Home HONNAVAR ಕೆಕ್ಕಾರಿನ ರಘೂತ್ತಮ ಮಠದಲ್ಲಿ ನವರಾತ್ರಿಯ ವಿಶೇಷ ‘ಮಾತೃ ನಮಸ್ಯಾ’

ಕೆಕ್ಕಾರಿನ ರಘೂತ್ತಮ ಮಠದಲ್ಲಿ ನವರಾತ್ರಿಯ ವಿಶೇಷ ‘ಮಾತೃ ನಮಸ್ಯಾ’

ಕುಮಟಾ : ಶ್ರೀರಾಮಚಂದ್ರಾಪುರ ಮಠದ ಪರಮಪೂಜ್ಯ ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರಭಾರತೀ ಮಹಾಸ್ವಾಮಿಗಳ ದಿವ್ಯ ಸಾನ್ನಿಧ್ಯದಲ್ಲಿ ತಾಲೂಕಿನ ಕೆಕ್ಕಾರಿನ ರಘೂತ್ತಮ ಮಠದಲ್ಲಿ ‘ನವರಾತ್ರ ಮಹೋತ್ಸವ’, ‘ಮಾತೃ ನಮಸ್ಯಾ’ ಕಾರ್ಯಕ್ರಮ ಸಂಯೋಜನೆಗೊಂಡಿದೆ. ಈ ದಿವ್ಯ ಸಂದರ್ಭದಲ್ಲಿ ‘ಬನ್ನಿ ಅಮ್ಮನ ಮಡಿಲಿಗೆ.. ನೆಮ್ಮದಿಯ ಕಡಲಿಗೆ’ ಎಂದು ರಘೂತ್ತಮ ಮಠ ಕೆಕ್ಕಾರಿನ ಸಮಿತಿ ಸದಸ್ಯರು ಸಮಸ್ತ ಭಕ್ತವೃಂದವರನ್ನು ಆಮಂತ್ರಿಸಿದ್ದಾರೆ.

ಅ. 1 ರಿಂದ 14 ರ ವರೆಗೆ ವಿಶೇಷ ಕಾರ್ಯಗಳನ್ನು ಹಮ್ಮಿಕೊಳ್ಳಲಾಗಿದೆ. ಶಿಷ್ಯರ ಬೇಡಿಕೆಯಂತೆ ಪರಮಪೂಜ್ಯ ಶ್ರೀ ಸಂಸ್ಥಾನದವರು ಅತ್ಯಂತ ಸಂತೋಷದಿಂದ ಈ ಸಲದ ನವರಾತ್ರಿ ಉತ್ಸವವನ್ನು ಕೆಕ್ಕಾರಿನಲ್ಲಿಯೇ ಆಚರಿಸಲು ಒಪ್ಪಿರುವುದು ಶಿಷ್ಯರಲ್ಲಿ ಹೊಸ ಹುಮ್ಮಸ್ಸನ್ನ ಮೂಡಿಸಿದೆ ಎಂದು ಸಮಿತಿ ಅಧ್ಯಕ್ಷ ಸುಬ್ರಾಯ ಭಟ್ಟ ಕೋಣಾರೆ ಮಾಧ್ಯಮಕ್ಕೆ ಮಾಹಿತಿ ನೀಡಿದ್ದಾರೆ.

ಈ ಬಗ್ಗೆ ವಿವರ ನೀಡಿದ ಅವರು, ಈ ವರ್ಷ ಬಗೆ ಬಗೆಯ ಉತ್ತಮೋತ್ತಮ ಕಾರ್ಯಕ್ರಮಗಳು ನವರಾತ್ರಿ ಉತ್ಸವದೊಂದಿಗೆ ಸೇರಿಕೊಂಡು ಮಹಾ ಉತ್ಸವವಾಗಿ ಇದು ರೂಪ ಪಡೆಯುತ್ತಿದೆ. ಅ.೧ ರಂದು ಮಂಗಳವಾರ ಪರಮಪೂಜ್ಯರ ಅದ್ದೂರಿ ಸ್ವಾಗತದೊಂದಿಗೆ ಉತ್ಸವ ಕಾರ್ಯಕ್ರಮಗಳು ಆರಂಭಗೊಳ್ಳಲಿದೆ. ಬುಧವಾರ ಬಹು ವಿಶೇಷವಾದ ‘ವಿದ್ಯಾಭಿಕ್ಷಾ’ ನಡೆಯಲಿದೆ. ಅದೇ ದಿನ ಸಂಜೆ 6 ಗಂಟೆಗೆ ಬಹು ನಿರೀಕ್ಷಿತ “ವರದಯೋಗಿ ಶ್ರೀಧರ” ನಾಟಕ 11ನೇ ಪ್ರದರ್ಶನಕ್ಕೆ ಅಣಿಯಾಗುತ್ತಿದೆ.

