Home HONNAVAR ನಾಲ್ಕು ದಶಕಗಳ ಪಕ್ಷ ನಿಷ್ಠೆಗೆ ಸಿಗದ ಮಾನ್ಯತೆಹೊನ್ನಾವರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷತೆಗೆ ಜಗದೀಪ್ ತೆಂಗೇರಿ ರಾಜೀನಾಮೆ

ನಾಲ್ಕು ದಶಕಗಳ ಪಕ್ಷ ನಿಷ್ಠೆಗೆ ಸಿಗದ ಮಾನ್ಯತೆಹೊನ್ನಾವರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷತೆಗೆ ಜಗದೀಪ್ ತೆಂಗೇರಿ ರಾಜೀನಾಮೆ

ಹೊನ್ನಾವರ : ಸುಮಾರು ನಾಲ್ಕು ದಶಕಗಳ ನನ್ನ ಜೀವಮಾನದ ಅಮೂಲ್ಯ ಸಮಯವನ್ನು ಕಾಂಗ್ರೆಸ್ ಪಕ್ಷದ ಸಂಘಟನೆಗಾಗಿ ಮೀಸಲಿಟ್ಟು,ಪಕ್ಷಕ್ಕಾಗಿ ಸರ್ವಸ್ವವನ್ನು ತ್ಯಾಗ ಮಾಡಿದ್ದರೂ, ಇದು ನಮ್ಮ ನಾಯಕರಿಗೆ ಗೋಚರಿಸದೇ ಇರುವ ನೋವು ನನ್ನನ್ನು ಕಾಡುತ್ತಿದೆ ಎಂದು ಹೊನ್ನಾವರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಜಗದೀಪ್ ಎನ್.ತೆಂಗೇರಿ ನೋವಿನಿಂದ ನುಡಿದರು. ಅವರು ಇಂದು ಹೊನ್ನಾವರ ಬ್ಲಾಕ್ ಕಾಂಗ್ರೆಸ್ ಸಮಿತಿ ಪಕ್ಷದ ಕಾರ್ಯಾಲಯದಲ್ಲಿ ಏರ್ಪಡಿಸಿದ ಮಾಜಿ ಪ್ರಧಾನಿ ದಿ.ರಾಜೀವ್ ಗಾಂಧಿಯವರ ೩೩ನೇ ಪುಣ್ಯತಿಥಿ ಕಾರ್ಯಕ್ರಮದ ನಂತರ ನಡೆದ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡುತ್ತಿದ್ದರು. ಅಧಿಕಾರವಿಲ್ಲದ ಸಂದರ್ಭದಲ್ಲಿ ಹಗಲು-ರಾತ್ರಿ ಪಕ್ಷ ಸಂಘಟಿಸಿದ್ದ ನಮ್ಮಂತವರಿಗೆ, ಪಕ್ಷ ಅಧಿಕಾರಕ್ಕೆ ಬಂದಾಗ ಮೂಲೆ ಗುಂಪು ಮಾಡುತ್ತಿರುವ ಉದ್ದೇಶ ತಿಳಿಯದಾಗಿದೆ. ಆದರೂ ಕಾಂಗ್ರೆಸ್ ಪಕ್ಷದ ಮೇಲೆ ನನಗೆ ಯಾವುದೇ ನೋವು, ಹತಾಶೆ ಇಲ್ಲ. ಕಾಂಗ್ರೆಸ್ ಪಕ್ಷ ಹೆಮ್ಮರವಾಗಿ ಬೆಳೆದು ದೇಶದ ಆಡಳಿತ ಸೂತ್ರ ಹಿಡಿದು,ದೇಶದ ಎಲ್ಲಾ ಜಾತಿ,ಧರ್ಮದ ಜನ ನೆಮ್ಮದಿಯಿಂದ ಬದುಕುವಂತಾಗಬೇಕು. ಬರಿಗೈಯಿಂದ ಪಕ್ಷಕ್ಕೆ ಬಂದು, ಬರಿಗೈಯಿಂದ ವಾಪಸ್ಸಾಗುತ್ತಿದ್ದೇನೆ. ೧೯೮೪ರಲ್ಲಿ ಭವ್ಯ ಬಾರತದ ಕನಸು ಕಂಡ ರಾಜೀವ್ ಗಾಂಧಿಯವರ ಆಕರ್ಷಣೆಯಿಂದ ಸಕ್ರಿಯ ರಾಜಕೀಯಕ್ಕೆ ಪಾದಾರ್ಪಣೆ ಮಾಡಿದ ಹೆಮ್ಮೆ ನನ್ನದು. ಅವರ ೩೩ನೇ ಪುಣ್ಯ ದಿನದ ಈ ಸಂದರ್ಭದಲ್ಲಿ ಹೊನ್ನಾವರ ಬ್ಲಾಕ್ ಕಾಂಗ್ರೆಸ್ ವತಿಯಿಂದ ಅರ್ಥಪೂರ್ಣ ರಕ್ತದಾನ ಕಾರ್ಯಕ್ರಮ ನಡೆಸಿ ನನ್ನ ಹೊನ್ನಾವರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷತೆಯ ಸ್ಥಾನಕ್ಕೆ ರಾಜೀನಾಮೆ ನೀಡುತ್ತಿದ್ದೇನೆ ಎಂದು ನೊಂದು ನುಡಿದರು.
೨೦೧೭,ಡಿ.೬ರಂದು ಹೊನ್ನಾವರ ಪಟ್ಟಣದಲ್ಲಿ ಎರಡು ಗುಂಪುಗಳ ನಡುವೆ ನಡೆದ ಗಲಭೆಯಲ್ಲಿ ಪರೇಶ ಮೇಸ್ತ ಎಂಬ ಯುವಕ ನಾಪತ್ತೆಯಾಗಿ ಡಿಸೆಂಬರ್ ೮ರಂದು ಅವನ ಶವ ಪಟ್ಟಣದ ಶೆಟ್ಟಿಕೆರೆಯಲ್ಲಿ ಗೋಚರಿಸುತ್ತಿದ್ದಂತೆ ಹೊನ್ನಾವರ ಪಟ್ಟಣ ಅಕ್ಷರಶಃ ಬೆಂಕಿ ಉಂಡೆಯಾಗಿ ಕೋಮು ಗಲಭೆಗೆ ಮುನ್ನುಡಿ ಬರೆಯಿತು. ಇದರಿಂದ ಹೊನ್ನಾವರ ಪಟ್ಟಣದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಆಕ್ರೋಶಿತರ ಕೆಂಗಣ್ಣಿಗೆ ಗುರಿಯಾದರು. ಇದು ನನ್ನ ಪಾಲಿಗೆ ಪಕ್ಷ ಸಂಘಟಿಸುವುದು ಸವಾಲಾಗಿ ಪರಿಣಮಿಸಿತ್ತು. ತಿಂಗಳುಗಳ ಕಾಲ ನಡೆದ ಈ ಗಲಭೆಯಿಂದ ಕಾಂಗ್ರೆಸ್ ಕಾರ್ಯಕರ್ತರು ಮನೆಯಿಂದ ಹೊರಬೀಳಲು ಹೆದುರುತ್ತಿರುವ ಸಂದರ್ಭದಲ್ಲಿ ಸ್ಥಳಿಯ ಪಕ್ಷದ ಕಾರ್ಯಕರ್ತರಿಗೆ ಧೈರ್ಯ ತುಂಬಿ, ಪರೇಶ ಮೇಸ್ತನ ಕುಟುಂಬಕ್ಕೆ ನ್ಯಾಯ ನೀಡುವಂತೆ ಬೇಡಿಕೆ ಇಟ್ಟು, ವಿಳಂಬ ನೀತಿ ಅನುಸರಿಸುತ್ತಿರುವ ಸಿ.