
ಅಂದು ಮುಂಜಾನೆ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯ ಭವ್ಯ ಕಟ್ಟಡಕ್ಕೆ ಶಿಲಾನ್ಯಾಸ ಕಾರ್ಯಕ್ರಮ ನಡೆಯಲಿದ್ದು, ಅನಂತರ ಮಧ್ಯಾಹ್ನ ೧೨.೩೦ಕ್ಕೆ ಕ್ಷೇತ್ರದ ಶ್ರೀ ವೀರಾಂಜನೇಯ ಸಭಾಭವನದಲ್ಲಿ ಶ್ರೀ ಕ್ಷೇತ್ರ ಬಂಗಾರಮಕ್ಕಿಯ ಧರ್ಮಾಧಿಕಾರಿ ಶ್ರೀ ಮಾರುತಿ ಗುರೂಜಿಯವರ ದಿವ್ಯ ಸಾನಿಧ್ಯದಲ್ಲಿ ಸಭಾ ಕಾರ್ಯಕ್ರಮ ನಡೆಯಲಿದೆ. ಈ ಸಂದರ್ಭದಲ್ಲಿ ಶಿವಮೊಗ್ಗದ ಶ್ರೀ ರಾಮಕೃಷ್ಣ ವಿವೇಕಾನಂದಾಶ್ರಮದ ಶ್ರೀ ಸ್ವಾಮಿ ವಿನಯಾನಂದ ಸರಸ್ವತಿಯವರು ದಿವ್ಯ ಉಪಸ್ಥಿತಿ ವಹಿಸುವರು.
ಸುದೀಕ್ಷಾ ಗ್ರೂಪ್ ಆಪ್ ಕಂಪನಿಯ ಸಿ.ಎಂ.ಡಿ. ಡಾ. ಸುಬ್ರಹ್ಮಣ್ಯಂ ಶರ್ಮ ಗೌರವರಂ ಅವರ ಅಧ್ಯಕ್ಷತೆಯಲ್ಲಿ ನಡೆಯುವ ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಶಿವಮೊಗ್ಗದ ಸರ್ಜಿ ಆಸ್ಪತ್ರೆಗಳ ಸಮೂಹದ ಮುಖ್ಯಸ್ಥ ಡಾ. ಧನಂಜಯ ಸರ್ಜಿ, ಉ.ಕ. ಜಿಲ್ಲಾ ಪಂಚಾಯತ್ ಮುಖ್ಯ ಯೋಜನಾಧಿಕಾರಿ ವಿನೋದ ವಿ. ಅನ್ವೇಕರ, ಮಂಗಳೂರಿನ ಎಸ್. ಎಸ್. ಸೊಲ್ಯೂಷನ್‌ನ ಸನ್ನಿತ್ ಕೃಷ್ಣ ಶೇಟ್, ಅಖಿಲ ಭಾರತ ಬ್ರಾಹ್ಮಣ ಮಹಾಸಭಾದ ಅಧ್ಯಕ್ಷ ಗೋವಿಂದ ಕುಲಕರ್ಣಿ, ಹಿರಿಯ ಸಾಹಿತಿ ಮಹಾಬಲ ಮೂರ್ತಿ ಕೊಡ್ಲೆಕೆರೆ ಬೆಂಗಳೂರು, ಹಿರಿಯ ಪತ್ರಕರ್ತ ಬಿ. ಗಣಪತಿ ಬೆಂಗಳೂರು, ತಾಲೂಕು ವೈದ್ಯಾಧಿಕಾರಿ ಉಷಾ ಹಾಸ್ಯಗಾರ, ಕೊಲ್ಹಾಪುರದ ಮಾಸ್ಟರ್ ಮೈಂಡ್ಸ್ ಕಂಪನಿಯ ಕಟ್ಟಡ ವಿನ್ಯಾಸಕ ಮಹೇಶ ದೋಹಿಪಡೆ, ಸುದೀಕ್ಷ ಹೆಲ್ತ್ ಕೇರ್ ಪ್ರೆöÊವೇಟ್ ಲಿಮಿಟೆಡ್‌ನ ನಿರ್ದೇಶಕಿ ರಶ್ಮಿ ಕೆ.ವಿ., ಉತ್ತರ ಕನ್ನಡ ಜಿಲ್ಲಾ ಕಸಾಪ ಮಾಜಿ ಅಧ್ಯಕ್ಷ ಅರವಿಂದ ಕರ್ಕಿಕೋಡಿ, ಶ್ರೀಕ್ಷೇತ್ರ ಬಂಗಾರಮಕ್ಕಿಯ ಶ್ರೀ ವೀರಾಂಜನೇಯ ಧಾರ್ಮಿಕ ಹಾಗೂ ದತ್ತಿ ಸಂಸ್ಥೆಯ ಕಾರ್ಯದರ್ಶಿ ಅರ್ಪಿತಾ ಮಾರುತಿ ಗುರೂಜಿ ಪಾಲ್ಗೊಳ್ಳಲಿದ್ದಾರೆ ಎಂದು ಕ್ಷೇತ್ರದ ಪ್ರಕಟಣೆ ತಿಳಿಸಿದೆ.
ಯೋಜಿತ ಆಸ್ಪತ್ರೆಯು ಉನ್ನತ ದರ್ಜೆಯ ವೈದ್ಯಕೀಯ ಸೌಲಭ್ಯಗಳನ್ನು ಜಿಲ್ಲೆಯ ಜನತೆಗೆ ಒದಗಿಸಲಿದ್ದು, ಗಂಭೀರ ಆರೋಗ್ಯ ಸಮಸ್ಯೆಗಳಿಗೆ ದೂರದ ಜಿಲ್ಲೆಗಳಿಗೆ ಪ್ರಯಾಣ ಸುವ ಪರಿಸ್ಥಿತಿ ತಪ್ಪಿಸಲಿದೆ. ಈ ಆಸ್ಪತ್ರೆಯಲ್ಲಿ ಅತ್ಯುತ್ತಮ ವೈದ್ಯಕೀಯ ಸೇವೆಗಳನ್ನು ಜನತೆಗೆ ಒದಗಿಸಲು ಉನ್ನತ ತಂತ್ರಜ್ಞಾನ, ಉಪಕರಣಗಳು ಮತ್ತು ತಜ್ಞ ವೈದ್ಯರ ತಂಡವನ್ನು ಸಮರ್ಥವಾಗಿ ಸಜ್ಜುಗೊಳಿಸಲಾಗುವುದು. ಪ್ರಸ್ತುತ ಶಿಲಾನ್ಯಾಸ ಸಮಾರಂಭವು ಈ ಯೋಜನೆಯ ಮೊದಲ ಹಂತವಾಗಿದ್ದು, ಆಸ್ಪತ್ರೆಯ ನಿರ್ಮಾಣ ಕಾರ್ಯಗಳಿಗೆ ಚಾಲನೆ ನೀಡಲಿದೆ.
ಆಸ್ಪತ್ರೆ ಕಟ್ಟಡದ ಶಿಲಾನ್ಯಾಸ ಸಮಾರಂಭದಲ್ಲಿ ಜಿಲ್ಲೆಯ ಜನರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಯೋಜನೆಗೆ ಪ್ರೋತ್ಸಾಹಿಸಬೇಕೆಂದು ಶ್ರೀ ಕ್ಷೇತ್ರ ಬಂಗಾರಮಕ್ಕಿಯ ಶ್ರೀ ಮಾರುತಿ ಗುರೂಜಿ ಸಾರ್ವಜನಿಕರಲ್ಲಿ ಕೋರಿದ್ದಾರೆ.