ಕುಮಟಾ ; ದೀಪಾವಳಿ ಹಬ್ಬ ಹತ್ತಿರ ಬಂತು ಎಂದರೆ ಎಲ್ಲೆಲ್ಲೂ ದೀಪಗಳ ಸೊಬಗು ಜೋರಾಗಿರುತ್ತದೆ. ಮಣ್ಣಿನ ದೀಪಗಳ ಜೊತೆಜೊತೆಗೆ ಇತ್ತೀಚೆಗೆ ಎಲ್ಲೆಲ್ಲೂ ಹೆಚ್ಚಾಗುತ್ತಿರುವ ಬಗೆಬಗೆಯ ಹಣತೆಗಳು ದೀಪಗಳ ಹಬ್ಬ ಮತ್ತಷ್ಟು ಹತ್ತಿರ ಬರುತ್ತಿದೆ ಎನ್ನುವುದನ್ನು ನೆನಪಿಸುತ್ತಿವೆ.

ಹೌದು ಕುಮಟಾ, ಹೊನ್ನಾವರ, ಶಿರಸಿ, ಸಿದ್ದಾಪುರ, ಕಾರವಾರದ ಪೇಟೆಯಲ್ಲಿಯೂ ಬಗೆ ಬಗೆ ಹಣತೆಗಳ ಕಾರುಬಾರು. ಬೇರೆ ಬೇರೆ ಕಡೆಗಳಿಂದ ಹಣತೆ ಮಾರಾಟಕ್ಕೆ ಬಂದಿದ್ದಾರೆ ಜನರು. ಎಲ್ಲಿ ನೋಡಿದರೂ ತರಹೇವಾರಿ ಹಣತೆಗಳೇ ಕಂಗೊಳಿಸುವಂತಿದೆ. ಜನತೆ ದೀಪಾವಳಿ ಆಚರಣೆಗಾಗಿ ಮುಗಿ ಬಿದ್ದು ಹಣತೆ ಖರೀದಿಯಲ್ಲಿ ತೊಡಗಿರುವುದೂ ಸಾಮಾನ್ಯವೇ ಆಗಿದೆ.

ಮೊದಲೆಲ್ಲಾ ದೀಪಾವಳಿ ಅಂದರೆ ಮಣ್ಣಿನ ಹಣತೆಗಳ ಪರಿಚಯವಷ್ಟೇ ಇತ್ತು. ಆದರೆ ಕ್ರಮೇಣ ಕಾಲಕ್ಕೆ ತಕ್ಕಂತೆ ಅವುಗಳಲ್ಲೂ ಸಾಕಷ್ಟು ಬದಲಾವಣೆ ಕಂಡಿರುವುದರಿಂದ ದೀಪಗಳೂ ವಿವಿಧ ಅವತಾರಗಳನ್ನು ಎತ್ತಿವೆ. ಮಣ್ಣಿನ ಹಣತೆಯ ಜೊತೆಜೊತೆಗೆ ಇತ್ತೀಚೆಗೆ ಮಾರುಕಟ್ಟೆಯಲ್ಲಿ ಪಿಂಗಾಣಿ, ಗಾಜು, ಹಂಚು ಹೀಗೆ ವೆರೈಟಿ ಹಣತೆಗಳು ಕಣ್ಮನ ಸೆಳೆಯುತ್ತಿವೆ.

RELATED ARTICLES  ಕಲ್ಲು ತುಂಬಿದ್ದ ಗುಡ್ಡವೀಗ ಅಧ್ಯಯನ ಸ್ಥಳ: ಕುಮಟಾದಲ್ಲಿರುವ ಈ ಸ್ಥಳ ಯಾವುದು ಗೊತ್ತೇ?

