ಕುಮಟಾ : ಉತ್ಕೃಷ್ಟವಾದ ಸಂಗೀತ, ಸಾಹಿತ್ಯ, ಯಕ್ಷಗಾನ, ನೃತ್ಯ ಮುಂತಾದ ಸಾಂಸ್ಕೃತಿಕ ಮೌಲ್ಯಗಳಿಂದ ಸಮೃದ್ಧವಾದ ನಮ್ಮ ಭಾರತೀಯ ಸಂಸ್ಕೃತಿ ಇಂದು ಪಾಶ್ಚಾತ್ಯ ಸಂಸ್ಕೃತಿಯ ಪ್ರಭಾವ ಹಾಗೂ ಇತರ ಸಂಸ್ಕೃತಿಗಳ ಅಂಧಾನುಕರಣೆಯಿಂದಾಗಿ ಅಪಾಯದ ಅಂಚಿನಲ್ಲಿದ್ದು ಇದನ್ನು ಮನಗಂಡು ಕಳೆದು 28 ವರ್ಷಗಳಿಂದ ಯಾವತ್ತೂ ಆರ್ಥಿಕ, ರಾಜಕೀಯ, ಇತರ ಯಾವುದೇ ಉದ್ದೇಶವಿಲ್ಲದೆ ಸುಧೋರಣೆಯ ಕಲಾಸಕ್ತರ, ಕಲಾವಿದರ, ಪ್ರಾಯೋಜಕರ ನೆರವಿನಿಂದ ನಮ್ಮ ಸಂಸ್ಕೃತಿಯ ಕಾರ್ಯಕ್ರಮಗಳನ್ನು ಉಚಿತವಾಗಿ ನೀಡುತ್ತಾ ಬಂದ ಸಂತೃಪ್ತಿ ಹೊಂದಿರುವ ಸಾಂಸ್ಕೃತಿಕ ಸಂಘಟನೆ ‘ಸೌರಭ’ ರಜತ ಸಂಭ್ರಮವನ್ನು ಆಚರಿಸಿಕೊಳ್ಳುತ್ತಿದ್ದು, ತನ್ನಿಮಿತ್ತ ಮೇ.೧೨ ರಂದು ಮುಂಜಾನೆ 7 ರಿಂದ ಸಾಯಂಕಾಲ 9ರ ವರೆಗೆ ಕುಮಟಾದ ಹವ್ಯಕ ಸಭಾ ಮಂಟಪದಲ್ಲಿ ‘ರಜತ ಸಂಭ್ರಮ ಸೌರಭ’ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ ಎಂದು ಸಂಘಟಕರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಈ ದಿನ ದಿನವಿಡೀ ಸಾಂಸ್ಕೃತಿಕ ವೈಭವ
ಹಾಗೂ ಸೌರಭ ರಾಷ್ಟ್ರೀಯ ಸಮ್ಮಾನ್
ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದ್ದು, ಮುಂಜಾನೆ 7 ಗಂಟೆಗೆ ‘ಉದಯರಾಗ ಸೌರಭ’ ಕಾರ್ಯಕ್ರಮದಲ್ಲಿ ಖ್ಯಾತ ಹಿಂದುಸ್ತಾನಿ ಗಾಯಕ ಪಂ. ಶ್ರೀಪಾದ ಹೆಗಡೆ, ಕಂಪ್ಲಿ ಅಪರೂಪದ ಉದಯರಾಗ ಪ್ರಸ್ತುತಪಡಿಸುವರು ಇವರಿಗೆ ತಬಲಾದಲ್ಲಿ ಶ್ರೀ ಶ್ರೀಧರ ಮಾಂಡ್ರೆ, ಸಂವಾದಿನಿಯಲ್ಲಿ ಶ್ರೀ ಸತೀಶ ಭಟ್ಟ, ಹೆಗ್ಗಾರ್ ಸಹಕರಿಸುವರು.

