ಕುಮಟಾ : ತಾಲೂಕಿನ ಮೂರೂರು ರಸ್ತೆಯಲ್ಲಿ ಇರುವ ತಾಲೂಕಾ ಆಡಳಿತ ಸೌಧ (ಮಿನಿ ವಿಧಾನಸೌಧ) ದಲ್ಲಿ ತಾಲೂಕಿನ ಜನರಿಗೆ ಒಂದೇ ಸೂರಿನಡಿ ಎಲ್ಲಾ ಕಚೇರಿಯ ಸೌಲಭ್ಯಗಳು ಸಿಗುವಂತಾಗಲಿ ಎನ್ನುವ ನಿಟ್ಟಿನಲ್ಲಿ ಸರ್ಕಾರದಿಂದ ನಿರ್ಮಾಣಗೊಂಡ ಕಛೇರಿಯಲ್ಲಿ ವಿಶೇಷವಾಗಿ ತಹಶೀಲ್ದಾರ್ ಭೇಟಿಯಾಗಲು ಸಾಕಷ್ಟು ಸಾರ್ವಜನಿಕರು ಅಹವಾಲನ್ನು ತೆಗೆದುಕೊಂಡು ಬರುತ್ತಾರೆ. ಆದರೆ ಅಧಿಕಾರಿಗಳು ಯಾವ ಸಮಯದಲ್ಲಿ ಸಿಗುತ್ತಾರೆ ಎನ್ನುವ ಮಾಹಿತಿ ಇಲ್ಲದೆ ಇರುವುದು ಸಾಕಷ್ಟು ಸಾರ್ವಜನಿಕರಿಗೆ ತೊಂದರೆಗೆ ಕಾರಣವಾಗಿದೆ. ಅಧಿಕಾರಿಗಳ ಭೇಟಿಗೆ ಬಂದವರು ಅಲೆದಾಡುವ ಪರಿಸ್ಥಿತಿ ಬರುತ್ತದೆ ಹಾಗೂ ಕೆಲವು ಸಂದರ್ಭಗಳಲ್ಲಿ ಕಚೇರಿಯಲ್ಲಿ ಇದ್ದರು ವಿಡಿಯೋ ಕಾನ್ಫರೆನ್ಸ್ ಅಲ್ಲಿ ಇರುವ ಕಾರಣ ಎಲ್ಲ ರೀತಿಯ ಅಧಿಕಾರಿಗಳು ಗಂಟೆಗಟ್ಟಲೆ ಸಾರ್ವಜನಿಕರಿಗೆ ಲಭ್ಯವಾಗದೆ ದೂರದ ಹಳ್ಳಿಗಳಿಂದ ಬಂದು ಸಮಸ್ಯೆಯಾಗುತ್ತದೆ ಎಂದು ಕರವೇ ಜಿಲ್ಲಾಧ್ಯಕ್ಷ ಭಾಸ್ಕರ ಪಟಗಾರ ಆರೋಪಿಸಿದ್ದಾರೆ.
ಈ ಬಗ್ಗೆ ಪತ್ರಿಕೆಯೊಂದಿಗೆ ಮಾತನಾಡಿದ ಅವರು, ಯಾವುದೇ ರೀತಿಯ ಸರ್ಕಾರದ ವಿಡಿಯೋ ಕಾನ್ಫರೆನ್ಸ್ ಇದ್ದರೆ, ಬೇರೆ ಅಧಿಕಾರಿಗಳು ಸ್ಥಳದಲ್ಲಿ ಇದ್ದು ಹಾಗೂ ಕೆಲವು ಸಂದರ್ಭಗಳಲ್ಲಿ ಸರ್ಕಾರಿ ಕಚೇರಿಯ ಅವಧಿ ಮುಗಿದರೆ ಬಾಗಿಲನ್ನು ಹಾಕದೆ ಸಾರ್ವಜನಿಕರಿಗೆ ಹಾಗೂ ಹಳ್ಳಿಗಳಿಂದ ಬಂದವರಿಗೆ ನೆರವಾಗಬೇಕು. ಸಾರ್ವಜನಿಕರಿಗೆ ಯಾವ ಸಮಯದಲ್ಲಿ ಅಧಿಕಾರಿಗಳು ಸಿಗುತ್ತಾರೆ ಎನ್ನುವ ಮಾಹಿತಿ ಫಲಕವನ್ನ ಹಾಕಬೇಕು ಎಂದು ಒತ್ತಾಯಿಸಿದ್ದಾರೆ.
ಈ ರೀತಿ ಮಾಡದಿದ್ದಲ್ಲಿ ಸಾರ್ವಜನಿಕರು ದಿನನಿತ್ಯ ಅಧಿಕಾರಿಗಳ ಭೇಟಿಗೆ ಹರಸಹಾಸ ಪಡಬೇಕಾಗುತ್ತದೆ. ಈ ಪರಿಸ್ಥಿತಿ ಬರದಂತೆ ನೋಡಿಕೊಳ್ಳಬೇಕು ಎಂದು ಭಾಸ್ಕರ ಪಟಗಾರ ಆಗ್ರಹಿಸಿದ್ದಾರೆ.
ತಹಶೀಲ್ದಾರ್ ಕಚೇರಿಗೆ ಶುಕ್ರವಾರ ಭೇಟಿ ನೀಡಿದ ಸಂದರ್ಭದಲ್ಲಿ ಭಾಸ್ಕರ ಪಟಗಾರ ಅವರಿಗೂ ಇದೇ ಅನುಭವವಾಗಿದ್ದು, ಸಾಕಷ್ಟು ಸಾರ್ವಜನಿಕರು ಸಹ ಅಧಿಕಾರಿಗಳೇ ಸಿಗದೇ ಅರ್ಧ ಗಂಟೆಗೂ ಹೆಚ್ಚು ಕಾಯಬೇಕಾದ ಪರಿಸ್ಥಿತಿ ಬಂದಿದೆ ಎಂದು ಅವರು ವಿವರಿಸಿದರು.