ಕುಮಟಾ : ಮಾತೃ ಋಣ, ಪಿತೃ ಋಣ, ಆಚಾರ್ಯ ಋಣ, ಸಮಾಜ ಋಣ ಈ ರೀತಿಯಾಗಿ ವಿವಿಧ ಋಣಗಳು ಮನುಷ್ಯನ ಮೇಲೆ ಇದ್ದು, ಅವುಗಳನ್ನು ತೀರಿಸಿದರೆ ಮಾತ್ರ ಮೋಕ್ಷ ಪ್ರಾಪ್ತಿಯಾಗುತ್ತದೆ ಎಂಬುದು ಹಿಂದೂ ಸಂಪ್ರದಾಯದಲ್ಲಿ ಉಲ್ಲೇಖಿಸಿದ ಮಾತು. ನಾವು ಆ ಋಣವನ್ನು ತೀರಿಸಲು ಬಹುವಿಧದ ಪ್ರಯತ್ನವನ್ನು ಮಾಡುತ್ತೇವೆ. ಸಮಾಜ ನಮಗೆ ಎಲ್ಲವನ್ನು ಕೊಟ್ಟಿದ್ದು, ಸಮಾಜಕ್ಕಾಗಿ ಕೆಲಸ ಮಾಡುವ ಸೌರಭದಂತಹ ಸಂಘಟನೆಯ ಮೂಲಕ ಅದರ ಸದಸ್ಯರು ಸಮಾಜ ಋಣ ತೀರಿಸಲು ಮುಂದಾಗಿರುವುದು ಇತರರಿಗೆ ಆದರ್ಶ ಕಾರ್ಯವಾಗಿದೆ ಎಂದು ‘ಥಟ್ ಅಂತ ಹೇಳಿ’ ಕಾರ್ಯಕ್ರಮ ನಿರೂಪಕ, ವೈದ್ಯ, ಚಿಂತಕ ಡಾ. ನಾ. ಸೋಮೇಶ್ವರ ಹೇಳಿದರು. ಅವರು ಸದಭಿರುಚಿಯ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಸಂಘಟಿಸುತ್ತಾ ಬಂದಿರುವ ಸೌರಭ ಟ್ರಸ್ಟ್ ನವರು ಕುಮಟಾದ ಹವ್ಯಕ ಸಭಾ ಮಂಟಪದಲ್ಲಿ ‘ರಜತ ಸಂಭ್ರಮ ಸೌರಭ’ ಕಾರ್ಯಕ್ರಮದಲ್ಲಿ ಹಾಜರಿದ್ದು, ತಾನಸೇನ್ ಪ್ರಶಸ್ತಿ ಭೂಷಿತ ನಾಡಿನ ಹಿರಿಯ ಹಿಂದುಸ್ತಾನೀ ಗಾಯಕ ಪಂ. ಗಣಪತಿ ಭಟ್ಟ, ಹಾಸಣಗಿಯವರಿಗೆ “ಸೌರಭ ರಾಷ್ಟ್ರೀಯ ಸಮ್ಮಾನ್” ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಶಿಖರ ನುಡಿ ನುಡಿದರು.