ಗುರುವಾರದಿಂದ ಮಾತೃ ನಮಸ್ಯಾ ನವರಾತ್ರಿ ಉತ್ಸವ ಆರಂಭವಾಗಲಿದ್ದು, ನವರಾತ್ರಿಯ ಪರ್ವಕಾಲದಲ್ಲಿ ಶ್ರೀರಾಮಚಂದ್ರಾಪುರ ಮಠದ ಪ್ರಧಾನ ದೇವತೆಗಳಲ್ಲೊಂದಾದ ಶ್ರೀರಾಜರಾಜೇಶ್ವರಿಯ ಮಹಾಸಮಾರಾಧನೆ. ಜೊತೆಗೆ ಸ್ವರ್ಣಮಂಟಪದಲ್ಲಿ ಶ್ರೀಕರಾರ್ಚಿತ ದೇವತೆಗಳ ಪೂಜೆ, ಸ್ವರ್ಣಪಾದುಕಾ ಪೂಜೆ, ಶ್ರೀಸಂಸ್ಥಾನದವರಿಂದ ಲಲಿತೋಪಾಖ್ಯಾನ ಪ್ರವಚನ ನಡೆಯಲಿದೆ.

ಮೂರು ಪ್ರಮುಖ ದೇವ ಸನ್ನಿಧಿಗಳಲ್ಲಿ ನವದುರ್ಗಿಯರುಗಳ ಪಾರಾಯಣಗಳು , ಉಡಿಸೇವೆಗಳು, ಕುಂಕುಮಾರ್ಚನೆ, ವಿವಿಧ ಬಗೆಯ ಸೇವೆಗಳು ನಡೆಯಲಿದೆ.
ನವರಾತ್ರಿಯ ಒಂಬತ್ತು ದಿನಗಳೂ ಪ್ರತಿದಿನ ಶ್ರೀ ಸಂಸ್ಥಾನದವರಿಂದ ದುರ್ಗಾ ದೇವಿಯರ ಕುರಿತು ಲಲಿತೋಪಾಖ್ಯಾನ ಪ್ರವಚನ ನಡೆಯಲಿದೆ. ವಿಜಯ ದಶಮಿಯಂದು ‘ಶಿಕ್ಷಕ ಸಂಗಮ’ “ವಿದ್ಯಾ ಭಿಕ್ಷಾ”, ಆಶೀರ್ವಚನ ಹಾಗೂ ಸಾರ್ವಜನಿಕ ಮಂತ್ರಾಕ್ಷತೆ ಇರಲಿದೆ. ಮಾರನೇದಿನ ಸೋಮವಾರ ಮಾತೃ ಸಂಗಮ ಆ ದಿನವೂ ಕೂಡಾ “ವಿದ್ಯಾ ಭಿಕ್ಷಾ” ನಡೆಯಲಿದೆ. ಈ ಸಂದರ್ಭದಲ್ಲಿ ಚಂಡಿಕಾ ಯಾಗ, ಆಂಜನೇಯ ಸ್ವಾಮಿಗೆ ಕಣಜ ಸೇವೆ ಹಾಗೂ ಇನ್ನೂ ಅನೇಕ ಸೇವಾವಕಾಶಗಳನ್ನು ಕಲ್ಪಿಸಲಾಗಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.

ಈ ಎಲ್ಲ ಕಾರ್ಯಕ್ರಮಗಳಲ್ಲಿ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಶ್ರೀದೇವರ ಹಾಗೂ ಶ್ರೀ ಗುರುಗಳ ಆಶೀರ್ವಾದ ಪಡೆದು ಸೇವೆಯಲ್ಲಿ ಪಾಲ್ಗೊಳ್ಳಬೇಕೆಂದು ಸಮಿತಿಯ ಸದಸ್ಯರು ವಿನಂತಿಸಿದ್ದಾರೆ.