ಕುಮಟಾ : ಕೊಂಕಣ ಎಜುಕೇಶನ್ ನ ವಿದ್ಯಾರ್ಥಿಗಳು ಮಾಡಿದ ಸಾಧನೆ ಇತರ ವಿದ್ಯಾರ್ಥಿಗಳಿಗೂ ಪ್ರೇರಣೆ ನೀಡುವಂಥದ್ದು. ರಾಷ್ಟ್ರಮಟ್ಟದಲ್ಲಿ ತಾಲೂಕನ್ನೂ, ಜಿಲ್ಲೆಯನ್ನೂ, ತಮ್ಮ ಹುಟ್ಟೂರನ್ನೂ ಪ್ರತಿನಿಧಿಸಿ ಸಾಧನೆ ಮಾಡುವುದರ ಮೂಲಕ ನಾವೆಲ್ಲರೂ ಹೆಮ್ಮೆಪಡುವಂತೆ ಮಾಡಿದ ಇಂತಹ ಸಾಧಕರು ಪ್ರತಿಯೊಬ್ಬರ ಜೀವನದ ಸ್ಪೂರ್ತಿ ಚಿಲುಮೆಗಳು ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ರಾಜೇಂದ್ರ ಎಲ್. ಭಟ್ಟ ಅಭಿಪ್ರಾಯಪಟ್ಟರು. ಅವರು ರಾಷ್ಟ್ರ ಮಟ್ಟದ ವಿವಿಧ ಸ್ಪರ್ಧೆಗಳಲ್ಲಿ ರಾಜ್ಯವನ್ನು ಪ್ರತಿನಿಧಿಸಿ ರಾಷ್ಟ್ರಮಟ್ಟದಲ್ಲಿ ಕರ್ನಾಟಕದ ಕೀರ್ತಿಯ ಕಹಳೆಯನ್ನು ಮೊಳಗಿಸಿದ ಕೊಂಕಣ ಎಜ್ಯುಕೇಶನ್ ಟ್ರಸ್ಟ್ ನ ಸಿವಿಎಸ್‌ಕೆ ಪ್ರೌಢಶಾಲೆಯ ಪ್ರತಿಭಾನ್ವಿತ ಸಾಧಕ ವಿಧ್ಯಾರ್ಥಿಗಳನ್ನು ಗೌರವಿಸುವ ಹಾಗೂ ಇತರರಿಗೆ ಪ್ರೇರಣೆ ಸಿಗಲೆಂದು ಹಮ್ಮಿಕೊಂಡ ಅಭಿಪ್ರೇರಣಾ ಜಾಥಾದಲ್ಲಿ ಭಾಗವಹಿಸಿ ಮಾತನಾಡಿದರು.