ಸಂಗೀತ, ಸಾಹಿತ್ಯ, ಯಕ್ಷಗಾನ, ನೃತ್ಯ ಮುಂತಾದ ಸಾಂಸ್ಕೃತಿಕ ಮೌಲ್ಯಗಳಿಂದ ಸಮೃದ್ಧವಾದ ನಮ್ಮ ಭಾರತೀಯ ಸಂಸ್ಕೃತಿ ಇಂದು ಪಾಶ್ಚಾತ್ಯ ಸಂಸ್ಕೃತಿಯ ಪ್ರಭಾವ ಹಾಗೂ ಇತರ ಸಂಸ್ಕೃತಿಗಳ ಅಂಧಾನುಕರಣೆಯಿಂದಾಗಿ ಅಪಾಯದ ಅಂಚಿನಲ್ಲಿದ್ದು ಇದನ್ನು ಮನಗಂಡು ಕಳೆದು 28 ವರ್ಷಗಳಿಂದ ಸಮಾಜಕ್ಕೆ ಬಹುದೊಡ್ಡ ಕೊಡುಗೆ ನೀಡುತ್ತಿರುವ ಈ ಸೌರಭ ಸಂಸ್ಥೆಯ ಸದಸ್ಯರ ಕಾರ್ಯವನ್ನು ಮುಕ್ತ ಕಂಠದಿಂದ ಶ್ಲಾಘಿಸಿದ ಅವರು. ಸಮಾಜಕ್ಕಾಗಿ ತಮ್ಮ ಕಾರ್ಯಗಳನ್ನು ಬದಿಗೊತ್ತಿ ಬಂದ ಸೌರಭದ ಸದಸ್ಯರು ಸಮಾಜ ಋಣ ತೀರಿಸಲು ಮುಂದಾಗಿರುವುದಾಗಿ ಬಣ್ಣಿಸಿದರು.

ಭಾರತೀಯ ಸಂಸ್ಕೃತಿಯು ಉತ್ಕೃಷ್ಟವಾದ ಸಂಸ್ಕೃತಿಯಾಗಿದೆ. ಗುರು ಶಿಷ್ಯರ ಬಾಂಧವ್ಯ ಇಲ್ಲಿ ಪ್ರಧಾನವಾಗಿದೆ. ಪಂ. ಗಣಪತಿ ಭಟ್ಟ, ಹಾಸಣಗಿ ಗುರುಗಳ ಮಾರ್ಗದರ್ಶನದಲ್ಲಿ ಬೆಳೆದವರು. ತಮ್ಮದೇನೂ ಇಲ್ಲ, ಎಲ್ಲವೂ ತಾಯಿ ಶಾರದೆಗೇ ಅರ್ಪಣೆ ಎಂಬುದಾಗಿ ಸಂಗೀತದ ಆರಾಧನೆ ಮಾಡಿಕೊಂಡು ಬಂದಿದ್ದಾರೆ. ಇಂತವರಿಗೆ ರಾಷ್ಟ್ರೀಯ ಸೌರಭ ಸಮ್ಮಾನ್ ಪ್ರಶಸ್ತಿ ದೊರೆತಿರುವುದು ಸಂತಸದ ವಿಚಾರ. ಇವರಿಗೆ ಪದ್ಮ ಪ್ರಶಸ್ತಿ ಏಕೆ ಬಂದಿಲ್ಲ ಎಂಬುದೇ ಪ್ರಶ್ನೆಯಾಗಿದೆ. ಆದಷ್ಟು ಶೀಘ್ರವಾಗಿ ಅವರಿಗೆ ಪದ್ಮ ಪ್ರಶಸ್ತಿ ದೊರೆಯುವಂತಾಗಲಿ ಎಂಬುದು ನಮ್ಮೆಲ್ಲರ ಆಗ್ರಹವಾಗಿದೆ ಎಂದರು.

RELATED ARTICLES  ಮತದಾನ ಪ್ರಕ್ರಿಯೆ ಚುರುಕು : ಮತಪೆಟ್ಟಿಗೆ ಸೇರುತ್ತಿರುವ ಅಭ್ಯರ್ಥಿಗಳ ಭವಿಷ್ಯ

ಸನ್ಮಾನ ಸ್ವೀಕರಿಸಿ ಮಾತನಾಡಿದ ಪಂ. ಗಣಪತಿ ಭಟ್ಟ ಹಾಸಣಗಿ ಮಾತನಾಡಿ, ನಾನು ಕಾಲೇಜು ದಿನಗಳಲ್ಲಿಯೇ ಸಂಗೀತ ಕಲಿಯಲು ಮುಂದಾದೆ. ನನ್ನೊಳಗಿದ್ದ ಬೇಡಗಳನ್ನು ತೆಗೆದು, ಬೇಕಾಗಿದ್ದನ್ನು ತಿದ್ದಿ ತೀಡಿ ಈ ರೀತಿಯಾಗಿ ರೂಪಿಸಿರುವುದರಲ್ಲಿ ಗುರುಗಳ ಕಾರ್ಯ ಮಹತ್ವದ್ದು, ನನ್ನದು ಏನೂ ಇಲ್ಲ‌ ಎಂದರು.