ಬೆಳಗ್ಗೆ 9:30 ರಿಂದ ಕಾವ್ಯಾಭಿನಯ ಸೌರಭ ಕಾರ್ಯಕ್ರಮದಲ್ಲಿ ಡಾ ಶ್ರೀಪಾದ ಭಟ್ ಪರಿಕಲ್ಪನೆಯ ‘ಹಕ್ಕಿ ಮತ್ತು ಅವಳು’ ಕಾವ್ಯಾಭಿನಯವನ್ನು ಉಡುಪಿ, ಕೊಟದ ಸುವಿಕಾ ಸಾಂಸ್ಕೃತಿಕ ಸಂಘಟನೆಯ ಕು. ಕಾವ್ಯಾ ಹಂದೆ ಪ್ರಸ್ತುತಪಡಿಸುವರು. 10 :30 ರಿಂದ ಯುವ ಸಾಹಿತಿ, ಪತ್ರಕರ್ತ ಪ್ರಮೋದ ಮೋಹನ ಹೆಗಡೆಯವ ಜೊತೆಗೆ ಯುವ ಸಾಹಿತ್ಯ ಸೌರಭ ಕಾರ್ಯಕ್ರಮ ನಡೆಯಲಿದೆ. ಬೆಳಗ್ಗೆ 11 ಗಂಟೆಗೆ ‘ಚಿಂತನ ಸೌರಭ’ ಕಾರ್ಯಕ್ರಮದಲ್ಲಿ ಖ್ಯಾತ ವಾಗ್ಮಿ, ಚಿಂತಕ, ಸಾಹಿತಿ, ಚಂದನ ವಾಹಿನಿಯ ಥಟ್ ಅಂತ ಹೇಳಿ ಖ್ಯಾತಿಯ ಡಾ. ನಾ. ಸೋಮೇಶ್ವರ ಇವರು ಭಾರತೀಯತೆಯ ಹಿರಿಮೆ ಘರಿಮೆ ವಿಷಯದ ಕುರಿತು ಉಪನ್ಯಾಸ ನೀಡಲಿದ್ದಾರೆ.

RELATED ARTICLES  ವಿದ್ಯುತ್ ಶಾರ್ಟ್ ಸರ್ಕಿಟ್‍ನಿಂದಾಗಿ ಬೆಂಕಿ ; ಮನೆ ಸುಟ್ಟು ಕರಕಲು

ಮಧ್ಯಾಹ್ನ 12 ಕ್ಕೆ ನಡೆಯುವ ‘ಯಕ್ಷ-ಗಾನ- ವ್ಯಾಖ್ಯಾನ ಸೌರಭ’ ಕಾರ್ಯಕ್ರಮದಲ್ಲಿ ಯಕ್ಷಗಾನ ಪದ್ಯಗಳನ್ನು ಆಧರಿಸಿದ ಕಥನ – ವ್ಯಾಖ್ಯಾನ – ವಿಶ್ಲೇಷಣೆ ನಡೆಯಲಿದ್ದು, ವಿದ್ವಾನ್ ಗಣಪತಿ ಭಟ್ಟ ಯಲ್ಲಾಪುರ. ವಿದ್ವಾನ್ ಕೆ. ಶ್ರೀಪತಿ ಉಪಾಧ್ಯಾಯ, ಮೃದಂಗದಲ್ಲಿ ಶ್ರೀ ಬಾಲಚಂದ್ರ ಭಾಗ್ವತ್, ವಯೋಲಿನ್ ನಲ್ಲಿ ಶ್ರೀಮತಿ ಶರ್ಮಿಳಾ ರಾವ್, ಉಡುಪಿ ಪಾಲ್ಗೊಳ್ಳುವರು.

ಊಟದ ನಂತರ ‘ಯಕ್ಷ ರೂಪಕ ಸೌರಭ’ ಕಾರ್ಯಕ್ರಮದಲ್ಲಿ ಶ್ರೀ ಎಂ.ಎ ಹೆಗಡೆ ದಂಡಕಲ್ ವಿರಚಿತ ‘ದಶಾವತಾರ’ದ ಅನನ್ಯ ಪ್ರಸ್ತುತಿ ‘ಲೀಲಾವತಾರಮ್’ ರೂಪಕ ಪ್ರಸ್ತುತವಾಗಲಿದೆ. ರಾಷ್ಟ್ರೀಯ ಖ್ಯಾತಿಯ ಬಾಲ ಪ್ರತಿಭೆ ಕು. ತುಳಸಿ ಹೆಗಡೆ ಯಕ್ಷ ರೂಪಕದಲ್ಲಿ ರಂಜಿಸಿದರೆ, ಭಾಗವತರಾಗಿ ಕೊಳಗಿ ಕೇಶವ ಹೆಗಡೆ, ಮೃದಂಗದಲ್ಲಿ ಶಂಕರ ಭಾಗ್ವತ್ ಯಲ್ಲಾಪುರ, ಚಂಡೆಯಲ್ಲಿ ವಿಘ್ನೇಶ್ವರ ಕೆಸರಕೊಪ್ಪ, ಪ್ರಸಾದನದಲ್ಲಿ ವೆಂಕಟೇಶ ಬೊಗ್ರಿಮಕ್ಕಿ ಸಹಕರಿಸುವರು.

