ಆತ್ಮೀಯರೇ…
ದಿನಾಂಕ 29 ಜೂನ್ 2024 ರಂದು ಶನಿವಾರ ಶ್ರೀಸಂಸ್ಥಾನ ಶ್ರೀ ರಾಮಚಂದ್ರಾಪುರ ಮಠದ ಗುರುಗಳಾದ ಶ್ರೀ ಶ್ರೀ ಶ್ರೀ ರಾಘವೇಶ್ವರ ಭಾರತೀ ಸ್ವಾಮಿಜಿಯವರು ರಚಿಸಿರುವ ಭಾವರಾಮಾಯಣದ ಮೊದಲ ಭಾಗ
ರಾಮಾವತರಣ ಕೃತಿಯ ಲೋಕಾರ್ಪಣೆಯ ಸಂದರ್ಭದಲ್ಲಿ ಕುಮಟಾ ತಾಲೂಕಿನ ಮೂರೂರಿನಲ್ಲಿ ಜರುಗಿದ ಕಾರ್ಯಕ್ರಮದಲ್ಲಿ ಪುಸ್ತಕ ಪರಿಚಯ ಮಾಡುತ್ತ ಆಡಿದ ಮಾತುಗಳ ಸಾರ…..
ಅತ್ಯಂತ ವಿನೀತನಾಗಿ ಓದುಗರ ಮುಂದಿರಿಸಿರುವೆ…
ಹಂಸಕ್ಷೀರ ನ್ಯಾಯದಂತೆ ಸ್ವೀಕರಿಸುದು…..
(ಕಾಗಾಲ ಚಿದಾನಂದ ಭಂಡಾರಿ.ಕನ್ನಡ ಶಿಕ್ಷಕ ,ಕೊಂಕಣ ಎಜ್ಯುಕೇಶನ್ ಟ್ರಸ್ಟ್ .ಕುಮಟಾ.)
ಶ್ರೀ ಸಂಸ್ಥಾನ ವಿರಚಿತ ಭಾವರಾಮಾಯಣದ ” ರಾಮಾವತರಣ” ಕೃತಿಯನ್ನು ಸಭೆಗೆ ಪರಿಚಯಿಸುವ ಸೌಭಾಗ್ಯವನ್ನು ರವೀಂದ್ರ ಭಟ್ಟ ಸೂರಿಯವರು ಒದಿಸಿದಾಗ ಮರು ಮಾತಾಡದೇ ಒಪ್ಪಿಕೊಂಡಿದ್ದೇನೆ.
ಈ ಸಭೆಯಲ್ಲಿ ಪ್ರಾಜ್ಞರು ಸೂರಿಗಳು ಇರುವಾಗ ನನ್ನಂಥ ಸಾಮಾನ್ಯರಲ್ಲಿ ಅತೀ ಸಾಮಾನ್ಯನಿಗೆ ಈ ಅವಕಾಶ ದೊರೆತಿರುವುದು ರಾಮಕಾರ್ಯದಲ್ಲಿ ಅಳಿಲಿನಿಂದ ಹಿಡಿದು ಜಟಾಯುವಿನಂಥ ಪಕ್ಷಿಗಳಿಗೂ ಅವಕಾಶ ದೊರೆತಾಗ ನನ್ನದೊಂದು ಅಳಿಲು ಸೇವೆಯೆಂದು ಭಾವಿಸಿದ್ದೇನೆ.ಹೇಳಿಕೇಳಿ ಇದು ಭಾವ ರಾಮಾಯಣ ರಾಮಾವತಾರದ ಮೊದಲು ಧಶರಥನಿಗೆ ಪಾಯಸ ದೊರೆತ ಸಂದರ್ಭ ನನ್ನ ಬದುಕಿನಲ್ಲೂ ಇಂಥ ಪಾಯಸದ ಪವಾಡ ಸಂಸ್ಥಾನದ ಅನುಗ್ರಹ ಆಗಿರುವುದು ರವೀಂದ್ರ ಭಟ್ಟ ಸೂರಿ ಅವರಿಗೂ ಇದೇ ಅನುಭವ ಆಗಿರುವುದೂ ಇದೆ.
ತಿಣುಕಿದನು ಫಣಿರಾಯ ರಾಮಾಯಣದ ಕವಿಗಳ ಭಾರದಲಿ ಎಂದು ನಾರಣಪ್ಪನಂಥ ಕವಿಯೇ ಹೇಳಿದರೆ. ನಾಡೊಳೆನಿತ್ತುರಾಮಾಯಣಂಗಳೊಳವು ಎಂದು ಮುದ್ದಣ್ಣ ಎಂದೇ ಹೆಸರಾದ ನಂದಳಿಕೆ ನಾರಾಯಣಪ್ಪ ಹೇಳಿರಲು
ರಾವಣನೆಂದರೆ ದುಷ್ಟನಲ್ಲ ” ಪರಾಂಗನಾವಿರತಿ ವೃತಧಾರಿ ಆತನು ಯಾವ ಸ್ತ್ರೀಯರನ್ನೂ ಬಲವಂತ ಮಾಡಿದವನಲ್ಲ ಎಂದು ನಾಗಚಂದ್ರ ಹೇಳಿದ್ದಾರೆ. ಶೂರ್ಪನಖಿಯ ಉಗುರುಗಳು ಚಂದ್ರನ ಹಾಗೆ ಸುಂದರ ಎಂಬ ವರ್ಣನೆಯನ್ನು ಕೇಳಿ ಯಕ್ಷಗಾನದ ಕಥೆಗಳನ್ನು ಕೇಳಿ ಇದುವೇ ರಾಮಾಯಣ ಎಂದು ತಿಳಿದು ನಗರ ನಕ್ಷಲೀಯರು ರಚಿಸಿದ ರಾಮಾಯಣವೇ ನಿಜವೆಂದು ಭಾವಿಸಿ ಎಳವೆಯಲ್ಲಿಯೇ ಇಂಥವುಗಳನ್ನು ಶಾಲಾ ಪಠ್ಯದ ಮೂಲಕ ಅರಿತು ಇದೇ ಸತ್ಯ ಎಂದು ತಿಳಿದಿರುವ ಸಂದರ್ಭದಲ್ಲಿ ಇಂಥದೊಂದು ಕೃತಿ ಕನ್ನಡ ಸಾರಸ್ವತ ಲೋಕಕ್ಕೆ ಅನುಪಮ ಕೊಡುಗೆ ಆಗಿದೆ.
ಸಮಾಜದಲ್ಲಿ ಸಜ್ಜನರೆಂಬ ಕ್ರೌಂಚ ಪಕ್ಷಿಗಳಮೇಲೆ ದುರ್ಜನರೆಂಬ ವ್ಯಾಧರ ಆಕ್ರಮಣ ಆಗಬಹುದಾದ ಅಪಾಯದ ಸಂಧರ್ಭದಲ್ಲಿ ಈ ಮಹಾನುಭಾವಿಯ ಚಿತ್ತಭಿತ್ತಿಯಲ್ಲಿ ಮೂಡಿಬಂದ ಈ ಕೃತಿ ರನ್ನ ಪುತ್ಥಳಿಗೆ ನವರತ್ನ ಪೋಣಿಸಿದಂತಿರುವ ಈ ಅವತರಣಿಕೆಗಳಾದ ಭಾವರಾಮಾಯಣದ ಮೊದಲ ಮುತ್ತು ರಾಮಾವತರಣದ ಲೋಕಾರ್ಪಣೆಯ ಈ ಸಂದರ್ಭದಲ್ಲಿ ನಾವೆಲ್ಲ ಸಾಕ್ಷಿಯಾಗಿರುವುದು ನಮ್ಮ ಹಿರಿಯರು ಈ ಜನ್ಮದಲ್ಲಿ ಹಾಗೂ ನಾವುಗಳು ಈ ಹಿಂದಿನ ಜನ್ಮದಲ್ಲಿ ಗೈದ ಪುಣ್ಯವೆಂದು ಭಾವಿಸುತ್ತೇನೆ. ಹೆಚ್ಚಿನ ಕವಿಗಳಲ್ಲಿ ತಮ್ಮ ಕೃತಿ ತಮ್ಮದೇ ಎಂಬ ಅಹಂ ಇರುತ್ತದೆ.ಅದನ್ನು ಅವರು ಪ್ರತ್ಯಕ್ಷವೋ ಪರೋಕ್ಷವೋ ಪ್ರಕಟಪಡಿಸುತ್ತಾರೆ ಆದರೆ
ಇಲ್ಲಿ ಹಾಗಲ್ಲ.
