ಕುಮಟಾ : ತೀವ್ರ ಮಳೆಯ ಮುನ್ಸೂಚನೆಯ ಹಿನ್ನೆಲೆಯಲ್ಲಿ ಬುಧವಾರ ಬೆಳಗ್ಗೆ 8 ಗಂಟೆಯ ಸರಿಸುಮಾರಿಗೆ ಮಾನ್ಯ ಜಿಲ್ಲಾಧಿಕಾರಿಗಳು ಉ.ಕ ಜಿಲ್ಲೆಯ ಹಲವು ತಾಲೂಕುಗಳಿಗೆ ರಜೆ ಘೋಷಣೆ ಮಾಡಿ, ಆದೇಶ ಹೊರಡಿಸಿರುತ್ತಾರೆ. ಆದರೆ ಅದಾಗಲೇ ಕುಮಟಾ ತಾಲೂಕಿನ ಹಲವು ಹಳ್ಳಿಗಳಿಂದ ಹಾಗೂ ಇತರೆಡೆಗಳಿಂದ ತಾಲೂಕಿನ ಕೊಂಕಣ ಎಜ್ಯುಕೇಶನ್ ಟ್ರಸ್ಟ್ ನ ಬಸ್ ಗಳು ವಿದ್ಯಾರ್ಥಿಗಳನ್ನು ಕರೆದುಕೊಂಡು ಶಾಲೆಗೆ ಹೊರಟಿದ್ದು, ಕೆಲ ದೂರ ಕ್ರಮಿಸಿತ್ತು. ನರ್ಸರಿಯಿಂದ ಪ್ರಾರಂಭಿಸಿ ಪುಟಾಣಿಗಳು ಶಾಲೆಗೆ ದೂರದ ವಿವಿಧ ಸ್ಥಳಗಳಿಂದ ಬರುವವರಿದ್ದಾರೆ. ಹಲವು ಮಕ್ಕಳ ತಂದೆ ತಾಯಿ ಇಬ್ಬರೂ ಉದ್ಯೋಗದಲ್ಲಿದ್ದು, ಮಕ್ಕಳನ್ನು ಶಾಲೆಯ ಬಸ್ ಹತ್ತಿಸಿ, ಬೇರೆ ಬೇರೆ ತಾಲೂಕುಗಳಿಗೆ ಉದ್ಯೋಗಕ್ಕಾಗಿ ತೆರಳುತ್ತಾರೆ. ಇಂತಹ ಸಂದರ್ಭದಲ್ಲಿ ಶಾಲೆಯ ಬಸ್ಸನ್ನು ಪುನಃ ಕಳುಹಿಸಿದರೆ, ಮಕ್ಕಳನ್ನು ಮನೆಗೆ ಕರೆದೊಯ್ಯಲೂ ಆಗದೇ, ಮನೆಯಲ್ಲಿ ನೋಡಿಕೊಳ್ಳುವವರೂ ಯಾರೂ ಇಲ್ಲದೇ ಸಮಸ್ಯೆಯಾಗುತ್ತದೆ ಎಂಬುದು ಹಲವು ಪಾಲಕರ ಅಭಿಪ್ರಾಯವಾಗಿತ್ತು. ಹೀಗಾಗಿ ಮಕ್ಕಳು ನಡುದಾರಿಯ ಪಾಲಾದಂತಾಗುತ್ತಾರೆ ಎಂಬಂತೆ ಪಾಲಕರ ಅನಿಸಿಕೆ. ಈ ಹಿಂದೆಯೂ ಇದೇ ಅಭಿಪ್ರಾಯ ವ್ಯಕ್ತಪಡಿಸಿದ್ದು ಇದೆ.
ಇದಲ್ಲದೇ, ಬೆಳ್ಳಂಬೆಳಗ್ಗೆಯೇ ಹಲವು ಪಾಲಕರು ತಮ್ಮ ಮಕ್ಕಳನ್ನು ಶಾಲಾ ಆವಾರದಲ್ಲಿ ಬಿಟ್ಟು, ಅವರವರ ಉದ್ಯೋಗಕ್ಕೆ ಬೇರೆ ಬೇರೆ ಕಡೆಗೆ ತೆರಳುತ್ತಾರೆ. ಆ ಮಕ್ಕಳಿಗೆ ರಜಾ ಮಾಹಿತಿ ತಲುಪಿಸಲು, ಹಾಗೂ ಅವರನ್ನು ಸುರಕ್ಷಿತವಾಗಿ ಅವರನ್ನು ಮನೆಗೆ ತಲುಪಿಸುವ ವ್ಯವಸ್ಥೆ ಮಾಡಬೇಕಾದ ಕರ್ತವ್ಯ ನಮ್ಮದಾಗಿದೆ. ಹೀಗಾಗಿ ಮಕ್ಕಳ ಸುರಕ್ಷತೆಗೆ ಪ್ರಥಮ ಆದ್ಯತೆ ನೀಡುವುದು ನಮ್ಮ ಕರ್ತವ್ಯವಾಗಿದ್ದು, ನಾವು ಅರ್ಧದಾರಿ ಸಾಗಿಬಂದಿದ್ದ ಮಕ್ಕಳನ್ನು ಶಾಲೆಯವರೆಗೆ ಶಾಲಾ ಬಸ್ ನಲ್ಲಿ ಕರೆತಂದು, ಹಾಗೂ ಸೂಚನೆಗೂ ಮೊದಲೇ ಶಾಲೆ ತಲುಪಿದ್ದ ಮಕ್ಕಳ ಪಾಲಕರನ್ನು ಸಂಪರ್ಕ ಮಾಡಿ ಸೂಕ್ತ ರೀತಿಯಲ್ಲಿ ಮನೆ ತಲುಪಿಸುವ ವ್ಯವಸ್ಥೆ ಮಾಡಿದ್ದೇವೆ.
ಜಿಲ್ಲಾಡಳಿತ ಹಾಗೂ ಇಲಾಖೆ ಈ ಹಿಂದೆ ಹೊರಡಿಸಿದ ಎಲ್ಲಾ ಸುತ್ತೋಲೆಗಳನ್ನೂ ನಾವು ಪಾಲಿಸಿದ್ದು ಇರುತ್ತದೆ. ಈ ದಿನವೂ ನಾವು ಮಾನ್ಯ ಜಿಲ್ಲಾಧಿಕಾರಿಗಳ ಆದೇಶ ಪಾಲನೆಗೆ ಪ್ರಯತ್ನ ಮಾಡಿದ್ದೇವೆ. ಇದರ ಜೊತೆಗೆ ನಮ್ಮ ವಿದ್ಯಾರ್ಥಿಗಳ ಹಿತ ಕಾಪಾಡುವ ದೃಷ್ಟಿಯಿಂದ, ನಾವು ಸೂಕ್ತ ಈ ವ್ಯವಸ್ಥೆಯನ್ನು ಈ ದಿನ ಮಾಡಿಕೊಂಡಿದ್ದು ಹೊರತುಪಡಿಸಿ ಇನ್ನಾವುದೇ ನಿಯಮ ಮೀರುವ ಪ್ರಯತ್ನ ಮಾಡಿಲ್ಲ ಎಂಬುದನ್ನು ಈ ಮೂಲಕ ಸ್ಪಷ್ಟಪಡಿಸುತ್ತಿದ್ದೇವೆ ಎಂದು ಸಂಸ್ಥೆ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.