ಕುಮಟಾ : ಡಿಸೆಂಬರ್ ೨೭ ರಿಂದ ೨೯ ರವರೆಗೆ ಮೂರುದಿನಗಳ ಕಾಲ ಬೆಂಗಳೂರಿನ ಅರಮನೆ ಮೈದಾನದಲ್ಲಿ ಅಖಿಲ ಹವ್ಯಕ ಮಹಾಸಭೆಯಿಂದ “ತೃತೀಯ ವಿಶ್ವ ಹವ್ಯಕ ಸಮ್ಮೇಳನ” ವನ್ನು ಹಮ್ಮಿಕೊಳ್ಳಲಾಗಿದೆ. ವಿಶೇಷ ಕಾರ್ಯಕ್ರಮಗಳು, ಸಾಧಕ ಸಮ್ಮಾನ, ಹವ್ಯಕರ ಸಂಸ್ಕೃತಿ ಬಿಂಬಿಸುವ ಕಾರ್ಯಗಳು ಸಂಯೋಜನೆಗೊಳ್ಳುತ್ತಿದ್ದು ಸಿದ್ಧತೆ ಪ್ರಾರಂಭವಾಗಿದೆ. ಎಲ್ಲಾ ಹವ್ಯಕರೂ ಹಾಗೂ ಇತರ ಸಮಾಜದ ಹವ್ಯಕ ಅಭಿಮಾನಿಗಳು ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಯಾಗಿಸುವಂತೆ ಅಖಿಲ ಹವ್ಯಕ ಮಹಾಸಭೆಯ ಅಧ್ಯಕ್ಷ ಡಾ. ಗಿರಿಧರ ಕಜೆ ವಿನಂತಿಸಿದರು. ಇಲ್ಲಿನ ಕೊಂಕಣ ಎಜುಕೇಶನ್ ಟ್ರಸ್ಟಿನ ಸರಸ್ವತಿ ವಿದ್ಯಾಕೇಂದ್ರದ ಪ್ರಾಥಮಿಕ ಶಾಲೆಯ ಪ್ರಾರ್ಥನಾ ಮಂದಿರದಲ್ಲಿ ಭಾನುವಾರ ಸುದ್ದಿಗೋಷ್ಠಿ ನಡೆಸಿ ಅವರು ಮಾತನಾಡಿದರು.
ಡಿಸೆಂಬರ್ ೨೭ ರಿಂದ ೨೯ ರವರೆಗೆ ಮೂರುದಿನಗಳ ಕಾಲ ಬೆಂಗಳೂರಿನ ಅರಮನೆ ಮೈದಾನದಲ್ಲಿ ಅಖಿಲ ಹವ್ಯಕ ಮಹಾಸಭೆಯಿಂದ “ತೃತೀಯ ವಿಶ್ವ ಹವ್ಯಕ ಸಮ್ಮೇಳನ” ನಡೆಯಲಿದ್ದು, ಹವ್ಯಕ ಮಹಾಸಭೆ ೮೧ ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ಸಹಸ್ರಚಂದ್ರದರ್ಶನದ ಸಂಭ್ರಮೋತ್ಸವವಾಗಿಯೂ ಹವ್ಯಕ ಸಮ್ಮೇಳನಕ್ಕೆ ವಿಶೇಷ ಮೆರುಗಿನೊಂದಿಗೆ ಸಕಲ ಸಿದ್ಧತೆಗಳು ನಡೆಯುತ್ತಿದೆ ಎಂದು ಅವರು ವಿವರಿಸಿದರು.