ಅಧ್ಯಕ್ಷತೆ ವಹಿಸಿದ್ದ ಸೌರಭದ ಅಧ್ಯಕ್ಷ ಶ್ರೀಕಾಂತ ಭಟ್ಟ ತುಂಬಲೆಮಠ ಮಾತನಾಡಿ ಆರ್ಥಿಕ, ರಾಜಕೀಯ, ಇತರ ಯಾವುದೇ ಉದ್ದೇಶವಿಲ್ಲದೆ, ಸುಧೋರಣೆಯ ಕಲಾಸಕ್ತರ, ಕಲಾವಿದರ, ಪ್ರಾಯೋಜಕರ ನೆರವಿನಿಂದ ನಮ್ಮ ಸಂಸ್ಕೃತಿಯ ಕಾರ್ಯಕ್ರಮಗಳನ್ನು ಉಚಿತವಾಗಿ ನೀಡುತ್ತಾ ಬಂದ ಸಂತೃಪ್ತಿ ಹೊಂದಿರುವ ಸಾಂಸ್ಕೃತಿಕ ಸಂಘಟನೆ ನಮ್ಮದು. ಈ ಸಂಘಟನೆಯು ಯಶಸ್ವಿಯಾಗಿ ರಜತ ಸಂಭ್ರಮ ಆಚರಿಸಿದ್ದು, ನಿಮ್ಮೆಲ್ಲರ ಸಹಕಾರದಿಂದ ಎಂದು ಎಲ್ಲರ ಸಹಕಾರ ಸ್ಮರಿಸಿದರು.

ಉಪಾಧ್ಯಕ್ಷ ಮೋಹನ ಭಾಸ್ಕರ ಹೆಗಡೆ ಸೌರಭದ ಹಿನ್ನೋಟ ಹಾಗೂ ಮುನ್ನೋಟ ತೆರೆದಿಡುತ್ತಾ, ರಾಜ್ಯದ ಎಲ್ಲಾ ಭಾಗಗಳಲ್ಲಿ ಸಂಗೀತ ಹಾಗೂ ಸಾಹಿತ್ಯ ಕಾರ್ಯಕ್ರಮಗಳು ನಡೆಯುವಾಗ ಕುಮಟಾದಲ್ಲಿ ಅಂತಹ ಸದಭಿರುಚಿಯ ಸಂಸ್ಥೆ ಇರಲಿಲ್ಲ. ಹೀಗಾಗಿ ಹಿರಿಯರೆಲ್ಲರ ಮಾತಿನಂತೆ ಸೌರಭ ಸಂಘಟನೆ ಹುಟ್ಟುಹಾಕಿ ಸದಭಿರುಚಿಯ ಕಾರ್ಯಕ್ರಮ ಹಮ್ಮಿಕೊಂಡು ಬಂದಿದ್ದೇವೆ. ಉತ್ತರ ಕನ್ನಡದಲ್ಲಿ ಸಾಂಸ್ಕೃತಿಕ ವಾತಾವರಣ ನಿರ್ಮಿಸುವುದು, ಮುಂದಿನ ಪೀಳಿಗೆಗೆಯನ್ನು ಕಲಾಸಕ್ತರಾಗಿಸುವುದು ನಮ್ಮ ಗುರಿ ಎಂದರು.

