ಕುಮಟಾ : ಕರ್ನಾಟಕ ಯಕ್ಷಗಾನ ಅಕಾಡೆಮಿಯ ನಿಕಟ ಪೂರ್ವ ಅಧ್ಯಕ್ಷ, ವಿಶ್ರಾಂತ ಕನ್ನಡ ಉಪನ್ಯಾಸಕ, ಯಕ್ಷಗಾನ ಕಲಾವಿದ, ನಾಟಕಕಾರ, ಯಕ್ಷಗಾನ ಸಂಶೋಧನಾ ಕೇಂದ್ರದ ಸಂಸ್ಥಾಪಕ ಡಾ. ಜಿ. ಎಲ್ ಹೆಗಡೆಯವರ ಅಭಿನಂದನಾ ಸಮಾರಂಭ ಹಾಗೂ ‘ಗುರುಗೌರವ ವರ್ಣ ವೈಭವ’ ಅಭಿನಂದನಾ ಗ್ರಂಥ ಲೋಕಾರ್ಪಣೆ ಕಾರ್ಯಕ್ರಮ ಡಿ. 22 ಭಾನುವಾರ ಕುಮಟಾ ತಾಲೂಕಿನ ತಲಗೋಡದ ಶ್ರೀ ಜನಾರ್ಧನ ದೇವಸ್ಥಾನದ ಆವಾರದಲ್ಲಿ ನಡೆಯಲಿದೆ ಎಂದು ಅಭಿನಂದನಾ ಸಮಿತಿ ಪ್ರಕಟಣೆಯಲ್ಲಿ ತಿಳಿಸಿದೆ.
ಅಂದು ಬೆಳಗ್ಗೆ ೧೧ ಗಂಟೆಗೆ ಶ್ರೀಪಾದ ಭಟ್ಟ ಕಡತೋಕಾ, ಶೇಷಾದ್ರಿ ಅಯ್ಯಂಗಾರ್ ಮತ್ತು ಸಂಗಡಿಗರು ನಡೆಸಿಕೊಡುವ ‘ಗೀತ ರಾಮಾಯಣ’ ನಡೆಯಲಿದ್ದು ೧೨:೩೦ ಕ್ಕೆ ಮಹಾಮಂಗಳಾರತಿ, ಪ್ರಸಾದ ವಿತರಣೆ ನಡೆಯಲಿದೆ. ಪ್ರಸಾದ ಭೋಜನದ ನಂತರ ಮಧ್ಯಾಹ್ನ ೨ ಗಂಟೆಯಿಂದ ವಾಲಿ ಮೋಕ್ಷ ತಾಳಮದ್ದಳೆ ನಡೆಯಲಿದ್ದು ಗೋಪಾಲಕೃಷ್ಣ ಭಟ್ಟ ಜೋಗಿ, ಪಿ.ಕೆ ಹೆಗಡೆ ಹರಿಕೇರಿ, ಮಯೂರ ಹರಿಕೇರಿ, ಮೋಹನ ಹೆಗಡೆ ಹೆರವಟ್ಟಾ ನಾರಾಯಣ ಯಾಜಿ ಸಾಲಿಬೈಲು ಭಾಗವಹಿಸಲಿದ್ದಾರೆ.
ಮಧ್ಯಾಹ್ನ 4 ಗಂಟೆಗೆ ಅಭಿನಂದನಾ ಸಮಾರಂಭ ಹಾಗೂ ಗ್ರಂಥ ಲೋಕಾರ್ಪಣೆ ಕಾರ್ಯಕ್ರಮ ನಡೆಯಲಿದ್ದು, ದಾಸ ಸಾಹಿತ್ಯ ಸಂಗೀತ ಕಲಾರತ್ನ ಡಾ. ವಿದ್ಯಾಭೂಷಣ, ಬೆಂಗಳೂರು ಉತ್ತರ ವಿಶ್ವವಿದ್ಯಾಲಯ ಕುಲಪತಿ ನಿರಂಜನ ವಾನಳ್ಳಿ, ಚಿಂತಕ ಹಾಗೂ ವಿದ್ವಾಂಸ ಲಕ್ಷ್ಮಿಶ ತೊಳ್ವಾಡಿ, ಖ್ಯಾತ ಯಕ್ಷಗಾನ ಕಲಾವಿದ ಡಾ. ಎಂ ಪ್ರಭಾಕರ ಜೋಶಿ ಭಾಗವಹಿಸಲಿದ್ದಾರೆ.
ಸಂಜೆ 7:30 ರಿಂದ ಯಕ್ಷಗಾನ ಭಸ್ಮಾಸುರ ಮೋಹಿನಿ ನಡೆಯಲಿದ್ದು, ಶಂಕರ್ ಹೆಗಡೆ ಬ್ರಹ್ಮೂರು, ನರಸಿಂಹ ಮೂರೂರು, ಕು. ರಾಮನ್, ವಿನಾಯಕ ಹೆಗಡೆ ಕಲಗದ್ದೆ, ನರಸಿಂಹ ಚಿಟ್ಟಾಣಿ, ಸದಾಶಿವ ಭಟ್ಟ ಮಳವಳ್ಳಿ, ವಿಘ್ನೇಶ ಹಾವ್ಗುಡಿ, ನಾಗೇಂದ್ರ ಮೂರೂರು, ರಮಕಾಂತ ಮೂರೂರು ಭಾಗವಹಿಸಲಿದ್ದಾರೆ.
ಈ ಕಾರ್ಯಕ್ರಮಕ್ಕೆ ಡಾ. ಜಿ.ಎಲ್. ಹೆಗಡೆಯವರ ಅಭಿಮಾನಿಗಳು, ಶಿಷ್ಯರು, ಬಂಧು, ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಕಾರ್ಯಕ್ರಮವನ್ನು ಯಶಸ್ವಿಗೊಳಿಸುವಂತೆ ವಿನಂತಿಸಲಾಗಿದೆ.