Home KUMTA ನಮಗಾಗಿ ಹಾಗೂ ಸಮಾಜಕ್ಕಾಗಿ ಯೋಗ ಬೇಕು : ತಿಮ್ಮಪ್ಪ ನಾಯ್ಕ

ನಮಗಾಗಿ ಹಾಗೂ ಸಮಾಜಕ್ಕಾಗಿ ಯೋಗ ಬೇಕು : ತಿಮ್ಮಪ್ಪ ನಾಯ್ಕ

Screenshot

ಕುಮಟಾ : ಯೋಗವು ಮಾನವನ ದೇಹವನ್ನು ಸದೃಢವಾಗಿಸುತ್ತದೆ. ಮಾನಸಿಕ ಆರೋಗ್ಯವನ್ನು ಹೆಚ್ಚಿಸುತ್ತದೆ. ಇದರಿಂದಾಗಿ ಉತ್ತಮ ಜೀವನ ಸಾಗಿಸಲು ಸಾಧ್ಯವಾಗುತ್ತದೆ. ಯೋಗದ ಕುರಿತಾಗಿ ಎಲ್ಲರಲ್ಲಿಯೂ ಅರಿವು ಮೂಡಬೇಕಾಗಿದ್ದು, ನಮಗಾಗಿ ಹಾಗೂ ಸಮಾಜಕ್ಕಾಗಿ ಯೋಗ ಬೇಕು. ಹೀಗಾಗಿ ಈ ದಿಸೆಯಲ್ಲಿ ಹೊಸ ಪ್ರಯತ್ನಕ್ಕೆ ವಿದ್ಯಾರ್ಥಿಗಳು ಮುಂದಾಗಿರುವುದು ಸಂತೋಷದ ವಿಚಾರ ಎಂದು ಕುಮಟಾ ವೃತ್ತ ನಿರೀಕ್ಷಕ ತಿಮ್ಮಪ್ಪ ನಾಯ್ಕ ಅಭಿಪ್ರಾಯಪಟ್ಟರು. ಅವರು ಪಟ್ಟಣದ ಗಿಬ್ ವೃತ್ತದ ಸನಿಹದಲ್ಲಿ ಕೊಂಕಣ ಎಜುಕೇಶನ್ ಟ್ರಸ್ಟ್ ನ ಅಂಗ ಸಂಸ್ಥೆಗಳ ವಿದ್ಯಾರ್ಥಿಗಳು ಹಮ್ಮಿಕೊಂಡ ವಿಶ್ವ ಯೋಗ ದಿನದ ಕುರಿತಾದ ಜಾಗೃತಿ ಜಾಥಾವನ್ನು ಉದ್ಘಾಟಿಸಿ ಮಾತನಾಡಿದರು.

ಇಂದಿನ ಒತ್ತಡದ ಬದುಕಿನಲ್ಲಿ ನಿತ್ಯ ಯೋಗ ಮಾಡುವುದು ಅತ್ಯಗತ್ಯವಾಗಿದೆ. ಯೋಗದಿಂದ ಮಧುಮೇಹ, ರಕ್ತದೊತ್ತಡ ಮುಂತಾದ ನೂರಾರು ರೋಗಗಳನ್ನು ದೂರವಿಡಬಹುದು. ಯೋಗದಿಂದ ಮನಸ್ಸಿಗೆ ಸೂಕ್ತ ಪ್ರೇರಣೆ ದೊರೆತು ಎಲ್ಲರೊಂದಿಗೆ ಉತ್ತಮ ಸಂಬಂಧ ಹೊಂದಲು, ಹಿಡಿದ ಕೆಲಸಗಳನ್ನು ಹೆಚ್ಚು ದಕ್ಷತೆಯಿಂದ ಕಡಿಮೆ ಅವಧಿಯಲ್ಲಿ ಯಶಸ್ವಿಯಾಗಿ ಮುಗಿಸಲು ಸಾಧ್ಯವಾಗುತ್ತದೆ ಎಂದರು. ಮೋದಿಯವರು ಪ್ರಧಾನಿಯಾದ ನಂತರದಲ್ಲಿ ಯೋಗವನ್ನು ಅಂತರರಾಷ್ಟ್ರೀಯ ಮಟ್ಟದಲ್ಲಿ ಗುರುತಿಸುವ ಪ್ರಯತ್ನ ಮಾಡಿದರು ಹಾಗಾಗಿಯೇ ವಿಶ್ವ ಯೋಗ ದಿನದ ಆಚರಣೆ ಪ್ರಾರಂಭಗೊಂಡಿದ್ದು ನಮ್ಮೆಲ್ಲರಿಗೂ ಸಂತಸದ ವಿಚಾರ ಎಂದರು. 