ಡಾ. ಅನಿಲ ಹೆಗಡೆ ಸ್ವಾಗತಿಸಿದರು, ಕಾರ್ಯದರ್ಶಿ ಅರುಣ ಹೆಗಡೆ ಸನ್ಮಾನ ಪತ್ರ ವಾಚಿಸಿದರು. ಗಣೇಶ ಜೋಶಿ ಸಂಕೊಳ್ಳಿ ನಿರೂಪಿಸಿದರು. ಎಸ್. ವಿ ಹೆಗಡೆ ವಂದಿಸಿದರು. ಸದಸ್ಯರುಗಳಾದ ಜಯಂತ ಮಣಕಿಕರ, ವಿನಾಯಕ ಹೆಗಡೆಕಟ್ಟೆ, ಆನಂದ ಹೆಗಡೆ, ಕಿರಣ ಭಟ್ಟ, ಡಿ.ಜಿ ಹೆಗಡೆ ಸಹಕರಿಸಿದರು.

ಮುಂಜಾನೆ ‘ಉದಯರಾಗ ಸೌರಭ’ ಕಾರ್ಯಕ್ರಮದಲ್ಲಿ ಖ್ಯಾತ ಹಿಂದುಸ್ತಾನಿ ಗಾಯಕ ಪಂ. ಶ್ರೀಪಾದ ಹೆಗಡೆ, ಕಂಪ್ಲಿ ಅವರು ಉದಯರಾಗದಲ್ಲಿ ವಸಂತಮುಖಾರಿ ರಾಗವನ್ನು ಪ್ರಸ್ತುತಪಡಿಸಿದರು. ‘ಕಾವ್ಯಾಭಿನಯ ಸೌರಭ’ ಕಾರ್ಯಕ್ರಮದಲ್ಲಿ ಡಾ. ಶ್ರೀಪಾದ ಭಟ್ ಪರಿಕಲ್ಪನೆಯ ‘ಹಕ್ಕಿ ಮತ್ತು ಅವಳು’ ಕಾವ್ಯಾಭಿನಯವನ್ನು ಉಡುಪಿ, ಕೋಟದ ಸುವಿಕಾ ಸಾಂಸ್ಕೃತಿಕ ಸಂಘಟನೆಯ ಕು. ಕಾವ್ಯಾ ಹಂದೆ ಪ್ರಸ್ತುತಪಡಿಸಿದಳು.

RELATED ARTICLES  ಸಮುತ್ಕರ್ಷ ಐಎಎಸ್ 16 ವಾರಗಳ ತರಬೇತಿ ಶಿಬಿರ ಸಂಪನ್ನ.

ಯುವ ಸಾಹಿತಿ, ಪತ್ರಕರ್ತ ಪ್ರಮೋದ ಮೋಹನ ಹೆಗಡೆಯವರ ಜೊತೆಗೆ ಯುವ ಸಾಹಿತ್ಯ ಸೌರಭ ಕಾರ್ಯಕ್ರಮ ನಡೆಯಿತು. ‘ಚಿಂತನ ಸೌರಭ’ ಕಾರ್ಯಕ್ರಮದಲ್ಲಿ ಖ್ಯಾತ ವಾಗ್ಮಿ, ಚಿಂತಕ, ಸಾಹಿತಿ, ಚಂದನ ವಾಹಿನಿಯ ಥಟ್ ಅಂತ ಹೇಳಿ ಖ್ಯಾತಿಯ ಡಾ. ನಾ. ಸೋಮೇಶ್ವರ ಇವರು ಭಾರತೀಯತೆಯ ಹಿರಿಮೆ ಘರಿಮೆ ವಿಷಯದ ಕುರಿತು ಉಪನ್ಯಾಸ ನೀಡಿದರು.

