ಕುಮಟಾ : ಒಂಬತ್ತು ದಿನ ಶ್ರೀರಾಮನ ಕುರಿತು ತಾಳಮದ್ದಲೆ ನಡೆಯುತ್ತದೆ ಎಂದರೆ ಇದೊಂದು  ಯಜ್ಞ ಎಂದು ಹಿರಿಯ ಯಕ್ಷಗಾನ ಕಲಾವಿದ ಕೃಷ್ಣ ಯಾಜಿ‌ ಬಳಕೂರು ಬಣ್ಣಿಸಿದರು. ಶನಿವಾರ ಅಗ್ರಹಾರದ ಗಣಪತಿ ದೇವಸ್ಥಾನದಲ್ಲಿ ಇಲ್ಲಿನ ನಾಟ್ಯಶ್ರೀ ಯಕ್ಷಕಲಾ ಪ್ರತಿಷ್ಠಾನದ ಬೆಳ್ಳಿ ಹಬ್ಬದ ಸಂಭ್ರಮದಲ್ಲಿ ಒಂಬತ್ತು‌ ದಿನ ಶ್ರೀರಾಮಾಯಣ  ಕುರಿತಾದ ತಾಳಮದ್ದಳೆ ಪ್ರಸಂಗ ಸರಣಿ ಭಾವ ಭಾಷಾ ವಿಲಾಸಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ತಾಳಮದ್ದಲೆಯಲ್ಲಿ ಆಳವಾದ ಅರ್ಥಗಾರಿಕೆ ಇರುತ್ತದೆ. ತಾಳಮದ್ದಲೆ ಅರ್ಥದಾರಿ ಯಕ್ಷಗಾನ ವೇಷಧಾರಿಯಾದರೆ  ಹೆಚ್ಚು ಪ್ರಭಾವಿ ಆಗುತ್ತಾರೆ. ಈ ಸರಣಿ ಈ ವರ್ಷ ಒಂಬತ್ತು ದಿನ ಇರುವುದು, ಮುಂದಿನ ಬಾರಿ ಒಂದು‌ ಪಕ್ಷವಾಗಲಿ ಎಂದು ಹಾರೈಸಿದರು.

ಸ್ಪಂದನೀಯ ಗುಣ ಇರುವ ಮೋಹನ ಹೆಗಡೆ‌ ಅವರು ಕರೋನಾ ಕಾಲಘಟ್ಟದಲ್ಲಿ ಕಷ್ಟದಲ್ಲಿದ್ದ ನೂರಾರು ಕಲಾವಿದರಿಗೆ ನೆರವಾಗಿದ್ದಾರೆ. ಅವರು ರಾಮನಾಗಿ ಒಂಬತ್ತು ದಿನ ಕಾಣಿಸಲಿದ್ದಾರೆ. ಶ್ರೀರಾಮನ ಚರಿತೆ ಕೇಳುವದೇ ಒಂದು ಪುಣ್ಯದ ಕಾರ್ಯ ಎಂದರು.

ಇಡಗುಂಜಿ ದೇವಸ್ಥಾನದ ಧರ್ಮದರ್ಶಿಗಳಾದ ಡಾ. ಜಿ.ಜಿ.ಸಭಾಹಿತರು, ಬಹಳ ಯಕ್ಷಗಾನ ಕಲಾವಿದರ ಆಶ್ರಯ ತಾಣವಾದ ಅಗ್ರಹಾರದಲ್ಲಿ ತಾಳಮದ್ದಲೆ ಸರಣಿ ಆರಂಭವಾಗುತ್ತಿರುವದು ಸಂತಸವಾಗಿದೆ‌ ಎಂದರು. ಪ್ರತಿಷ್ಠಾನದ ಗೌರವ ಅಧ್ಯಕ್ಷ ಎಸ್.ಶಂಭು‌ ಭಟ್ಟ ಮಾತನಾಡಿ, ಇಂಥ ತಾಳಮದ್ದಲೆ ಸರಣಿಗೆ ಜನ ಬಂದು ಕೇಳಿ ಪುನೀತರಾಗಲಿ ಎಂದರು.

ಪ್ರತಿಷ್ಠಾನದ ಅಧ್ಯಕ್ಷ ಎಸ್.ಜಿ.ಭಟ್ಟ ಕಬ್ಬಿನಗದ್ದೆ‌ ಮಾತನಾಡಿ, ನಾಟ್ಯಶ್ರೀ‌ ಸಂಸ್ಥೆಯು ಪದ್ಮಶ್ರೀ ‌ಪುರಸ್ಕೃತರಾಗಿದ್ದ ಚಿಟ್ಟಾಣಿ ರಾಮಚಂದ್ರ ಹೆಗಡೆ ಅವರ ಷಷ್ಠ್ಯಬ್ಧಿ ಸಮಾರಂಭದಲ್ಲಿ ಆರಂಭವಾಗಿದೆ. ಇದು ಬೆಳ್ಳಿ ಹಬ್ಬದ ಸಂಭ್ರಮದಲ್ಲಿದೆ. ಇಂದು‌ ರಾಮಚಂದ್ರ ಪ್ರಭುವಿನ ಕಥಾನಕದ ನವ ತಾಳಮದ್ದಲೆ ಹಮ್ಮಿಕೊಂಡಿದೆ ಎಂದರು.