ನೀನೊರೆದೆ ನಾ ಬರೆದೆ
ನನ್ನದೇನಿದೆ ಇಲ್ಲಿ
ಎಂಬ ವಿನೀತ ಭಾವದ ಈ ಕೃತಿಯ ಬಗ್ಗೆ ಮಾತನಾಡುವಾಗ ಸಂಸ್ಥಾನದ ನಿಷ್ಠನಾಗಿ ನಾನೇನು ಹೇಳಲಿ? ಅವರಲ್ಲೇ ಹೇಳುವುದಾದರೆ “ನುಡಿಸಲು ನೀವು ನುಡಿದೆನು ನಾನು
ನಾನೊಂದು ಬೊಂಬೆಯು ನೀವು ಸೂತ್ರಧಾರಿ”
ಎಂಭ ಭಾವವನ್ನು ಹೊಂದಿ ಈ ಕೃತಿಯ ಪರಿಚಯವನ್ನು ಮಾಡಬಯಸುವೆ.
ಸಾಮಾನ್ಯವಾಗಿ ದಿವ್ಯ ಭೋಜನದ ಸಂದರ್ಭದಲ್ಲಿ ಪಾಕಶಾಲೆಯಲ್ಲಿ ಪಕ್ವವಾದ ಖಾದ್ಯಗಳನ್ನು ಎಡೆಯ ಮೇಲೆ ಸ್ವಲ್ಪ ಸ್ವಲ್ಪವಾಗಿ ಎಲ್ಲವನ್ನೂ ಬಡಿಸಿ ಪರಿಚಯಿಸುತ್ತಾರೆ .ನಂತರ ಬೇಕಾದವರು ಬೇಕಾದಷ್ಟು ಸಾರಿ ಪಡೆದು ಭುಂಜಿಸಬಹುದಾಗಿದೆ ಇಲ್ಲಿ ಈ ಕೃತಿಯೂ ಕೂಡ ನಾನು ಎಲ್ಲವನ್ನೂ ಸ್ವಲ್ಪ ಸ್ವಲ್ಪ ಉಲ್ಲೇಖಿಸಿ ಮುಂದೆ ಸಾಗುತ್ತೇನೆ ಬಳಿಕ ತಾವು ಅದನ್ನು ಸಮಗ್ರವಾಗಿ ಓದಿ ಅರಿಯಬಹುದಾಗಿದೆ.
ರಾಮಾಯಣದಿಂದ ಸಿಗುವುದೇನು ?
ಸುಖ! ಯಾವ ಸುಖ? ಲೌಕಿಕ ಪ್ರಪಂಚದಿಂದ ಅಂದರೆ ಭವ ದಿಂದ ಅಭವನೆಡೆಗೆ ಸಾಗುವ ಮೋಕ್ಷ ಪದವಿಯು ಸುಖ!
ರಾಮಾಯಣದ ಓದು ಯಾರಿಗೆ ?
ಅನಸೂಯಿಗಳಿಗೆ ಶುಭದ ದೃಷ್ಟಿಉಳ್ಳವರಿಗೆ ಗುಣದಲ್ಲಿ ಗುಣವನ್ನೇ ಕಾಣುವವರಿಗೆ.
