ಕುಮಟಾ : ಕರ್ನಾಟಕ ಸರ್ಕಾರ ಮತ್ತು ನಾಟಕ ಅಕಾಡೆಮಿಯಿಂದ ರಂಗಭೂಮಿ ಕ್ಷೇತ್ರದಲ್ಲಿ ಸಾಧನೆ ಮಾಡಿದ ಕಲಾವಿದರಿಗೆ ನೀಡುವ ವಾಷಿಕ ರಾಜ್ಯ ಪ್ರಶಸ್ತಿಗೆ ಮಂಜುನಾಥ ತಿಮ್ಮಣ್ಣ ಭಟ್ಟ ಕಟ್ಟೆ ಇವರು ಆಯ್ಕೆಯಾಗಿ, ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ಪ್ರಶಸ್ತಿ ಪ್ರಧಾನ ಮಾಡಿ ಗೌರವಿಸಿರುತ್ತಾರೆ.

ಮಂಜುನಾಥ ತಿಮ್ಮಣ್ಣ ಭಟ್ಟರು ಉತ್ತರಕನ್ನಡ ಜಿಲ್ಲೆಯ ಹೊನ್ನಾವರ ತಾಲೂಕಿನ ಕಟ್ಟೆ ಎನ್ನುವ ಪುಟ್ಟ ಗ್ರಾಮದವರು. ಉತ್ತರಕನ್ನಡ ಜಿಲ್ಲೆಯು ಸಂಗೀತ, ಸಾಹಿತ್ಯ, ರಂಗಭೂಮಿ, ಯಕ್ಷಗಾನ, ತಾಳಮದ್ದಲೆ, ನೃತ್ಯ ಮುಂತಾದ ಸಾಂಸ್ಕçತಿಕ ಕಲಾಲೋಕಕ್ಕೆ ಹೆಸರುವಾಸಿಯಾದ ಜಿಲ್ಲೆಯಾಗಿದೆ. ಅಂತಹ ಕಲಾಲೋಕದ ವಾತಾವರಣದಲ್ಲಿ ಬೆಳೆದ ಮಂಜುನಾಥ ತಿಮ್ಮಣ್ಣ ಭಟ್ಟ ಕಟ್ಟೆಯವರು ತಮ್ಮ ಶಾಲಾ ದಿನಗಳಿಂದಲೇ ರಂಗಭೂಮಿ ಹಾಗೂ ಯಕ್ಷಗಾನದ ಪ್ರಭಾವಕ್ಕೆ ಒಳಗಾದವರು. 

೫ನೇ ತರಗತಿಯಲ್ಲಿದ್ದಾಗ ಹೊನ್ನಾವರ ತಾಲೂಕಿನ  ನವಿಲಗೋಣ ಗ್ರಾಮದ ಪ್ರಸಿದ್ಧ ನಾಟಕಕಾರ ರಾಮಚಂದ್ರ ಗಣೇಶ ಭಟ್ಟರಮಕ್ಕಿ ಇವರ ಮಾರ್ಗದರ್ಶನದಲ್ಲಿ  ಏಕಾಂಕ ನಾಟಕಗಳನ್ನು ಮಾಡುವ ಮೂಲಕ ರಂಗಭೂಮಿಗೆ ಪ್ರವೇಶ ಮಾಡುತ್ತಾರೆ. ಶಾಲಾ ಅವಧಿಯಲ್ಲಿಯೇ ಸುಮಾರು ೨೦ ಏಕಾಂಕ ನಾಟಕಗಳಲ್ಲಿ ಅಭಿನಯ ಮಾಡಿದ್ದಾರೆ. ಮುಂದೆ ೧೯೬೨ ರಲ್ಲಿ ಎಸ್.ಎಸ್.ಎಲ್.ಸಿ ಮುಗಿಸಿದ ನಂತರ  ತಾವೇ ಸ್ವತಃ ಯುವಜನ ಮೇಳ, ಸ್ಥಳೀಯ ಮಿತ್ರ ಮಂಡಳಿಯನ್ನು ಪ್ರಾರಂಭಿಸಿ ಸಂಘಟನೆ ಮಾಡಿ ನಾಟಕ ಕಟ್ಟಿ ಆಡಿದ್ದಾರೆ.

ಇವರು ಮುಂದೆ ಪ್ರಾಥಮಿಕ ಶಾಲಾ ಶಿಕ್ಷಕರಾಗಿದ್ದುಕೊಂಡೇ ನೂರಾರು ನಾಟಕಗಳಲ್ಲಿ ಅಭಿನಯ, ನಿರ್ದೇಶನದಂತಹ ನಾಟಕಕ್ಕೆ ಸಂಭಂಧಿಸಿದ ಕೆಲಸವನ್ನು ಕಳೆದ ೫೫ ವರ್ಷದಿಂದ ನಿರಂತರವಾಗಿ ಮಾಡಿದ್ದಾರೆ.  ತಮ್ಮ ೨೫ನೇ ವಯಸ್ಸಿನಲ್ಲಿ ವೃತ್ತಿರಂಗಭೂಮಿಯಲ್ಲಿ ಹವ್ಯಾಸಿ ನಟರಾಗಿ ಕೆಲಸ ಮಾಡಿದ್ದಾರೆ. ಇವರು ವೃತ್ತಿನಾಟಕ ರಂಗಭೂಮಿಯಲ್ಲಿ ಐತಿಹಾಸಿಕ ನಾಟಕಗಳು, ಪೌರಾಣ ಕ ನಾಟಕಗಳು, ಸಾಮಾಜಿಕ ನಾಟಕಗಳನ್ನು ಮಾಡಿದರು. 

RELATED ARTICLES  ನವರಾತ್ರಿ ವಿಶೇಷ ಶ್ರೀಕಾಂಚಿಕಾ ಪರಮೇಶ್ವರಿ ದೇವಾಲಯದ ರಥಬೀದಿಯಲ್ಲಿ 'ಸಪ್ತ ಯಕ್ಷ ಸೌರಭ ಕಾರ್ಯಕ್ರಮ'.

ಅವರು ಅಭಿನಯಿಸಿದ ನಾಟಕಗಳೆಂದರೆ ದಸರಾ, ಬಸ್ ಕಂಡಕ್ಟರ್, ರಕ್ತ ದೀಪ, ಜೀವನ ಯಾತ್ರೆ ಹಾಗೂ ಇವರೇ ಬರೆದು  ನಿರ್ದೇಶನ ಮಾಡಿದ ನಾಟಕಗಳಾದ  ‘ಜೀವನ ಯಾತ್ರೆ, ‘ಕರ್ನಾಟಕ ರಮಾರಮಣ, ತ್ಯಾಗಿ, ಅಣ್ಣ ತಂಗಿ’, ‘ನಚಿಕೇತ’, ‘ಧ್ರುವ’. 

ಇವರ ಕಲಾಸೇವೆಯನ್ನು ಗುರುತಿಸಿ ಸಂದ ಪ್ರಶಸ್ತಿ  “ಕಲಾವಿದ” ಪ್ರಶಸ್ತಿ ಮತ್ತು ವಿವಿಧ ಸಂಘಗಳಿಂದ ಸನ್ಮಾನಿತಗೊಂಡಿದ್ದಾರೆ.

ಇವರು ಹವ್ಯಾಸಿ ರಂಗಭೂಮಿಯಲ್ಲಿನ ಹೊಸ ಅಲೆಯ ಹಲವು ನಾಟಕಗಳಲ್ಲಿ ಅಭಿನಯಿಸಿದ್ದಾರೆ. ಇದರಲ್ಲಿ  ಕೆಲವು ನಾಟಕಗಳು  ೩೦ಕ್ಕೂ ಹೆಚ್ಚು ಪ್ರದರ್ಶನಗಳನ್ನು ಕಂಡಿವೆ.  ಲಚ್ಚಿ, ಬೇಲಿ ಹಣ್ಣು, ಕರುನಾಡ ರಮಾರಮಣ, ಹುತ್ತ, ಸಾವಾದ ಕೊಲೆ ಮುಂತಾದವುಗಳಲ್ಲಿ ಇವರು ಬಣ್ಣ ಹಚ್ಚಿದವರು.