ಮಣ್ಣಿನ ಹಣತೆಗಳಿಗಿಂತ ಪಿಂಗಾಣಿಯ ಹಣತೆಗಳಿಗೆ ಇತ್ತೀಚೆಗೆ ಬೇಡಿಕೆ ಹೆಚ್ಚಾಗಿದೆ. ಮಣ್ಣಿನ ಹಣತೆಗಳನ್ನು ಬಳಸಿದ ನಂತರ ಮುಂದಿನ ದೀಪಾವಳಿವರಗೆ ಜೋಪಾನ ಮಾಡುವುದು ಕಷ್ಟ. ಅವುಗಳನ್ನು ಸ್ವಚ್ಛ ಮಾಡುವುದನ್ನು ಅನೇಕರು ಕಷ್ಟ ಎನ್ನುತ್ತಾರೆ. ಆದರೆ ಪಿಂಗಾಣಿಯ ಹಣತೆಗಳು ಹಾಗಲ್ಲ. ಬಳಸಿದ ನಂತರ ಪಾತ್ರೆ ತೊಳೆಯುವ ರೀತಿಯಲ್ಲೇ ಇವುಗಳನ್ನೂ ತೊಳೆದು ಸ್ವಚ್ಛ ಮಾಡಿಬಿಡಬಹುದು. ನಂತರ ಮುಂದಿನ ಬಾರಿ ಮತ್ತೆ ಹೊಸತರಂತೆ ಬಳಸಬಹುದು.

ಮಣ್ಣಿನ ಹಣತೆಗಳಲ್ಲೇ ನಾನಾ ವೆರೈಟಿಗಳು ಈಗ ಲಭ್ಯವಿದೆ. ಕೇವಲ ಒಂದು ಕಡೆ ಮಾತ್ರವಲ್ಲದೇ, ವಿವಿಧ ಆಕಾರ, ಆಕೃತಿಗಳಲ್ಲಿ ಇವು ಇರೋದ್ರಿಂದ ಒಂದಷ್ಟು ರಿಚ್ ಲುಕ್ ಕೊಡುತ್ತದೆ ಎನ್ನುವ ಕಾರಣದಿಂದ ಅನೇಕರು ಇವುಗಳನ್ನೇ ಇಷ್ಟಪಡ್ತಾರೆ. ಇದರ ಜೊತೆಗೆ ಈ ಹಣತೆಗಳ ಮೇಲೆ ಬಣ್ಣಗಳಿಂದ ಚಿತ್ರ ಚಿತ್ತಾರಗಳನ್ನೂ ಬಿಡಿಸಿರಲಾಗುತ್ತದೆ. ಹಾಗಾಗಿ ಇವುಗಳಿಗೊಂದು ವಿಭಿನ್ನ ರೂಪವೇ ಸಿಕ್ಕಂತಾಗಿರುತ್ತದೆ.

RELATED ARTICLES  ವಿದ್ಯುತ್ ತಂತಿ ಸ್ಪರ್ಷಿಸಿ ವ್ಯಕ್ತಿ ಸಾವು ಕೆಲಕಾಲ‌ ಉದ್ವಿಗ್ನ ವಾತಾವರಣ

ಅನೇಕ ಆಸಕ್ತರು ಸಾದಾ ಹಣತೆಗಳು ಕೊಂಡು ಅವುಗಳಿಗೆ ತಾವೇ ಇಷ್ಟವಾದ ಬಣ್ಣ ಮತ್ತು ಚಿತ್ರ ಬಿಡಿಸಿ ದೀಪಾವಳಿಗೆ ಬಂಧು ಮಿತ್ರರಿಗೆ ಉಡುಗೊರೆಯಾಗಿ ನೀಡುತ್ತಾರೆ. ಒಟ್ಟಿನಲ್ಲಿ ಮನೆಮನಗಳನ್ನು ಬೆಳಗುವ ದೀಪಗಳ ಸಾಲು ಈಗಾಗಲೇ ಮಾರುಕಟ್ಟೆಯ ರಂಗು ಹೆಚ್ಚಿಸಿದೆ. ದೀಪ-ಎಣ್ಣೆ-ಬತ್ತಿಗಳ ರಗಳೆ ಬೇಡ ಎನ್ನುವವರು ಬಳಸೋಕೆ ಸುಲಭವಾಗುವಂತೆ ಮೇಣದ ರೆಡಿಮೇಡ್ ದೀಪಗಳು ಕೂಡಾ ಇವೆ. ಎಲ್ಲರ ಅನುಕೂಲಕ್ಕೆ ಅಭಿರುಚಿಗೆ ಸೂಕ್ತವಾಗುವ ಲೆಕ್ಕವಿಲ್ಲದಷ್ಟು ಬಗೆಯ ಹಣತೆಗಳು ದೊರೆಯುತ್ತಿವೆ.