ಬಿ.ಐ. ತನಿಖೆಯನ್ನು ತೀವ್ರಗೊಳಿಸುವಂತೆ ಒತ್ತಾಯಿಸಿ, ನನ್ನ ನೇತ್ರತ್ವದಲ್ಲಿ ಉಪವಾಸ ಸತ್ಯಾಗ್ರಹ, ಧರಣಿ ಸತ್ಯಾಗ್ರಹ ಮತ್ತು ಅನೇಕ ಪ್ರತಿಭಟನೆ, ಹೋರಾಟ ನಡೆಸುವ ಮೂಲಕ ಪಕ್ಷದ ಕಾರ್ಯಕರ್ತರಲ್ಲಿ ಮಾನಸಿಕ ಧೈರ್ಯ ತುಂಬಿ, ಪಕ್ಷ ಸಂಘಟಿಸಿದ್ದು ಮಾತ್ರ ನನ್ನ ಪಾಲಿಗೆ ಎಂದು ಮರೆಯಲಾಗದ ರೋಚಕ ಕ್ಷಣ. ಆ ಸಂದರ್ಭದಲ್ಲಿ ಕಾಂಗ್ರೆಸ್ ಕಾರ್ಯಕರ್ತರಾದ ನಾವುಗಳೆಲ್ಲಾ ಬದುಕಿದ್ದೆ ಪವಾಡ.
ಪರೇಶ ಮೇಸ್ತ ಸಾವಿನ ಘಟನೆಯ ಸಂದರ್ಭದಲ್ಲಿ ಮತ್ತು ಅದರ ಮುಂದಿನ ದಿನಗಳಲ್ಲಿ ಜೀವದ ಹಂಗು ತೊರೆದು ಪಕ್ಷ ಸಂಘಟಿಸಿದ್ದರು ೨೦೨೩ರ ವಿಧಾನಸಭಾ ಚುನಾವಣೆಗೆ ಮತ್ತು ಹಾಲಿ ೨೦೨೪ರ ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ ನನ್ನನ್ನು ಕೇವಲ ಹೊನ್ನಾವರ ಪಟ್ಟಣದ ೧೫ ಮತಗಟ್ಟೆಗಳಿಗಷ್ಟೇ ಸೀಮಿತಗೊಳಿಸಿರುವ ಕಾರಣ ಇನ್ನೂ ತಿಳಿದು ಬಂದಿಲ್ಲಾ. ಆದರೆ ೨೦೨೩ರ ವಿಧಾನಸಭಾ ಚುನಾವಣೆಯಲ್ಲಿ ಹೊನ್ನಾವರ ಬ್ಲಾಕ್ ಕಾಂಗ್ರೆಸ್ ವ್ಯಾಪ್ತಿಯ ೯ಪಂಚಾಯತಗಳಲ್ಲಿ ಕಾಂಗ್ರೆಸ್ ಮೂರನೇ ಸ್ಥಾನಕ್ಕೆ ತಳ್ಳಲ್ಪಟ್ಟರೇ,ಪರೇಶ ಮೇಸ್ತ ಸಾವಿನ ಘಟಣೆ ನಡೆದ ಹೊನ್ನಾವರ ಪಟ್ಟಣದಲ್ಲಿ ಕಾಂಗ್ರೆಸ್ ಎರಡನೇ ಸ್ಥಾನದಲ್ಲಿರುವುದು ಹೊನ್ನಾವರ ಕಾಂಗ್ರೆಸ್ ಕಾರ್ಯಕರ್ತರ ಒಗ್ಗಟ್ಟಿನ ಪರಿಶ್ರಮಕ್ಕೆ ಸಾಕ್ಷಿ ಎಂದರು.