ಜೀವನದ ಇರುವಿಕೆ ಸಾಧನೆಗಾಗಿ ಏನನ್ನು ಸಾಧಿಸದ ಜೀವನ ವ್ಯರ್ಥ ಹಾಗಾಗಿ ಈ ವಿದ್ಯಾರ್ಥಿಗಳು ಚಿಕ್ಕವರಿರುವಾಗಲೇ ಎಲ್ಲರು ಹೆಮ್ಮೆಪಡುವಂತ ರಾಷ್ಟ್ರಮಟ್ಟದ ಸಾಧನೆಯನ್ನು ಮಾಡಿರುತ್ತಾರೆ. ದೃಢವಾದ ಆತ್ಮವಿಶ್ವಾಸ ಸತತ ಪ್ರಯತ್ನದಿಂದ ಯಶಸ್ಸನ್ನು ಗಳಿಸಿದ್ದಾರೆ. ಒಂಬತ್ತು ಪ್ರತಿಭೆಗಳು ಒಂಬತ್ತು ದ್ರುವತಾರೆಗಳ ಹಾಗೆ ಮಿಂಚುತ್ತಿದ್ದಾರೆ. ವಿದ್ಯಾರ್ಥಿಗಳು ವಿಜ್ಞಾನ ಚಟುವಟಿಕೆ, ಸಾಂಸ್ಕೃತಿಕ ಚಟುವಟಿಕೆ, ಕ್ರೀಡೆಯಲ್ಲಿ ಮಾಡಿದ ಸಾಧನೆ ಇತರ ಮಕ್ಕಳಿಗೆ ಮಾದರಿ ಹಾಗೂ ಪ್ರೇರಣೆಯಾಗಿದೆ. ಶಿಕ್ಷಣದ ಜೊತೆ ಸಂಸ್ಕಾರ ಎಂಬ ಕೊಂಕಣ ಶಿಕ್ಷಣ ಸಂಸ್ಥೆಯ ಆಶಯ ಸಾಕಾರಗೊಂಡಿದೆ ಎಂಬುದಕ್ಕೆ ವಿದ್ಯಾರ್ಥಿಗಳ ಸಾಧನೆ ಸಾಕ್ಷಿಯಾಗಿದೆ. ವಿದ್ಯಾರ್ಥಿಗಳ ಅಭೂತಪೂರ್ವ ಸಾಧನೆಗೆ ಬೆನ್ನೆಲುಬಾಗಿ ನಿಂತ ಸಂಸ್ಥೆಯವರನ್ನು, ಮುಖ್ಯಶಿಕ್ಷಕರನ್ನು, ಗುರುಗಳು ಹಾಗೂ ಪಾಲಕರ ವೃಂದದವರನ್ನು ಅಭಿವಂದಿಸಿ, ಸಾಧಕ ವಿದ್ಯಾರ್ಥಿಗಳ ಸಾಧನೆಯ ಯಶೋಗಾಥೆ ಹೀಗೆ ಮುಂದುವರೆಯಲಿ ಎಂದು ಶುಭ ಹಾರೈಸಿದರು.

RELATED ARTICLES  ವಿಶೇಷ ಪುಸ್ತಕ ಮೇಳ : ಸರಸ್ವತಿ ಪಿ.ಯು ಕಾಲೇಜಿನಲ್ಲಿ ಆಯೋಜನೆ : ಡಿ.೨೮ ರಿಂದ ಮೂರು ದಿನಗಳ ಕಾಲ "ಅನ್ವೇಷಣಾ ೨೦೨೩-೨೪"

ಕೊಂಕಣ ಎಜ್ಯುಕೇಶನ್ ಟ್ರಸ್ಟ್ ನ ಗೌರವ ಕಾರ್ಯದರ್ಶಿಗಳಾದ ಮುರಳಿಧರ ಪ್ರಭು ಮಾತನಾಡಿ ಕುಮಟಾದ ಮಣ್ಣಿನ ಮೇಲೆ ನನಗೆ ಹೆಮ್ಮೆ. ಈ ಮಣ್ಣು ನವತಾರೆಗಳನ್ನು ನಮ್ಮ ಮುಂದೆ ತೆರೆದಿಟ್ಟಿದೆ. ಹಾಗಾಗಿ ಮೊದಲು ಈ ಮಣ್ಣಿಗೆ ಕೃತಜ್ಞತೆಯನ್ನು ಸಲ್ಲಿಸುತ್ತೇನೆ ಎನ್ನುತ್ತಾ, ಸಾಧನೆಯ ಶಿಖರವನ್ನು ಏರುವುದು ಸುಲಭದ ಕಾರ್ಯವಲ್ಲ ಇಂತಹ ಕಾರ್ಯವನ್ನು ಮಾಡಿದ ವಿದ್ಯಾರ್ಥಿಗಳಿಗೆ ಅಭಿನಂದನೆ. ಇಂತಹ ಮಕ್ಕಳನ್ನು ಪಡೆದ ಪಾಲಕರು ಧನ್ಯರು ಎಂದರು. ವಿದ್ಯಾರ್ಥಿಗಳ ಸಾಧನೆ ಉಳಿದ ತಾಲೂಕಿನ ಎಲ್ಲಾ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಉತ್ಸಾಹ ಚಿಮ್ಮುವಂತೆ ಮಾಡುವ ಅಸ್ತ್ರವಾಗಬೇಕು ಎಂಬುದೇ ಈ ಜಾಥಾದ ಉದ್ದೇಶ ಎಂದು ನುಡಿದರು.