೧೯೪೩ ರಲ್ಲಿ ಬ್ರಿಟೀಷರ ಆಳ್ವಿಕೆಯ ಕಾಲದಲ್ಲೇ ನೋಂದಾಯಿತವಾದ ಹವ್ಯಕ ಮಹಾಸಭೆಯು ದೇಶ-ವಿದೇಶಗಳು ಸೇರಿದಂತೆ ಒಟ್ಟಾರೆ 30,000 ಸದಸ್ಯ ಬಲಹೊಂದಿದೆ. ಸಮಾಜಕ್ಕೆ ಕ್ರಿಯೆಗಳನ್ನು ಅರ್ಥವಾಗಿಸುವ ದೃಷ್ಟಿಯಲ್ಲಿ, ಕೊಡಬೇಕಾದ ಪ್ರಾಮುಖ್ಯತೆಯ ಹಿನ್ನಲೆಯಲ್ಲಿ ಹವ್ಯಕ ಎಂದೂ ಹಿಂದೆ ಬಿದ್ದಿಲ್ಲ. ಇತ್ತೀಚಿನ ವರ್ಷಗಳಲ್ಲಿ ಹವ್ಯಕರ ಸಾಂಸ್ಕೃತಿಕ ಬದುಕನ್ನು ಸಮೃದ್ಧವಾಗಿ, ಸುಂದರವಾಗಿ ಕಟ್ಟಿಕೊಡುತ್ತಿರುವ ಯಶಸ್ಸು ಹವ್ಯಕಕ್ಕೆ ಸಲ್ಲುತ್ತದೆ. ನೆಲ ಸಂಸ್ಕೃತಿಯನ್ನು ಪೋಷಿಸುವ, ಹೊಸ ಹೊಸ ಸಾಧ್ಯತೆಯನ್ನು ಹುಡುಕುವ, ಸೃಜನಶೀಲ ಕಾರ್ಯಕ್ರಮಗಳ ಮೂಲಕ ಅಪಾರ ಜನಪ್ರಿಯತೆಯೊಂದಿಗೆ ಹೊಸ ಹೆಜ್ಜೆ ಇಟ್ಟಿದೆ. ಸಂಸ್ಕೃತಿಯನ್ನು ಉಳಿಸುವಲ್ಲಿ ಹಾಗೂ ಮುಂದಿನ ಪೀಳಿಗೆಗೆ ತಲುಪಿಸುವಲ್ಲಿ ವೈವಿಧ್ಯಮಯ ಸಂಸ್ಕಾರಗಳ ಬಾಗಿಲುಗಳನ್ನು ತೆರೆಯುತ್ತಾ, ಹವ್ಯಕತನವನ್ನು ಉಳಿಸುತ್ತಾ ಸಾಗಿರುವ ಒಂದೊಂದು ಕಾರ್ಯಕ್ರಮಗಳೂ ಹವ್ಯಕದ ಮೈಲುಗಲ್ಲುಗಳಾಗಿವೆ.
ಇಂತಹ ಕಾರ್ಯಕ್ರಮಗಳು ಇಂದು ಯುವಜನತೆಯನ್ನು ಹವ್ಯಕದ ಕಡೆ ವಿಶೇಷವಾಗಿ ಆಕರ್ಷಿಸುತ್ತದೆ. ಶೇಕಡಾ 80ಕ್ಕಿಂತಲೂ ಹೆಚ್ಚು ಉತ್ಸಾಹಿ ಕ್ರಿಯಾಶೀಲ ಯುವಕರು ಮಹಾಸಭೆಯೊಂದಿಗಿರುವುದು ಕಟ್ಟಿಕೊಂಡ ಸಂಘಟನೆಗೆ ಆನೆ ಬಲ ಬಂದಂತಾಗಿದೆ. ನಿಜವಾಗಲೂ ಸಂಸ್ಥೆಯ ಭವಿಷ್ಯದ ದೃಷ್ಟಿಯಿಂದ ಇದೊಂದು ಅರೋಗ್ಯಕರ ಬೆಳವಣಿಗೆ.