ವೃತ್ತಿಯಲ್ಲಿ ಶಾಲಾ ಶಿಕ್ಷಕರಾಗಿದ್ದರಿಂದ ಶಾಲೆಯಲ್ಲಿ ಮಕ್ಕಳಿಗೂ ಕೂಡ ನಾಟಕದ ರುಚಿಯನ್ನು ಹಚ್ಚಿ ಹಲವಾರು ಜನ ಶಿಷ್ಯರನ್ನ ರಂಗಭೂಮಿಗೆ ತಯಾರು ಮಾಡಿದ್ದಾರೆ. ಅವರಿಗೆ ರಂಗಭೂಮಿಯ ಮಜಲುಗಳನ್ನ ಪರಿಚಯ ಮಾಡಿಕೊಟ್ಟಿದ್ದಾರೆ. ಹಲವು ನಾಟಕಗಳನ್ನು ಬರೆದು ನಿರ್ದೇಶನವನ್ನು ಮಾಡಿದ್ದಾರೆ.  ಮಾರ್ಕಂಡೇಯ, ಅಹಲ್ಯೋದ್ಧಾರ, ಇತ್ಯಾದಿ.  ಅದರ ಜತೆಗೆ ಕುವೆಂಪು ಅವರು ರಚಿಸಿದ ಮಕ್ಕಳ ನಾಟಕ ‘ನನ್ನ ಗೋಪಾಲ’ ಎಂಬ ನಾಟಕವನ್ನೂ ನಿರ್ದೇಶಿಸಿದ್ದಾರೆ.

‘ಬೇಲಿ ಹಣ್ಣು’ ನಾಟಕ ಬೆಂಗಳೂರಿನ ಟೌನ್ ಹಾಲ್ ನಲ್ಲಿ ಪ್ರದರ್ಶನಗೊಂಡು ಬಹಳ ಪ್ರಸಿದ್ಧಿಯನ್ನು ಪಡೆಯಿತು. ಈ ನಾಟಕದಲ್ಲಿ ಇವರ ಅಭಿನಯಕ್ಕೆ ಜನಮನ್ನಣೆ ದೊರೆತು ಜನರ ಮೆಚ್ಚುಗೆಗೆ ಕಾರಣವಾಗಿದ್ದಾರೆ. “ಹುಲಿ ಶೇಖರ” ವಿರಚಿತ “ಗುದುಮುರ್ಗಿ” ನಾಟಕವನ್ನು ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ಪ್ರದರ್ಶನ ಮಾಡಿದ್ದಾರೆ. ಹಾಗೆಯೇ ಬಿಜಾಪುರ, ಇಳಕಲ್ಲ ,ಕುಂದಾಪುರದ ಗಂಗೊಳ್ಳಿಯಲ್ಲಿ ಸಾವಾದ ಕೊಲೆ ನಾಟಕ ಮತ್ತು ಹುತ್ತ ನಾಟಕಗಳನ್ನು ಪ್ರದರ್ಶನ ನೀಡಿ ಜನರ ಮೆಚ್ಚುಗೆ ಗಳಿಸಿದ್ದಾರೆ.

RELATED ARTICLES  ಜನರಲ್ಲಿ ಭೀತಿ ಹುಟ್ಟಿಸಿದ್ದ ಚಿರತೆ ಬೋನಿಗೆ : ಹೆಗಡೆಯಲ್ಲಿ ಅರಣ್ಯ ಸಿಬ್ಬಂಧಿಗಳ ಕಾರ್ಯಾಚರಣೆ ಯಶಸ್ವಿ.