ಮಧ್ಯಾಹ್ನ 3:45 ರಿಂದ ಸೌರಭ ಸಂಸ್ಥೆಯ ಅಧ್ಯಕ್ಷ ಶ್ರೀಕಾಂತ ಭಟ್ಟ ಅಧ್ಯಕ್ಷತೆಯಲ್ಲಿ ‘ಸಭಾ ಸೌರಭ’ ನಡೆಯಲಿದ್ದು, ತಾನಸೇನ್ ಪ್ರಶಸ್ತಿ ಭೂಷಿತ ನಮ್ಮ ನಾಡಿನ ಹಿರಿಯ ಹಿಂದುಸ್ತಾನೀ ಗಾಯಕ ಪಂ. ಗಣಪತಿ ಭಟ್ಟ, ಹಾಸಣಗಿಯವರಿಗೆ “ಸೌರಭ ರಾಷ್ಟ್ರೀಯ ಸಮ್ಮಾನ್” ಪ್ರಶಸ್ತಿ ಪ್ರದಾನ ಮಾಡಲಾಗುವುದು. ಸಭೆಯಲ್ಲಿ ಖ್ಯಾತ ವಾಗ್ಮಿ, ಚಿಂತಕ ಡಾ. ನಾ ಸೋಮೇಶ್ವರ ಶಿಖರನುಡಿ ಆಡಲಿದ್ದಾರೆ. ಸಾಯಂಕಾಲ 5:15 ರಿಂದ ನಡೆಯುವ ‘ಸಂಧ್ಯಾ ರಾಗ ಸೌರಭ’ ಕಾರ್ಯಕ್ರಮದಲ್ಲಿ ಪಂ. ಗಣಪತಿ ಭಟ್ಟ ಹಾಸಣಗಿ ಗಾಯನ ಪ್ರಚುರಪಡಿಸುವರು. ತಬಲಾದಲ್ಲಿ ಶ್ರೀಧರ ಮಾಂಡ್ರೆ, ಸಂವಾದಿನಿಯಲ್ಲಿ ಸತೀಶ ಭಟ್ಟ ಹೆಗ್ಗಾರ್ ಇರುವರು.

RELATED ARTICLES  ಮೆಡಿಕಲ್ ಕಾಲೇಜ್ ಹಾಗೂ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಾಣಕ್ಕಾಗಿ ಆಗ್ರಹಿಸಿ ಪಾದಯಾತ್ರೆ ಪ್ರಾರಂಭಿಸಿದ ಅನಂತಮೂರ್ತಿ ಹೆಗಡೆ.

ಸಾಯಂಕಾಲ 7 ಗಂಟೆಗೆ ‘ನೃತ್ಯ ಸೌರಭ’ ಕಾರ್ಯಕ್ರಮ ಕಾರ್ಯಕ್ರಮ ನಡೆಯಲಿದ್ದು, ದೆಹಲಿ ದೂರದರ್ಶನ ‘ಬಿ’ ಶ್ರೇಣಿಯ ಕಲಾವಿದೆ ಶ್ರೀಮತಿ ದೀಪ್ತಿ ವಿ. ಹೆಗಡೆ, ವಿದುಷಿ ಡಾ. ಜಯಶ್ರೀ ಶ್ರೀಕಾಂತ್ ಭಟ್ಟ ಬಳ್ಳಾರೆ, ಸೃಷ್ಟಿ ನೃತ್ಯ ಕಲಾ ಕುಟೀರ (ರಿ.) ಉಡುಪಿ ಶ್ರೀಮತಿ ಡಾ. ಮಂಜರಿ ಚಂದ್ರ ಪುಷ್ಪರಾಜ್ ಹಾಗೂ ಅವರ ಶಿಷ್ಯ ಅವರಿಂದ ಭರತನಾಟ್ಯ ಪ್ರಸ್ತುತಿ “ಸಮರ್ಪಣಾ” ಕಾರ್ಯಕ್ರಮ ನಡೆಯಲಿದೆ.

ಅಬ್ಬರ – ಗದ್ದಲಗಳಿಲ್ಲದ, ಆಡಂಬರ – ದೀರ್ಘ ಭಾಷಣಗಳಿಲ್ಲದ ಅಪ್ಪಟ ಭಾರತೀಯತೆಯ ಸೊಬಗಿನ ಜೊತೆಗೆ ಸಂಗೀತ – ಸಾಹಿತ್ಯ – ಯಕ್ಷಗಾನ – ನೃತ್ಯ – ಅಭಿವ್ಯಕ್ತಿಯ ರಸಾನಂದದ ಮೆರಗು ಹೊಂದಿರುವ ಈ ಕಾರ್ಯಕ್ರಮಕ್ಕೆ ಆಸಕ್ತರೊಡಗೂಡಿ ಬಂದು ಕಾರ್ಯಕ್ರಮ ಚಂದಗಾಣಿಸುವಂತೆ ಸೌರಭ ಸಂಸ್ಥೆಯ ಅಧ್ಯಕ್ಷ ಶ್ರೀಕಾಂತ ಭಟ್ಟ, ಕಾರ್ಯದರ್ಶಿ ಅರುಣ ಹೆಗಡೆ ಹಾಗೂ ಇತರ ಪದಾಧಿಕಾರಿಗಳು ಮತ್ತು ಸದಸ್ಯರು ಜಂಟಿಯಾಗಿ ಪ್ರಕಟಣೆಯ ಮೂಲಕ ತಿಳಿಸಿದ್ದಾರೆ.