ಆದರೆ ಕಾಂಗ್ರೆಸ್ ಪಕ್ಷ ಕಳೆದ ವರ್ಷ ರಾಜ್ಯದಲ್ಲಿ ಅಧಿಕಾರಕ್ಕೆರಿದ ನಂತರ ನಮ್ಮ ಭಾಗದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಸಮಾಧಾನದಿಂದ ಇಲ್ಲಾ ಅನ್ನುವುದು ನನ್ನ ಅಭಿಪ್ರಾಯ. ನಾವು ಪಕ್ಷದ ಸಂಘಟನೆಯನ್ನು ಪ್ರೀತಿಸುವವರು. ಅಧಿಕಾರ ಸ್ಥಾನ ಮಾನವನ್ನು ಎಂದು ಕೇಳಿದವರಲ್ಲ. ಕಳೆದ ನಲವತ್ತು ವರ್ಷಗಳಿಂದ ಕಾಂಗ್ರೆಸ್ ಪಕ್ಷದ ಧ್ವಜವನ್ನು ಎತ್ತಿ ಹಿಡಿದವರು ನಾವು. ನಾವು ಸತ್ತ ಮೇಲೆ ಧ್ವಜ ನಮ್ಮ ಎದೆಯ ಮೇಲೆ ಬೀಳಬೇಕೇ ಹೊರತು ನಾವೆಂದೂ ಪಕ್ಷವನ್ನು ಬಿಟ್ಟು ಬದುಕುವವರಲ್ಲ. ಆದರೆ ಅದುವೇ ನಮ್ಮ ದೌರ್ಬಲ್ಯ ಎಂದು ನಮ್ಮ ಪಕ್ಷದ ನಾಯಕರು ತಿಳಿಯಬಾರದು. ನಾನು ಯುವ ಕಾಂಗ್ರೆಸ್‌ನಲ್ಲಿ ಕಾರ್ಯನಿರ್ವಹಿಸುವಾಗ ಚಿಕ್ಕಪುಟ್ಟ ಸ್ಥಾನಮಾನ ಕೇಳಿದಾಗ ನೀನಿನ್ನೂ ಚಿಕ್ಕವ, ಮುಂದೆ ತುಂಬಾ ಭವಿಷ್ಯ ಇದೆ ಅನ್ನುತ್ತಿದ್ದರು. ಈಗ ಬಹಳಷ್ಟು ಕಾಲ ಕಳೆದಿದೆ. ನೋಡ ನೋಡುತ್ತಾ ನಮ್ಮ ವಯಸ್ಸು ಕಳೆದು ಮುದುಕರಾಗುತ್ತಿದ್ದೇವೆ.ನಾವು ಪಕ್ಷದಲ್ಲಿ ಸೂಕ್ತ ಸ್ಥಾನ ಮಾನ ಅಪೇಕ್ಷಿಸಿದರೇ, ಪ್ರಭಲ ಜಾತಿಗಳಿಗೆ ಪ್ರಥಮ ಆದ್ಯತೆ ನೀಡುವುದರಿಂದ ಪಕ್ಷಕ್ಕೆ ಅನುಕೂಲವಾಗಲಿದ್ದೂ, ನಿಮ್ಮದು ಚಿಕ್ಕ ಸಮಾಜ ಅನ್ನುವ ಉಡಾಫೆ ಮಾತು ಕೆಲ ನಾಯಕರ ಬಾಯಿಂದ ಕೇಳಿ ಬರುತ್ತಿದೆ. ಅಂದರೆ ಕೆಲಸಕ್ಕೆ ನಾವು, ಅಧಿಕಾರಕ್ಕೆ ಇನ್ನೊಬ್ಬರು