ಭಾವರಾಮಾಯಣ ” ರಾಮಾವತರಣ ಈ ಕೃತಿಯು 228 ಪುಟಗಳನ್ನು ಹೊಂದಿದ್ದು
ಇನವಂಶದ ಆರಂಭದಿಂದ ರಾಮ ಜನ್ಮದ ತನಕ ಇದೆ. ವಾಲ್ಮೀಕಿರಾಮಾಯಣದ ಬಾಲಕಾಂಡವನ್ನು ಆಧರಿಸಿದ ಈ ಕೃತಿಯಲ್ಲಿ ಆರು ವಿಭಾಗವನ್ನು ಮಾಡಿ ಅವುಗಳಿಗೊಂದು ಚಂದದ ಶೀರ್ಷಿಕೆ ನೀಡಿ ಪ್ರತೀ ಶೀಷಿಕೆಯಲ್ಲಿ ಅನೇಕ ಉಪ ಶೀರ್ಷಿಕೆಗಳು ಅವುಗಳು ಹೇಗಿವೆಯೆಂದರೆ ಎಲ್ಲವನ್ನೂ ಸೇರಿಸಿ ಬರೆದರೆ ಒಂದು ಸುಂದರ ಕಾವ್ಯವಾಗುತ್ತದೆ.
ಧಶರಥರಾಜ್ಯ“
(ಪುಟಸಂಖ್ಯೆ 9 ರಿಂದ ಆರಭವಾಗಿ 64 ರವರೆಗೆ ವಾಲ್ಮೀಕಿ ರಾಮಾಯಣದ ಬಾಲಕಾಂಡ 5, 6, 7 ನೇ ಸರ್ಗ)
1.ಬೆಳಕೇ ಕುಲವಾಗಿ ಇಳೆಗೆ ಇಳಿದಂತೆ . ದಶರಥ ರಾಜ್ಯಕ್ಕೆ ದೇವರ ಪ್ರಶಸ್ತಿ.
ಒಟ್ಟೂ 101 ಉಪಶೀರ್ಷಿಕೆಗಳು !
ಇನ ಕುಲದ ಆರಂಭ,ಸೂರ್ಯವಂಶದ ಶ್ರೇಷ್ಠತೆ ನದ ನದಿಗಳ ವರ್ಣನೆ
” ಈ ಪರಿಯ ಪುರಿಯ ಎಲ್ಲಿ ನೋಡುವಿರಿ”
ಎಂಬ ಅಯೋಧ್ಯೆಯ ವಿಭಿನ್ನ ವಿನ್ಯಾಸದ ರಚನೆಯ ವರ್ಣನೆ ಮಣ್ಣಿನ ಗುಣಧರ್ಮ ಜನಜಿವನ, ಪರಿಚಯ..
ಅಭೇಧ್ಯ ಅಯೋಧ್ಯೆ ಇಲ್ಲಿ ಹಲಸಿನ ಹಣ್ಣಿನ ಹೋಲಿಕೆಯ ವರ್ಣನೆಯು ಬಹಳ ಸೊಗಸಾಗಿದೆ. ಯಾವರೀತಿ ಹಲಸಿನ ಹಣ್ಣಿನ ತೊಳೆ ಬಂಗಾರದ ಬಣ್ಣ ಹೊಂದಿದ್ದು ಸುಗಂಧ ಪರಿಮಳ ಇರುವುದರಿಂದ ಅದರ ಹೊರಗಿನ ಕವಾಟ ಭದ್ರ ಮತ್ತು ಒಳಗೆಲ್ಲ ಮೇಣ.
ರುಚಿಯಾದ ತಿರುಳಿಗೆ ಭದ್ರವಾದ ಹೊದಿಕೆ ಬೇಕು.ಸಮೃದ್ಧಿಯ ಜೊತೆಗೆ ಸುರಕ್ಷೆಯೂ ಇರಬೇಕು.ಅಯೋಧ್ಯೆ ಅಕ್ಷರ ನಗರಿ ,ಆ ಕಾಮವಿದೆ ಈ ಕಾಮವಿಲ್ಲ
ರಾಮನಿದ್ದೂ ಕಾಮನಿಲ್ಲದಿದ್ದರೆ ಅದು ಅಯೋಧ್ಯೆ.
ಕಾಮವಿದ್ದು ರಾಮನಿಲ್ಲದಿದ್ದರೆ ಅದುವೇ ಅಲ್ಲವೆ ಲಂಕೆ?