ಸಂಖ್ಯಾಬಲದಲ್ಲಿ ತೀರಾ ಕಡಿಮೆ ಇದ್ದರೂ ತನ್ನ ಪರಂಪರೆ, ಸಂಸ್ಕೃತಿ, ಸಂಪ್ರದಾಯ, ಭಾಷೆ ಹಾಗೂ ಬೌದ್ಧಿಕ ಪ್ರಬುದ್ಧತೆಯಿಂದ ವಿಶ್ವದೆಲ್ಲೆಡೆ ವಿಶೇಷವಾಗಿ ಗುರುತಿಸಿಕೊಂಡಿರುವ ಹವ್ಯಕ ಸಮುದಾಯದ ಸಾಧನೆ ಮತ್ತು ಸವಾಲುಗಳಿಗೆ ಸಮ್ಮೇಳನ ವೇದಿಕೆಯಾಗಲಿದೆ. ಈ ಸಮ್ಮೇಳನ ಹವ್ಯಕರಿಗೆ ಸೇರಿದ್ದಾದರೂ ಮೂರೂ ದಿನದ ಸಮಾರಂಭದಲ್ಲಿ ನಾಡಿನ ಎಲ್ಲ ಸಮುದಾಯದವರು ಪಾಲ್ಗೊಳ್ಳುವಂತೆ ಮುಕ್ತವಾಗಿ ಸಂಘಟಿಸಲಾಗಿದೆ. ಎಲ್ಲರೂ ಸೇರಿ ಹವ್ಯಕ ಹಬ್ಬ ಆಚರಿಸುವುದು ಹಾಗೂ ಇದೊಂದು ನಾಡಿನಹಬ್ಬವಾಗಬೇಕು ಎನ್ನುವುದು ನಮ್ಮೆಲ್ಲರ ಆಶಯವಾಗಿದೆ. ಈ ಬಾರಿ ಸಮ್ಮೇಳನದಲ್ಲಿ ಒಂದೂವರೆ ಲಕ್ಷಕ್ಕೂ ಹೆಚ್ಚು ಜನ ಭಾಗವಹಿಸುವ ನಿರೀಕ್ಷೆ ಇದೆ ಎಂದರು.
ಸ್ಪರ್ಧೆಗಳು ಮತ್ತು ಸಾಧಕರಿಗೆ ಪ್ರಶಸ್ತಿ.
ಮಕ್ಕಳಿಗಾಗಿ ಹವ್ಯಕ ಸಂಸ್ಕೃತಿಯ ಚಿತ್ರ ಸ್ಪರ್ಧೆ, ರಂಗೋಲಿ ಸ್ಪರ್ಧೆ, ಹೂಕುಂಡ-ಇಕಬಾನ ಕಲಾಸ್ಪರ್ಧೆ, ಹವ್ಯಕ ಆಹಾರ ಸ್ಪರ್ಧೆ, ಹವ್ಯಕ ಸಂಪ್ರದಾಯ ಚಿತ್ರಕಲಾ ಸ್ಪರ್ಧೆ, ಕರಕುಶಲ ವಸ್ತು ಪ್ರದರ್ಶನ ಸ್ಪರ್ಧೆ, ಪಾರಂಪರಿಕ ವಸ್ತು ಪ್ರದರ್ಶನ ಸ್ಪರ್ಧೆಗಳು ಇರಲಿದೆ. ಸಾಧಕರಿಗೆ ಸಾಧಕರತ್ನ, ವೇದಮೂರ್ತಿಗಳಿಗೆ ವೇದರತ್ನ, ಶಿಕ್ಷಕರಿಗೆ ಶಿಕ್ಷಕರತ್ನ. ಕೃಷಿಕರಿಗೆ ಕೃಷಿರತ್ನ, ಸೈನಿಕರಿಗೆ ದೇಶರತ್ನ, ವಿದ್ಯಾರ್ಥಿಗಳಿಗೆ ವಿದ್ಯಾರತ್ನ, ಸಮಾಜಕ್ಕೆ ಸ್ಫೂರ್ತಿಯದವರಿಗೆ ಸ್ಫೂರ್ತಿ ರತ್ನ ಪ್ರಶಸ್ತಿಯಂತೆ ಪ್ರತಿವಿಭಾಗದಲ್ಲಿ ೮೧ ಜನರಂತೆ ಒಟ್ಟೂ ೫೬೭ ಜನರಿಗೆ ಪ್ರಶಸ್ತಿ ಸಹಿತ ಸನ್ಮಾನಿಸಲಾಗುವುದು.
ಕಾರ್ಯಕ್ರಮ ವೈವಿಧ್ಯಗಳು :
- ೮ ವಿಚಾರಗೋಷ್ಠಿಗಳು,
- ಸ್ಮರಣ ಸಂಚಿಕೆ-ಕೃತಿಗಳ ಲೋಕಾರ್ಪಣೆ.