ಈ ಸಂದರ್ಭದಲ್ಲಿ ಸಿವಿಎಸ್‌ಕೆ ಪ್ರೌಢಶಾಲೆ ಹಾಗೂ ಸರಸ್ವತಿ ವಿದ್ಯಾ ಕೇಂದ್ರದ 700ಕ್ಕೂ ಅಧಿಕ ವಿದ್ಯಾರ್ಥಿಗಳು ಪಟ್ಟಣದ ಗಿಬ್ ವೃತ್ತದಿಂದ, ಸುಭಾಷ್ ರಸ್ತೆ, ಕುಮಟಾ ಪಟ್ಟಣ ಮೂಲಕ ಹಳೆ ಬಸ್ ನಿಲ್ದಾಣದವರೆಗೆ ಸಾಗಿ ಯೋಗ ಸಂದೇಶ ಸಾರಿದರು. ಈ ಸಂದರ್ಭದಲ್ಲಿ ವಿದ್ಯಾರ್ಥಿಗಳು ಯೋಗಾಸನದ ಹಲವು ಬಂಗಿಗಳನ್ನು ಪ್ರದರ್ಶಿಸಿದರು. ಯೋಗ ಗುರು ಸೇರಿದಂತೆ ಇನ್ನಿತರರ ಛದ್ಮವೇಶಗಳು ಗಮನಸೆಳೆದವು.

ಕೊಂಕಣ ಎಜುಕೇಶನ್ ಟ್ರಸ್ಟ್ ನ ಸಹ ಕಾರ್ಯದರ್ಶಿ ಶೇಷಗಿರಿ ಶಾನಭಾಗ, ವಿಶ್ವಸ್ಥರಾದ ರಾಮಕೃಷ್ಣ ಗೋಳಿ, ವಿಧಾತ್ರಿ ಅಕಾಡೆಮಿಯ ಗುರುರಾಜ ಶೆಟ್ಟಿ ಜಾಥಾ ಸಂದರ್ಭದಲ್ಲಿ ಹಾಜರಿದ್ದು, ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು. ಮುಖ್ಯ ಶಿಕ್ಷಕಿ ಸುಮಾ ಪ್ರಭು, ಶೈಕ್ಷಣಿಕ ಸಲಹೆಗಾರ ಆರ್‌.ಎಚ್ ದೇಶಭಂಡಾರಿ ಇತರರು ಇದ್ದರು. ದೈಹಿಕ ಶಿಕ್ಷಕರು, ಶಿಕ್ಷಕವೃಂದದವರು ಜಾಥಾಕ್ಕೆ ಸಹಕಾರ ನೀಡಿದರು. ಆರಕ್ಷಕರು ಸೂಕ್ತ ಭದ್ರತೆ ಕಲ್ಪಿಸಿದ್ದರು. ಜಿ.ಎಸ್.ಬಿ ಯುವ ವಾಹಿನಿಯವರು ಲಘು ಅಲ್ಪೋಪಹಾರ ವ್ಯವಸ್ಥೆ ಮಾಡಿದ್ದರು.