ಎಲ್ಲ ಇರುವ ಅಯೋಧ್ಯೆಯಲ್ಲಿ ಇಲ್ಲಗಳೂ ಇಲ್ಲದಿಲ್ಲ
ದನವಿಲ್ಲದ ಸದನವಿಲ್ಲ
ಕಂಕಣ ಇಲ್ಲದ ಕರವಿಲ್ಲ, ಮುಂತಾದ ವಾಕ್ಯಗಳು ಮುದವೀಯುವ ಜೊತೆ ಅಯೋಧ್ಯೆಯ ಜನಜೀವನದ ವಿಶಾಲವಾದ ಸಂಸ್ಕೃತಿಯ ಪರಿಚಯ ಮಾಡಿಕೊಡುತ್ತದೆ.
ರಾಜಾ ಧಶರಥನ ವರ್ಣನೆಯು ಪುಟಸಂಖ್ಯೆ 37 ರಿಂದ 48 ರ ವರೆಗಿದೆ.
ಪುರಕ್ಕೂ ಪ್ರಿಯ ಹಳ್ಳಿಗೂ ಹತ್ತಿರ ಎಂಬ ಉಪಶೀರ್ಷಿಕೆಯು ದಶರಥ ಎಷ್ಟು ಜನಾನುರಾಗಿ ಅರಸ ಎಂಬುದರ ಅರಿವಾಗುತ್ತದೆ.ಅಮಾತ್ಯರ ಕುರಿತಾದ ಮಾಹಿತಿ ಅವರ ಗುಣವರ್ಣನೆ 49 ರಿಂದ 60
ಮಂತ್ರಿಗಳವರು ಮಹಾ ವೃತಿಗಳು. ಆಚಾರ ಬಿಡದವರು ಆಕಾರ ಕೆಡದವರು .ಅನ್ಯಾಯವಿಲ್ಲದ ನ್ಯಾಯ ವ್ಯವಸ್ಥೆ.
***”
- ಯಾಗದ ಪ್ರೇರಣ
.ಈ ಭಾಗದಲ್ಲಿ ಪುಟ ಸಂಖ್ಯೆ 65 ರಿಂದ 88 ರವರೆಗೆ 23 ಉಪಶೀರ್ಷಿಕೆಗಳಿವೆ ( ವಾಲ್ಮೀಕಿ ರಾಮಾಯಣದ 8.9 ನೇ ಸರ್ಗ)
ಏನಿದ್ದರೇನು ಭವಿಷ್ಯವೇ ಇಲ್ಲದಮೇಲೆ
ಯಿಂದ ಮೊದಲ್ಗೊಂಡು ಸಂತರು ನಾಡಿಗೆ ಮರಳಿದರು ಉಪಶೀಷಿಕೆಯ ತನಕ
ಧಶರಥನಿಗೆ ಪುತ್ರರಿಲ್ಲದ ವೇದನೆ,ಅಶ್ವಮೇಧಯಾಗ ಕೈಗೊಳ್ಳಲು ಅಭಿಪ್ರೇರಣೆ, ಮಂತ್ರಿ ಸುಮಂತ್ರರ ಸಲಹೆ,ರೋಮೊಪಾದನ ರಾಜ್ಯದಲ್ಲಿ ಬರಗಾಲ ಬಂದೊದಗಿರಲು
ವಿಭಾಂಡಕ ಮುನಿ ಯು ಶಾಪಗ್ರಸ್ಥ ಚಿತ್ರಲೇಖೆಯು ಹರಿಣವಾಗಿ ಧರೆಗಿಳಿದು ಜಲದೊಳಗೆ ತೇಲುವ ವಿಭಾಂಢಕರ ರೇತಸ್ಸನ್ನು ಪರಿಗ್ರಹಿಸಿ ಪಡೆದ ಗರ್ಭದಲ್ಲಿ ಋಷ್ಯಶೃಂಗರ ಜನನ ” ಇಲ್ಲಿ ಜಗದ ಬೆಳಕು ಜಲದೊಳಗೆ” ಉಪಶೀರ್ಷಿಕೆ ಬಹಳ ಸೊಗಸೆನಿಸಿದೆ
(ಮುಂದುವರೆಯುವುದು)