- ಕಲೆ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ೩೦೦ ಕ್ಕೂ ಅಧಿಕ ಪ್ರಸಿದ್ಧ ಕಲಾವಿದರು ಭಾಗಿ.
- ದಕ್ಷಿಣೋತ್ತರ ತಿಟ್ಟುಗಳ ಮೇರು ಕಲಾವಿದರ ಸಂಗಮದಲ್ಲಿ ಯಕ್ಷಗಾನ.
- ೧೦೮ ಸಾಂಸ್ಕೃತಿಕ ಕಾರ್ಯಕ್ರಮಗಳು.
- ಪ್ರತಿನಿತ್ಯ ಹೋಮಹವನಾದಿಗಳು, ಭಗವದ್ಗೀತೆ ಪಠಣ, ಮಾತೆಯರಿಂದ ಭಕ್ತಿಭಜನೆ,
- ಸಾವಿರಾರು ಜನರಿಂದ ವಾಕಥಾನ್, ಅಹಿಚ್ಛತ್ರದಿಂದ ಜ್ಯೋತಿಯ ಆಗಮನ, ರಕ್ತದಾನ, ವಸ್ತುಪ್ರದರ್ಶನ,
- ೬೦೦೦ಕ್ಕೂ ಹೆಚ್ಚು ಹವ್ಯಕ ಪುಸ್ತಕ ಪ್ರದರ್ಶನ, ಪಾಕೋತ್ಸವದಲ್ಲಿ ಹವ್ಯಕ ಅಡುಗೆ-ತಿಂಡಿಗಳ ವೈವಿಧ್ಯ, ಬೈಕ್ ರ್‍ಯಾಲಿ, ಗಾಯತ್ರೀ ಥೀಮ್ ಪಾರ್ಕ, ದೇಶೀ ಗೋಲೋಕ, ಯಕ್ಷಕಿರೀಟ ವೇಷಭೂಷಣ ಪ್ರದರ್ಶನ, ಛಾಯಾ ಚಿತ್ರ ಪ್ರದರ್ಶನ, ಯಾಗ ಮಂಡಲಗಳ ಪ್ರದರ್ಶನ.
- ೧೦೮ ವರ್ಷಗಳ ಪಂಚಾಂಗ ದರ್ಶನ ಮತ್ತು ಪೂಜಾ ವೈವಿಧ್ಯ, ಅಡಕೆ ಪ್ರಪಂಚ, ಕಬ್ಬಿನ ಆಲೆಮನೆ, ಗೊಂಬೆಗಳ ಆಟ.
- ಆನೆ-ಕುದುರೆ-ಒಂಟೆ ಸವಾರಿ, ಹವ್ಯಕ ನಾಟಕ, ಸಂಗೀತ ಸಂಗಮ, ನಾಟ್ಯೋತ್ಸವ, ವಾದ್ಯ ವೈಭವ, ಗಾನಾಮೃತ, ಜಾದೂ ಪ್ರದರ್ಶನ, ವಾಣಿಜ್ಯ ಮಳಿಗೆಗಳಕೋಟ್
ಮಹಾಸಭೆಯ ನಿರ್ದೇಶಕ ಅರುಣ ಹೆಗಡೆ ಸ್ವಾಗತಿಸಿದರು. ಮಹಾಸಭೆಯ ಉಪಾಧ್ಯಕ್ಷ ಶ್ರೀಧರ ಭಟ್, ಕೋಶಾಧ್ಯಕ್ಷ ಕೃಷ್ಣಮೂರ್ತಿ, ಕಾರ್ಯದರ್ಶಿಗಳಾದ ಪ್ರಶಾಂತ ಭಟ್ಟ ಯಲ್ಲಾಪುರ, ಆದಿತ್ಯ ಹೆಗಡೆ ಕಲಗಾರ, ನಿರ್ದೇಶಕ ಆರ್. ಜಿ. ಹೆಗಡೆ ಇನ್ನಿತರರು ಇದ್ದರು.