ಕುಮಟಾ : ತಾಂಡವ ಕಲಾನಿಕೇತನ ಬೆಂಗಳೂರು ಹಾಗೂ ಕುಮಟಾ ವೈಭವ ಸಮಿತಿ ಜಂಟಿಯಾಗಿ ಹಮ್ಮಿಕೊಂಡ ಕುಮಟಾ ವೈಭವ-2024 ಕ್ಕೆ ತಾಲೂಕಿನ ಮಣಕಿ ಮೈದಾನದಲ್ಲಿ ಅದ್ದೂರಿ ಚಾಲನೆ ದೊರೆತಿದೆ. ಜನತೆಗೆ ಮನರಂಜನೆ ನೀಡುವ ನಿಟ್ಟಿನಲ್ಲಿ ನಿರ್ಮಿಸಲಾದ ಬೃಹತ್ ವೇದಿಕೆಯಲ್ಲಿ ಕುಮಟಾ ಹೊನ್ನಾವರ ವಿಧಾನಸಭಾ ಕ್ಷೇತ್ರದ ಶಾಸಕ ದಿನಕರ ಶೆಟ್ಟಿ ದೀಪ ಬೆಳಗಿ ಕಾರ್ಯಕ್ರಮ ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ಮಾಯನಾಡಿದ ಶಾಸಕರು ನಶಿಸಿಹೋಗುತ್ತಿರುವ ಕಲಾಪ್ರಕಾರಗಳನ್ನು ಜೀವಂತವಾಗಿರಿಸುವ ಪ್ರಯತ್ನವನ್ನು ಕಲಾನಿಕೇತನ ತಂಡದ ಮುಖ್ಯಸ್ಥ ಮಂಜುನಾಥ ನಾಯ್ಕರವರು ಹಲವು ವರ್ಷಗಳಿಂದ ನಡೆಸಿಕೊಂಡು ಬರುತ್ತಿರುವುದು ಶ್ಲಾಘನೀಯವಾಗಿದೆ. ಜಿಲ್ಲೆಯ ಜನರಿಗೆ ಮನರಂಜನೆ ಒದಗಿಸುವ ಕಾರ್ಯಕ್ರಮಗಳಿಗೆ ಯಾವತ್ತೂ ತನ್ನ ಸಹಾಯವಿರುವುದಾಗಿ ತಿಳಿಸಿದರು.
ತಾಂಡವ ಕಲಾನಿಕೇತನ ಸಂಸ್ಥೆಯ ಅಧ್ಯಕ್ಷ ಮಂಜುನಾಥ ಎಲ್. ನಾಯ್ಕ ಪ್ರಾಸ್ತಾವಿಕ ನುಡಿಗಳನ್ನಾಡಿ, ಆಧುನಿಕ ಯುಗದ ಒತ್ತಡದ ಜೀವನದಲ್ಲಿ ನಮ್ಮ ಕಲೆ, ಸಂಸ್ಕೃತಿಗಳು ಕಣ್ಮರೆಯಾಗುತ್ತಿವೆ. ಅವುಗಳ ಬಗ್ಗೆ ಯುವ ಜನತೆಯಲ್ಲಿ ಜಾಗೃತಿ ಮೂಡಿಸಿ ಮುಂದಿನ ತಲೆ ಮಾರಿಗೆ ದಾಟಿಸುವ ಸದುದ್ದೇಶದಿಂದ ಈ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದೇವೆ. ಐದು ದಿನಗಳು ಅದ್ಧೂರಿಯಾಗಿ ಕಾರ್ಯಕ್ರಮ ನಡೆಯಲಿದ್ದು, ಬೆಂಗಳೂರಿನ ಖ್ಯಾತ ಕಲಾವಿದರ ತಂಡಗಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳ ಜೊತೆಗೆ ಜಿಲ್ಲೆಯ ಕಲೆ, ಸಂಸ್ಕೃತಿಯನ್ನು ಸಾರುವ ವಿವಿಧ ಕಲಾ ಪ್ರಕಾರಗಳ ಪ್ರದರ್ಶನ ನಡೆಯಲಿದೆ. ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವ ಮೂಲಕ ಕಾರ್ಯಕ್ರಮವನ್ನು ಯಶಸ್ವಿಗೊಳಿಸುವಂತೆ ವಿನಂತಿಸಿದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ ಬಿಜೆಪಿ ಉತ್ತರ ಕನ್ನಡ ಜಿಲ್ಲಾಧ್ಯಕ್ಷ ಎನ್.ಎಸ್. ಹೆಗಡೆ ಭಾರತೀಯ ಸನಾತನತೆಯ ದಿಗ್ದರ್ಶನ ಕುಮಟಾ ವೈಭವದಲ್ಲಿ ಹೊರಹೊಮ್ಮಲಿ ಎಂದು ಆಶಿಸಿದರು.
