ಗೋಕರ್ಣ: ವಿಷ್ಣುಗುಪ್ತ ವಿಶ್ವವಿದ್ಯಾಪೀಠದ ಸಾರ್ವಭೌಮ ಗುರುಕುಲದ ವಿದ್ಯಾರ್ಥಿಗಳು ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಸತತ ಮೂರನೇ ವರ್ಷ ಶೇಕಡ 100 ಫಲಿತಾಂಶ ಸಾಧಿಸಿದ್ದಾರೆ.
ಸಾರ್ವಭೌಮ ಗುರುಕುಲ ಪಾರಂಪರಿಕ ಮತ್ತು ನವಯುಗದ ಸಮನ್ವಯ ಶಿಕ್ಷಣ ನೀಡುವ ದೇಶದ ಏಕೈಕ ಸಂಸ್ಥೆಯಾಗಿದ್ದು, ಪಾರಂಪರಿಕ ವಿಭಾಗದಲ್ಲಿ ಸಾಧನೆ ಮಾಡುವ ಜತೆಜತೆಗೆ ನವಯುಗ ಶಿಕ್ಷಣದಲ್ಲೂ ಯಾವುದೇ ಶಿಕ್ಷಣ ಸಂಸ್ಥೆಗಳ ವಿದ್ಯಾರ್ಥಿಗಳಿಗಿಂತ ನಾವು ಕಡಿಮೆ ಇಲ್ಲ ಎನ್ನುವುದನ್ನು ಈ ಸಾಧನೆ ತೋರಿಸಿಕೊಟ್ಟಿದೆ ಎಂದು ಮಾರ್ಗದರ್ಶಕರಾದ ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀರಾಘವೇಶ್ವರಭಾರತೀಮಹಾಸ್ವಾಮೀಜಿ ವಿದ್ಯಾರ್ಥಿಗಳ ಸಾಧನೆಯನ್ನು ಕೊಂಡಾಡಿದ್ದಾರೆ.
ವಿವಿವಿ ಅಂಕಗಳಿಕೆ ಶಿಕ್ಷಣಕ್ಕೆ ಒತ್ತು ನೀಡದೇ ವಿದ್ಯಾರ್ಥಿಗಳ ಸಮಗ್ರ ವಿಕಾಸಕ್ಕೆ ಒತ್ತು ನೀಡುತ್ತದೆ. ಆದಾಗ್ಯೂ ಅಂಕ ಗಳಿಕೆಯಲ್ಲೂ ನಮ್ಮ ವಿದ್ಯಾರ್ಥಿಗಳು ಮುಂದಿರುವುದು ಸಂಸ್ಥೆಯ ಶ್ರೇಷ್ಠತೆಗೆ ಹಿಡಿದ ಕೈಗನ್ನಡಿ. ದೇಶದ ಭಾವಿ ಪ್ರಜೆಗಳ ಭದ್ರ ಭವಿಷ್ಯದ ಅಡಿಪಾಯ ಇದಾಗಿದ್ದು, ವಿದ್ಯಾರ್ಥಿಗಳ ಭವಿಷ್ಯ ಉಜ್ವಲವಾಗಿ ಎಂದು ಅವರು ಆಶೀರ್ವದಿಸಿದ್ದಾರೆ.
ಪರೀಕ್ಷೆ ತೆಗೆದುಕೊಂಡ 33 ವಿದ್ಯಾರ್ಥಿಗಳ ಪೈಕಿ 19 ಮಂದಿ ಅತ್ಯುನ್ನತ ದರ್ಜೆಯಲ್ಲಿ 13 ಮಂದಿ ಪ್ರಥಮ ಹಾಗೂ ಒಬ್ಬ ವಿದ್ಯಾರ್ಥಿ ದ್ವಿತೀಯ ದರ್ಜೆಯಲ್ಲಿ ಉತ್ತೀರ್ಣರಾಗಿದ್ದಾರೆ ಎಂದು ಮುಖ್ಯ ಶಿಕ್ಷಕಿ ಸೌಭಾಗ್ಯ ಭಟ್ಟ ಪ್ರಕಟಣೆಯಲ್ಲಿ ಹೇಳಿದ್ದಾರೆ.
ಪನ್ನಗ ಎಸ್ ಭಟ್ 613 ಅಂಕಗಳನ್ನು ಗಳಿಸಿ ಪ್ರಥಮ ಸ್ಥಾನ ಪಡೆದಿದ್ದರೆ, 603 ಅಂಕ ಗಳಿಸಿದ ರಾಮಚಂದ್ರ ಉಪಾಧ್ಯ ಎರಡನೇ ಸ್ಥಾನ ಗಳಿಸಿದ್ದಾರೆ. ತಲಾ 600 ಅಂಕಗಳನ್ನು ಪಡೆದ ಎನ್. ತನ್ವಿ ಗೌರಿ ಮತ್ತು ಸುಮುಖ ಹೆಗಡೆ ಜಿ ಮೂರನೇ ಸ್ಥಾನ ಹಂಚಿಕೊಂಡಿದ್ದಾರೆ. ಅತ್ಯುತ್ತಮ ಸಾಧನೆಗೆ ಕಾರಣವಾಗಿರುವ ವಿದ್ಯಾರ್ಥಿ ಹಾಗೂ ಶಿಕ್ಷಕರನ್ನು ಶಾಲಾ ಆಡಳಿತ ಮಂಡಳಿ ಅಧ್ಯಕ್ಷ ಅರುಣ್ ಹೆಗಡೆ, ವಿವಿವಿ ಗೌರವಾಧ್ಯಕ್ಷ ಡಿ.ಡಿ.ಶರ್ಮಾ, ಪಾರಂಪರಿಕ ವಿಭಾಗದ ವರಿಷ್ಠಾಚಾರ್ಯ ಸತ್ಯನಾರಾಯಣ ಶರ್ಮಾ ಮತ್ತಿತರರು ಅಭಿನಂದಿಸಿದ್ದಾರೆ.