ಕುಮಟಾ : ರಾಜ್ಯದ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗಳಲ್ಲೊಂದಾದ ಕೊಂಕಣ ಎಜ್ಯುಕೇಶನ್ ಟ್ರಸ್ಟ್‌ನ ಸಿವಿಎಸ್‌ಕೆ ಪ್ರೌಢಶಾಲೆಯ ಹತ್ತನೇ ವರ್ಗದ ವಿದ್ಯಾರ್ಥಿನಿ ಕುಮಾರಿ ಕೃತಿಕಾ ಮಹೇಶ ಭಟ್ಟ ಇವಳು ಇಸ್ರೋದ ಬೆಂಗಳೂರಿನ ಯುಆರ್‌ರಾವ್ ಸೆಟೆಲೈಟ್ ಸೆಂಟರ್‌ನಲ್ಲಿ ನಡೆದ ಬಹು ನಿರೀಕ್ಷಿತ, ರಾಜ್ಯಮಟ್ಟದ ಕಿಶೋರ ಕಮ್ಮಟ-ತಾಂತ್ರಿಕ ಪಿಪಿಟಿ ಪ್ರಸ್ತುತಿ ಸ್ಪರ್ಧೆಯಲ್ಲಿ ದ್ವಿತೀಯ ಸ್ಥಾನ ಗಳಿಸಿ ಸಾಧನೆಗೈದಿದ್ದಾಳೆ.
ಬಾಹ್ಯಾಕಾಶ ತಂತ್ರಜ್ಞಾನ, ಉಪಯೋಗಗಳು, ಹಾಗೂ ಅದರ ಉಪಉತ್ಪನ್ನಗಳು ಎಂಬ ವಿಷಯದಡಿ ಈಕೆ ಪ್ರಸ್ತುತಪಡಿಸಿದ ಪಿಪಿಟಿ, ತೀರ್ಪುಗಾರರ ಹಾಗೂ ಸಭಾಸದರ ಮನ ಸೆಳೆಯುವಲ್ಲಿ ಅತ್ಯಂತ ಯಶಸ್ವಿಯಾಯಿತು. ಪ್ರಸ್ತುತಿಯಲ್ಲಿನ ಆಕರ್ಷಕ ಚಿತ್ರಗಳು, ಉತ್ತಮ ಬ್ಯಾಕ್‌ಗ್ರೌಂಡ್, ವಿಷಯದ ಆಳತೆ ಮತ್ತು ನೈಪುಣ್ಯತೆ, ಪ್ರಸ್ತುತ ಪಡಿಸಿದ ರೀತಿ, ಹಾವ-ಭಾವ ಸೇರಿದಂತೆ ಕೃತಿಕಾಳ ಮಾತಿನ ವಾಗ್ಝರಿ ನೆರೆದವರನ್ನು ದಿಗ್ಭೃಮರನ್ನಾಗಿಸಿತು.
ಕೃತಿಕಾ ಸಿವಿಎಸ್‌ಕೆಯ ಪ್ರತಿಭಾವಂತ ವಿದ್ಯಾರ್ಥಿನಿಯಾಗಿದ್ದು, ಮಾತುಗಾರಿಕೆಯಲ್ಲಿ ಸೈ ಎನಿಸಿಕೊಂಡವಳು. ಹಲವಾರು ಸ್ಪರ್ಧೆಗಳಲ್ಲಿ ಭಾಗವಹಿಸಿ ಸಾಧನೆ ಮಾಡಿದವಳು. ಪ್ರಸ್ತುತಿ ಪ್ರಾರಂಭಿಸಿದ ಕ್ಷಣದಿಂದಲೇ ಕಮ್ಮಟದ ಸ್ಪರ್ಧೆಯಲ್ಲಿದ್ದ ಎಲ್ಲರ ಚಿತ್ತ ಈಕೆಯ ಮೇಲೆಯೇ ಇತ್ತು. ಅವಳ ಮಾತಿನ ವೈಖರಿ, ಹಾವ-ಭಾವ, ಪರಿಸ್ಥಿತಿಗನುಗುಣವಾಗಿ ಧಾಟಿಯ ಲಯಬದ್ಧ ಏರಿಳಿತ ಅಲ್ಲಿದ್ದವರನ್ನು