RELATED ARTICLES  ರೋಟರಿ ಸದ್ಭಾವನಾ ಪ್ರಶಸ್ತಿ ಪಡೆದ ವಸಂತ್ ರಾವ್ ಮತ್ತು  ಡಾ. ಸಂಜಯ್

ಈ ವೇಳೆ ನಾಟ್ಯ ವಿನಾಯಕ ದೇವಸ್ಥಾನದ ಪ್ರಧಾನ ವಿಶ್ವಸ್ಥ ವಿನಾಯಕ ಹೆಗಡೆ ಕಲಗದ್ದೆ, ಯಕ್ಷಗಾನ ಅಕಾಡೆಮಿ ಅಧ್ಯಕ್ಷರಾಗಿದ್ದ ಜಿ.ಎಲ್.ಹೆಗಡೆ ಕುಮಟಾ, ಮಾತೋಶ್ರೀ ಪಾರ್ವತಿ ಭಾಸ್ಕರ ಹೆಗಡೆ ಹೆರವಟ್ಟ, ಅಶೋಕೆ ಮುಖ್ಯ ಸಮಿತಿಯ ಎಂ.ಜಿ.ಭಟ್ಟ ಸುವರ್ಣಗದ್ದೆ, ಹವ್ಯಕ ಮಹಾ ಮಂಡಳಿ ಕಾರ್ಯದರ್ಶಿ ಉದಯ ಶಂಕರ‌ಮಿತ್ತೂರು, ಪ್ರಮುಖರಾದ ಜನಾರ್ಧನ ಹಂದೆ, ಆರ್.ಜಿ.ಹೆಗಡೆ ಹೊಸಾಕುಳಿ,  ಚಂದ್ರಶೇಖರ ಉಪಾಧ್ಯ ಇತರರು ಇದ್ದರು.

ಅಗ್ರಹಾರದಲ್ಲಿ ಮಿಥಿಲೆ!

ಚರಿತ್ರೆ ಬರೆದ ಶ್ರೀರಾಮನ ಕಥೆ ಮಿಥಿಲೆಯಿಂದ ಸುರುಳಿ ಬಿಚ್ಚಿಕೊಳ್ಳತೊಡಗಿತು.  ಶ್ರೀರಾಮ ಪಾತ್ರದಲ್ಲಿ ಪ್ರಸಿದ್ಧ ಅರ್ಥದಾರಿ, ಹವ್ಯಕ ಮಹಾ‌ ಮಂಡಲದ ಅಧ್ಯಕ್ಷ, ಸೆಲ್ಕೋ ಇಂಡಿಯಾದ ಸಿಇಓ ಮೋಹನ ಭಾಸ್ಕರ ಹೆಗಡೆ (ಕರ್ಕಿ) ಹೆರವಟ್ಟ ಅವರು ಮಿಥಿಲೆಯ ಕತೆಯಲ್ಲಿ ರಾಮನಾಗಿ ಗಮನ ಸೆಳೆದರು. 

ಹಿಮ್ಮೇಳದಲ್ಲಿ ಸರ್ವೇಶ್ವರ‌ ಮುರೂರು, ಬೋಳ್ಗೆರೆ ಗಜಾನನ ಭಂಡಾರಿ, ಅರ್ಥದಾರಿಗಳಾಗಿ‌ ಡಾ. ಜಿ‌.ಎಲ್.ಹೆಗಡೆ ಕುಮಟಾ, ಜಂಬೆ ಬಾಲಕೃಷ್ಣ ಭಟ್ಟ, ಜಿ.ವಿ.ಹೆಗಡೆ, ಕೆ.ವಿ.ಹೆಗಡೆ, ಅಂಬಾ ಪ್ರಸಾದ ಪಾತಾಳ, ವಕೀಲ ಗೋವಿಂದ ಭಟ್ಟ ಭಾಗವಹಿಸಿ ಸಿದ್ದಾಶ್ರಮದ ದೃಶ್ಯ ಕಟ್ಟಿಕೊಟ್ಟರು.

ನಾಳೆ ಕರ್ಕಿಯಲ್ಲಿ!