ರಾಷ್ಟ್ರಮಟ್ಟದ ಸಾಧಕರಾದ ಕೃತಿಕಾ ಮಹೇಶ್ ಭಟ್ಟ, ಸಿಂಚನಾ ಜಿ.ಭಟ್ಟ, ಸ್ನೇಹ ಉದಯ ನಾಯ್ಕ, ದೀಪ್ತಿ ಚಂದ್ರಕಾಂತ್ ಪಂಡಿತ, ಆಸ್ತಾ ಮಧುಕರ ನಾಯಕ, ಯುಕ್ತಾ ಸತೀಶ್ ಗೌಡ ರಾಹುಲ ಮುರಳಿ ಭಟ್ಟ, ಸಾಕ್ಷಿ ಕೆ. ಎಸ್, ಪ್ರಥಮ ಮಹಾದೇವ ಗೌಡ ಇವರನ್ನು ಸನ್ಮಾನಿಸಿ, ಸಿಹಿನೀಡಿ ಸಂಭ್ರಮಿಸಲಾಯಿತು. ಅಭಿಪ್ರೇರಣಾ ಮೆರವಣಿಗೆಯು ಕುಮಟಾದ ಗಿಬ್ ಸರ್ಕಲ್ ನಿಂದ ಪ್ರಾರಂಭಗೊಂಡು ರಥಬೀದಿ, ಬಸ್ತಿಪೇಟೆ, ಮಾಸ್ತಿಕಟ್ಟಾ ಮಾರ್ಗವಾಗಿ ಮಣಕಿ ಮೈದಾನದಲ್ಲಿ ಮುಕ್ತಾಯಗೊಂಡಿತು.

RELATED ARTICLES  ಸಿ.ಇ.ಟಿಯಲ್ಲಿ ಆದ ಗೊಂದಲದ ಬಗ್ಗೆ ಸೂಕ್ತ ಮಾಹಿತಿ ನೀಡಿ, ವಿದ್ಯಾರ್ಥಿಗಳ ಆತಂಕ ದೂರಾಗಿಸಿ : ಗುರುರಾಜ ಶೆಟ್ಟಿ.

ಕಾರ್ಯಕ್ರಮದಲ್ಲಿ ಕೊಂಕಣ ಎಜ್ಯುಕೇಶನ್ ಟ್ರಸ್ಟ್ ನ ಜಂಟೀ ಕಾರ್ಯದರ್ಶಿ ಶೇಷಗಿರಿ ಶಾನಭಾಗ, ವಿಶ್ವಸ್ಥರುಗಳಾದ ಅನಂತ ಶಾನಭಾಗ, ರಾಮಕೃಷ್ಣ ಗೋಳಿ, ದಾಸಾ ಶಾನಭಾಗ, ರಮೇಶ ಪ್ರಭು, ಶಿಕ್ಷಣ ಇಲಾಖೆಯ ವಿನಾಯಕ ವೈದ್ಯ, ಮುಖ್ಯಶಿಕ್ಷಕಿ ಸುಮಾ ಪ್ರಭು, ವಿಧಾತ್ರಿ ಅಕಾಡೆಮಿಯ ಗುರುರಾಜ ಶೆಟ್ಟಿ, ಸರಸ್ವತಿ ಪಿ.ಯು ಕಾಲೇಜಿನ ಪ್ರಾಂಶುಪಾಲ ಕಿರಣ ಭಟ್ಟ, ಕೊಂಕಣದ ಸಮೂಹ ಅಂಗ ಸಂಸ್ಥೆಗಳ ಮುಖ್ಯೋಪಾಧ್ಯಾಯರುಗಳು, ಕೊಂಕಣ ಎಜ್ಯುಕೇಶನ್ ಟ್ರಸ್ಟ್ ನ ಶೈಕ್ಷಣಿಕ ಸಲಹೆಗಾರರು, ಶಿಕ್ಷಕ ಹಾಗೂ ಶಿಕ್ಷಕೇತರ ಸಿಬ್ಬಂದಿಗಳು ಸಾಧಕ ವಿದ್ಯಾರ್ಥಿಗಳ ಪಾಲಕರು, ಪ್ರೌಢಶಾಲೆಯ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಮುಖ್ಯಶಿಕ್ಷಕ ಗಣೇಶ ಜೋಶಿ ಕಾರ್ಯಕ್ರಮವನ್ನು ನಿರೂಪಿಸಿದರು.