ಅನ್ನುವ ತತ್ವ ಇದರಲ್ಲಿ ಅಡಗಿದಂತಿದೆ. ಪಕ್ಷಕ್ಕಾಗಿ ಎಲ್ಲವನ್ನೂ ತ್ಯಾಗ ಮಾಡಿ, ಜೀವನದುದ್ದಕ್ಕೂ ತನು-ಮನ-ಧನ ಸಮರ್ಪಿಸಿ,ಬ್ಲಾಕ್ ಕಾಂಗ್ರೆಸ್ ಕಾರ್ಯಾಲಯವನ್ನು ಸ್ವಂತ ಖರ್ಚಿನಲ್ಲಿ ನಿರ್ವಹಿಸಿ, ಬಾಡಿಗೆ ಮನೆಯಲ್ಲಿ ಬದುಕುವ ನಮ್ಮಂತವರಿಗೂ ಜಾತಿ ಮಾನದಂಡ ಮಾಡುವುದು ಸರಿಯೇ ? ನಿಜಾ ಹೇಳಬೇಕೆಂದರೆ ಹೊನ್ನಾವರ ಪಟ್ಟಣದಲ್ಲಿ ನನ್ನ ಸಮಾಜದ ಬೆರೆಳೆಣಿಕೆಯಷ್ಟು ಮನೆಯಿದ್ದರೂ, ಯಾರಿಗೂ ನನ್ನ ಜಾತಿ ಯಾವುದೆಂದು ಇದುವರೆಗೂ ತಿಳಿದಿಲ್ಲ. ನಮ್ಮ ಮಾನವೀಯ ಅಂತಃಕರಣದ ನೆರಳಲ್ಲಿ ಹೊನ್ನಾವರವೆಂಬ ನಗರದಲ್ಲಿ ಪಕ್ಷಾತೀತವಾಗಿ ನನ್ನನ್ನು ವೈಯಕ್ತಿಕವಾಗಿ ಪ್ರೀತಿಸುತ್ತಾರೆ. ಇದು ನನ್ನ ಮೇಲೆ ಜನ ಇಟ್ಟಿರುವ ವಿಶ್ವಾಸ ಎಂದು ಭಾವಿಸಿದ್ದೇನೆ. ಅದಕ್ಕೆ ನಾನು ಹೊನ್ನಾವರ ಜನತೆಗೆ ಚಿರಋಣಿಯಾಗಿದ್ದೇನೆ.
ಕಳೆದ ಕೆಲವು ತಿಂಗಳ ಹಿಂದೆ ಯಾವುದಾದರೂ ಸರಕಾರಿ ನಾಮನಿರ್ದೆಶನಕ್ಕೆ ಅರ್ಜಿ ಸಲ್ಲಿಸುವಂತೆ ಪಕ್ಷ ನನಗೆ ಸೂಚಿಸಿತ್ತು.ಅದರಂತೆ ನಾನು ಪಕ್ಷದ ಹಿರಿಯ ಮುಖಂಡರೊಬ್ಬರ ಹೆಸರನ್ನು ರಾಜ್ಯ ಸಮಿತಿಗೆ ಮತ್ತು ನನ್ನ ಹೆಸರನ್ನು ಜಿಲ್ಲಾ ಕೆ.ಡಿ.ಪಿ. ಸದಸ್ಯತ್ವಕ್ಕೆ ವಿನಂತಿಸಿದ್ದೆ. ಯಾವುದೇ ವಿಶೇಷ ಸೌಲತ್ತು ಇರದ ಈ ಸಮಿತಿಯಲ್ಲಿ ಸೇರಿದರೇ, ಪಕ್ಷದ ಶಾಸಕರಿಲ್ಲದ ನಮ್ಮ ಭಾಗದಲ್ಲಿ ಕಾರ್ಯಕರ್ತರ ಸಮಸ್ಯೆಯನ್ನು ಮೂರು ತಿಂಗಳಿಗೊಮ್ಮೆ ನಡೆಯುವ ತ್ರೆöÊಮಾಸಿಕ ಸಭೆಯಲ್ಲಿ ಅಧಿಕಾರಸ್ಥರ ಗಮನ ಸೆಳೆಯಬಹುದು ಅನ್ನುವುದು ನನ್ನ ಉದ್ದೇಶವಾಗಿತ್ತು. ಆದರೆ ಪಕ್ಷಕ್ಕಾಗಿ ೪೦ವರ್ಷ ದುಡಿದ ನನ್ನ ಹೆಸರನ್ನು ಕೈ ಬಿಟ್ಟು, ನಮ್ಮ ಭಾಗದಲ್ಲಿ ಪಕ್ಷದ ಪ್ರಾಥಮಿಕ ಸದಸ್ಯರಲ್ಲದವರನ್ನು ಕೆ.ಡಿ.ಪಿ. ಸದಸ್ಯರನ್ನಾಗಿ ಮಾಡಿರುವುದು ಸರಿಯೇ ? ನನಗಿಂತ ಹಿರಿಯರಾದವರನ್ನು ನೇಮಿಸಿದ್ದರೇ ನನ್ನ ಯಾವ ಅಭ್ಯಂತರವು ಇರಲಿಲ್ಲ. ಪಕ್ಷದ ಬ್ಲಾಕ್ ಅಧ್ಯಕ್ಷನಾದ ನನ್ನ ಹೆಸರಿದ್ದು, ಇನ್ನೊಬ್ಬರ ನೇಮಕ ಮಾಡುವಾಗ ಕನಿಷ್ಠ ಸೌಜನ್ಯಕ್ಕೂ ನನ್ನ ಬಳಿ ಯಾರೂ ಚರ್ಚಿಸಿಲ್ಲ. ನಾನು ಹಲವಾರು ಬಾರಿ ಪಕ್ಷದ ವೇದಿಕೆಯಲ್ಲಿ ಸ್ಪಷ್ಟಪಡಿಸಿದ್ದೆ.ನನಗೆ ಯಾವುದೇ ಹುದ್ದೆಯ ಮೇಲೆ ಆಸೆ ಇಲ್ಲ. ಆದರೆ ನನ್ನ ಜೊತೆ ಪಕ್ಷ ಕಟ್ಟುವಲ್ಲಿ ಕೈ ಜೋಡಿಸಿದ ಕಾರ್ಯಕರ್ತರಿಗೆ
ಅನ್ಯಾಯವಾಗಬಾರದು ಅಂತಾ ಹಲವಾರು ಬಾರಿ ಹೇಳಿದ್ದೆ. ಆದರೂ ಪಕ್ಷದ ಬ್ಲಾಕ್ ಅಧ್ಯಕ್ಷನಾದ ನನ್ನ ಗಮನಕ್ಕೆ ತಾರದೇ, ಚರ್ಚಿಸದೆ ಎಲ್ಲವನ್ನೂ ನಡೆಸಲಾಗುತ್ತಿದೆ. ಇದರಿಂದ ತುಂಬಾ ನೋವು ಅನುಭವಿಸಿದ ನಾನು ಇತ್ತೀಚೆಗೆ ನಡೆದ ಪಕ್ಷದ ಸಭೆಯಲ್ಲಿ, ಪಕ್ಷದ ಹಿರಿಯ ನಾಯಕರ ಸಮ್ಮುಖದಲ್ಲಿ ಈ ಎಲ್ಲಾ ಬೆಳವಣಿಗೆಯ ಕುರಿತಂತೆ ಸವಿಸ್ತಾರವಾಗಿ ವಿವರಿಸಿ, ಮುಂದಿನ ದಿನದಲ್ಲಿ ಸರಕಾರದ ಯಾವುದೇ ಲಾಭದಾಯಕ ಹುದ್ದೆ,ಸ್ಥಾನ,ಮಾನ, ನಾಮನಿರ್ದೆಶನ ಸ್ವೀಕರಿಸುವುದಿಲ್ಲ ಎಂದು ಪ್ರಮಾಣ ಮಾಡಿದ್ದೇನೆ. ಪಕ್ಷದ ಸಂಘಟನಾತ್ಮಕ ಹುದ್ದೆಯಲ್ಲಿ ಜೀವದ ಕೊನೆ ಉಸಿರಿರುವವರೆಗೂ ಪದಾಧಿಕಾರಿಯಾಗಿ ದುಡಿಯುವ ವಾಗ್ದಾನ ಮಾಡಿದ್ದೇನೆ ಎಂದರು. ಪಕ್ಷ ಸಂಘಟಿಸಲು ಸಹಕಾರ ನೀಡಿದ ಜಿಲ್ಲೆಯ ಮತ್ತು ನನ್ನ ಬ್ಲಾಕ್ ಕಾಂಗ್ರೆಸ್ ವ್ಯಾಪ್ತಿಯ ಪ್ರತಿಯೊಬ್ಬ ಕಾರ್ಯಕರ್ತರಿಗೆ, ಪಕ್ಷದ ಅಭಿಮಾನಿಗಳಿಗೆ ತುಂಬು ಹೃದಯದ ಧನ್ಯವಾದಗಳನ್ನು ಸಲ್ಲಿಸಿದ್ದಾರೆ. ಪತ್ರಿಕಾಗೋಷ್ಠಿಯಲ್ಲಿ ಬ್ಲಾಕ್ ಉಪಾಧ್ಯಕ್ಷ ದಾಮೋದರ ನಾಯ್ಕ,ಜಿಲ್ಲಾ ಕಾಂಗ್ರೆಸ್ ಕಾರ್ಯದರ್ಶಿ ಬಾಲಚಂದ್ರ ನಾಯ್ಕ, ಬ್ಲಾಕ್ ಹಿಂದುಳಿದ ವರ್ಗ ವಿಭಾಗದ ಅಧ್ಯಕ್ಷ ಕುಪ್ಪು ಗೌಡ,ಬ್ಲಾಕ್ ಪರಿಶಿಷ್ಠ ಜಾತಿ ವಿಭಾಗದ ಅಧ್ಯಕ್ಷ ಕೃಷ್ಣ ಹರಿಜನ,ಬ್ಲಾಕ್ ಅಲ್ಪಸಂಖ್ಯಾತ ವಿಭಾಗದ ಅಧ್ಯಕ್ಷ ಜಕ್ರಿಯ್ಯಾ ಶೇಖ,ಇಂಟೆಕ್ ಜಿಲ್ಲಾ ಕಾರ್ಯದರ್ಶಿ ಕೇಶವ ಮೇಸ್ತ,ಸಾಮಾಜಿಕ ಜಾಲತಾಣದ ಬ್ಲಾಕ್ ಅಧ್ಯಕ್ಷ ರಾಮಕೃಷ್ಣ ನಾಯ್ಕ, ನಗರ ಘಟಕದ ಅಧ್ಯಕ್ಷ ಚಂದ್ರಶೇಖರ ಚಾರೋಡಿ, ಬ್ಲಾಕ ಕಾರ್ಯದರ್ಶಿ ಶ್ರೀಕಾಂತ ಮೆಸ್ತ,ಮೀನುಗಾರ ಮುಖಂಡ ಸುರೇಶ ರುಕ್ಕು ಮೇಸ್ತ, ವಸಿಂ ಸಾಬ್,ಬಿಸಿಸಿ ಕಾರ್ಯದರ್ಶಿ ಜ್ಯೋತಿ ಮಹಾಲೆ,ಮಾಜಿ ಪಟ್ಟಣ ಪಂಚಾಯತ್ ಸದಸ್ಯೆ ಸುಧಾ ನಾಯ್ಕ,ಸಂತೋಷ ಮೇಸ್ತ,ಗಣೇಶ ಆಚಾರಿ, ಮಂಜು ಮುಕ್ರಿ,ಲರ‍್ಸನ್ ರೊಡ್ರಗಿಸ್, ವಾಸುದೇವ ಪುಲ್ಕರ್ ಇನ್ನೂ ಹಲವಾರು ಮುಖಂಡರು ಉಪಸ್ಥಿತರಿದ್ದರು.