ಕುಮಟಾ : ಮುಂಬೈ ಮಹಾನಗರಿಯ ನೆಹರು ವಿಜ್ಞಾನಕೇಂದ್ರದಲ್ಲಿ ನಡೆದ ರಾಷ್ಟ್ರಮಟ್ಟದ ವಿಜ್ಞಾನ ವಿಚಾರಗೋಷ್ಠಿಯಲ್ಲಿ, ಕರ್ನಾಟಕದ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗಳಲ್ಲೊಂದಾದ ಕೊಂಕಣ ಎಜ್ಯುಕೇಶನ್ ಟ್ರಸ್ಟ್‌ನ ಸಿವಿಎಸ್‌ಕೆ ಪ್ರೌಢಶಾಲೆಯ ಹತ್ತನೇ ವರ್ಗದ ವಿದ್ಯಾರ್ಥಿನಿ ಕೃತಿಕಾ ಮಹೇಶ ಭಟ್ಟ ನ್ಯಾಶನಲ್ ರನ್ನರ್ ಅಪ್ ಆಗಿ ರಾಷ್ಟ್ರಮಟ್ಟದಲ್ಲಿ ಸಾಧನೆಗೈದಿದ್ದಾಳೆ.
ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ – ಪೊಟೆನ್ಷಿಯಲ್ಸ್ & ಕನ್ಸರ್ನ್ಸ್ ವಿಷಯದಡಿಯಲ್ಲಿ ಹಮ್ಮಿಕೊಂಡ ವಿಚಾರಗೊಷ್ಠಿಯಲ್ಲಿ, ಭಾರತದ ವಿವಿಧ ರಾಜ್ಯಗಳಿಂದ ಭಾಗವಹಿಸಿದ್ದ 32 ಪ್ರತಿಸ್ಪರ್ಧೆಗಳಲ್ಲಿ ಕೃತಿಕಾಳ ಪ್ರಸ್ತುತಿ ತೀರ್ಪುಗಾರರ ವಿಶೇಷ ಗಮನ ಸೆಳೆಯಿತು. ಪ್ರಶ್ನೋತ್ತರ ಸುತ್ತಿನಲ್ಲಿ ಎ.ಐ. ತಂತ್ರಜ್ಞಾನದ ಕುರಿತಾಗಿ ಕೇಳಿದ ಪ್ರಶ್ನೆಗಳಿಗೆ ಕೃತಿಕಾಳಿಂದ ಬಂದ ನೇರಾನೇರ ಉತ್ತರ ತೀರ್ಪುಗಾಗರರನ್ನು ಅವಾಕ್ಕಾಗಿಸಿತು. ಪ್ರಶ್ನೆ ಮುಗಿಸುವ ಮುನ್ನವೇ ಉತ್ತರವನ್ನೆಸೆಯಲು ತಾನು ಸಿದ್ಧಳಿದ್ದೇನೆ ಎನ್ನುವಷ್ಟರ ಮಟ್ಟಿಗಿನ ಕೃತಿಕಾಳ ಸ್ಪಂದನೆ ತೀರ್ಪುಗಾರರ ಮನಸೂರೆಗೊಂಡಿತು. ಸ್ಪರ್ಧೆಯ ಎಲ್ಲಾ ಸುತ್ತಿನಲ್ಲಿ ಉತ್ತಮ ಪೈಪೋಟಿ ನೀಡಿ, ಅಂತಿಮವಾಗಿ ಬಂದ ಫಲಿತಾಂಶದಲ್ಲಿ ತಮಿಳುನಾಡು ಪ್ರಥಮ ಸ್ಥಾನ ಪಡೆದರೆ, ಕರ್ನಾಟಕವನ್ನು ಪ್ರತಿನಿಧಿಸಿದ್ದ ಕೃತಿಕಾ ಎರಡನೇ ಸ್ಥಾನ ಪಡೆದು ರನ್ನರ್‌ಅಪ್ ಆಗಿ ಹೊರಹೊಮ್ಮಿ, ರೂ. 24,000 ನಗದು ಹಾಗೂ ಪ್ರಶಸ್ತಿಪತ್ರವನ್ನು ತನ್ನದಾಗಿಸಿ, ರಾಷ್ಟ್ರಮಟ್ಟದಲ್ಲಿ ಸಿವಿಎಸ್‌ಕೆ ಪ್ರೌಢಶಾಲೆಯ ಹೆಸರನ್ನು ರಾರಾಜಿಸುವಂತೆ ಮಾಡಿದ್ದಾಳೆ.
ಶಾಲೆಯ ವಿಜ್ಞಾನ ಶಿಕ್ಷಕಿಯರಾದ ಅಮಿತಾ ಗೋವೆಕರ್, ಜ್ಯೋತಿ ಭಂಡಾರಿ, ಹಾಗೂ ಅರ್ಚನಾ ನಾಯ್ಕ ಮಾರ್ಗದರ್ಶನದಲ್ಲಿ ಬಾಲಕಿ ಸಾಧನೆ ಮಾಡಿದ್ದಾಳೆ.
ಸಾಧಕಿಗೆ ಉಪ ನಿರ್ದೇಶಕರು ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿಗಳು ಕರೆ ಮಾಡಿ ಶುಭಾಶಯ ಕೋರಿದ್ದಾರೆ. ಶಾಲಾ ಆಡಳಿತ ಮಂಡಳಿ, ಮುಖ್ಯಾಧ್ಯಾಪಕಿ, ಶೈಕ್ಷಣಿಕ ಸಲಹೆಗಾರರು, ಶಿಕ್ಷಕ ವೃಂದದವರು ಅಭಿನಂದಿಸಿದ್ದಾರೆ.