ಕುಮಟಾ : ಗ್ಯಾಸ್ ಟ್ಯಾಂಕರ್ ಒಂದು ಚಾಲಕನ ನಿಯಂತ್ರಣ ತಪ್ಪಿ ಸೇತುವೆಯ ಒಂಬದಿಯ ತಡೆ ಗೋಡೆಯನ್ನು ನುಚ್ಚುನೂರಾಗಿಸಿ, ಕಂದಕಕ್ಕೆ ಉರುಳಿಬಿದ್ದು ಕೆಲಕಾಲ‌ ಆತಂಕ ಸೃಷ್ಟಿಸಿದ ಘಟನೆ ಬುಧವಾರ ತಾಲೂಕಿನ ರಾಷ್ಟ್ರೀಯ ಹೆದ್ದಾರಿ (66) ರಲ್ಲಿ ಹೊನ್ಮಾವ್ ಬಳಿ ನಡೆದಿದೆ.

ಸಂಜೆ 5 ಗಂಟೆಯ ಸರಿ ಸುಮಾರಿಗೆ ಈ ಘಟನೆ ನಡೆದಿದ್ದು, ಘಟನೆಯಿಂದಾಗಿ ಸುತ್ತಲು ಜನರು ಒಮ್ಮೆ ಕಂಗಾಲಾಗುವಂತಾಯಿತು. ಗ್ಯಾಸ್ ತುಂಬಿದ ಟ್ಯಾಂಕರ್ ಇರಬಹುದು ಎಂದು ಬೆಚ್ಚಿದ ಜನರು ಆ ದಾರಿಯಲ್ಲಿ ಓಡಾಡಲು ಭಯಪಡುವಂತಾಯಿತು.

RELATED ARTICLES  ಬಾಲಮಂದಿರದ ಮಕ್ಕಳಿಂದ ಕಾಲೇಜು ಭೇಟಿ : ಚಿಣ್ಣರ ಅಂಗಳವಾದ ಸರಸ್ವತಿ ಪದವಿಪೂರ್ವ ಕಾಲೇಜು.

ಗೋವಾದಿಂದ ಮಂಗಳೂರು ಹೊರಟಿದ್ದ ರಾಜರಾಜಿ ಕಂಪನಿಯ ಎಚ್.ಪಿ ಗ್ಯಾಸ್ ಟ್ಯಾಂಕರ್ ಇದಾಗಿದ್ದು, ಚಾಲಕ ಕುಡಿದ ಮತ್ತಿನಲ್ಲಿ ವಾಹನ ಚಾಲನೆ ಮಾಡಿದ್ದಾನೆ ಎಂದು ತಿಳಿದುಬಂದಿದೆ. ಕುಡಿದ ಅಮಲಿನಲ್ಲಿ ವಾಹನ ಚಲಾಯಿಸಿದ ಪರಿಣಾಮ ಅನಿಲ ರಹಿತ ಗ್ಯಾಸ್ ಟ್ಯಾಂಕರ್ ಸೇತುವೆಯ ಕಂದಕಕ್ಕೆ ಉರುಳಿಬಿದ್ದಿದೆ. ಅದೃಷ್ಟವಶಾತ್ ಚಾಲಕ ಪ್ರಾಣಾಪಾಯದಿಂದ ಪಾರಾಗಿದ್ದಾನೆ.

ಒಮ್ಮೆಲೆ ಘಟನೆ ಕಂಡ ಸ್ಥಳೀಯರು, ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಚರಿಸುವ ನೂರಾರು ವಾಹನ ಸವಾರರು ಘಟನೆಯ ದೃಶ್ಯ ಕಂಡು ಬೆಚ್ಚಿಬಿದ್ದಿದ್ದಾರೆ. ಅನಿಲ ರಹಿತ ವಾಹನ ಆಗಿದ್ದರಿಂದ ಅನಿಲ ಸೋರಿಕೆ ಭಯ ದೂರವಾಗಿತ್ತು.

RELATED ARTICLES  ಕುಸಿದ ಧರೆ - ರಸ್ತೆ ಸಂಚಾರ ಬಂದ್

ಸ್ಥಳಕ್ಕೆ ಕುಮಟಾ ಪಿಎಸ್‍ಐ ಮಂಜುನಾಥ ಗೌಡರ್ ಹಾಗೂ ಸಿಬ್ಬಂದಿ ಭೇಟಿ ನೀಡಿ ರಾಷ್ಟ್ರೀಯ ಹೆದ್ದಾರಿ ಸುಗಮ ಸಂಚಾರಕ್ಕೆ ಅನುವುಮಾಡಿಕೊಟ್ಟರು. ಈ ಬಗ್ಗೆ ಕುಮಟಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.