ಎರಡನೇ‌ ದಿನ ಜು.೭ರಂದು‌ ಕರ್ಕಿ ದೈವಜ್ಞ ಮಠದ ಶ್ರೀಗಳ ಸಾನ್ನಿಧ್ಯದಲ್ಲಿ ಸಂಜೆ ೫ಕ್ಕೆ ಅಯೋಧ್ಯಾ ಪ್ರಸಂಗ ನಡೆಯಲಿದೆ. ಹಿಮ್ಮೇಳದಲ್ಲಿ ಶಂಕರ ಬ್ರಹ್ಮೂರು, ದತ್ತಾರಾಮ ಭಟ್ಟ, ಮಯೂರ ಹರಿಕೇರಿ, ಗಜಾನನ ಸಾಂತೂರು, ಅರ್ಥಧಾರಿಗಳಾಗಿ ವಿ.ಉಮಾಕಾಂತ ಭಟ್ಟ‌ ಕೆರೇಕೈ, ವಿ.ಗಣಪತಿ ಸಂಕದಗುಂಡಿ, ಲಕ್ಷ್ಮೀಕಾಂತ‌ ಕೊಂಡದಕುಳಿ, ಮಂಗಳಾ ಟಿ.ಎಸ್. ಬೆಂಗಳೂರು, ಸುಜಾತ ದಂಟಕಲ್ ಭಾಗವಹಿಸುವರು.

RELATED ARTICLES  ಸರಸ್ವತಿ ಪದವಿಪೂರ್ವ ಕಾಲೇಜಿನಲ್ಲಿ ಕಲಾಂಜಲಿ : ಮಾನಸಿ ಸುಧೀರ್ ಮಾತಿನ ಮೋಡಿ.

ಯಕ್ಷಗಾನದ ಪ್ರಸಿದ್ಧ ಅರ್ಥಧಾರಿ, ಸೆಲ್ಕೋ ಇಂಡಿಯಾದ ಸಿಇಓ ಮೋಹನ ಭಾಸ್ಕರ ಹೆಗಡೆ ಹೆರವಟ್ಟಾ ಇವರಿಗೆ ಬೆಳ್ಳಿ ಹಬ್ಬದ ಸಂಭ್ರಮದಲ್ಲಿ‌ರುವ ಹೊನ್ನಾವರದ ನಾಟ್ಯಶ್ರೀ ಯಕ್ಷಕಲಾ ಸಂಸ್ಥೆಯು ‘ಜೀವನ ಭಾಸ್ಕರ’ ಎಂಬ ಬಿರುದು ನೀಡಿ ಅಭಿನಂದಿಸಲು ತೀರ್ಮಾನಿಸಿದೆ.

ಈ ವಿಷಯ ತಿಳಿಸಿದ ಸಂಸ್ಥೆಯ ಅಧ್ಯಕ್ಷ ಎಸ್.ಜಿ.ಭಟ್ಟ ಕಬ್ಬಿನಗದ್ದೆ, ಶ್ರೀ ರಾಮಚಂದ್ರಾಪುರ ಮಠಾಧೀಶರಾದ ಶ್ರೀಮಜ್ಜಗದ್ಗುರು ಶಂಕರಾಚಾರ್ಯ  ಶ್ರೀಶ್ರೀರಾಘವೇಶ್ವರಭಾರತೀ‌ ಮಹಾ ಸ್ವಾಮೀಜಿಗಳು ಮೋಹನ ಹೆಗಡೆ ಅವರಿಗೆ ಬಿರುದು ನೀಡಿ ಗೌರವಿಸಲಿದ್ದಾರೆ. ನಾಟ್ಯ ಶ್ರೀ ಸಂಸ್ಥೆ‌ ೯ ದಿನಗಳ‌ ಕಾಲ ಭಟ್ಕಳ, ಹೊನ್ನಾವರ, ಕುಮಟಾ ತಾಲೂಕಿ‌ನ ವಿವಿಧಡೆ ಹಮ್ಮಿಕೊಂಡ  ಭಾವಾ ಭಾಷಾ ವಿಲಾಸ ಸರಣಿ ಶ್ರೀರಾಮನ ಕುರಿತಾದ ತಾಳಮದ್ದಲೆ ಕಾರ್ಯಕ್ರಮ ಹಮ್ಮಿಕೊಂಡಿದೆ ಎಂದು ವಿವರಿಸಿದ್ದಾರೆ.

ಇದರಲ್ಲಿ ಎಲ್ಲಾ ಪ್ರಸಂಗದಲ್ಲಿಯೂ ಶ್ರೀರಾಮನ ಪಾತ್ರ ಮಾಡಲಿರುವ ಮೋಹನ ಭಾಸ್ಕರ ಹೆಗಡೆ ಅವರನ್ನು ಗೌರವಿಸುತ್ತಿರುವದು ನಮಗೂ ಸಂತಸದ ಸಂಗತಿ‌ ಎಂದೂ ಹಾಗೂ ಪ್ರತೀ ತಾಳಮದ್ದಲೆಯಲ್ಲೂ ಆಯಾ ಭಾಗದ ಸಾಧಕರನ್ನು‌‌ ಕೂಡ ಸಂಸ್ಥೆ ಅಭಿನಂದಿಸುತ್ತಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.