ರಂಗ ನಟ, ನಿರ್ದೇಶಕರಲ್ಲದೇ ಸ್ತ್ರೀ ವೇಷದಲ್ಲಿ ಕೂಡ ತಾಯಿ ಪಾತ್ರವನ್ನು ಹಲವಾರು ನಾಟಕಗಳಲ್ಲಿ ನಿರ್ವಹಿಸಿದ್ದಾರೆ. ಕಥಾನಾಯಕ, ಖಳನಾಯಕ, ಹಾಸ್ಯಪಾತ್ರ, ಪೋಷಕ ಪಾತ್ರ ಹೀಗೆ ಹಲವಾರು ವಿಭಿನ್ನ ಪಾತ್ರಗಳಲ್ಲಿ ಮತ್ತು ವಿಭಾಗಗಳಲ್ಲಿ ತಮ್ಮನ್ನು ಗುರುತಿಸಿಕೊಂಡಿದ್ದಾರೆ. ನಾಟಕ ಬರೆಯುವುದು, ನಿರ್ದೇಶನ ಮಾಡುವುದು ಹಾಗೂ ರಂಗಭೂಮಿಗೆ ಬೇಕಾದಂತಹ ಪ್ರತಿಯೊಂದು ಕೆಲಸದಲ್ಲೂ ಇವರು ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ. ಇವರ ಅಣ್ಣನಾದ ಶ್ರೀ ದತ್ತಾತ್ರೇಯ ತಿಮ್ಮಣ್ಣ ಭಟ್ಟ ಕಟ್ಟೆ ಯಕ್ಷಗಾನ ಕಲಾವಿದರು. ಇವರು ತಮ್ಮನಿಗೆ ಗುರುಗಳಾಗಿ ಬಡಗುತಿಟ್ಟು ಯಕ್ಷಗಾನವನ್ನು ಕಲಿಸಿದರು. ಆನಂತರ ಇವರು ಬಡಗುತಿಟ್ಟಿನ ಕಲಾವಿದರಾಗಿ ಸುಮಾರು ಯಕ್ಷಗಾನ ಪ್ರಸಂಗಗಳಲ್ಲಿ ಅಭಿನಯಿಸಿದ ಅನುಭವವನ್ನು ಹೊಂದಿದ್ದಾರೆ. ಮುಂದೆ ತಮ್ಮ ಶಿಷ್ಯವೃಂದದಲ್ಲಿ ಸಿದ್ದಾಪುರ (ತಾ) ಶಿವಳಮನೆ ಗ್ರಾಮದ ರಾಮಚಂದ್ರ ಜೋಶಿಯವರು ಇವರ ಮೆಚ್ಚಿನ ಶಿಷ್ಯರಾದರು.

ಇವರು ಅಭಿನಯಿಸಿದ ಕೆಲವು ಪಾತ್ರಗಳು.

೧) ಕಿರಾತಾರ್ಜುನನೀಯ ಪ್ರಸಂಗದಲ್ಲಿ ‘ಶಬರ’ನಾಗಿ ಅಭಿನಯ

೨) ಭೂಕೈಲಾಸದಲ್ಲಿ-‘ ಮಾಯಾ ಸುಧಾ’ನಾಗಿ ಅಭಿನಯ

೩) ಶರಸೇತು ಬಂಧನದಲ್ಲಿ ‘ಹನುಮಂತ ಮತ್ತು ಅರ್ಜುನ’ನಾಗಿ ಅಭಿನಯ

೪) ‘ಗಧಾಪರ್ವ’ದಲ್ಲಿ ‘ಭೀಮ’ನಾಗಿ ಅಭಿನಯ ಹೀಗೆ ಹಲವು ವೇದಿಕೆಯನ್ನು ತಮ್ಮದಾಗಿಸಿಕೊಂಡಿದ್ದಾರೆ. 

ಕಲಾ ಕುಟುಂಬದ ಇವರಿಗೆ ಪ್ರಸಕ್ತ ೮೦ ವರ್ಷ ಮುಗಿದಿದೆ ಹಾಗೂ ಅವರು ಬರೆದು ನಿರ್ದೇಶಸಿದ ನಾಟಕಗಳು ಇಂದಿಗೂ ಕೂಡ ರಂಗದ ಮೇಲೆ ರಾರಾಜಿಸುತ್ತಿವೆ. ಇತಂಹ ಕಲಾವಿದನನ್ನು ಕರ್ನಾಟಕ ಸರ್ಕಾರ ಮತ್ತು ನಾಟಕ ಅಕಾಡೆಮಿ ಗುರುತಿಸಿ ಪ್ರಶಸ್ತಿ ನೀಡಿರುವದು ಮಂಜುನಾಥ ತಿಮ್ಮಣ್ಣ ಭಟ್ಟರು ಕಲಾ ಕ್ಷೇತ್ರಕ್ಕೆ ಸೇವೆಗೆ ಸಂದ ಪ್ರಶಸ್ತಿ ಎಂದೇ ಬಣ್ಣಿಸಲಾಗುತ್ತಿದೆ.