‘ಯಕ್ಷ-ಗಾನ- ವ್ಯಾಖ್ಯಾನ ಸೌರಭ’ ಕಾರ್ಯಕ್ರಮದಲ್ಲಿ ವಿದ್ವಾನ್ ಗಣಪತಿ ಭಟ್ಟ ಯಲ್ಲಾಪುರ. ವಿದ್ವಾನ್ ಕೆ. ಶ್ರೀಪತಿ ಉಪಾಧ್ಯಾಯ, ಮೃದಂಗದಲ್ಲಿ ಶ್ರೀ ಬಾಲಚಂದ್ರ ಭಾಗ್ವತ್, ವಯೋಲಿನ್ ನಲ್ಲಿ ಶ್ರೀಮತಿ ಶರ್ಮಿಳಾ ರಾವ್, ಉಡುಪಿ ಪಾಲ್ಗೊಳ್ಳುವರು.

ಶ್ರೀ ಎಂ.ಎ ಹೆಗಡೆ ದಂಟಕಲ್ ವಿರಚಿತ ‘ದಶಾವತಾರ’ದ ಅನನ್ಯ ಪ್ರಸ್ತುತಿ ‘ಲೀಲಾವತಾರಮ್’ ರೂಪಕವನ್ನು, ರಾಷ್ಟ್ರೀಯ ಖ್ಯಾತಿಯ ಬಾಲ ಪ್ರತಿಭೆ ಕು. ತುಳಸಿ ಹೆಗಡೆ ಯಕ್ಷ ರೂಪಕದಲ್ಲಿ ರಂಜಿಸಿದಳು. ಭಾಗವತರಾಗಿ ಕೊಳಗಿ ಕೇಶವ ಹೆಗಡೆ, ಮೃದಂಗದಲ್ಲಿ ಶಂಕರ ಭಾಗ್ವತ್ ಯಲ್ಲಾಪುರ, ಚಂಡೆಯಲ್ಲಿ ವಿಘ್ನೇಶ್ವರ ಕೆಸರಕೊಪ್ಪ, ಪ್ರಸಾದನದಲ್ಲಿ ವೆಂಕಟೇಶ ಬೊಗ್ರಿಮಕ್ಕಿ ಸಹಕರಿಸಿದರು‌.

ಸಭೆಯ ನಂತರ ನಡೆದ ‘ಸಂಧ್ಯಾ ರಾಗ ಸೌರಭ’ ಕಾರ್ಯಕ್ರಮದಲ್ಲಿ ಪಂ. ಗಣಪತಿ ಭಟ್ಟ ಹಾಸಣಗಿಯವರು ಯಮನ್ ರಾಗ ಪ್ರಚುರಪಡಿಸಿದರು. ತಬಲಾದಲ್ಲಿ ಶ್ರೀಧರ ಮಾಂಡ್ರೆ, ಸಂವಾದಿನಿಯಲ್ಲಿ ಸತೀಶ ಭಟ್ಟ ಹೆಗ್ಗಾರ್ ಸಹಕರಿಸಿದರು. ‘ನೃತ್ಯ ಸೌರಭ’ ಕಾರ್ಯಕ್ರಮದಲ್ಲಿ, ದೆಹಲಿ ದೂರದರ್ಶನ ‘ಬಿ’ ಶ್ರೇಣಿಯ ಕಲಾವಿದೆ ಶ್ರೀಮತಿ ದೀಪ್ತಿ ವಿ. ಹೆಗಡೆ, ವಿದುಷಿ ಡಾ. ಜಯಶ್ರೀ ಶ್ರೀಕಾಂತ್ ಭಟ್ಟ ಬಳ್ಳಾರೆ, ಸೃಷ್ಟಿ ನೃತ್ಯ ಕಲಾ ಕುಟೀರ (ರಿ.) ಉಡುಪಿ ಶ್ರೀಮತಿ ಡಾ. ಮಂಜರಿ ಚಂದ್ರ ಪುಷ್ಪರಾಜ್ ಹಾಗೂ ಅವರ ಶಿಷ್ಯ ಅವರಿಂದ ಭರತನಾಟ್ಯ ಪ್ರಸ್ತುತಿ “ಸಮರ್ಪಣಾ” ಕಾರ್ಯಕ್ರಮ ಜನರ ಮನ ಗೆದ್ದಿತು.