ಮಂತ್ರಮುಗ್ಧರನ್ನಾಗಿಸಿತು. ಫಲಿತಾಂಶ ಪ್ರಕಟಣೆಯ ಸಮಯದಲ್ಲಿ ತೀರ್ಪುಗಾರರು ಕೃತಿಕಾಳ ಪ್ರಸ್ತುತಿಯ ವೈಖರಿಯನ್ನು ಯಕ್ಷಗಾನದ ಪರಿಗೆ ಹೋಲಿಸಿ ಶ್ಲಾಘಿಸಿದಾಗ ನೆರೆದವರು ಚಪ್ಪಾಳೆಯ ಸುರಿಮಳೆಗೈದರು. ರಾಜ್ಯದ ನಾನಾ ಜಿಲ್ಲೆಗಳ ಒಟ್ಟೂ ಹದಿನೆಂಟು ವಿದ್ಯಾರ್ಥಿಗಳೊಂದಿಗಿನ ಪಿಪಿಟಿ ಪೈಪೋಟಿಯಲ್ಲಿ ಕೃತಿಕಾ ರಾಜ್ಯಕ್ಕೆ ದ್ವಿತೀಯ ಸ್ಥಾನ ಗಳಿಸುವುದರ ಮೂಲಕ ಸಾಧನೆಯ ಕಿರೀಟವನ್ನು ಮುಡಿಗೇರಿಸಿ ಶಾಲೆಯ ಕೀರ್ತಿಯನ್ನು ಇನ್ನಷ್ಟು ಎತ್ತರಿಸಿದಳು. ಬಾಹ್ಯಾಕಾಶ ಸಂಶೋಧನೆಯಲ್ಲಿ ಜಾಗತಿಕವಾಗಿ ಭಾರತಕ್ಕೆ ಮನ್ನಣೆ ತಂದುಕೊಡುವಲ್ಲಿ ಪ್ರಮುಖ ಪಾತ್ರವಹಿಸಿದ್ದ ಇಸ್ರೋದ ವಿಜ್ಞಾನಿಗಳು ಹಾಗೂ ಅಧಿಕಾರಿಗಳು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ಕೃತಿಕಾಳ ಮಾತಿನ ಕೌಶಲ್ಯ ಹಾಗೂ ವಿಷಯದ ಆಳತನಕ್ಕೆ ಸಾಣೆ ಹಿಡಿಸಿ, ಸಾಮಾನ್ಯ ಪಿಪಿಟಿಯನ್ನೂ ಸಹ ರಾಜ್ಯಮಟ್ಟದ ಸ್ಪರ್ಧೆಗಳಲ್ಲಿ ಹೇಗೆ ಪರಿಣಾಮಕಾರಿಯನ್ನಾಗಿಸಬಹುದೆಂಬುದನ್ನು ಸಿವಿಎಸ್‌ಕೆಯ ಪ್ರತಿಭಾವಂತ ವಿಜ್ಞಾನ ಶಿಕ್ಷಕರುಗಳಾದ ಅಮಿತಾ ಗೋವೆಕರ್, ಜ್ಯೋತಿ ಪಟಗಾರ, ಅರ್ಚನಾ ನಾಯ್ಕ ಈ ಮೂಲಕ ತೋರಿಸಿಕೊಟ್ಟರು.
ಒಟ್ಟಾರೆಯಾಗಿ, ಇವರ ಈ ಸಾಧನೆಯಿಂದಾಗಿ ಕೊಂಕಣದ ಹಿರಿಮೆಗೆ ಮತ್ತೊಂದು ಗರಿಮೆ ಸೇರಿಕೊಂಡಂತಾಗಿದೆ. ಸಾಧನೆಗೈದ ವಿದ್ಯಾರ್ಥಿನಿಗೆ ಹಾಗೂ ಮಾರ್ಗದರ್ಶಿಸಿದ ಶಿಕ್ಷಕಿಯರಿಗೆ ಶಾಲಾ ಆಡಳಿತ ಮಂಡಳಿ, ಶೈಕ್ಷಣಿಕ ಸಲಹೆಗಾರರು, ಮುಖ್ಯೋಪಾಧ್ಯಾಯರು, ಶಿಕ್ಷಕ ವೃಂದ, ಹಾಗೂ ಪಾಲಕರು ಅಭಿನಂದಿಸಿದ್ದಾರೆ