ವಿಶ್ರಾಂತ ಪ್ರೌಢಶಾಲಾ ಮುಖ್ಯಾಧ್ಯಾಪಕ ಎನ್. ಆರ್. ಗಜು ಮಾತನಾಡಿ ನಮ್ಮ ನೆಲದ ಸಾಂಸ್ಕøತಿಕ ಸತ್ವವನ್ನು ಅನಾವರಣಗೊಳಿಸುವ ಕಲಾ ಪ್ರದರ್ಶನ ವ್ಯಕ್ತಿಯಲ್ಲಿರುವ ಸಾಂಸ್ಕøತಿಕ ಮನಸ್ಸನ್ನು ಉದ್ದೀಪನಗೊಳಿಸುವಲ್ಲಿ ಮತ್ತು ಉತ್ತೇಜಿಸುವಲ್ಲಿ ಇಂತಹ ವೇದಿಕೆಗಳು ಮಹತ್ವದ ಪಾತ್ರವಹಿಸುತ್ತವೆ ಮತ್ತು ಕಾರ್ಯಕ್ರಮದ ಸಂಘಟನೆಯಲ್ಲಿ ಸಾರ್ವಜನಿಕ ಶಿಸ್ತಿನ ಬದ್ಧತೆಗೆ ಒಳಪಡಬೇಕಾದ ಮಂಜುನಾಥ ನಾಯ್ಕರು ಜಿಲ್ಲೆಯ ಸಾಂಸ್ಕøತಿಕ ರಾಯಭಾರಿಯಂತೆ ಕಂಗೊಳಿಸುತ್ತಾರೆಂದು ಮುಖ್ಯ ಅತಿಥಿಗಳಾಗಿ ಪಾಲ್ಗೊಂಡ ಅಭಿಪ್ರಾಯಪಟ್ಟರು.
ಅಧ್ಯಕ್ಷತೆಯನ್ನು ವಹಿಸಿದ್ದ ಜಿಲ್ಲಾ ಗ್ರಾರಂಟಿ ಪ್ರಾಧಿಕಾರದ ಅಧ್ಯಕ್ಷ ಸತೀಶ ಪಿ. ನಾಯ್ಕ ಇಲ್ಲಿಯ ಜನರು ಕಲೆ ಮತ್ತು ಕಲಾವಿದರಿಗೆ ನೀಡುವ ಪ್ರಾಧಾನ್ಯತೆ ಗರಿಷ್ಠವಾದುದೆಂದರು. ಹಿರಿಯ ವಕೀಲ ಮಂಗಲ ಮೂರ್ತಿ ಸಭಾಹಿತ, ಜಿಲ್ಲಾ ಬಾರ್ ಅಸೋಸಿಯೇಷನ್ ಅಧ್ಯಕ್ಷ ನಾಗರಾಜ ಹಿತ್ತಲಮಕ್ಕಿ, ಪುರಸಭಾ ಮಾಜಿ ಅಧ್ಯಕ್ಷೆ ಮೋಹಿನಿ ಗೌಡ, ಪುರಸಭಾ ಸದಸ್ಯ ಮಹೇಶ ನಾಯ್ಕ, ವೈಭವ ಸಮಿತಿ ಕಾರ್ಯದರ್ಶಿ ಗಣಪತಿ ನಾಯ್ಕ, ವೇದಿಕೆ ಸಮಿತಿ ಅಧ್ಯಕ್ಷ ರವಿ ಶೇಟ್, ಸಿಪಿಐ ಯೋಗೇಶ್ ಮೊದಲಾದವರು ಉಪಸ್ಥಿತರಿದ್ದರು.
ಪ್ರಾರಂಭದಲ್ಲಿ ರವಿ ಗಾವಡಿ ಪ್ರಾರ್ಥಿಸಿದರು. ಕುಮಟಾ ವೈಭವ ಸಮಿತಿ 2024ರ ಅಧ್ಯಕ್ಷ ಆರ್.ಎಚ್. ನಾಯ್ಕ ಸ್ವಾಗತಿಸಿದರು. ಇದೇ ಸಂದರ್ಭದಲ್ಲಿ ನಿವೃತ್ತ ಸೈನಿಕ ಪರಮೇಶ್ವರ ಹರಿಕಂತ್ರ ಮತ್ತು ರಂಗಭೂಮಿ ಕಲಾವಿದ ಎಮ್.ಟಿ. ಭಟ್ ನವಿಲಗೋಣ ಅವರನ್ನು ಸಮಿತಿ ಸನ್ಮಾನಿಸಿತು. ಶಿಕ್ಷಕ ಮಂಜುನಾಥ ನಾಯ್ಕ ಹಾಗು ಪ್ರೊ. ಮಂಜುನಾಥ ಭಂಡಾರಿ ನಿರೂಪಿಸಿದರು. ಶಿರಸಿಯ ಬೇಡರ ವೇಷ ಹಾಗೂ ವಿವಿಧ ಜಾನಪದ ಕಲಾ ತಂಡಗಳ ಪ್ರದರ್ಶನ ಗಮನ ಸೆಳೆಯಿತು. ಆಲ್ ಓಕೆ ತಂಡದ ರಸಮಂಜರಿ ಜನಾಕರ್ಷಣೆಯ ಕೇಂದ್ರವಾಗಿತ್ತು.